' ನೆನಪಿನಂಗಳ ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ.
ರಿಪ್ಪನಪೇಟೆ :-
ಇಂದಿನ ಯುವಕರು ಸಿರಿವಂತಿಕೆಯ ಬೆನ್ನು ಹತ್ತುತ್ತಿರುವ ಈ ಸಂಧರ್ಭದಲ್ಲಿ ವೃತ್ತಿಯಲ್ಲಿ ಇಂಜನೀಯರ್ ಆಗಿಯೂ ಸಾಹಿತ್ಯದ ಕಡೆಗೆ ಒಲವು ಇಟ್ಟುಕೊಂಡಿರುವ ಮೂಗುಡ್ತಿಯ ಬಿ.ಎಸ್.ಆದರ್ಶ ಯುವಕರಿಗೆ ಒಂದು ಮಾದರಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಅವರು ಇಲ್ಲಿಯ ಗೌಡ ಸಾರಸ್ವತ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಯುವ ಕವಿ ಬಿ.ಎಸ್.ಆದರ್ಶ ಅವರ ನೆನಪಿನಂಗಳ ಎಂಬ ಪ್ರಥಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ದರು. ಸುಮ್ಮನೆ ನಾವು ಕಾಲ ಕೆಟ್ಟಿತು ಹುಡುಗರು ಕೆಟ್ಟರು ಎನ್ನುತ್ತೇವೆ, ಆದರೆ ಕಾಲವೂ ಕೆಟ್ಟಿಲ್ಲ ಹುಡುಗರೂ ಕೆಟ್ಟಿಲ್ಲ ನಮ್ಮ ಕುಟುಂಬದ ಹಿರಿಯರಿಗೆ ಮಕ್ಕಳ ಆಸಕ್ತಿಯನ್ನು ಪೋಷಿಸಿ ಬೆಳೆಸುವಲ್ಲಿ ಮನಸಿಲ್ಲ ಎಂದರು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಗರ್ತೀಕೆರೆ ರಾಘಣ್ಣ ಕವನ ಸಂಕಲನದ ' ಹಣತೆ ' ಎಂಬ ಕವನವನ್ನು ರಾಗ ಸಂಯೋಜನೆ ಮಾಡಿ ಹಾಡಿ ಜನಮನ ರಂಜಿಸಿದರು.
ಕಾರ್ಯಕ್ರಮ ಮುಖ್ಯ ಅತಿಥಿ ಲೇಖಕ, ವಿಮರ್ಶಕ ಮತ್ತು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಯವರು ' ನೆನಪಿನಂಗಳ ' ಕವನ ಸಂಕಲನ ಕುರಿತು ಮಾತನಾಡಿ ಭಾರತದ ಖ್ಯಾತ ಭೌತ ಶಾಸ್ತ್ರಜ್ಞ ಅಮತ್ರ್ಯ ಸೇನ್ ಒಂದೆಡೆ ಅಭಿವೃದ್ಧಿ ಎಂದರೆ ಬರಿ ರಸ್ತೆ ಕಟ್ಟಡಗಳು ಮಾತ್ರ ಅಲ್ಲ ಸಾಹಿತ್ಯದ ನೆಲೆಗಟ್ಟಿನ ಮೇಲೆ ಆಗುವ ಸಾಂಸ್ಕೃತಿಕ ಅಭಿವೃದ್ಧಿ ಎಂದಿದ್ದಾರೆ ಎಂದರು. ಕವಿ ಸಾಹಿತಿಗಳು ಕಲಾವಿದರು ನಿಜಕ್ಕೂ ತಾವು ಹುಟ್ಟಿದ ನೆಲದ ಗೌರವ ಎತ್ತಿ ಹಿಡಿಯವವರು. ಯೌವನದಲ್ಲಿ ಎಲ್ಲರೂ ಕವಿಗಳೆ ಹದಿ ಹರೆಯದ ನೆನಪುಗಳು ಮೆಲುಕು ಹಾಕುವಂತಹವು. ಕವಿ ಗಟ್ಟಿಯಾಗು ವುದು ಜೀವನದ ಅನುಭವದ ಮೂಸೆಯಲ್ಲಿ. ಐಟಿಬಿಟಿ ಯಲ್ಲಿ ಆದರ್ಶ ಕರಗಿ ಹೋಗಲಿಲ್ಲ ಆತನ ಬಾಲ್ಯದ ನೆನಪುಗಳ ವಿಸ್ಮೃತಿಯೆ ಆತ ಕವಿಯಾಗಲು ಕಾರಣ ನೆನಪು ಗಳ ತಾಕಲಾಟ ಗಳಿರುವವ ಕವಿಯಾಗಬಲ್ಲ. ಈ ಅರ್ಹತೆಗಳು ಆದರ್ಶನಿಗಿವೆ. ಇದು ಆತನ ಗಮನ ಹರಿಸ ಬಹುದಾದ ಕೃತಿ. ಮುಂದಿನ ಕೃತಿಗಳಲ್ಲಿ ಆತ ಇನ್ನಷ್ಟು ಪ್ರಬುದ್ಧತೆ ಸಾಧಿಸಲಿ ಎಂದರು.
ಖ್ಯಾತ ರಂಗಕರ್ಮಿ ದೇವೇಂದ್ರ ಬೆಳೆಯೂರು ಮಾತನಾಡಿ ಬೆಳೆಯೂರಿಗೆ ಒಂದು ಸಾಂಸ್ಕೃತಿಕ ಹಿನ್ನೆಲೆಯಿದೆ. ನಮ್ಮೂರಿನ ಕುಡಿ ಆದರ್ಶ ಕಾವ್ಯ ಪ್ರಾಕಾರವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆಯ್ದು ಕೊಂಡಿರುವುದು ನನಗೆ ಸಂತಸ ತಂದಿದೆ. ಈತನ ಕವನಗಳಲ್ಲಿ ಸತ್ವವಿದೆ, ಆತ ಇನ್ನೂ ಬೆಳೆಯಲಿ ಬರೆಯಲಿ ಪ್ರಬುದ್ಧತೆ ಹೊಂದಲಿ ಎಂದರು. ಬೆಳೆಯೂರಿನ ಪರವಾಗಿ ನಿವೃತ್ತ ಶಿಕ್ಷಕ ತಿಮ್ಮಯ್ಯನವರು ಆದರ್ಶನಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಬೆಳೆಯೂರಿನ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಆತನ ಮಾಧ್ಯಮಿಕ ಶಾಲಾ ಗುರುಗಳಾದ ಡಾ. ಟಿ.ಹೆಚ್.ಸುರೇಶಪ್ಪ ಮಾತನಾಡಿ ಪ್ರತಿಭೆ ಕೆಲವರಿಗೆ ಹುಟ್ಟಿನಿಂದ ಬಂದರೆ ಇನ್ನು ಕೆಲವರಿಗೆ ಪರಿಶ್ರಮದಿಂದ ಬರುತ್ತದೆ. ಕವಿ ಆದರ್ಶನಲ್ಲಿ ಪ್ರತಿಭೆ ಮತ್ತು ಪರಿಶ್ರಮ ಎರಡೂ ಇವೆ ಎಂದರು. ಸರಳವಾದ ಛಂದಸ್ಸು ಮತ್ತು ಪ್ರಾಸಬದ್ಧತೆ ಆತನ ಕವನಗಳ ವೈಶಿಷ್ಟ್ಯ ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಇಲ್ಲಿಯ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ಗಣಪತಿ ಆದರ್ಶ ಯುವ ಪೀಳಿಗೆಗೊಂದು ಮಾದರಿ. ಯುವಕರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು. ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಸುವಿನ ಮನೆ ರತ್ನಾಕರ ಕವಿ ಆದರ್ಶನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ತೊರೆಗದ್ದೆ ವಾಸಪ್ಪಗೌಡ, ಗೋಪಾಲಕೃಷ್ಣ ಭಟ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆರೆಹಳ್ಳಿ ರವೀಂದ್ರ, ಮಂಜುನಾಥ ಕಾಮತರು ಉಪಸ್ಥಿತರಿದ್ದರು. ಕವಿ ಆದರ್ಶ ಮಾತನಾಡಿ ತನ್ನ ಈ ಹವ್ಯಾಸ ಮೆಚ್ಚಿ ಪ್ರೋತ್ಸಾಹ ನೀಡಿದ ತಂದೆ ತಾಯಿಗಳು, ಗುರುಗಳು ಅದರಲ್ಲೂ ವಿಶೇಷವಾಗಿ ಜವಾಹರಲಾಲ್ ನೆಹರೂ ಇಂಜನೀಯರಿಂಗ್ ಕಾಲೇಜಿನ ಶ್ರೀನಿವಾಸರಾಜು ಅವರನ್ನು ಸ್ಮರಿಸಿದರು. ದೇವಕಿ ಪ್ರಾರ್ಥನೆ ಮಾಡಿದರು, ಪ್ರಶಸ್ತಿ ಸ್ವಾಗತಿಸಿದರು. ಸ್ವಾತಿ ನಿರೂಪಣೆ ಮಾಡಿದರು. ಆದರ್ಶ ವಂದನಾರ್ಪಣೆ ಮಾಡಿದರು.