ನೆನಪಿನ ಚಿತ್ರಕಲಾ ಶಾಲೆ: ಭಾಗ ೨೨ - ಕ್ರಿಯಾತ್ಮಕ ಹಸಿವೆಗೆ ಕ್ಯಾಂಟೀನ್ ಪರಿಹಾರ

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೨ - ಕ್ರಿಯಾತ್ಮಕ ಹಸಿವೆಗೆ ಕ್ಯಾಂಟೀನ್ ಪರಿಹಾರ

 

 
(೬೬)
 
ಪರಿಷತ್ತಿನಲ್ಲಿ ಕಲಾಭ್ಯಾಸ ಮಾಡುತ್ತಿದ್ದಾಗಿನ ಒಂದು ದಿನ ರಾತ್ರಿ. ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆಯ ಪ್ರಸಂಗದ ನಾಲ್ಕಾರು ತಿಂಗಳುಗಳ ನಂತರದ ಮಾತಿದು. ಒಂದು ದಿನ ರಾತ್ರಿ ’ಅವರು ತರುತ್ತಾರೆ ಎಂದು ಇವರು, ಇವರು ತಂದಾರೆಂದು ಅವರು’ ಹಸಿವೆಯಿಂದ ಬಳಲಿಹೋಗಿದ್ದೆವು. ಗ್ರಾಫಿಕ್ ವಿಭಾಗಕ್ಕೆ ರಾತ್ರಿ ಮನೆಯಿಂದ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಅರ್ಧ ಮಂದಿ ಮನೆಯೂಟ ಮಾಡಿಕೊಂಡು ಬರುವಾಗ, ಹಾಗೆ ಮಾಡದ ಹಾಸ್ಟೆಲ್‌ವಾಸಿಗಳಿಗೆ ಡಬ್ಬಿಯಲ್ಲಿ ಊಟ ತಂದುಕೊಡುವುದು ವಾಡಿಕೆಯಾಗಿತ್ತು. ಪರಿಷತ್ತಿನದ್ದೇ ಆದ ಹಾಸ್ಟೆಲ್ ಎಂಬುದು ಆಗಲೂ ಈಗಲೂ ಇರಲಿಲ್ಲ, ಇಲ್ಲ. ಕೆಲವರು ಮನೆಯಲ್ಲಿ ಊಟ ಮಾಡಲು ಬೋರ್ ಆಗಿ, ಡಬ್ಬಿಯನ್ನು ಅದರೊಳಗಿನದನ್ನು ತಿನ್ನಲು ಪರಿಷತ್ತಿಗೇ ತಂದುಬಿಡುತ್ತಿದ್ದರು. ಆಗೆಲ್ಲಾ ಇನ್ನೂ ನೀರಿಗೆ (ಅಥವ ನೀರು ಬಾಟಲಿಗೆ) ಹಣ ನೀಡುವ ಪರಿಕಲ್ಪನೆ ’ತಿಂದು ಕೊಬ್ಬಿದವರ, ಅಪಾರ್ಟ್‌ಮೆಂಟ್‌ಗಳು ಇನ್ನೂ ಇಲ್ಲದಿದ್ದರೂ ಮೇಲಂತಸ್ತಿನವರಾದ’ ಜನರಿಗೆ ಮಾತ್ರವೇ ಮೀಸಲಾಗಿತ್ತು. ದಿನಕ್ಕೆ ಏನಿಲ್ಲವೆಂದರೂ ನಲವತ್ತು ಕಿಲೋಮೀಟರ್ ಸೈಕಲ್ ತುಳಿಯುವದು ಸೈಕಲ್ ಇದ್ದ ಎಲ್ಲ ವಿದ್ಯಾರ್ಥಿಗಳಿಗೆ ರೂಢಿಯಾಗಿಬಿಟ್ಟಿತ್ತು. ಸೈಕಲ್ ಇಲ್ಲದ ಹುಡುಗರೇ ಇರುತ್ತಿರಲಿಲ್ಲ ಅಲ್ಲಿ. ಆದರೆ ರಾತ್ರಿಯ ಹೊತ್ತು ಪೋಲೀಸರ ಕಾಟವಾಗಿ, ಹಿಡಿದರೆ ಹತ್ತು ರೂಪಾಯಿ ಫೈನ್ ಅನ್ನು ’ಓಕೆ ಫೈನ್’ ಎನ್ನುತ್ತಿದ್ದ ಮಾಮಾಗಳಿಗೆ ಕೊಡಬೇಕಿತ್ತು. ನನ್ನನ್ನು ತಿಗಣೆ ಹಿಡಿದುಕೊಂಡುಬಿಟ್ಟಿತ್ತು. ಅದರಿಂದ ತಪ್ಪಿಸಿಕೊಂಡು ಬರಲು ಇಷ್ಟು ಹೊತ್ತು ಮತ್ತು ಹತ್ತು ರೂಪಾಯಿ ಖರ್ಚಾಗಿಹೋಯಿತು, ಎಂದಿದ್ದ ಕಾಜ್‌ರೋಪಿ ಒಮ್ಮೆ. ತಿಗಣೆಗಳಿಗೆ ಎಂಥಹ ಅವಮಾನ!
 
ಸೈಕಲ್ ಹೊಡೆಯುತ್ತ, ಬೆಲ್ ಬಾಟಮ್ ಪ್ಯಾಂಟಿನ ಕೆಳಗಿನ ಅಂಚಿಗೆ ಜಿಪ್ ಹಾಕಿ, ಹವಾಯಿ ಚಪ್ಪಲಿ ತೊಟ್ಟು, ಇನ್ಸರ್ಟ್ ಮಾಡದೆ ಶರ್ಟು ತೊಟ್ಟು, ಹೆಚ್ಚು ಬಾಲ್ಡಿಯಾಗದ ಕೂದಲುಗಳನ್ನು ಸ್ಟೆಪ್‌ಕಟ್ ಮಾಡಿಕೊಂಡು ಇರುವುದು ಎಲ್ಲರ ಅಭ್ಯಾಸವಾಗಿತ್ತು. ಮುಂದೊಂದು ದಿನ ಬಾಲ್ಡಿಯಾಗುವುದು, ಬಾಲನೆರೆ ಬರುವುದು ಅಥವ ಇರುವ ತಲೆಕೂದಲನ್ನೂ ಬೋಳಿಸಿಕೊಳ್ಳುವುದು ಫ್ಯಾಷನ್ ಆಗಬಹುದು ಎಂಬ ಸೂಚನೆಯನ್ನು ಸೋಕುಮಾರಿ ತನ್ನ ಪತ್ರದ ಮುಖೇನ ೨೦೧೧ರಿಂದ ತಿಳಿಸಿದ್ದಳು. ಬರೀ ತಲೆಕೂದಲಿಗೆ ಮಾತ್ರ ಈ ಪರಿಸ್ಥಿತಿಯ? ಎಂಬ ಪೋಲಿ ಪ್ರಶ್ನೆ ಕೇಳಿದ್ದ ಮಮಾನಿಗೆ, ಇಲ್ಲ ಮಿಕ್ಕಲ್ಲೆಲ್ಲಾ ಜಡೆಹಾಕಿಕೊಳ್ಳುವ ಸಂಪ್ರದಾಯವೂ ಬಂದಿದೆ ಎಂಬ ಮಮಾನೂ ’ಹೆಣೆಯಲಾಗದಂತಹ’ ಉತ್ತರ ನೀಡಿ, ಆತನನ್ನೇ ಸಂಕೋಚಕ್ಕೊಳಪಡಿಸಿಬಿಟ್ಟಿದ್ದಳು ಸೋಕುಮಾರಿ-೨೦೧೧. ದೈಹಿಕ ಸ್ವಾಧವನ್ನು ಆಸ್ವಾದಿಸಲು ಕಾಲವೇನು, ವಯಸ್ಸೇನು, ಆಕೆಯಿಂದ ಉಗಿಸಿಕೊಂಡರೂ ಸಹ ಇನ್ನಿಪ್ಪತ್ತೆರೆಡು ವರ್ಷದ ನಂತರ ನಮ್ಮ ವಯಸ್ಸಿನ ಹೆಂಗಸು ಹೇಗಿರಬಹುದು ಎಂಬ ಪರಿಕಲ್ಪನೆಯೇ ಸಾಕು, ಇಟ್ ಹ್ಯಾಸ್ ಮೇಡ್ ಮೈ ಡೇ (ಅಂಡ್ ನೈಟ್) ಎಂದಿದ್ದ ಹೊಸದಾಗಿ ಮೊದಲು ಆಕ್ಸೆಂಟ್, ನಂತರ ಭಾಷೆಯನ್ನು (ಇಂಗ್ಲೀಷ್) ಕಲಿತಿದ್ದ ಮಮಾ. ಪೋರ್ನೋ ಸೈಟುಗಳು ಹುಟ್ಟಿಕೊಳ್ಳುವ ಮುನ್ನವೇ ಹುಡುಗರು ಮತ್ತು ಹುಡುಗಿಯರಿಗೆ ಅದಕ್ಕೆ ಪರ್ಯಾಯವಾಗಿ ದೊರಕಿದ್ದಿದ್ದು ಈ ಮತ್ತು ಇಂತಹ ವಾಚಾಳಿತನವೇ ಅಲ್ಲವೆ ಎಂದು ಬರೆದಿದ್ದಳು ಸೋಕುಮಾರಿ, ಈ ವಿಷಯವನ್ನು ಸಾದ್ಯಂತವಾಗಿ ಕೇಳಿಸಿಕೊಂಡ ನಂತರ. ಕೂದಲು ಬೋಳಿಸುವು ವಿಷಯ ಹಾಗಿರಲಿ, ಅದು ಬೆಳೆವ ನೆಲದ ಒಳಗೇನಾದರೂ ಪರಿವರ್ತನೆಯಾಗಿದೆಯೇ, ದೃಶ್ಯಕಲೆಯನ್ನು ಕುರಿತಂತೆ, ೨೦೧೧ರಲ್ಲಿ? ಎಂದು ತೀಕ್ಷ್ಣವಾಗಿ ವಿಚಾರಿಸಿದ್ದ ಅನೇಖ, ತನ್ನ ಪತ್ರಮುಖೇನ.    
 
ಯಾರಾದರೂ ಶರ್ಟು ಇನ್ಸರ್ಟ್ ಮಾಡಿದನೆಂದರೆ ಆತ ’ಸ್ಟೈಲ್‌ಕುದಿ’ ಎಂದೇ ಅರ್ಥ ಮೂಡುತ್ತಿತ್ತು. ಬೆಳಗಿನ ತರಗತಿಗಳಲ್ಲಿ ಹಾಗೆ ಮಾಡುವವರೂ ಸಹ ರಾತ್ರಿಯ ಪರಿಷತ್ತಿನ ಅಭ್ಯಾಸದಲ್ಲಿ ಹೊರಗೆ ಶರ್ಟು ಬಿಡುವುದು ಅವರ ಮಾನಮರ್ಯಾದೆಯ ದೃಷ್ಟಿಯಿಂದ ಬಹಳ ಆರೋಗ್ಯಕರವಾಗಿರುತ್ತಿತ್ತು. ಏನಮ್ಮಾ, ಮಿಂಚಿಂಗ? ಅಕ್ಕಯ್ಯನಿಗೆ ಲೈನ? ಎಂಬ ನನ್ನ ಡೈಲಾಗಿನ ಕಿಚಾಯಿಸುವಿಕೆಯನ್ನು ತಾಳಿಕೊಳ್ಳುವ ತಾಕತ್ತು ಯಾವ ನನ್ ಮಗನಿಗಿದೆ? ಎಂಬ ಮಮಾನಂತಹವರ ವಾಕ್ಯಗಳು ಬಹಳ ಸಂಕೀರ್ಣ ಓದುವಿಕೆಗಳಿಗೆ ಎಡೆಮಾಡಿಕೊಡುತ್ತಿತ್ತು ರಾತ್ರಿಯ ಹೊತ್ತುಗಳಲ್ಲಿ. ಹಾಗೆ ಮಾಡುವ ತಾಕತ್ತು ಇದ್ದವರಿದ್ದರೂ, ಹಾಗೆ ಮಾಡುವ ಮೂಲಕ ಮಮಾನಿಗೆ ’ನನ್ ಮಗನೆ’ ಆಗುವ ಇಚ್ಛೆ ಇರಲಿಲ್ಲ. ’ಸಂಪತ್ತಿಗೆ ಸವಾಲ್’ನಲ್ಲಿ ಅಣ್ಣಾವ್ರು ಹೇಳ್ತಾರಲ್ಲ, ನಮ್ ನಮ್ ಅಪ್ಪಂದರಿಗೆ ನಾವು ಮಕ್ಳಾಗಿರೋಣ, ಬೇರೆಯವ್ರಿಗೆಲ್ಲ ಬ್ಯಾಡಪ್ಪಾ, ಅಂತ, ಹಾಗಾಗಿತ್ತಿದು ಎಂದು ಸ್ವತಃ ಮಮಾನೇ ಎಲ್ಲರಿಗೂ ಹೇಳಿಕೊಂಡು, ನೋಡು ನನ್ ಡೈಲಾಗಿಗೆ ಎದಿರುತ್ತರ ಕೊಡುವವರ‍್ಯಾರಾದರೂ ಇದ್ದಾರಾ ನನ್ನ್ ಮಕ್ಳು?! ಎಂದು ಕೇಳುವ ಮೂಲಕ ಎದಿರುತ್ತರ ನೀಡಲು ಸಿದ್ಧರಾಗಿದ್ದವರೂ ಸಹ ’ನನ್‌ಮಕ್ಕಳಾಗ’ಲಿಚ್ಛಿಸದೆ, ಸುಮ್ಮನಿರುವಂತೆ ಮಾಡಿಬಿಡುತ್ತಿದ್ದ! 
(೬೭)
ಶೈಲಾನಂದ ದಯವಂತರ್ ಅಥವ ’ಬೇತಾಳ’ ಗದಗದ ಸಾದು ಸ್ವಭಾವದ ಹುಡುಗನಾದ್ದರಿಂದ, ವಿರಾ ಅವನ ಪಾಲಿಗೆ ’ವಿಕ್ರಮ’ನಾಗಿದ್ದ. ಬೇತಾಳ ಒಳ್ಳೆ ಉತ್ತರ ಕರ್ನಾಟಕದ ಊಟವನ್ನು ಡಬ್ಬಿಯಲ್ಲಿ ತುಂಬಿ ತಂದಿರುತ್ತಿದ್ದ, ಎಲ್ಲರಿಗೂ ಹಂಚಲೆಂದು. ಆದರೆ ಅದನ್ನು ಯಾವಾಗ ತೆರೆದರೂ ಸಹ ಅದರೊಳಗೆ ಹುಲ್ಲುಕಡ್ಡಿಯೇ ಇರುತ್ತಿತ್ತು. ವಿಕ್ರಮನೇ ಅದನ್ನೆಲ್ಲ ಮಾಡಿದ್ದಾನೆಂಬುದನ್ನು ಎಲ್ಲರೂ ಅರಿತಿದ್ದರು. ಆದರೆ ಯಾವಾಗ ಈ ವೀರಾ ಅದನ್ನು ಮಾಡಿದನೆಂಬುದು ಮಾತ್ರ ತಿಳಿಯುತ್ತಲೇ ಇರಲಿಲ್ಲ. 
 
ಆ ನಿರ್ದಿಷ್ಟ ದಿನ ರಾತ್ರಿ ಯಾರೂ ಊಟದ ಡಬ್ಬಿ ತಂದಿರಲಿಲ್ಲ. ಮನೆಗೆ ಹೋಗದೆ ಹಸಿವಿದ್ದವರಿಗೆಲ್ಲಾ ಪಿತ್ಥನೆತ್ತಿಗೇರಲು ಇದು ಎರಡನೇ ಕಾರಣವಾಯಿತು. ಮೊದಲನೆಯದ್ದು: ಅದೇ ಹಸಿವು! ಸರಿ, ಪರಿಷತ್ತನ್ನು ಪ್ರವೇಶಿಸಿದಾಗ, ಎಡಕ್ಕೆ ಹಳ್ಳದಲ್ಲಿ ಕ್ಯಾಂಟೀನಿತ್ತು. ಅದು ನಾಲ್ಕಡಿ ಎತ್ತರಕ್ಕೆ ಗೊಡೆಯಿದ್ದು, ಅದರೆ ಮೇಲೆ ಗ್ರಿಲ್ ಹಾಕಲಾಗಿದ್ದ, ಗುಡಿಸಲಿನಾಕಾರದ ಹತ್ತಡಿ, ಹತ್ತಡಿ ಸಣ್ಣ ಅಳತೆಯದ್ದಾಗಿತ್ತದು. ಅದರ ಬಳಿ ರಾತ್ರಿ ಬೀಳುತ್ತಿದ್ದ ಬೆಳಕು ಮುವತ್ತು ಅಡಿ ದೂರದಲ್ಲಿದ್ದ ಪರಿಷತ್ತಿನ ಕಂಬದ ದೀಪಗಳಿಂದಲೇ. ಆಕಾರಗಳು ಚಲಿಸುವಾಗ, ಅವರ ಜೊತೆ ನೆರಳೂ ಒಂದು ಘನ ಆಕಾರವಾಗಿ ಚಲಿಸುತ್ತ, ಅಲ್ಲಿಂದ ನೋಡಿದವರಿಗೆ ಅನ್ಯಲೋಕದವರ‍್ಯಾರೋ ಓಡಾಡುತ್ತಿದ್ದಂತೆನಿಸುವ ಭೀಕರ ದೃಶ್ಯಗಳು ಕಂಡಂತಾಗುತ್ತಿತ್ತು. ಜೊತೆಗೆ, ಆಗಿನ ದೀಪಗಳು ೨೦೧೧ರಷ್ಟು ಪ್ರಖರವಾಗಿರಲಿಲ್ಲವೆಂಬುದಕ್ಕೆ ಕಾರಣ ನೆನಪಿನಲ್ಲಿ, ಸ್ಮರಣೆಯಲ್ಲಿ ಮತ್ತು ಸ್ಮೃತಿಯಲ್ಲಿ ಅದು ’ಮಾಸಿರುವುದೇ’ ಕಾರಣವಿರಬಹುದು. ಕ್ಯಾಂಟೀನಿನ ಒಳಗಿರುವುದೆಲ್ಲಾವೂ ಗ್ರಿಲ್ ಮೂಲಕ ಕಾಣುತ್ತಿತ್ತು. ಖಾರದ ಕಡಲೆ ಬೀಜಗಳ, ಕರ್ನಾಟಕದಲ್ಲೇ ತಯಾರಿಸಲಾಗುತ್ತಿದ್ದ ಕೇರಳ ಬಾಳೆಹಣ್ಣಿನ ಚಿಪ್ಸ್‌ನ, ಬಿಸ್ಕತ್, ಸಣ್ಣ ಕೇಕ್‌ಗಳ ಪ್ಯಾಕೆಟ್‌ಗಳು ಮತ್ತು ಕೊಕೊಕೋಲ, ಪೆಪ್ಸಿ, ಫ಼ಾಂಟಾ ಬಾಟೆಲಿಗಳು-ಎಲ್ಲವೂ ಕಾರಾಗೃಹ ವಾಸವನ್ನನುಭವಿಸುವಂತೆ ಹುಡುಗರಿಗೆ ಕಾಣುತ್ತಿತ್ತು. ’ನಮ್ಮನ್ನು ಬಿಡುಗಡೆಗೊಳಿಸಿ’ ಎಂದವು ಕೂಗಿ ಕೂಗಿ ಹೇಳುತ್ತಿದ್ದವು. 
 
ಹಸಿವೆ ತಡೆಯಲಾರದೆ, ಹಸಿವಿನ ರಾಜಾ ’ಬೇಡರ ಕಣ್ಣಪ್ಪ’ನನ್ನು ನೆನೆಸಿಕೊಂಡು ಹುಡುಗರೆಲ್ಲಾರೂ ಆ ಕ್ಯಾಂಟೀನಿನಿಂದ ಆ ರಾತ್ರಿ ತಿಂಡಿಯನ್ನು ತಿನ್ನಬೇಕೆಂದು ನಿರ್ಧರಿಸಿದರು. ಎಲ್ಲರಿಗೂ ಹಸಿವೆ ಎಷ್ಟಾಗಿತ್ತೆಂದರೆ, ಆ ’ಆಪರೇಷನ್ ಕ್ಯಾಂಟೀನ್’ ಏನಾದರೂ ಆ ರಾತ್ರಿ ಸಫಲವಾದಲ್ಲಿ, ಮಾರನೇ ದಿನ ಅದರೊಡೆಯ ಹೊಸ ಕ್ಯಾಂಟೀನನ್ನು ಆರಂಭಿಸಬೇಕಿತ್ತು. ಇದು ದೈಹಿಕ ಹಸಿವೆಯಲ್ಲ, ಬೌದ್ಧಿಕವಾದುದು ಎಂದೇನೋ ಅನೇಖ ಹೇಳಲು ಯತ್ನಿಸಿದಾಗ, ದೈಹಿಕ ಅನ್ನೋದು ಯುವಜನರಿಗೆ ಮಾತ್ರ ಸೀಮಿತವಲ್ಲ ಬಿಡು, ಎಂದು ಮಮಾ ಪೋಲಿತನದ ಸ್ಪರ್ಶ ನೀಡಿ ಆತನನ್ನು ಸುಮ್ಮನಾಗಿಸಿದ್ದ.
 
ಎಲ್ಲರೂ ಕ್ಯಾಂಟೀನಿನ ಸಮೀಪ ಬಂದರು. ’ಮಾಸ್ಟರ್’ ಪ್ಲಾನ್ ಮಾಡಲು ಸೂಕ್ತ ’ವಿದ್ಯಾರ್ಥಿ’ಯೊಬ್ಬನ ಅವಶ್ಯಕತೆ ಇತ್ತು. ವಿರಾ, ತರುಣ್ ಚಂಗಪ್ಪ-ಇಬ್ಬರೂ ಒಟ್ಟುಗೂಡಿದರು, ಪ್ಲಾನ್ ನಿರ್ಧರಿಸಲು. ಆ ಪ್ಲಾನ್ ಬೇಗ ಆಗಬೇಕಿತ್ತು. ಇಲ್ಲದಿದ್ದಲ್ಲಿ ಹಸಿವೆಯಿಂದ ಕಂಗೆಟ್ಟವರೆಲ್ಲರೂ ಸೇರಿ ಅದೇ ಕಾರಣದಿಂದಾಗಿ ಪ್ಲಾನ್ ಅನ್ನೇ ಕಂಗೆಡಿಸುವ ಸಾಧ್ಯತೆ ಇದ್ದಿತು. ಕ್ಯಾಂಟೀನ್ ದರೋಡೆ ಮಾಡುವವರಲ್ಲಿ ಕೆಲವರು ಹುಲಿಯನ್ನು ತೋಳವೆಂದು ಕೊಂದ ದೊಡ್ಡಯ್ಯನ ಗಮನವನ್ನು ಕೊಲ್ಲಬೇಕಿತ್ತು. ನಾಲ್ಕು ಮಂದಿ ಕುಂಟು ದೊಡ್ಡಯ್ಯನಿದ್ದೆಡೆ ಹೋಗಿ, ಪರಿಷತ್ತಿನ ಕುಮಾರಕೃಪ ಗೆಸ್ಟ್ ಹೌಸಿನ ಮೂಲೆಯ ಕಾಂಪೌಂಡಿನ ದೆವ್ವದ ವಿಷಯವನ್ನೇನೋ ಮಾತುಕಥೆಯಲ್ಲಿ ಅಳವಡಿಸಿಕೊಂಡು ದೊಡ್ಡಯ್ಯನನ್ನು ರೋಮಾಂಚನಗೊಳಿಸಲು, ಇಲ್ಲವೆ ಹೆದರಿಸಲು ಯತ್ನಿಸುತ್ತಿದ್ದುದು ಕ್ಯಾಂಟೀನಿನ ಬಳಿಯಿಂದಲೇ ಕಾಣುತ್ತಿತ್ತು. ರಮಾನಾಥ್ ಆ ಕತ್ತಲಲ್ಲೂ ಅಗಲದ ಕಾರ್ಪೆಂಟರ್ ಪೆನ್ಸಿಲ್ ಹಾಗೂ ಕಾಗದದ ಪ್ಯಾಡ್ ಹಿಡಿದು ಕತ್ತಲನ್ನೇ ಸ್ಕೆಚ್ ಮಾಡತೊಡಗಿದ್ದ! ಒಟ್ಟಾಗಿ ದೊಡ್ಡಯ್ಯ ಕ್ಯಾಂಟೀನಿನ ಕಡೆ ಮುಖ ಮಾಡಬಾರದಂತೆ, ನೂರಡಿ ದೂರದಲ್ಲಿದ್ದ, ಈಗಲೂ ಇರುವ ಗಣಪತಿ ದೇವಸ್ಥಾನದ ಸಮೀಪದ ಮರದ ಕೆಳಗೆ ಕುಳ್ಳಿರಿಸಿದ್ದರು. 
 
ತರುಣ್ ಪಕ್ಕಾ ಕೂರ್ಗಿ ಸಾಹಸಿ ಎಂದು ಜನಪ್ರಿಯ ಕಲ್ಪನೆ ಏನಿದೆಯೋ ಅದೆಲ್ಲವೂ ಆಗಿದ್ದ. ಶೂ ಧರಿಸಿಯೇ ಪರಿಷತ್ತಿನ ಮರದ ಕೊಂಬೆಯೊಂದನ್ನು ಹತ್ತಿ, ನಿಂತಂತೆಯೇ ಶೂಗಳನ್ನು ಅಲ್ಲೇ ಕಾಲ್ಗಳಿಂದಲೇ ಕಳಚಿ, ಬರಿಗಾಲಲ್ಲಿ ಮತ್ತೊಂದು ಕೊಂಬೆಗೆ ಹಾರುತ್ತಿದ್ದ. ಆತನನ್ನು ಅನುಕರಿಸಲು ಹೋಗಿ ಅನೇಖ ಒಮ್ಮೆ ಕೆಳಕ್ಕೆ ಬಿದ್ದು ಕಾಲು ಉಳುಕಿಸಿಕೊಂಡಾಗ, ಅನೇಖ ಅಳುವ ಬದಲು ನಗತೊಡಗಿದ್ದ. ಆತ ಕೆಳಕ್ಕೆ ಧುಮುಕಿದಾಗ ಮೇಲೆಯೇ ಇದ್ದ ತರುಣ ಈ ನಗುವ ಕ್ರಿಯೆಗೆ ಕಾರಣ ದೊರಕಿದಂತೆ ಸಮಾಧಾನಿಯಾಗಿದ್ದ. ಅನೇಖ ಹಾರಲು ಹೋಗಿ ಧುಮುಕಿದಾಗ ಆತನ ನೆರಳು ಮಾತ್ರ ಮರದ ಕೊಂಬೆಗೆ ಅಂಟಿದಂತೆಯೇ ಅಲ್ಲಿಯೆ ಉಳಿದುಕೊಂಡಿತ್ತು! ಕೆಳಗೆ ಬಿದ್ಧ ಅನೇಖ ನೆಲೆನಿಂತ ಅಥವ ನೆಲೆಕುಂತ ನೆಲದ ಮೇಲೆ ಆತನ ನೆರಳು ಇರಲಿಲ್ಲವೆಂಬುದನ್ನು ತರುಣ್ ಸ್ಪಷ್ಟವಾಗಿ ಗಮನಿಸಿದ್ದ. ಆದ್ದರಿಂದಲೇ ಅನೇಖ ನಗುತ್ತಿರಬಹುದು ಎಂದಾತ ಭಾವಿಸಿದ್ದ. ಆದರೆ ಆತನ ನಗುವಿಗೆ ಮತ್ತೊಂದು ಕಾರಣವಿತ್ತು--ನಿಜವಾಗಿಯೂ ಆತ ನಗಲು ಕಾರಣವಾದ ಅಂಶವದು. ಕಾಲು ಉಳುಕಿಸಿಕೊಂಡಿದ್ದ ಅನೇಖನ ಕೈಗಳನ್ನು ಹಿಡಿದು ಮುರಿದ ಮೂಳೆಗಳನ್ನು ಜೋಡಿಸುವವನಂತೆ ಕಾಜ್‌ರೋಪಿ  ಎಳೆದಾಡತೊಡಗಿದ್ದ. ಅದರಿಂದಾಗಿ ಅನೇಖನಿಗೆ ನಗು ಬಂದಿತ್ತು.
 
ಅನೇಖನ ಯದ್ವಾತದ್ವ ಉರುಳಾಡುವ, ತನ್ನದೇ ಒಂದು ಮನಸ್ಸು ಇರುವಂತೆ ಸ್ಥಿರವಾಗಿಬಿಡುವ ನೆರಳಿನ ಕಥೆಯನ್ನು ಎಲ್ಲರೂ ಗಮನಿಸಿದ್ದರೂ ಯಾರೂ ಯಾರಿಗೂ ಅದನ್ನು ಕುರಿತು ಹೇಳಿರಲಿಲ್ಲ. ಹಾಗೆ ಹೇಳಲುದ್ಯುಕ್ತರಾದವರ ಮಾನಸಿಕ ಸ್ಥೀಮಿತತೆಯ ನೆರಳೇ ಯದ್ವಾತದ್ವವಾಗಿದೆ ಎಂದು ಎಲ್ಲರೂ ಎಲ್ಲರ ಬಗ್ಗೆಯೂ ಭಾವಿಸಿಬಿಡುವ ಅನುಮಾನದ ನೆರಳು ದಟ್ಟವಾಗಿತ್ತಾದ್ದರಿಂದ ಯಾರೂ ಮಾತನಾಡುತ್ತಿರಲಿಲ್ಲ. ರಮಾನಾಥ ಮಾತ್ರ, ಈ ಅನೇಖನನ್ನು ಆತನ ನೆರಳಿನಿಂದ ಬೇರ್ಪಡಿಸಿ ಸ್ಕೆಚ್ ಮಾಡುವುದೇ ಒಂದು ತಲೇನೋವು. ಆತನಿಗೆ ಬೇರೆ ಕಾಗದ ಆತನ ನೆರಳಿಗೇ ಬೇರೆ ಸ್ಕೆಚಿಂಗ್ ಕಾಗದ ಇರಿಸಬೇಕು, ಎಂದು ಇರಿಸುಮುರಿಸುಗೊಂಡಿದ್ದ.//