ನೆನಪಿನ ಚಿತ್ರಕಲಾ ಶಾಲೆ: ಭಾಗ ೩೧ - ಮೋಕ್ಷದ ಟ್ಯಾಬ್ಲೆಟ್!

ನೆನಪಿನ ಚಿತ್ರಕಲಾ ಶಾಲೆ: ಭಾಗ ೩೧ - ಮೋಕ್ಷದ ಟ್ಯಾಬ್ಲೆಟ್!

  (೯೮)

ಸ್ಕೆಚ್ ಪುಸ್ತಕ, ಜನವರಿ ೧೯೯೦:
 
     ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ ಇಲ್ಲ! ಅದನ್ನು ಕೇಳಿದ್ದಿದ್ದ ಪಕ್ಷದಲ್ಲಿ ವೀರಾ ಇನ್ನೂ ವಿರಹವನ್ನು ಮುಂದುವರೆಸಿ, ಅದನ್ನು ಡಿಪ್ರೆಷನ್ನಿಗೆ ಪರಿವರ್ತಿಸಿ, ಅದನ್ನೇ ನಿರಂತರವಾಗಿಸಿಕೊಂಡು, ಅನೇಖನನ್ನು ಆರೋಪಿಯನ್ನಾಗಿಸಿ, ಮುಂದೊಮ್ಮೆ ಆತ್ಮಹತ್ಯೆಯೋ? ಆಕಸ್ಮಿಕವೋ? ಎಂಬೆರೆಡು ಪ್ರಶ್ನೆಗಳನ್ನು ಅಂತರ್ಭವಿಸಿಕೊಂಡ ಸಾವಿನಲ್ಲಿ ಐಕ್ಯನಾಗುವುದು ತಪ್ಪುತ್ತಿತ್ತೋ ಏನೋ! ವೀರಾ ಆ ಮಾತುಗಳನ್ನು ಕೇಳಿಸಿಕೊಂಡಿದ್ದಲ್ಲಿ ಆಗುತ್ತಿದ್ದ ಮತ್ತೊಂದು ಲಾಭವೆಂದರೆ ’ಅನೇಖನ ಪ್ರತಿಬಿಂಬ ಅನೇಖನಿಗೇ ಕಾಣುವುದಿಲ್ಲ ಎಂಬ ಅರಿವು ವೀರಾನಿಗೆ ಹೇಗೆ ಗೊತ್ತಾಯಿತು?’ ಎಂದು ಅನೇಖನಿಗೆ ವೀರಾನೇ ತಿಳಿಸುವಂತಾಗುತ್ತಿತ್ತು! ಎಲ್ಲರೊಟ್ಟಿಗೆ ಕನ್ನಡಿ ಎದಿರು ನಿಂತಾಗ ಅನೇಖನ ಬಿಂಬವು ಇತರರಂತೆ ವೀರಾನಿಗೆ ಕಾಣುತ್ತಿಲ್ಲವಾದ್ದರಿಂದ, ಅನೇಖನಿಗೂ ಆತನದೇ ಬಿಂಬದ ಅನುಪಸ್ಥಿತಿಯು ಗೋಚರಿಸುತ್ತಿತ್ತೋ ಇಲ್ಲವೋ ಎಂಬ ವಿಷಯದ ಬಗ್ಗೆ ಒಂದು ಸಣ್ಣ ಅನುಮಾನವನ್ನೂ ಇರಿಸಿಕೊಳ್ಳದೆ ವೀರಾ ಮಾತನಾಡಿಬಿಟ್ಟಿದ್ದ! ನಾನು ಅಲ್ಲೇ ಅನೇಖ ಕುಳಿತಿದ್ದ ಕ್ಯಾಂಟೀನಿನ ಕಲ್ಲಿನ ಬೆಂಚಿನಲ್ಲಿ, ಆತನ ಕೈಅಳತೆಯ ಸಮೀಪವೇ ಇದ್ದೆ. ಮಲಗಿದ್ದೆ ಅಥವ ಕುಳಿತಿದ್ದೆ ಎಂಬುದು ಕೇವಲ ಮನುಷ್ಯರಿಗೆ ಮಾತ್ರ ಅನ್ವಯಿಸುವಂತಹದ್ದು, ನನ್ನಂತಹ ಸ್ಕೆಚ್ ಪುಸ್ತಕಕ್ಕಲ್ಲ. ಇತರೆ ಪ್ರಾಣಿಗಳಿಗೆ ಕುಳಿತುಕೊಳ್ಳುವುದೆಂದರೆ ಸುಸ್ತು, ನಿಂತಿರುವುದೆಂದರೆ ಚೈತನ್ಯವಿರಬಹುದೇನೋ. 
 
     ಮನುಷ್ಯರಿಗೆ ಕೆಲವು ವಿಷಯಗಳನ್ನು ಸಂವಹಿಸಲು ಅವರುಗಳು ಅನ್ವೇಷಿಸಿಕೊಂಡ ಭಾಷೆಗೇ ಅತೀವ ಇತಿಮಿತಿಗಳಿವೆ. ತದ್ವಿರುದ್ಧವಾಗಿ ನಾನು, ಅಂದರೆ ಸ್ಕೆಚ್ ಪುಸ್ತಕವು ಒಳಗೊಂಡಿರುವ ಭಾಷೆಗೆ ಸಂವಹನದ ಕೊರತೆ ಇದೆ! ಮೊದಲಿಗೆ ನನ್ನ ಸರಿಯಾದ ಪರಿಚಯ ನಿಮಗಿಲ್ಲದಿದ್ದರೆ ನಾನು ಹೇಳುವುದನ್ನು ಗ್ರಹಿಸುವುದು ನಿಮಗೆ ಸ್ವಲ್ಪ ತೊಡಕಾಗಬಹುದು. ನಾನೊಂದು ಸ್ಕೆಚ್ ಪುಸ್ತಕ, ಡ್ರಾಯಿಂಗ್ ಪುಸ್ತಕವಲ್ಲ. ಕಲಾವಿದರು, ಕಲಾ ವಿದ್ಯಾರ್ಥಿಗಳು ಅವಸರಕ್ಕೆ ಎದುರಿಗೆ ಕಂಡ ನಿಜ ಜಗತ್ತನ್ನು ಕ್ಷಣಾರ್ಧದಲ್ಲಿ ಪರಪರನೆ ರೇಖೆಗಳಲ್ಲಿ ಮೂಡಿಸಿ, ಮುಂದೊಮ್ಮೆ ಇವುಗಳ ಆಧಾರದಿಂದ ರೇಖಾಚಿತ್ರಗಳನ್ನು ಬಿಡಿಸುವ ಸಾಧನ ಸ್ಕೆಚ್ ಪುಸ್ತಕ. ನಾನೊಂದು ಸೇತುವೆ ಆದರೆ ಡ್ರಾಯಿಂಗ್ ಪುಸ್ತಕ ಒಂದು ಮನೆ ಇದ್ದ ಹಾಗೆ. ಸೇತುವೆ ದಾಟಲು, ಮನೆ ತಲುಪಲು. ಇದೊಂದು ರೂಢಿಬದ್ಧವಾದ ನಂಬಿಕೆ. ಹೆಚ್ಚಿನ ಕಾಸು ಕೊಟ್ಟು ಯಾರೂ ಸ್ಕೆಚ್ ಪುಸ್ತಕ ಕೊಳ್ಳಲಾರರು. ರದ್ದಿಯಾದ, ಒಂದೇ ಕಡೆ ಖಾಲಿ ಇರುವ ತೆಳು ಕಂಪ್ಯೂಟರ್ ಡಾಟಾ ಹಾಳೆಗಳನ್ನು ಸುಲ್ತಾನ್ ಪೇಟೆಯಿಂದ ತಂದು ಬೈಂಡ್ ಮಾಡಿಸಿಕೊಂಡು ತಯಾರಾಗುವುದು ಸ್ಕೆಚ್ ಪುಸ್ತಕ. ಡ್ರಾಯಿಂಗ್ ಪುಸ್ತಕಕ್ಕಾದರೆ ಎಷ್ಟು ಹಣ ಬೇಕಾದರೂ ಕೊಟ್ಟಾರು. 
 
    ಆದರೆ ನನ್ನ ವಿಷಯದಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ. ಪರಿಷತ್ತಿನ ಹಾಗೂ ಬಾಯ್ಸ್ ಕಲಾಶಾಲೆಯ ಕಲಾವಿದ್ಯಾರ್ಥಿಗಳನ್ನೇಕರು ಒಟ್ಟಾಗಿ ಆಗಾಗ ಕಂಡು ಕಲ್ಪಿಸಿಕೊಂಡದ್ದನ್ನೆಲ್ಲ ಗೀಚಿರುವ ಏಕೈಕ ಸ್ಕೆಚ್ ಪುಸ್ತಕ ನಾನು! ಇದೊಂದು ಯೋಗಾಯೋಗವಷ್ಟೇ. ಅಂದರೆ ಪರಿಷತ್ತಿನ ಮತ್ತು ಬಾಯ್ಸ್ ಶಾಲೆಯ ಇತಿಹಾಸದಲ್ಲಿ ಬಹುಪಾಲು ವಿದ್ಯಾರ್ಥಿಗಳು ಒಂದೇ ಪುಸ್ತಕವೊಂದರಲ್ಲಿ ಸ್ಕೆಚ್ ಬರೆದಿದ್ದಲ್ಲಿ ಅದು ನನ್ನಲ್ಲೇ. ಅಸಲಿಯಾಗಿ ಅನೇಖ ಮತ್ತು ಮಮಾನ ಒಂದು ಐಡಿಯದಿಂದಾಗಿ ನಾನು ಅಸ್ತಿತ್ವಕ್ಕೆ ಬಂದದ್ದು. ನೆನಪಿರಲಿ ಖಾಲಿ ಇರುವ, ಫ್ರೆಷ್ ಆದ ಪುಸ್ತಕವನ್ನು ಸ್ಕೆಚ್ ಪುಸ್ತಕ ಎನ್ನಲಾಗದು, ಅನ್ನಬಾರದು. ಕವಿತೆ ಬರೆಯಬೇಕೆಂದುಕೊಂಡ ಖಾಲಿ ಡೈರಿಯನ್ನು ’ಕವಿತೆಗಳ ಕರಡು ಪುಸ್ತಕ’ ಎನ್ನಲಾದೀತೆ? ಸ್ಕೆಚ್ ಪುಸ್ತಕದೊಳಗೆ ಒಂದಷ್ಟು ಕರಡು ಚಿತ್ರಗಳನ್ನು ರಚಿಸಿರಬೇಕು, ಗೀಚಿರಬೇಕು, ಡೂಡಲ್ಸ್ ಇರಬೇಕು, ಅಲ್ಲಿಲ್ಲೆಲ್ಲೆಡೆ ಇಟ್ಟು ಉಜ್ಜಾಡಿ ಸ್ವಲ್ಪ ಸುಕ್ಕುಗಟ್ಟಿರಬೇಕು. ಆದರೆ ನನ್ನನ್ನು ಎಲ್ಲರೂ ಎಷ್ಟು ನಾಜೂಕು ಮಾಡಿದ್ದರೆಂದರೆ ಬೆಂಗಾಲ ಕಲಾಶಾಲೆಯ ಸೋಮನಾಥ್ ಹೋರರ ’ಗಾಯಗಳು’ (ವೂಂಡ್ಸ್) ಸರಣಿಯ ಗ್ರಾಫಿಕ್ ಕೃತಿಯೊಂದರ ಪ್ರತಿಕೃತಿಯೊಂದು ಬೆಲೆಯುಳ್ಳ ಕೆಟಲಾಗೊಂದರಲ್ಲ್ಲಿ ಪ್ರಕಟವಾಗಿದ್ದೆಡೆಯಿಂದ ಹರಿದು ಅದನ್ನು ನನ್ನ ಮೈಮೇಲೆ ಹೊದ್ದಿಕೆಯಾಗಿ ಅಂಂಟಿಸಲಾಗಿತ್ತು. 
(ಆ)
     ಅನೇಖನನ್ನೂ ಒಳಗೊಂಡಂತೆ ಅನೇಕ ವಿದ್ಯಾರ್ಥಿಗಳು ನನ್ನ ಹಲವು ಹಾಳೆಗಳಲ್ಲಿ (ಅಂಗಗಳಲ್ಲಿ) ಸ್ಕೆಚ್‌ಗಳನ್ನು ರಚಿಸಿದ ನಂತರ, ಆ ಸ್ಕೆಚ್‌ಗಳ ಮುಖೇನ ಈ ಕಥನದಲ್ಲಿ ಬರುತ್ತಿರುವ ಬಹುಪಾಲು ಪ್ರಮುಖ ಘಟನೆಗನ್ನೆಲ್ಲಾ ಯಾರ‍್ಯಾರೋ ಗೀಚಿಹಾಕಿದ್ದರು: ಪ್ರಶ್ನಾಮೂರ್ತಿಯ ತ್ರಿಶಂಕು ಸ್ಥಿತಿಯನ್ನು, ಆತನ ಆಸಿಡ್ ಕುಂಡದ ಪ್ರಕರಣ, ಅನೇಖನ ತಲೆಶೂಲೆಯ ಪ್ರಕರಣ(ಗಳು), ಅದನ್ನು ಸೆರೆಹಿಡಿಯಲು ಕತ್ತಲಲ್ಲಿ ಹೋಗಿ ವಿಸ್ಮೃತಿಗೊಳಗಾದಂತೆ ಅನೇಖನು ಮೂತ್ರವಿಸರ್ಜನೆ ಮಾಡುತ್ತಿರುವಂತೆ ರಮಾನಾಥೆಸ್ಸೆಮ್ಮೆಸ್ ಸ್ಕೆಚ್ ಮಾಡುತ್ತಿರುವ ಭಂಗಿ, ವೀರಾ ಕ್ಯಾಮರಾದಲ್ಲಿ ಅನೇಖನ ನೆರಳಿನಾಟವನ್ನು ಕಗ್ಗತ್ತಲಲ್ಲೂ ಸೆರೆಹಿಡಿಯುತ್ತಿರುವ ಯತ್ನ, ಫ್ಲಾಸ್ಕಿನ ಟೀಯಲ್ಲಿ ಜಾಪಾಡ್ ಮಾತ್ರೆ ಹಾಕಿ ಎಡವಟ್ಟಾಗಿ ಅದನ್ನು ಹೊಟ್ಟೆ ತುಂಬಾ ಕುಡಿದು ವೀರಾ ಬಾಥ್ರೂಮಿಗೆ ಲೆಫ್ಟ್-ರೈಟ್ ಮಾಡುತ್ತಿರುವ ವ್ಯಂಗ್ಯೋಕ್ತಿಯನ್ನು ಡಾಕ್ಟರರು ಕಂಡ ರೀತಿಯ ಸ್ಕೆಚ್, ಆತ ಆಸ್ಪತ್ರೆ ಸೇರಿದ್ದು, ಒಂದು ದಿನಕಾಲವಷ್ಟೇ ಇದ್ದು ಮಾಯವಾಗುವ ಪತ್ರಗಳನ್ನು ಬರೆದ ಸೋಕುಮಾರಿ ಪ್ರಸಂಗವನ್ನು (ಬೆಂಗಾಲ್ ಶಾಲೆಯ ಚುಗ್ತಾಯ್‌ರ ಶೈಲಿಯಲಿ) ಬರೆಯಲಾದ ಸ್ಕೆಚ್, ವೀರಾ-ಚಾರ್ವಾಕಿಯ ಪ್ಲಾಝಾ ಥಿಯೇಟರ್‌ನಲ್ಲಿನ ಭಗ್ನಪ್ರೇಮ ಪ್ರಸಂಗ(?)ವನ್ನು ಲೈಲಾ ಮಜ್ನೂವಿಗೆ ಹೋಲಿಕೆ ಮಾಡಲಾಗಿದ್ದ (ವ್ಯಂಗ್ಯಚಿತ್ರಕಾರ ರಾಮಮೂರ್ತಿಯವರ ಶೈಲಿಯ) ಕ್ಯಾರಿಕೇಚರ್ ಚಿತ್ರ, ಬೀಡಾ ಸುವೇಗ ಅಥವ ಲೂನಾದ ಮೇಲೆ ಇಲಿಯ ಮೇಲಿನ ಗಣಪನ ರೀತಿ ಸವಾರಿ ಬರುತ್ತಿರುವ ಶೈಲಿಯ ವೀರಾನ ಸ್ಕೆಚ್, ದೊಡ್ಡಯ್ಯ ಹುಲಿಯನ್ನು ತೋಳವೆಂದು ಹೊಡೆದು ಕೊಂದ ಕಥನ, ರಾಮಾಯ್ಣ ಮತ್ತು ಅನೇಖ ಒಟ್ಟಾಗಿ ಕತ್ತಲಲ್ಲಿ ದೊಡ್ಡಮರದೆಡೆಯಿಂದ ಕಿರುಚುತ್ತಾ ಬರುತ್ತಿರುವ ದೃಶ್ಯ, ವೀರಾ ವಿವರಿಸಿದಂತೆ ಅಂದು ರಾತ್ರಿ ಕ್ಯಾಂಟೀನಿನೊಳಗೆ ಬಂದಿಯಾಗಿದ್ದಾಗ ಚಾರ್ವಾಕಿ ಹೊರಗೆ ಅದೆಲ್ಲಿಂದಲೋ ಅಕ್ಷರಶಃ ಧರೆಗಿಳಿಯುತ್ತಿರುವ ದೃಶ್ಯ (ಎಸ್.ಎಂ.ಪಂಡಿತರ ಶೈಲಿಯಲ್ಲಿ), ರಾಮಾಯ್ಣ ಎರಡೂ ಕಾಲುಗಳನ್ನು ಸೈಕಲ್ಲು ಹತ್ತಲು ಮತ್ತು ಇಳಿಯಲು ಒಮ್ಮೆಲೆ ಹಾರಿಸುತ್ತಿದ್ದ ದೃಶ್ಯ..ಇತ್ಯಾದಿ, ಈ ’ಚಿತ್ರಕಲಾ ಪರಿಷ(ರ)ತ್ತು ಸ್ವಾನುಭವದಲ್ಲಿ ನೀವುಗಳು ಏನೇನನ್ನೆಲ್ಲಾ ಓದಿದ್ದೀರೋ ಅದರಲ್ಲಿನ ಮುಖ್ಯ ಘಟನೆಗಳನ್ನೆಲ್ಲಾ ನನ್ನ ಹಾಳೆಗಳಲ್ಲಿ ಸ್ಕೆಚ್ ಮಾಡಿಬಿಟ್ಟಿದ್ದರು ಪರಿಷತ್ತಿನ ಪಾಪಿಷ್ಠ ಕಲಾವಿದ್ಯಾರ್ಥಿಗಳು. ನನಗೋ ಈ ಎಲ್ಲಾ ಸ್ಕೆಚ್‌ಗಳನ್ನು ಒಳಗೊಂಡಿದ್ದರಿಂದಲೋ ಏನೋ ಭೂರಿ ಭೋಜನ ತಿಂದು ಕಿಕ್ ಹೊಡೆಸಿಕೊಂಡ ಅನುಭವ!    
 
     ನನ್ನೊಳಗೆ ಮೊದಲ ಸ್ಕೆಚ್ ಮಾಡಿದವರಾರೆಂಬುದು ಸ್ಪಷ್ಟವಾಗಿ ನೆನಪಿಲ್ಲ. ಏಕೆಂದರೆ ನಾನು ಅಸ್ತಿತ್ವಕ್ಕೆ ಬಂದದ್ದೇ ಆ ಹೊದ್ದಿಕೆಯಿಂದ ನನ್ನ ಮೈಮುಚ್ಚಿದ ಕೆಲವೇ ಕ್ಷಣಗಳಲ್ಲಿ ರಮಾನಾಥೆಸ್ಸೆಮ್ಮೆಸ್ ಬರೆಯತೊಡಗಿದ ಮೊದಲ ಸ್ಕೆಚ್‌ನ ಸಮಯದಲ್ಲೇ. ಮನುಷ್ಯರಿಗೆ ಆರಂಭದ ನಾಲ್ಕಾರು ವರ್ಷಗಳು ಹೇಗೆ ನೆನಪಿರುವುದಿಲ್ಲವೋ ಹಾಗೇ ಆಗಿಬಿಟ್ಟಿದ್ದೇನೆ ನಾನು. ಈ ನರಮನುಷ್ಯರ ಸಹವಾಸಕ್ಕೆ ಬೀಳುವ ಎಲ್ಲವಸ್ತುಗಳೂ ಸಹ--ನನ್ನಂತಹ ಸ್ಕೆಚ್ ಪುಸ್ತಕವನ್ನೂ ಒಳಗೊಂಡಂತೆ-ಅವರ ನಡವಳಿಕೆಯನ್ನೇ ಅನುಸರಿಸುವುದೊಂದು ವಿಶೇಷ.  
(ಇ)
 
      ನಾಲ್ಕಾರು ತಿಂಗಳ ಹಿಂದೊಂದು ದಿನ ಸೋಕುಮಾರಿ ಎಂಬ ಭವಿಷ್ಯಕಾಲದಿಂದ ಅಥವ ಭವಿಷ್ಯದಿಂದ ಸೋಕುಮಾರಿಯಿಂದ ಮೊದಲ ಪತ್ರ ಬಂದ ದಿನ ಅವರಿಬ್ಬರೂ ಆ ಪತ್ರದಲ್ಲಿದ್ದುದನ್ನು ಬರೆದುಕೊಳ್ಳಲು ಕ್ಯಾಂಟೀನಿನ ಸುತ್ತಲಿದ್ದವರ ಬಳಿಯೆಲ್ಲಾ ಕಾಗದ ಹಾಗೂ ಪೆನ್ನಿಗಾಗಿ ಹುಡುಕಾಡಿದ್ದರು. ಯಾರೂ ತಮ್ಮ ಸ್ಕೆಚ್ ಪುಸ್ತಕಗಳಲ್ಲಿ ಸೋಕುಮಾರಿಯ ಪತ್ರದ ಅಕ್ಷರಗಳನ್ನು ಬರೆಸಲಿಚ್ಛಿಸದೆ, ಬದಲಿಗೆ ಕಾಗದಗಳನ್ನು ಹರಿದು ಕೊಡಲೂ ಮನಸ್ಸು ಮಾಡದೆ ತಪ್ಪಿಸಿಕೊಳ್ಳುತ್ತಿದ್ದಾಗ, ಮಮಾನ ಕಣ್ಣಿಗೆ ಬಿದ್ದದ್ದೇ ದೀಪಾಳ ಅಪ್ಪ ಅಂದು ತಾನೆ ಕೊಂಡುತಂದಿದ್ದ ಅಚ್ಚಹೊಸ (ಭವಿಷ್ಯದ ಸ್ಕೆಚ್‌ಪುಸ್ತಕ) ಪುಸ್ತಕ-ಅಂದರೆ ನಾನು. ಅವರ ಆರ್ಕಿಟೆಕ್ಟ್ ತಂದೆ ಲಂಡನ್ನಿನ ಪ್ರವಾಸದಿಂದ ಹಿಂದಿರುತ್ತಿರುಗುವಾಗ ಪಿಕಡೆಲ್ಲಿ ಸರ್ಕಸ್ ಚೌಕದ ಅಂಗಡಿಯೊಂದರಿಂದ ಮಗಳಿಗಾಗಿ ಕೊಂಡು ತಂದಿದ್ದ ಮೆಮೆಂಟೋ ಅದು. ತನ್ನ ಬ್ಯಾಗ್, ಅದರ ಮೇಲೆ ಈ ಹೊಸ ಸ್ಕೆಚ್ ಪುಸ್ತಕ ಮತ್ತು ಅರೆಕುಡಿದ ಫ್ರೂಟಿಯನ್ನು ಕಲ್ಲಿನ ಬೆಂಚಿನ ಮೇಲಿಟ್ಟು ಆಕೆ, "ಸ್ಕೆಚಸ್‌ಗಳನ್ನು ಪಾಲ್ ಮೇಷ್ಟ್ರಿಗೆ ತೋರಿಸಿ, ಕರೆಕ್ಷನ್ ಮಾಡಿಸಿಕೊಂಡು ಬರುವೆ"ನೆಂದು ಯಾರಿಗೂ ನಿರ್ದಿಷ್ಟವಾಗಿ ಉದ್ದೇಶಿಸದೆ ಹೇಳಿ ಹೋಗಿದ್ದಳು.
 
     ಕೂಡಲೆ ಮಮಾ ಮತ್ತು ಅನೇಖ ನನ್ನನ್ನು ತೆರೆದು ಅದರೊಳಗೆ ಕೈಯಲ್ಲಿ ಹಿಡಿದಿದ್ದ ಪತ್ರವನ್ನು ನಕಲು ಮಾಡತೊಡಗಿದರು. ಅರ್ಧ ಪುಟ ಬರೆದಿರಬೇಕು, ಅಷ್ಟರಲ್ಲಿ ಬಂದ ದೀಪಾ ತನ್ನ ಹೊಸ ಪುಸ್ತಕವು, ಸ್ಕೆಚ್ ಪುಸ್ತಕವಾಗುವ ಬದಲಿಗೆ ಡೈರಿಯಾಗತೊಡಗಿರುವುದನ್ನು ಕಂಡು ಉರಿದುರಿದು ಬಿದ್ದಳು. ಮಮಾನ ಕೆನ್ನೆಗೊಂದು, ನನ್ನೆದುರೇ ಬಾರಿಸಿದಳು. ನನ್ನಂತಹ ಸ್ಕೆಚ್ ಪುಸ್ತಕದೆದಿರು ಹುಡುಗಿಯೊಬ್ಬಳು ಹುಡುಗನೊಬ್ಬನ ಕೆನ್ನೆಗೆ ಬಾರಿಸಿದರೆ ಅದು ದೃಶ್ಯವಾಗಿ ನನ್ನೊಡಲಿಗೆ ಮೂಡುವಾಗ ರಪ್ಪನೆಂದು ಸದ್ದು ಬರುವಂತಹ ಅಕ್ಷರ, ಕಾಮಿಕ್ ಪುಸ್ತಕಗಳಲ್ಲಿ ಫ್ಯಾಂಟಮ್ ದುಷ್ಟರಿಗೆ ಬಡಿವಾಗ, ಅಥವ ಮಾಡೆಸ್ಟಿ ಬ್ಲೇಸ್ ವಿಲ್ಹನ್‌ಗಳಿಗೆ ಕೈಯಲ್ಲಿನ ಲೋಹದ ಗುಂಡಿನಿಂದ ಬಡಿವಾಗ ಅರೆವೃತ್ತಾಕಾರದ ಎರಡು ರೇಖೆಗಳು ಮತ್ತು ಅವುಗಳ ತುದಿಯಲ್ಲಿ ’ವಾಮ್’ ಎಂದು ಬರುತ್ತವಲ್ಲ ಅಂತಹ ಅಕ್ಷರ-ದೃಶ್ಯಗಳು ಮೂಡುವುದು ಗ್ಯಾರಂಟಿ. ಚಿತ್ರಗಳೊಂದಿಗೆ ಅಕ್ಷರಗಳು ಸೇರಿಬಿಡುವ ಅಪೂರ್ವ ಅವಕಾಶ ನೆನೆಸಿಕೊಂಡು ಅಂತೂ ’ಇಂಟರ್‌ಡಿಸಿಪ್ಲಿನರಿಯಾದೆನೆಂದು’ ಖುಷಿಗೊಂಡೆ.
 
     "ಹೋಗ್ಲಿ ಬಿಡು ದೀಪಾ. ಹೀಗಾದ್ರೂ ನೀನು ನನ್ನನ್ನು ಮುಟ್ಟಿದೆಯಲ್ಲ. ಯೂ ಟಚ್ಡ್ ಮಿ. ಒಂದಡಿ ಕೆಳಕ್ಕೆ ಮುಟ್ಟಿದ್ದಲ್ಲಿ ಹೃದಯವನ್ನೇ ಮುಟ್ಟಿಬಿಡುತ್ತಿದ್ದೆ," ಎಂದ ಮಮಾನ ಸಮಯಪ್ರಜ್ಞೆಯನ್ನು ಕಂಡು ಎಲ್ಲರೂ ಹಲವು ಬಾರಿ ’ಕಿಸಕ್ಕನೆ’ ನಗತೊಡಗಿದರು. ಆಮೇಲೆ ತಿಳಿಯಿತು, ದೀಪಾ ಮಮಾನಿಗೆ ಬಾರಿಸಿದ್ದು ಆತ ನನ್ನಲ್ಲಿ ಸ್ಕೆಚ್ ಮಾಡತೊಡಗಿದ್ದರಿಂದಲ್ಲ. ಆಕೆ ಸ್ವಲ್ಪವೇ ಕುಡಿದು ಬಿಟ್ಟಿದ್ದ ಫ್ರೂಟಿಯನ್ನು ಆತ ಸ್ವಲ್ಪವೂ ಉಳಿಸದೆ, ಸಂಪೂರ್ಣವಾಗಿ ಕುಡಿದುಬಿಟ್ಟಿದ್ದ, ಮತ್ತು ಹಾಗೇಕೆ ಮಾಡಿದೆಯೆಂದು ಕೇಳಲಾಗಿ, "ಪೇಪರ್ ನೋಡಿಲ್ವಾ, ಫ್ರೂಟೀಲಿ ಹುಳುಗಳಿದ್ದವಂತೆ," ಎಂದು ಸುಳ್ಳು ಬೇರೆ ಹೇಳಿದ್ದ! 
 
     ದೀಪಾ ನನ್ನನ್ನು ’ಪರ್ಮನೆಂಟಾಗಿ ನಿನ್ನತ್ರ ಇಟ್ಕೊಂಡ್ಬಿಡು’ ಎಂದು ಹೇಳಿ ಆತನೆಡೆಗೆ ಎಸೆದಿದ್ದಳು. ೨೦೧೧ರ ಸೋಕುಮಾರಿಯ ಪತ್ರದ ಹಲವು ವಾಕ್ಯಗಳನ್ನು ನನ್ನಲ್ಲಿ ಮಮಾ ಬರೆದಿದ್ದಾಗಲೇ, ಆತನ ಕೈಗೆ ಬಂದ ನನ್ನನ್ನು ರಮಾನಾಥೆಸ್ಸೆಮ್ಮೆಸ್ ಕೂಡಲೆ ಕಸಿದುಕೊಂಡು ’ಈಗಷ್ಟೇ ನಡೆದ ಘಟನೆಯನ್ನು’ ಸ್ಕೆಚ್ ಮಾಡತೊಡಗಿದ. ನನ್ನೊಳಗೆ ಮೂಡಿದ ಮೊದಲ ಸ್ಕೆಚ್ ಅದು. ಆದರೆ ಸ್ಕೆಚ್ಚಿಗೂ ಮೊದಲು ನನ್ನಲ್ಲಿ ಮೂಡಿದ್ದು ಲಿಖಿತ ಅಕ್ಷರಗಳು!
(ಈ)
 
     ತನ್ನವಳೆಂದು ಭಾವಿಸಿದ ಚಾರ್ವಾಕಿಯು ತನ್ನವಳಾಗಲಿಲ್ಲವೆಂಬ ಬೇಜಾರಿಗಿಂತಲೂ, ಚಾರ್ವಾಕಿ ಎಂದರೆ ಏನೆಂದು ತಾನು ಭಾವಿಸಿದ್ದೆನೋ ಅದು ಚಾರ್ವಾಕಿ ಎಂಬ ವ್ಯಕ್ತಿತ್ವವೇ ಅಲ್ಲವೆಂಬ ಅರ್ಥವಾಗದ (ವಾಕ್ಯ ಮತ್ತದರ ಹಿಂದಿನ ಭಾವ) ವಿರಹದ ನೋವಿನಿಂದ ಉತ್ಪತ್ತಿಯಾದ ಸಿಟ್ಟಿನಲ್ಲಿ ಅನೇಖನ ಮಾತುಗಳನ್ನು ಅರ್ಧಂಬರ್ಧ ಕೇಳಿಸಿಕೊಂಡು ಎದ್ದು ಹೋದ ವೀರಾ ಕೇಳದೆ ಬಿಟ್ಟ ವಿಷಯಗಳು ಹಲವಿದ್ದವು. ಅವುಗಳಲ್ಲಿ ಕೆಲವು ಗಂಟೆಗಳ ಮುಂಚೆ ಚಾರ್ವಾಕಿಯು ತನ್ನ ಸ್ಟಾಫ್ ರೂಮಿನಲ್ಲಿ ಅನೇಖನಿಗೆ, ಸೀರಾಕ್ ಹೋಟೆಲ್ಲಿನ ತಿಂಡಿತೀರ್ಥಗಳ ಸಾಹಚರ್ಯದೊಂದಿಗೆ, ತಿಳಿಸುತ್ತಿದ್ದಾಗ ನಾನಲ್ಲೇ ಟೇಬಲ್ಲಿನ ಮೇಲೇ ಇದ್ದೆ. ಸ್ವಲ್ಪ ಹೊತ್ತಿನಲ್ಲಿ ಅನೇಖನ ತೊಡೆಯ ಮೇಲಿದ್ದೆ. ನನ್ನನು ಅಡ್ಡಡ್ಡಲಾಗಿ ಸೀಳುವಂತೆ ಆತನ ಬೆರಳುಗಳು ನನ್ನೊಳಗಿನ ಪುಟಗಳನ್ನು ವಿಂಗಡಿಸುತ್ತ, ಆಗಾಗ ನನ್ನನ್ನು ದಿಟ್ಟಿಸುತ್ತಿದ್ದುದು ನನಗೆ ಅತೀವ-ಪರ್ಸ್ಪೆಕ್ಟಿವ್ (ಎಗ್ಸಾಜರೇಟೆಡ್ ಪರ್ಸ್ಪೆಕ್ಟಿವ್)ನಲ್ಲಿ ನೋಡಿದಂತೆ ಭಾಸವಾಯಿತು. ’ಹನಿ ಐ ಶ್ರಂಕ್ ದ ಕಿಡ್ಸ್’ನಲ್ಲಿ ಕುಬ್ಜವಾದ ಮಕ್ಕಳಿಗೆ ಜಗತ್ತು ಕಂಡಂತಾಗಿತ್ತು.
 
     ಮೊದಲಿಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಬಿಡಬೇಕು. "ಪ್ರೀತಿ, ಪ್ರೇಮ, ಪ್ರಣಯ ಅನ್ನೋದೆಲ್ಲಾ ಆ ಕಸ್ಮಿಕವಾಗಿ, ದೈವೇಚ್ಛೆ ಮೀರಿ ಎರಡು ವಿರುದ್ಧ ಲಿಂಗೀಯ ವ್ಯಕ್ತಿಗಳಲ್ಲಿನ ಪರಸ್ಪರ ರಸಾಯನಶಾಸ್ತ್ರ ಅಥವ ಕೆಮಿಸ್ಟ್ರಿಯಿಂದಾಗುವುದು ಅಂದುಕೊಳ್ಳುತ್ತೇವಲ್ಲ, ಆ ನಂಬಿಕೆಯ ಕಾಲದ ಅಂಚಿನಿಂದ ಬಂದವಳು ನಾನು" ಎಂದಿದ್ದಳು ಚಾರ್ವಾಕಿ. 
 
     "ಇನ್ನು ಇಪ್ಪತ್ತು ವರ್ಷಗಳ ಮುಂದಿನಿಂದ ಬಂದಿರುವುದು ಎಂದು ನಂಬಬಹುದಾದ ಸುದ್ದಿ ಏನೆಂದರೆ ನಿಮಗೆ ಈಗಿರುವುದಕ್ಕಿಂತಲೂ ಒಂದು ವರ್ಷವೂ ಆಯಸ್ಸು ಆಕೆಗೆ ಆಗುವುದೇ ಇಲ್ಲವಂತೆ, ನೀವು ಇಚ್ಛೆಪಡದಿದ್ದಲ್ಲಿ. ಇದನ್ನು ನನಗೆ ತಿಳಿಸಿದವಳು ಸೋಕುಮಾರಿ-೨೦೧೧" ಎಂದಿದ್ದ ಅನೇಖ. 
 
     ಚಾರ್ವಾಕಿ ಅನೇಖನ ತೊಡೆಯಿಂದ ನನ್ನನ್ನು ಕಸಿದುಕೊಂಡು ಬ್ರೌವ್ಸ್ ಮಾಡತೊಡಗಿದಳು. ತನ್ನ ಬಲಗೈಯಿನ ವಾಚಿನಂತಹ ಯಂತ್ರವನ್ನು ನನ್ನೆಡೆಗೆ ತಿರುಗಿಸಿ, ನನ್ನೊಡಲಿನ ಪ್ರತಿ ಹಾಳೆಯನ್ನೂ ಯಾವುದೋ ಸ್ಥಿರವಾದ ಸ್ಮೃತಿಯಲ್ಲಿ ಸೇರಿಸಿಕೊಳ್ಳುವಂತೆ ನನ್ನನ್ನು ದಾಖಲಿಸತೊಡಗಿದಳು. ಅದು ಟಚ್-ಕ್ಯಾಮರ ಅಥವ ಸ್ಪರ್ಶ-ಛಾಯಾಗ್ರಹಣ ಎಂಬುದು ಸ್ವಲ್ಪ ಹೊತ್ತಿನ ಮುಂಚೆಯ ಆಕೆಯ ಮಾತಿನಿಂದ ತಿಳಿದಿತ್ತು. "ಆದರೆ ಮನುಷ್ಯರನ್ನಲ್ಲದೆ ವಸ್ತುಗಳನ್ನೂ, ಸ್ಕೆಚ್‌ಗಳನ್ನೂ ದಾಖಲಿಸಬಹುದೆ ಇದರಲ್ಲಿ?" ಎಂದು ಕೇಳಿದ್ದ ಅನೇಖ, ನನ್ನ ಪರವಾಗಿಯೇ ಏನನ್ನೋ ಸ್ಪಷ್ಟೀಕರಣಗೊಳಿಸುವಂತೆ. ಅದಕ್ಕೆ ಆಕೆ ಪ್ರತಿಕ್ರಿಯಿಸಿರಲಿಲ್ಲ. ಆಕೆಯ ಟಚ್-ಕ್ಯಾಮರದಲ್ಲಿ ದಾಖಲಿಸಿಕೊಂಡವರನ್ನು ಬೇಕಾದಾಗ, ಬೇಕಾದ ಅಳತೆಗೆ ಹೊರಕ್ಕೆ ತೆಗೆದು ಅವರನ್ನು ಸ್ಪರ್ಶಿಸಬಹುದಾಗಿತ್ತು. "ಆದರೆ ಸ್ಕೆಚ್, ಡ್ರಾಯಿಂಗ್‌ಗಳನ್ನು ಹಾಗೆ ದಾಖಲಿಸಿದಾಗ, ಅದನ್ನು ಪ್ರೊಜೆಕ್ಟ್ ಮಾಡಿದರೆ ಅದನ್ನು ಸ್ಪರ್ಶಿಸಬಹುದೆ?" ಟಚ್-ಕ್ಯಾಮರದಲ್ಲಿ ದಾಖಲಾದವರನ್ನು ಪ್ರೊಜೆಕ್ಟ್ ಮಾಡಿ ಹಾಗೆ ಬಿಂಬಿಸಿದವರನ್ನು ಮುಟ್ಟಿದಾಗ ಅವರ ಸ್ಪರ್ಶವು ಮುಟ್ಟಿದವರಿಗೂ, ಮುಟ್ಟಿಸಿಕೊಂಡವರಿಗೂ--ಇಬ್ಬರ ಪ್ರಜ್ಞೆಗೂ ಗೋಚರವಾಗುತ್ತಿತ್ತು. ಆದರೆ ಸ್ಕೆಚ್ ಒಂದನ್ನು ಹೊರಬಿಂಬಿಸಿದಾಗ (ಪ್ರೊಜೆಕ್ಟ್ ಮಾಡಿದಾಗ), ಅದನ್ನು ಸ್ಪರ್ಶಿಸಿದಾಗ, ಮುಟ್ಟುವವರಾರು? ಮುಟ್ಟಿಸಿಕೊಳ್ಳುವವರಾರು? ಎಂಬಂತಹ ಪ್ರಶ್ನಾರ್ಥಕ ಅರಿವಿನಿಂದಲೇ ಅನೇಖ ಮತ್ತು ಚಾರ್ವಾಕಿಯರ ಮಾತುಗಳನ್ನು ಮನನ ಮಾಡಿಕೊಳ್ಳತೊಡಗಿದೆ. ’ಕಲೆ ಎಂದರೆ ಇನ್ನೊಬ್ಬರನ್ನು ಮುಟ್ಟುವುದು’ ಎಂದದಾರೋ ಮಾತನಾಡುತ್ತಿದ್ದುದನ್ನು ಮುಂದೊಮ್ಮೆ ಪರಿಷತ್ತಿನ ಕ್ಯಾಂಟೀನಿನ ಬಳಿ ಮತ್ಯಾರಿಗೋ ಹೇಳುತ್ತಿದ್ದಾಗ, ಅದನ್ನು ಕೇಳಿದ ನನಗೆ ಈ ಈಗ ಚಾರ್ವಾಕಿ-ಮತ್ತು-ಅನೇಖರ ’ಮುಟ್ಟುವ’ ಪದಗಳಿಗೆ ಹೊಸ ಅರ್ಥವು ಹೊಳೆಯತೊಡಗಿತ್ತು. ಅಂದ ಹಾಗೆ ಮುಂದೊಮ್ಮೆ ಆ ’ಮುಟ್ಟುವ’ ಬಗ್ಗೆ ಕೇಳಿ, ಈಗ ಆಗುತ್ತಿರುವ ಮುಟ್ಟು ಪದಕ್ಕೆ ಹೊಸ ಅರ್ಥವ ಈಗಲೇ, ಈ ಕ್ಷಣದಲ್ಲೇ ಹೊಳೆದದ್ದರ ಹಿಂದೆ, ಕೇಳುತ್ತಿರುವುದು ಯಾವುದೇ ವ್ಯಕ್ತಿಯಲ್ಲ, ಸ್ಕೆಚ್ ಪುಸ್ತಕವೆಂಬ ’ನಿರ್ಜೀವಿ ವಸ್ತು’ವಾದ ನಾನು ಎಂಬ ಭಾವವು ಅಡಕವಾಗಿತ್ತು!
 
(ಉ)
 
     ಚಾರ್ವಾಕಿಯ ಬೆರಳುಗಳು ನನ್ನೊಳಗೆ ಹರಿದಾಡುತ್ತಿತ್ತು. ನನಗೆ ಆ ಸ್ಪರ್ಶ ಅಪರಿಚಿತ. ಏಕೆಂದರೆ ನನ್ನೊಳಗಿನ ಸ್ಕೆಚ್‌ಗಳಲ್ಲಿನ ಒಳಾರ್ಥಗಳನ್ನು ಹುಡುಕುವವರು ಮತ್ತು ಹೊಸ ಅರ್ಥ್ಯವ್ಯಾಖ್ಯೆಯನ್ನು ನೀಡುವವರಿಗೆ ಮಾತ್ರ, ಆ ಅರ್ಥೈಸುವಿಕೆಯ ಮೂಲಕ ಮಾತ್ರ ನಾನು ಸ್ಪರ್ಶಿಸಲ್ಪಡುತ್ತಿದ್ದೆ. ಬಹುಮಂದಿ ನನ್ನನ್ನು ದೃಷ್ಟಿಯಿಂದಷ್ಟೆ ಸೋಕುತ್ತಿದ್ದರು. ಚಾರ್ವಾಕಿ ನನ್ನನ್ನು ತಿರುವಿ ಹಾಕುತ್ತಿದ್ದಾಗ, ನನ್ನನ್ನು ದಾಖಲಿಸಿಕೊಂಡು ತನ್ನ ಕಥೆಯನ್ನು ಅನೇಖನಿಗೆ ಆದಷ್ಟೂ ಸರಳವಾಗಿ ಬಿಡಿಸಿಹೇಳತೊಡಗಿದಳು, ವಿದ್ಯಾರ್ಥಿಯೊಬ್ಬನಿಗೆ ಹೇಳುವಂತೆ. ಚಾರ್ವಾಕಿ ಗುರುವಾಗಿದ್ದದ್ದು, ಅನೇಖ ವಿದ್ಯಾರ್ಥಿಯಾಗಿದ್ದದ್ದು-ಈ ಎರಡೂ ಅದಕ್ಕೆ ಕಾರಣವಾಗಿರಲಿಲ್ಲ. 
 
     ಚಾರ್ವಾಕಿ ಮಾತನಾಡತೊಡಗಿದಳು, "ನಾನು ಸಾಮಾನ್ಯ ವ್ಯಕ್ತಿ ಅಲ್ಲವೆಂಬುದಕ್ಕೆ ಕಾರಣ ಕಾಲ-ಅವಕಾಶ (ಸ್ಪೇಸ್) ಬಂಧಕ್ಕೆ ನಾನು ಬದ್ಧಳಾಗದಿರುವುದು. ಈ ಸ್ಕೆಚ್ ಪುಸ್ತಕವನ್ನೇ ನೋಡು ಅನೇಖ. ’ಅದು’ ಮತ್ತು ’ಅದರೊಳಗಿನ ಚಿತ್ರಿತ ಆಕಾರಗಳು’ ಎಂಬುದನ್ನು ಪರಸ್ಪರ ವ್ಯತ್ಯಾಸಗೊಳಿಸಲಾಗದು. ಅದೇ ತರ್ಕದಲ್ಲಿ ಮನುಷ್ಯರನ್ನು ನೋಡು, ಅವರ ಭಾಷೆಯ ಇತಿಮಿತಿಯ ಅರಿವಾಗುತ್ತದೆ. ಆ ಮನುಷ್ಯರ ಪಟ್ಟಿಯಲ್ಲಿ ನಿನ್ನನ್ನು ಸೇರಿಸುತ್ತಿಲ್ಲ. ಅದಕ್ಕೆ ಕಾರಣವಿದೆ ಮತ್ತು ಅದನ್ನು ಕ್ರಮೇಣ ನೀನೇ ಅರ್ಥಮಾಡಿಕೊಳ್ಳಬಲ್ಲೆ. 
 
     ನನಗೂ ಈ ಸ್ಕೆಚ್ ಪುಸ್ತಕಕ್ಕೂ ಇರುವ ಸಾಮ್ಯತೆ ಏನು ಗೊತ್ತೆ? ನಮ್ಮಿಬ್ಬರಿಗೂ ’ಕಾಲದ ಚಲನೆ’ ಎಂಬುದು ಅನವಶ್ಯಕ. ಚಿತ್ರವೊಂದನ್ನು ರಚಿಸಿ ನೂರಾರು ವರ್ಷಗಳಾದ ಕಾರಣಕ್ಕೆ ಅದರ ಅನುಭವ ಮತ್ತು ಅರ್ಥವ್ಯಾಪ್ತಿಯೇನೂ ಹೆಚ್ಚಾಗುತ್ತ ಹೋಗಲು ಅಥವ ಕ್ಷೀಣಗೊಳ್ಳಲು ಅದೇನು ಬ್ಯಾಂಕ್ ಅಕೌಂಟೆ? ನಿಜವಾದ ಸ್ಕೆಚ್ ಇರುವುದು ಎಲ್ಲಿ ಗೊತ್ತೆ?" ಎಂದಾಕೆ ಹೇಳಿದಾಗ "ಎಲ್ಲಿ?" ಎಂದು ಅಷ್ಟೇ ಕುತೂಹಲದಿಂದ ನಾನು ಕೇಳಿದ್ದೆ. ತಕ್ಷಣ ಚಾರ್ವಾಕಿ ನನ್ನೆಡೆಗೆ, ಅಂದರೆ ಯ:ಕಶ್ಚಿತ್ ಸ್ಕೆಚ್ ಪುಸ್ತಕವೊಂದರೆಡೆಗೆ ತನ್ನ ಕಣ್ಗಳನ್ನು ಅಚಾನಕ್ಕಾಗಿ ತಿರುಗಿಸಿದ್ದಳು. ನನ್ನ ಮಾತು ಆಕೆಗೆ ಹೇಗೆ ಕೇಳಲು ಸಾಧ್ಯ ಎಂಬ ಜಿಜ್ಞಾಸೆಯಲ್ಲಿ ತೊಡಗಿರುವಾಗಲೇ ಅನೇಖ ಕೂಡ "ಎಲ್ಲಿ?" ಎಂದು ಕೇಳಿದ್ದಕ್ಕೆ ಆಕೆ ಪ್ರತಿಕ್ರಿಯಿಸಿದ್ದು ಎಂದು ತಿಳಿದು ನಿರಾಸೆ ಹೊಂದಿದೆ. 
 
     "ತನ್ನ ಜೀವನದ ಸ್ಮೃತಿಯೇ ಇಲ್ಲದ ವ್ಯಕ್ತಿಯೊಬ್ಬ ಈ ಸ್ಕೆಚ್ ಪುಸ್ತಕವನ್ನು ನೋಡಿದ ಎಂದುಕೋ. ಆಗ ಇಲ್ಲಿ ಗಂಟೆಗಟ್ಟಲೆ ನೇತಾಡುತ್ತಿರುವ ಪ್ರಶ್ನಾಮೂರ್ತಿಯ ದೃಶ್ಯವು, ಉದಾಹರಣೆಗೆ, ಅರ್ಥಹೀನ ರೇಖೆಗಳ ಒಕ್ಕೂಟವಾಗಿ ಕಾಣುತ್ತದೆಯೆ ಹೊರತು ’ವ್ಯಕ್ತಿ-ಹಿನ್ನೆಲೆ’ ಎಂಬ ವಿವರವೇನೂ ಆತನಿಗೆ ತಿಳಿಯಲಾರದು. ಆರು ಮುಖವುಳ್ಳ ಪೆಟ್ಟಿಗೆಯನ್ನು ನೈಜ-ಶೈಲಿಯಲ್ಲಿ ಯಾವುದೇ ಕೋನದಿಂದಲೂ ಅದನ್ನು ಬರೆಯುವಾಗಲೂ ಅದರ ಮೂರು ಮುಖಗಳನ್ನು ಮಾತ್ರ ತೋರಿಸಲು ಸಾಧ್ಯ. ಆದರೆ ಅದೇ ಕಾರಣಕ್ಕೆ, ಅಂದರೆ ಮೂರೇ ಮುಖಗಳನ್ನುಳ್ಳದ್ದರಿಂದಾಗಿಯೇ ಅದು ಶಾಸ್ತ್ರೀಯ ಚೀನೀ ಕಲಾವಿದರಿಗೆ ’ಸುಳ್ಳು ಚಿತ್ರ’ವಾಗಿ ಕಾಣುತ್ತದೆ. ನಮ್ಮ ಹಿನ್ನೆಲೆಯೇ ನಾವು ದೃಶ್ಯವನ್ನು ಗ್ರಹಿಸುವ ಕ್ರಮ. ’ದೃಶ್ಯಗ್ರಹಿಕೆಯಾಚೆ ದೃಶ್ಯವಿಲ್ಲ’ ಎಂಬುದೆಷ್ಟು ದಿಟ!" ಎಂದೆಲ್ಲಾ ಚಾರ್ವಾಕಿ ವಟಗುಟ್ಟುತ್ತಲೇ ಇದ್ದಳು.
 
(ಊ)
 
     "ಚಾರ್ವಾಕಿ ಮೇಡಂ. ಸ್ಕೆಚ್ ಪುಸ್ತಕವನ್ನು ಕುರಿತು ಆಮೇಲೆಯೂ ಮಾತನಾಡಬಹುದು. ಈಗ ವೀರಾನದ್ದು ಅತ್ಯಂತ ತುರ್ತಿನ ವಿಷಯವಾಗಿದೆ. ಆತ ಸೀರಿಯಸ್ ಆಗಿದ್ದಾನೆ, ನಿಮ್ಮ ಬಗೆಗಿನ ಆಕರ್ಷಣೆಯಲ್ಲಿ. ನಿಮ್ಮ ಸುತ್ತಲಿನ ನಿಗೂಢತೆ, ಆ ಸ್ಪರ್ಶ-ಕ್ಯಾಮರ, ನೀವು ಕಾಲಕ್ಕೆ ಬದ್ಧರಲ್ಲವೆಂಬ ವೈಚಿತ್ರ್ಯ, ನನ್ನ ಸುತ್ತಲಿನ ನಿಗೂಢತೆ-ಅಂದರೆ ನನ್ನ ನೆರಳು ಸ್ಥಿರವಾಗುವುದು, ಅಸಂಗತವಾಗಿ ಮನಸೋಇಚ್ಛೆ ಚಲಿಸುವುದು, ನಾನು ಚಲಿಸುವಾಗ ಅದು ಸ್ಥಿರವಾಗಿ, ನಾನು ಸ್ಥಿರವಾದಾಗ ಅದು ಚಲಿಸುವುದು, ಇವಕ್ಕೆಲ್ಲ ಒಂದು ವಿವರವಿರಬೇಕು. ಆ ವಿಶಾಲವಾದ ಪ್ರಶ್ನೆಗೆ ಉತ್ತರಿಸಲು ಯತ್ನಿಸಿ ಪ್ಲೀಸ್," ಎಂದು ಅನೇಖ ನನ್ನನ್ನು ಆಕೆಯ ಕೈಯಿಂದ ಕಸಿದುಕೊಳ್ಳುವಾಗ, ಆಕೆಯ ಕೈಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ, "ನೋಡಿ ನಿಮ್ಮನ್ನು ಮುಟ್ಟಿದಾಗ ಜೋಮು ಹತ್ತಿದ ದೇಹದ ಅಂಗದಂತೆ, ನನಗೆ ಸ್ಪರ್ಶ ಜ್ಞಾನವೇ ಇಲ್ಲವಾಗಿದೆ. ಇವಕ್ಕೆಲ್ಲಾ ಆದಷ್ಟೂ ಸರಳವಾದ ವಿವರಗಳನ್ನು ನಿರೀಕ್ಷಿಸಬಹುದೆ ನಿಮ್ಮಿಂದ?" ಎಂದು ನನ್ನಲ್ಲಿನ ಪುಟಗಳನ್ನು ಯಾವುದೇ ಉದ್ದೇಶವಿಲ್ಲದ ಪಟಪಟನೆ ತಿರುವಿಹಾಕಿದ. 
     
     ಅನೇಖನ ಪ್ರಶ್ನೆಗಳಿಗೆ ನೇರವಾಗಿ ಪ್ರತಿಕ್ರಿಯಿಸದೆ ಚಾರ್ವಾಕಿ, "ನನ್ನನ್ನು ಸೋಕಿದಾಗ ಮಾತ್ರ ನಿನಗೆ ಸ್ಪರ್ಶವಿಲ್ಲವೋ ಅಥವ ಯಾರನ್ನು ಸ್ಪರ್ಶಿಸಿದರೂ ಸೇಂದ್ರೀಯ ಅನುಭವವಿಲ್ಲವೋ? ಪರೀಕ್ಷಿಸಿ ನೋಡಿಕೋ. ಎಲ್ಲಿ, ಆ ರಾಮಾಯ್ಣ ಎರಡೂ ಕಾಲಿನಿಂದ ಒಮ್ಮೆಲೆ ಸೈಕಲ್ ಹತ್ತುತ್ತಿರುವ ಲೇವಡಿಯ ಸ್ಕೆಚ್ ತೋರಿಸು, ರಾಜ್ಗೋಪಿ ಸ್ಕೆಚ್ ಮಾಡಿದ್ದಲ್ಲವೆ ಅದು? ನಿನಗೇನನ್ನೋ ನಿರೂಪಿಸಬೇಕು," ಎಂದು ಆ ಸ್ಕೆಚ್‌ನ ಮೇಲೆ ತನ್ನ ಕೈಗಡಿಯಾರದಂತಹ ಸ್ಪರ್ಶ-ಗಡಿಯಾರವನ್ನು ಇರಿಸಿ, ಅದರೊಳಗಿಂದಲೇ ಸಣ್ಣ ಕುಂಕುಮದಂತಹ ನೀಲಿ ಬಟನನ್ನು ಸ್ಪರ್ಶಿಸಿ ಬೆರಳನ್ನು ದೂರಸರಿಸುತ್ತಲೇ, ರಾಮಾಯ್ಣನ ಆ ಸ್ಕೆಚ್ ಇದ್ದ ಹಾಳೆಯು ಟೆಲಿವಿಷನ್ನಿನ ಪರದೆಯಂತೆ ಪರಿವರ್ತಿತವಾಯಿತು. ಕಡಿಮೆ ಬಡ್ಜೆಟ್ಟಿನ ಸಿನೆಮಗಳಂತಲ್ಲದೆ ಈಗೆಲ್ಲಾ ಹಾಲಿವುಡ್ ಸಿನೆಮಗಳಲ್ಲಿನ ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಸ್ಪೆಷಲ್ ಎಫೆಕ್ಟಿನಿಂದ ಎಲ್ಲರೂ ನಂಬಿಬಿಡಬಹುದಾದಷ್ಟು ನಿಧಾನವೂ ಅಲ್ಲದಂತೆ, ವೇಗವೂ ಅಲ್ಲದಂತೆ ’ಸೂಕ್ತವಾದ’ ವೇಗದಲ್ಲಿ, ಕ್ರಮದಲ್ಲಿ, ಪರಿಣಾಮಕಾರಿಯಾಗಿಯೆ ಟಿ.ವಿ.ಪರದೆಯಾಗಿ ಪರಿವರ್ತಿತವಾಗಿತ್ತು ಆ ಹಾಳೆ! ಅನೇಖನ ದೃಷ್ಟಿಯಲ್ಲಿಯೂ ಅದು ಹಾಗೇ ಅನ್ನಿಸಿತ್ತು.  "ನಮಗೆ ಲಾಭ ತರುವಂತಿದ್ದೂ ನಮಗೆ ಸುಲಭಕ್ಕೆ ಅರ್ಥವಾಗದ ಭೌತಿಕ ವಸ್ತುಗಳ ಸಮೀಕರಣವನ್ನೇ ನಾವು ಅದ್ಭುತವೆನ್ನುವುದು," ಎಂದು ಸುಲಭಕ್ಕೆ ಅರ್ಥವಾಗದ ವಾಕ್ಯವನ್ನು ಉವಾಚಿಸುತ್ತ ಚಾರ್ವಾಕಿ ತನ್ನ ಮಾತನ್ನು ಮುಂದುವರೆಸಿದಳು.
 
     ಟೆಲಿವಿಷನ್ನಿನ ಪರದೆಯಂತಾಗಿದ್ದ ರಾಮಾಯ್ಣ ಸೈಕಲ್ ತುಳಿಯುವ ಸ್ಕೆಚ್ ಇದ್ದಕ್ಕಿದ್ದಂತೆ ತನ್ನ ಕೋನವನ್ನೇ ಬದಲಿಸಿಬಿಟ್ಟಿತು! ಅಂದರೆ ಪುಟಾಣಿ ಕ್ಯಾಮರವೊಂದನ್ನು ಸೈಕಲ್ ಪೆಡಲ್ಲಿನ ಮೇಲೆ, ಬೆಲ್ ಇರುವೆಡೆ, ಸವಾರಿ ಮಾಡುತ್ತಿರುವ ರಾಮಾಯ್ಣನ ನೆತ್ತಿಯ ಸುಳಿಯ ಬಳಿ--ಮುಂತಾದ ಹತ್ತಾರು ಕಡೆ ಇರಿಸಿ ಆ ಘಟನೆಯನ್ನು ಛಾಯಾಚಿತ್ರವಾಗಿಸಿ ಅದನ್ನು ಸ್ಕೆಚ್ ಮಾಡಿದರೆ ಹೇಗೆ ಕಾಣುತ್ತದೋ, ಹಾಗೆ ಕಾಣುತ್ತಿತ್ತು ಹಲವು ಕೋನಗಳಿಂದ ಚಕಚಕನೆ ಬದಲಾಗುತ್ತಿದ್ದ ಆ ದೃಶ್ಯ. ಅನೇಖ ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದ. ನನ್ನಲ್ಲಿನ ಅಂಗವೊಂದಾದ ಪುಟವೊಂದರಲ್ಲಿ ಈ ಎಲ್ಲಾ ತುಮುಲವಾಗುತ್ತಿದ್ದುದ್ದರಿಂದ ನನ್ನ ಹೊಟ್ಟೆಯೆಲ್ಲಾ ತೊಳಸಿದಂತಾಯಿತು. ಅನೇಖ, ನಾನು ಹೇಳುವುದನ್ನು ಯಾವುದೆ ಪೂರ್ವಾಗ್ರಹವಿಲ್ಲದೆ ಸ್ಪಷ್ಟವಾಗಿ ಕೇಳಿಸಿಕೋ. ನಾನು ಕಾಲ-ದೇಶದ ಬಂಧವಿಲ್ಲದ ಭವಿಷ್ಯದಿಂದ ಬಂದವಳು.
 
     "ಅದು ಸುಮಾರು ಸಲ ಹೇಳಿದಿರಿ. ಮುಂದಕ್ಕೆ ಹೇಳಿ ಚಾರ್ವಾಕಿ ಮೇಡಂ, ಪ್ಲೀಸ್," ಎಂದು ಆಕೆಯ ಕೈಯನ್ನು ಸುಡಲಿದ್ದ ಸಿಗರೇಟಿನ ತುಂಡಿಗೆ ತನ್ನ ಪಕ್ಕದಲ್ಲಿದ್ದ ಆಶ್-ಟ್ರೇಯನ್ನು ಮುಂದಿರಿಸಿದ. ಆಕೆ ಪ್ರಸನ್ನವಧನಳಾಗಿ, ಸಿಗರೇಟಿನ ಬಟ್ಟಿನ ಹೊಗೆಯನ್ನು ಅದಕ್ಕೆ ಉದುರಿಸಿ, ಉಳಿದ ಸಿಗರೇಟನ್ನು ಒಮ್ಮೆ ಸುದೀರ್ಘವಾಗಿ ದಿಟ್ಟಿಸಿ ನೋಡಿ, ಅದರ ಬಟ್ಟನ್ನು ಕಚ್ಚಿ ಕೈಯಿಂದ ತೆಗೆದು ಆಶ್-ಟ್ರೇಯಲ್ಲಿ ಉದುರಿಸಿ, ಮತ್ತೆ ಅರ್ಧವಾಗಿದ್ದ ಸಿಗರೇಟಿನ ಬೆಂಕಿಯ ಭಾಗವನ್ನು ಆಶ್-ಟ್ರೇಯ ಗೋಡೆಗೇ ಆನಿಸಿ, ಉಜ್ಜಿ ಆರಿಸಿ, ಮುಂದೆ ಹತ್ತಿಸಿಕೊಳ್ಳಲು ಗುರ್ತುಮಾಡಿ ತನ್ನ ಟೇಬಲ್ಲಿನ ಮೇಲಿರಿಸಿ ಮಾತು ಮುಂದುವರೆಸಿದಳು, "ನನ್ನ ಟಚ್-ಕ್ಯಾಮರಾದಲ್ಲಿ ರೆಕಾರ್ಡಾಗಿರುವ ವ್ಯಕ್ತಿಗಳಲ್ಲಿ ಯಾರನ್ನು ಹೆಚ್ಚು ಆಪರೇಟ್ ಮಾಡಿ, ಮುಟ್ಟಿ ನೋಡುತ್ತೇನೆ ಗೊತ್ತೆ?" ಎಂದು ಕೇಳಿದಳು. "ನನ್ನನ್ನ?" ಎಂಬಂತೆ  "ಆಹಾ, ಸುರಸುಂದರಾಂಗ ನೀನು. ಎಂತಾ ನಾರ್ಸಿಸಿಸ್ಟ್ ನೀನು. ಆದರೆ ನೀನೇಳಿದ್ದು ನಿಜವೇ. 
ವಿಚಿತ್ರ್ಯವೆಂದರೆ ನಿನ್ನನ್ನು ಇನ್ನೂ ಮುಟ್ಟಲು ಸಾಧ್ಯವೇ ಆಗಿಲ್ಲ ಅಥವ ಎಂದಿಗೂ ಸಾಧ್ಯವಿಲ್ಲ್ಲ," ಎಂದಾಕೆ ಚಿಂತಾಕ್ರಾಂತಳಾದಳು. ಅನೇಖ ತನ್ನದೇ ಶೈಲಿಯಲ್ಲಿ ಮರಗಟ್ಟಿದಷ್ಟು ಸ್ಥಿರವಾಗಿಬಿಟ್ಟ. "ನಿನಗೆ ದುಃಖವಾಗದು, ನೀನು ದಣಿಯಲಾರೆ, ನಿನ್ನಲ್ಲಿ ಯಾರ ಬಗ್ಗೆಯೂ ಆಕರ್ಷಣೆಯೂ ಇಲ್ಲ, ನಿನ್ನ ಸುತ್ತಲೂ ನಿನ್ನಿಂದಲೇ ಉದ್ಭವವಾಗಿರುವ ಕೌತುಕಗಳು, ಹೂದಳಗಳು ನಿನ್ನನ್ನು ಅನುಸರಿಸಿಕೊಂಡು ಬರುವುದು, ನಿನ್ನ ಪ್ರತಿಬಿಂಬ ನಿನಗೆ ಅಥವ ಯಾರಿಗೂ ಕಾಣದಿರುವುದು ಇದಕ್ಕೆಲ್ಲಾ ಕಾರಣ ಗೊತ್ತೆ ನಿನಗೆ?" 
ಇಲ್ಲವೆಂಬಂತೆ ತಲೆಯಾಡಿಸಿದ ಅನೇಖ. 
"ನಾನು ವಿಕ್ಷಿಪ್ತಳು ಇಲ್ಲಿನವಳಲ್ಲ ಎಂಬುದೂ ನಿನಗೆ ಗೊತ್ತು?!"
"ಹೌದು"
"ಆದರೆ ನಾನು ಇಲ್ಲಿ ಏಕೆ, ಹೇಗೆ? ಎಂಬುದರ ಬಗ್ಗೆಯೂ ನಿನಗೆ ಗೊತ್ತಿಲ್ಲ?"
"ಇಲ್ಲ"
"ಬರೀ ಹೌದು ಇಲ್ಲಗಳು ಸಾಲದು ಅನೇಖ. ನಾನು ಭವಿಷ್ಯದಿಂದ ಬಂದವಳಾದರೂ ಕಾಲದಲ್ಲಿ ಹಿಮ್ಮುಖವಾಗಿ ಪಯಣಿಸಿದವಳಲ್ಲ. ಈ ವೈರುಧ್ಯ ಅಥವ ಪ್ಯಾರಡಾಕ್ಸ್ ಗಮನಿಸು. ’ಪ್ಯಾರಡಾಕ್ಸ್-ಜಗತ್ತಿಗೆ’ ಸೇರಿದವಳು ನಾನು. ಅಲ್ಲಿ ಕಾರ್ಯ-ಕಾರಣ ಸಂಬಂಧದಲ್ಲಿ ನಂಬಿಕೆ ಇಲ್ಲ. ಮೊದಲು ಫಲಿತಾಂಶ ಬಂದು ನಂತರ ಪರೀಕ್ಷೆ ನಡೆವ ನಮ್ಮ ಜಗದಲ್ಲಿ ಆಶ್ಚರ್ಯವಿಲ್ಲ. ಮೊದಲು ವಿಮರ್ಶೆ ಬಂದು ಆಮೇಲೆ ಚಿತ್ರರಚನೆಯಾಗುವ ಜಗತ್ತಿನಿಂದ ಬಂದವಳು ನಾನು! 
(ಋ)
 
     ನನ್ನನ್ನು ಚಾರ್ವಾಕಿ ಮತ್ತು ಅನೇಖ ಒಂದು ಚೆಂಡಿನಂತೆ ಅತಿ ಸ್ಲೋ ಮೋಷನ್ನಿನಲ್ಲಿ ಎಂಬಂತೆ ಹತ್ತತ್ತು ನಿಮಿಷಕ್ಕೊಮ್ಮೆ ಒಬ್ಬರ ತೊಡೆಯಿಂದ ಮತ್ತೊಬ್ಬರ ತೊಡೆಗೆ ವರ್ಗಾಯಿಸತೊಡಗಿದ್ದರು. ಅವರ ಚರ್ಚೆಯ ತೀವ್ರತೆಯ ಫಲಿತವೇ ನನ್ನ ಈ ಚಲನೆ. ನನ್ನನ್ನು ಮುಟ್ಟುತ್ತ ಮಾತನಾಡುವುದು ಈಗಾಗಲೇ ಚಾರ್ವಾಕಿಗೆ ರೂಢಿ ಹಾಗೂ ಚಟ ಎರಡೂ ಆಗಿಬಿಟ್ತಿತ್ತು. (ಅ) ನನ್ನೊಳಗಿರುವ ಸ್ಕೆಚ್‍ಗಳಿಗೂ, (ಆ) ಸ್ಕೆಚ್‍ಗಳ ಹಿನ್ನೆಲೆಯಾದ ಘಟನೆಗಳಿಗೂ, (ಇ) ಆ ಘಟನೆಗಳು ಮತ್ತು ಘಟನೆಗಳು-ಮಾತ್ರ ಓದುಗ ಮಹಾಶಯರಾದ ನೀವುಗಳು ಈಗ ಓದುತ್ತಿರುವ ಬರವಣಿಗೆಯ ಜೀವಾಳವಾಗಿರುವುದು; ಮತ್ತು (ಈ) ಇನ್ನು ಮುಂದೆ ಚಾರ್ವಾಕಿಯ ಮಾತುಗಳು--ಎಲ್ಲಕ್ಕೂ ಒಂದು ಕಾರ್ಯಕಾರಣ ಸಂಬಂಧವಿದ್ದಂತೆ ತೋರತೊಡಗಿತು ನನಗೆ! 
 
     ಆಕೆ ಮುಂದುವರೆಸಿದಳು, "ತೀ ರ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ ಕೇಳು ಅನೇಖ. ನಿಮ್ಮ ಜಗದಲ್ಲಿ ಮೌಲ್ಯ ಎಂದು ಯಾವುದನ್ನು ಬಗೆಯುತ್ತೀರೋ ಅದು ನಮ್ಮಲ್ಲಿ ಅದಿಲ್ಲ. ದೇಹ ಕವಾಯತ ಮಾಡಿ, ಕುದುರೆ ಸವಾರಿಯನ್ನು ಪರಿಶ್ರಮದಿಂದ ಕಲಿತು, ದೇಹಶ್ರಮದಿಂದ ವೇಗವಾಗಿ ಪ್ರಯಾಣ ಮಾಡುವಾತನ ಸಾಧನೆಯನ್ನು ಕಾಸು ಕೊಟ್ಟು ಟಿಕೇಟು ತೆಗೆದುಕೊಂಡು ವಿಮಾನಪ್ರಯಾಣ ಮಾಡುವಾತನ ಕ್ರಿಯೆಯು ಲೇವಡಿ ಮಾಡಿಬಿಡುವುದಿಲ್ಲವೆ, ಅಂತಹ ’ಕೇವಲ-ಸಾಂದರ್ಭಿಕ-ಕಾಲ’ಕ್ಕೆ ಸೇರಿದವಳು ನಾನು. ಋಷಿಯೊಬ್ಬ ಜೀವನವಿಡೀ ತಪಸ್ಸು ಮಾಡಿ ನೀರಿನ ಮೇಲೆ ನಡೆದುದನ್ನು ನಾಲ್ಕು ಕಾಸು ಕೊಟ್ಟು ದೋಣಿ ದಾಟಿದಾತ ’ಮೂರು ಕಾಸಿನ ಸಾಧನೆ’ ಎಂದು ಅಣಕ ಮಾಡುವ ಚಂದಮಾಮ ಕಥೆ ಎಲ್ಲಿಂದ ಬಂದದ್ದು ಎಂದು ಭಾವಿಸಿದ್ದೀಯ? ಅದು ನಮ್ಮ ಜಗದಿಂದ ಈ ಭೂಮಿಗೆ ಬಂದಿದ್ದು. ಕಾಲ-ದೇಶ ಬದ್ದನಾದ, ಕಾರ್ಯ-ಕಾರಣ-ಸಂಬಂಧದಿಂದ ಬಂಧಿತನಾದ ಮನುಷ್ಯ-ಮಾತ್ರನಿಗೆ ಇದರ ಅರಿವು ಸುಲಭಕ್ಕೆ ಸಾಧ್ಯವಿಲ್ಲ. ನಮ್ಮ ಜಗದ ಅತ್ಯುತ್ತಮ ಸಾಧನೆ, ಇತ್ತೀಚಿನದ್ದು, ಏನು ಗೊತ್ತೆ?" ಎಂದಳಾಕೆ,ಕ್
"ಏನು?"
"ಮೋಕ್ಷದ ಟ್ಯಾಬ್ಲೆಟ್ ಅನ್ನು ಅನ್ವೇಷಿಸಲಾಗಿದೆ. ಸರ್ಕಾರವು ಅತ್ಯಂತ ಸುಲಭ ಬೆಲೆಗೆ, ರೇಷನ್ನಿನ ಅಂಗಡಿಯಲ್ಲಿ ಅದನ್ನು ಎಲ್ಲರಿಗೂ ಮಾರಾಟ ಮಾಡುತ್ತಿದೆ, ಬಿಟ್ಟಿಯಾಗಿ. ಎಲ್ಲರೂ ಅದನ್ನು ತಿನ್ನಲು ಒಪ್ಪುತ್ತಿಲ್ಲ. ಏಕೆಂದರೆ ಮೋಕ್ಷವು ನಿಮ್ಮ ಜಗದಲ್ಲಿ ಆಗುವಂತೆ, ಸಾಧನೆಯ ಫಲವಲ್ಲ. ಬದಲಿಗೆ ಅದು ಅಂಗಡಿಯ ಮಾತ್ರೆ. ಅದನ್ನು ತಿಂದು ಜೀವನಪರ್ಯಂತ ನೆಮ್ಮದಿ ದೊರಕಿಬಿಟ್ಟರೆ, ನೋವು ಎಂಬುದೇನೋ ತಪ್ಪುತ್ತದೆ ಸರಿ. ಆದರೆ ಬೇಸರಿಕೆ? ಎಲ್ಲವೂ ದಕ್ಕಿದಂತಾಗುವ ಮನೋಭಾವವನ್ನು ದೇಹದಲ್ಲಿ ಮೂಡಿಸಿಬಿಡುವ ’ಮೋಕ್ಷದ ಟ್ಯಾಬ್ಲೆಟ್’ ಜೀವನಪರ್ಯಂತ ಸ್ವೀಕರಿಸಿದ ಮೇಲೆ ನಮ್ಮ ಬದುಕಿನೊಂದಿಗೆ ನಾವು ಮಾಡುವುದೇನು?-ಎಂದು ವಾದಿಸುವವರ ಪಾರ್ಟಿಯು ಈ ಮಾತ್ರೆಯನ್ನು ಸ್ವೀಕರಿಸಲು ನಿರಾಕರಿಸುತ್ತಿದೆ. ಇದನ್ನು ’ಎಲ್.ಓ.ಪಿ’ ಅಥವ  ’ಲೆಫ್ಟ್-ಓವರ್-ಪಾರ್ಟಿ’ ಎನ್ನುತ್ತಾರೆ. ’ಅದು ಸುಳ್ಳು. ಒಮ್ಮೆ ಮೋಕ್ಷ ದೊರಕಿದ ನಂತರ ಎಲ್ಲ ಸಮಸ್ಯೆಗಳೂ ಮಾಯವಾಗುತ್ತವೆ. ಬೇಸರವೆಂಬುದೂ ಇರುವುದಿಲ್ಲ,’ ಎಂಬ ಸರ್ಕಾರದ ಹೇಳಿಕೆಯ ಬಗ್ಗೆ ಎಲ್.ಓ.ಪಿಗೆ ಏನೋ ಅನುಮಾನ. ’ಅನುಮಾನವೆಂಬುದೂ ಇರುವುದಿಲ್ಲ’ ಎಂದು ಆಢಳಿತ ಪಕ್ಷವು ಸೂಚಿಸಿದಾಕ್ಷಣ ಅದರ ಬಗ್ಗೆಯೇ ಅನುಮಾನ ಹುಟ್ಟಿಕೊಂಡುಬಿಟ್ಟಿತು ಲೆಫ್ಟ್(ಓವರ್)ಪಾರ್ಟಿಯಲ್ಲಿ. ಆದ್ದರಿಂದ ಮಾತ್ರೆ ತೆಗೆದುಕೊಳ್ಳುವವರು ಇನ್ನೂ ಪ್ರತಿರೋಧ ಒಡ್ಡತೊಡಗಿದರು. ಒಮ್ಮೆ ಅದನ್ನು ನುಂಗಿದ ಮೇಲೆ ಬೇಸರಿಕೆ ಇನ್ನೂ ಹಾಗೇ ಉಳಿದುಬಿಟ್ಟಿದ್ದರೆ, ತೆಗೆದುಕೊಂಡ ಮಾತ್ರೆಯ ಪರಿಣಾಮವನ್ನು ಹಿಮ್ಮುಖವಾಗಿ ತಿರುಗಿಸಲಾಗದು ಎಂಬುದೇ ಎಲ್.ಓ.ಪಿಯ ಮುಖ್ಯ ಅನುಮಾನ. ಜೊತೆಗೆ ಈ ವಾದವನ್ನು ನಂಬುವವರು, ಈಗಾಗಲೇ ಮೋಕ್ಷದ ಟ್ಯಾಬ್ಲೆಟ್ ತೆಗೆದುಕೊಂಡುಬಿಟ್ಟವರಲ್ಲಿಯೂ ಹೆಚ್ಚತೊಡಗಿದ್ದಾರೆ. ಆ ಟ್ಯಾಬ್ಲೆಟ್ಟಿನ ಪರಿಣಾಮವನ್ನು ತಿರುಗಿಸಲಾಗದು. ಅಥವ ಆಗುತ್ತದೆಯೋ ಏನೋಪ್ಪ. ನಾನು ’ಆತ್ಯಂತಿಕ’ತೆಯನ್ನು (ಅಬ್ಸಲ್ಯೂಟಿಸ್ಟ್) ನಂಬದ ಜಗದವಳಾದ್ದರಿಂದ ಹೀಗೆ ಮಾತನಾಡುತ್ತಿರುವೆ ಎಂಬುದನ್ನು ಮರೆಯಬೇಡ. ಟ್ಯಾಬ್ಲೆಟ್ಟಿನ ಪರಿಣಾಮವನ್ನು ತಿರುವು-ಮರುವು ಮಾಡುತ್ತೇವೆ ಎಂದು ಕೆಲವರು ’ನಿರ್ಮೋಕ್ಷ-ಟ್ಯಾಬ್ಲೆಟ್’ ಅನ್ನು ಮಾರತೊಡಗಿದರು. ಅದು ತಾತ್ಕಾಲಿಕವಾಗಿ ಹಸಿವೆ, ಬಾಯಾರಿಕೆ, ಆಸೆ, ದುಃಖ ಎಲ್ಲವನ್ನೂ ಉದ್ದೀಪಿಸುತ್ತಿತ್ತು! ಜನ ಮತ್ತೆ ಇಂತಹ ಕ್ಷುಲ್ಲಕ ಅನುಭವದ ಕ್ಷಣಿಕ ಜಲಕ್ಕಿಗಾಗಿ ಸಾಯತೊಡಗಿದರು. "ಮೋಕ್ಷದ ಅನವರತ ಬೋರ್‌ಡಮ್ಮಿನ ಬದಲಿಗೆ ಕ್ಷಣವೊಂದರ ನೋವನ್ನು ನೀಡೋ ಮುಟ್ಠಾಳ ದೇವ" ಎಂಬ ’ಚಟ್ಟ’ ಎಂಬ ಜನಪ್ರಿಯ ಕನ್ನಡದ ಕವಿ-ಸಂಗೀತಗಾರ-ಸಿನೆಮ ನಿರ್ದೇಶಕನ ಹಾಡು, ಆತನದೆ ಹಿಂದಿನ ಜಗತ್ಪ್ರಸಿದ್ಧವಾದ ’ತುಂಗಾರು‍ಹೊಳೆ’ ಎಂಬ ಹಾಡಿಗಿಂತಲೂ ಹಲವು ಪಟ್ತು ಜನಪ್ರಿಯವಾಗಿ, ಅದನ್ನು ಎನ್.ಜಿ.ಓಗಳು ’ನಿರ್ಮೋಕ್ಷ-ಟ್ಯಾಬ್ಲೆಟ್’ನ ಜಾಹಿರಾತು ಹಾಡಾಗಿ ಬಳಸಿಕೊಳ್ಳುತ್ತಿದ್ದಾರೆ. 
 
     ನಿರ್ಮೋಕ್ಷ-ಟ್ಯಾಬ್ಲೆಟ್‍ನ ಅನುಭವವು ಮೋಕ್ಷ ಹೊಂದಿದವರ ತಾತ್ಕಾಲಿಕ ಭ್ರಮೆಯೋ ಅಥವ ನಿಜಕ್ಕೂ ಮೋಕ್ಷ ಸ್ಥಿತಿಯ ಪರಿಧಿಯನ್ನು ಅದು ತಾತ್ಕಾಲಿಕವಾಗಿ ದಾಟಿಸುತ್ತದೋ ಎಂಬುದು ಸ್ಪಷ್ಟವಾಗಿಲ್ಲದಿರುವುದೇ ಈಗಿರುವ ಅಲ್ಲಿನ ಸತ್ಯ. ಮತ್ತು ಈ ಅನುಮಾನವನ್ನು ಪರಿಹರಿಸಲು ನಮ್ಮ ಸರ್ಕಾರವು ಪ್ರಯತ್ನಿಸುತ್ತಿಲ್ಲ, ಏಕೆಂದರೆ ’ಆತ್ಯಂತಿಕತೆ’ಯನ್ನು ನಿರಾಕರಿಸುವ ಜಗತ್ತು ನಮ್ಮದು! ’ನಿರ್ಮೋಕ್ಷ-ಟ್ಯಾಬ್ಲೆಟ್’ ಮಾರುವವರ ದಂದೆಯೇ ಶುರುವಾಗಿ, ಅದು ಇಂದು ದೊಡ್ಡ ಅಂಡರ್‌ವರ್ಲ್ಡ್ ಆಗಿ ಮಾರ್ಪಟ್ಟಿದೆ. ಮದ್ಯರಾತ್ರಿಗಳಲ್ಲಿ ಒಬ್ಬಂಟಿಯಾಗಿ ಬರುವ ಮೋಕ್ಷವಂತರನ್ನು ಹಿಡಿದು ನಿರ್ಮೋಹದ ಮಾತ್ರೆ ತಿನ್ನಿಸುವುದು, ಅವರುಗಳು ನರಳತೊಡಗಿದರೆ, ಇನ್ನೂ ಹೆಚ್ಚಿನ ಇಂತಹ ಮಾತ್ರೆಯನ್ನು ಕೊಂಡುಕೊಳ್ಳುವಂತೆ ಅವರಿಗೆ ದುಂಬಾಲು ಬಿದ್ದು, ಆಗ ನೋವು ಶಮನವಾಗುತ್ತದೆಂದು ನಂಬಿಸಿ, ಹೇಗಾದರೂ ಮಾಡಿ ಅಂತಹವರು ಸಮೀಪದ ಮೆಡಿಕಲ್ ಶಾಪಿನಲ್ಲಿ ಮೋಕ್ಷದ ಮಾತ್ರೆ ತಿನ್ನುವ ಮೊದಲೇ ತಮ್ಮ ನಿರ್ಮೋಕ್ಷದ ಮಾತ್ರೆಗಳ ಹಣವನ್ನು ಅವರಿಂದ ಪೀಕುವುದು ಈ ಭೂಗತ ಜಗತ್ತಿನ ಮುಖ್ಯ ಗುರಿಯಾಗಿ ಹೋಗಿದೆ.   
 
  ತಮಾಷೆಯೆಂದರೆ ಇತ್ತೀಚೆಗೆ ಬ್ಲಾಕ್ ಮಾರುಕಟ್ಟೆಯಲ್ಲಿ ಅದನ್ನು ಮಾರುತ್ತಿದ್ದಾತನಿಗೆ ಏನು ಶಿಕ್ಷೆಯಾಯಿತು ಗೊತ್ತೆ?" ಕೇಳಿದಳು ಚಾರ್ವಾಕಿ ಅನೇಖನನ್ನು.
"?" ಅನೇಖ.
"ಪೋಲೀಸರು ಆತನಿಗೆ ಆದಷ್ಟೂ ಶೀಘ್ರವಾಗಿ ಅದೇ ಮೋಕ್ಷದ ಟ್ಯಾಬ್ಲೆಟ್ ತಿನ್ನಿಸಲು ನುಗ್ಗಿಬರುತ್ತಿದ್ದರು. ಅದನ್ನು ತಿನ್ನಿಸಿಬಿಟ್ಟರೆ ಸಾಕು, ಆಮೇಲೆ ಲೋಭ, ಸ್ವಾರ್ಥ, ಆಸೆ, ದುಃಖ ಎಲ್ಲವೂ ಮಾಯವಲ್ಲವೆ, ಅದಕ್ಕೆ," ಎಂದ ಚಾರ್ವಾಕಿ ಜೋರಾಗಿ ನಗತೊಡಗಿದಳು.
"ಅದರಲ್ಲಿ ನಗುವಂತಹದ್ದು ಏನಿದೆ ಮೇಡಂ?"
"ಆತ ತನಗಾಗಲಿರುವ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಏನು ಮಾಡಿದ ಗೊತ್ತೆ?"
"?"
"ಪೋಲೀಸರು ಸಂಪೂರ್ಣವಾಗಿ ತನ್ನನ್ನು ಸೆರೆಹಿಡಿವ ಮುನ್ನವೇ ಆತ ತನ್ನ ಕುತ್ತಿಗೆಯ ಸರದಲ್ಲಿ ಸಿಕ್ಕಿಸಿಕೊಂಡಿದ್ದ ಕ್ಯಾಪ್ಸೂಲನ್ನು ಬಾಯಿಗೆ ಹಾಕಿಕೊಂಡು, ಜಗಿದುಬಿಟ್ಟ?!"
"ಸೈನೈಡ್?"
"ಅಲ್ಲೇ ತಮಾಷೆ ಇರುವುದು. ಆ ಕ್ಯಾಪ್ಸೂಲಿನಲ್ಲಿದ್ದದ್ದು ಅದೇ ಮೋಕ್ಷದ ಟ್ಯಾಬ್ಲೆಟ್!!" ಎಂದುತ್ತರಿಸಿದಳು ಚಾರ್ವಾಕಿ.//