ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 1)
ಆ ಮನೆಯಲ್ಲಿ ನೀರವ ಮೌನ. ಮನೆ ಮಂದಿಯ ಕಣ್ಣೀರು ಬತ್ತಿ ಹೋಗಿದೆ. ಯಾರೊಬ್ಬರ ಮುಖದಲ್ಲೂ ಜೀವಕಳೆಯಿಲ್ಲ. ಮನೆ ಮಂದಿಗೆ ಸಾಂತ್ವಾನ ಹೇಳಲು ಬಂದವರಿಗೂ, ಮಾತುಗಳು ಹೊರಡುತ್ತಿಲ್ಲ. ಹದಿನೇಳರ ಹರೆಯದ ಹುಡುಗನೊಬ್ಬ ಮರಣಶಯ್ಯೆಯಲ್ಲಿ ಮಲಗಿರುವ ದೃಶ್ಯ ಶತ್ರುವಿನ ಹೃದಯ ಕೂಡಾ ಕಂಪಿಸುವಂತಿತ್ತು. ಯಮ ಯಾತನೆಯ ನಡುವೆಯೂ ಹುಡುಗನಲ್ಲಿ ಅದಮ್ಯ ಆತ್ಮವಿಶ್ವಾಸವಿತ್ತು. ನೂರು ವರ್ಷ ಬದುಕಬಲ್ಲೆ ಎಂಬ ಭರವಸೆ ಆತನಿಗೆ. ಸಾವನ್ನು ಗೆದ್ದ ಅನೇಕ ಮಂದಿಯ ಚರಿತ್ರೆ ಆತ ಬಲ್ಲವನಾಗಿದ್ದ. ಸ್ಟೀಫನ್ ಹಾಕಿನ್ಸ್ ಸಾವಿನ ಕುಣಿಕೆ ಕೊರಳಲ್ಲಿದ್ದರೂ, ಅದರೊಂದಿಗೆ ಮತ್ತೆ 55 ವರ್ಷ ಬದುಕಿದ ಬಗ್ಗೆ ಆತ ಪ್ರೇರಿತನಾಗಿದ್ದ. ಆದರೆ ಆತನಿಗೆ ಇಂದಿನ ನೋವು ಸಹಿಸಲಾಗುತ್ತಿಲ್ಲ. ಇದುವರೆಗೆ ನೋವಿನೊಂದಿಗೇ ಬದುಕಿದ್ದರೂ ಇಂದಿನ ನೋವು ವಿಪರೀತವಾಗಿದೆ. ಬಾಗಿಲ ಬಳಿ ಅದ್ಯಾವುದೋ ಕಪ್ಪು ಆಕೃತಿಯೊಂದು ಹಾದು ಹೋದಂತೆ ಅನುಭವವಾಗುತ್ತಿದೆ. ಕೆಲವೊಮ್ಮೆ ಅದು ಈತನನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಭಾಸವಾಗುತ್ತಿದೆ.
ಹೃದಯದಲ್ಲಿ ಚಿಮ್ಮುತ್ತಿರುವ ಚೈತನ್ಯ. ಪುಟಿದೇಳುತ್ತಿರುವ ಆತ್ಮೋಲ್ಲಾಸ. ಸೋಲೊಪ್ಪದ ದಿಟ್ಟ ನಡಿಗೆ. ಹೀಗೆ ಬರೆದಂತೆ ಮತ್ತೆ ಮತ್ತೆ ಮರುಕಳಿಸುತ್ತಿರುವ ಆತನ ಒಂದೊಂದು ಆದರ್ಶ ಗುಣಗಳು. ನಿಸ್ಸಂಶಯವಾಗಿ ವಿದ್ಯಾರ್ಥಿಗಳ ಬದುಕಿಗೊಂದು ನವೀನ ಭಾಷ್ಯ ಬರೆದ ಹುಡುಗನಾಗಿದ್ದ ಆತ. ಇಂದು ಎಲ್ಲಾ ವಿದ್ಯಾರ್ಥಿಗಳಂತೆ ಆತನೂ ತರಗತಿಯಲ್ಲಿ ಕುಳಿತಿದ್ದಾನೆ. ಅಷ್ಟರಲ್ಲಾಗಲೇ ಹಲವು ಹತ್ತು ಸಲ ತಲೆಸುತ್ತಿದ್ದಂತಹ ಅನುಭವಗಳಾಗಿದ್ದವು. ದೇಹ ಹತೋಟಿ ತಪ್ಪಿ ಕುಸಿದಂತೆ ಅನ್ನಿಸಿದ್ದೂ ಇದೆ. ಯಾವುದೋ ಚಿಕ್ಕ ಪುಟ್ಟ ತೊಂದರೆ ಅಗಿರಬಹುದೆಂದು ನಿರ್ಲಕ್ಷಿಸಿದ್ದೂ ಹೌದು. ಇಂದು ಜೊತೆಗಿದ್ದ ಸಹಪಾಠಿ ಆತನ ಕಿವಿಯ ಬಳಿ ಅದೆನೋ ಗುಳ್ಳೆಗಳಿರುವುದನ್ನು ಗಮನಿಸಿದ್ದ. ಕಪ್ಪು ಗುಳ್ಳೆಗಳನ್ನು ಮುಟ್ಟಿದಾಗ ವಿಪರೀತ ನೋವಿನ ಅನುಭವ. ಹುಡುಗ ಬಂದು ಮನೆಗೆ ತಿಳಿಸಿದಾಗ, ಗಾಬರಿಗೊಂಡ ಹೆತ್ತವರು ವೈದ್ಯರ ಬಳಿ ಧಾವಿಸಿದರು. ಪರೀಕ್ಷಿಸಿದ ವೈದ್ಯರಿಗೆ ದಿಗ್ಭ್ರಮೆ. ಹೆತ್ತವರಿಗೆ ವಿಷಯ ತಿಳಿಸಲು ವೈದ್ಯರಿಗೆ ಮಾತುಗಳೇ ಹೊರಡುತ್ತಿಲ್ಲ. ಕಡೆಗೂ ನಿಜ ವಿಷಯ ಹೆತ್ತವರ ಮುಂದೆ ಬಿಚ್ಚಿಟ್ಟಾಗ, ಕುಸಿದು ಹೋದ ಹೆತ್ತವರು ಸಾವರಿಸಿಕೊಳ್ಳಲು ತಿಂಗಳುಗಳೇ ಬೇಕಾಗಿತ್ತು.
ಸಚಿನ್ ಹಾವೇರಿಯ ಮಣ್ಣಿನ ಮಗ. ಪರೀಕ್ಷಿಸಿದ ವೈದ್ಯರು ಸಚಿನ್ ಗಿರುವ ಭಯಾನಕ ಕಾಯಿಲೆಯನ್ನು ಗುರುತಿಸುತ್ತಾರೆ. ಅಪರೂಪದಲ್ಲಿ ಅಪರೂಪವಾದ “ಹಾಡ್ಗ್ಕಿನ್ಸ್ ಲಿಂಪೋಮಾ” ಎಂಬ ಕ್ಯಾನ್ಸರ್ ಕಾಯಿಲೆಗೆ ಆತ ತುತ್ತಾಗಿದ್ದ. ಅಲ್ಲದೆ ಅದು ಮೊದಲೆರಡು ಹಂತಗಳನ್ನು ದಾಟಿ ದುರಸ್ತಿ ಪಡಿಸಲಾಗದ ಮೂರನೇ ಹಂತ ತಲುಪಿತ್ತು. ಮುತ್ತಿನಂತಹ ಮಗನಿಗೆ ಬಂದೊದಗಿದ, ಗುಣಪಡಿಸಲಾಗದ ವ್ಯಾಧಿಯಿಂದ ಜರ್ಝರಿತವಾದ ಹೆತ್ತವರಿಗೆ “ಮಗ ಇನ್ನು ಎರಡು ವರ್ಷಕ್ಕಿಂತ ಹೆಚ್ಚು ಬದುಕಲಾರ” ಎಂಬ ವೈದ್ಯರ ಮಾತನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರ ಕೋಡಿಯನ್ನೇ ಹರಿಸಿದ್ದರು.
ಸಚಿನ್ ಸಾವಿನ ಮುನ್ನುಡಿ ಮೂರನೇ ತರಗತಿಯಲ್ಲಿಯೇ ಬರೆದಾಗಿತ್ತು. ತನಗಿರುವ ಕಾಯಿಲೆ ಮತ್ತು ಅದರ ಭಯಾನಕತೆಯ ಬಗ್ಗೆ ಆತನಿಗೆ ತಿಳಿಯಲು ಮತ್ತೊಂದಷ್ಟು ಕಾಲ ಬೇಕಾಯಿತು. ಈ ಮಧ್ಯೆ ಅದೆಷ್ಟೋ ಚಿಕಿತ್ಸೆಗಳನ್ನು ಮಾಡಿಯೂ ಆಗಿತ್ತು. ಅವುಗಳಾವುದೂ ಕಾಯಿಲೆಯ ತೀವ್ರತೆಯ ಅರಿವನ್ನು ಸಚಿನ್ ಗೆ ಮೂಡಿಸಿರಲಿಲ್ಲ. ಏಕೆಂದರೆ ಆತನಿನ್ನೂ ಪುಟ್ಟ ಹುಡುಗನಾಗಿದ್ದ. ಅದೊಂದು ದಿನ ಆತನಿಗೆ ಅದು ತಿಳಿದೇ ಹೋಯಿತು. ಆ ದಿನದಿಂದಲೇ ನಮಗೆ ಸಚಿನ್ ಎಂಬ ದೈತ್ಯ ಪ್ರತಿಭೆಯ ದರ್ಶನವಾಗತೊಡಗಿದ್ದು. ಆತ ಸಾವು ಸನಿಹವಿರುವ ಸುದ್ದಿ ಕೇಳಿ ಅಧೀರನಾಗಬಹುದೆಂದು ಭಾವಿಸಿದವರಿಗೆ ಅವನೊಂದು ಪ್ರಶ್ನಾರ್ಥಕ ವ್ಯಕ್ತಿತ್ವವಾಗಿದ್ದ. ಅವನು ಸಾವಿಗೆ ಅಂಜಲೇ ಇಲ್ಲ. ಆತನಲ್ಲಿ ಸಾವನ್ನು ಮೆಟ್ಟಿ ನಿಲ್ಲುವ ಆತ್ಮ ಶಕ್ತಿಯಿತ್ತು.
ರೋಶನಿ ಆಂಗ್ಲ ಮಾಧ್ಯಮ ಶಾಲೆ ಹಾನಗಲ್ ನ ಪ್ರೌಢಶಾಲೆಯಲ್ಲಿ ಆತ ಕಳೆದದ್ದು, ಒಂದು ಅಭೇದ್ಯ ಶಕ್ತಿಯಾಗಿ. ಶಿಕ್ಷಕರೇ ಆತನಿರುವ ತರಗತಿಗೆ ಬೋಧಿಸಲು ಯೋಚಿಸುವಂತೆ ಮಾಡುವ ಬುದ್ಧಿಮತ್ತೆ ಆತನಲ್ಲಿತ್ತು. ತನ್ನ ಶಾಲೆಯ ಹದಿನೈದನೇ ವಾರ್ಷಿಕೋತ್ಸವದ ಭವ್ಯ ಕಾರ್ಯಕ್ರಮದ ನಿರೂಪಕನಾಗಿ ಜನಮೆಚ್ಚುಗೆ ಪಡೆದಿದ್ದ. ಸಚಿನ್ ತರಗತಿಯಲ್ಲಿ ನಿಶ್ಯಬ್ಧವಾಗಿ ಕುಳಿತಿರುತ್ತಿದ್ದ. ಅದರರ್ಥ ಶಿಕ್ಷಕರ ಬೋಧನೆ ಸರಿಯಿದೆ ಎಂಬ ಸಮ್ಮತಿಯಾಗಿತ್ತು. ಇಂದಿನ ಪಾಠವನ್ನು ಅದು ಯಾವುದೇ ವಿಷಯವಾಗಿರಲಿ ಮುಂಚಿತವಾಗಿಯೇ ಓದಿಕೊಂಡು ತರಗತಿಯೊಳಗೆ ಕುಳಿತುಕೊಳ್ಳುವ ಅಪರೂಪದ ವಿದ್ಯಾರ್ಥಿ ಆತನಾಗಿದ್ದ. ಅಪ್ಪಿ ತಪ್ಪಿ ಸಚಿನ್ ಕೈ ಮೇಲೆ ಮಾಡಿದನೆಂದರೆ ಶಿಕ್ಷಕರು ಬೆವರುತ್ತಿದ್ದರು. ಅದಕ್ಕೆ ಕಾರಣ ಸ್ಪಷ್ಟ. ಆತನಿಗೆ ಅರ್ಥವಾಗದೆ ಕೈಯೆತ್ತುತ್ತಿದ್ದ ಸಂದರ್ಭ ತೀರಾ ವಿರಳ. ಆತ ಕೈ ಮೇಲೆ ಮಾಡಿದನೆಂದರೆ ಶಿಕ್ಷಕರು ತಪ್ಪಾಗಿ ವಿವರಿಸಿದ್ದಾರೆ ಎಂಬುವುದರ ಸಂಕೇತವಾಗಿತ್ತು. ಆತ ಶಿಕ್ಷಕರ ತಪ್ಪನ್ನು ಗುರುತಿಸಿ ಪ್ರಶ್ನಿಸುತ್ತಿದ್ದ. ಅದು ಅಹಂಕಾರವಾಗಿರದೆ, ಜ್ಞಾನ ತೃಷೆಯಾಗಿತ್ತು.
ಸಚಿನ್ ತರಗತಿಯೊಳಗಿದ್ದರೆ ಆ ತರಗತಿಗೇ ಶೋಭೆಯಿತ್ತು. ಆತನೊಬ್ಬ ಪ್ರಚಂಡ ಪ್ರತಿಭೆಯ ಸಾಕಾರ ಮೂರ್ತಿಯಾಗಿದ್ದ. ಯಾವುದೇ ವಿಷಯವಿರಲಿ, ಯಾವುದೇ ಪ್ರಶ್ನೆಗಳಿರಲಿ ಎಡವದೇ ಉತ್ತರಿಸುತ್ತಿದ್ದ ಆತನ ಪ್ರತಿಭೆ ಕಂಡು ಶಿಕ್ಷಕರು ವಿಶ್ಮಿತರಾಗುತ್ತಿದ್ದರು. 2015 ರಲ್ಲಿ ಪ್ರೌಢಶಾಲೆಯ ಕೊನೆಯ ಹಂತದಲ್ಲಿದ್ದ. ಪ್ರೌಢಶಾಲೆಯಲ್ಲಿ ತನ್ನೊಡನೆ ಇದ್ದ ಪ್ರತಿಯೊಂದು ಕ್ಷಣವನ್ನು ಮನಪಟಲದಲ್ಲಿ ತುಂಬಿಸಿಕೊಂಡಿರುವ ಆತನ ಗಣಿತ ಶಿಕ್ಷಕ ಚಂದ್ರಶೇಖರ ಹಾದಿಮನಿಯ ಮೆಚ್ಚಿನ ಶಿಷ್ಯನಾಗಿದ್ದ ಸಚಿನ್. ಚಂದ್ರಶೇಖರ್ ಸರ್ ಸಚಿನ್ ಬಗ್ಗೆ ಮಾತಾಡುತ್ತಿದ್ದಂತೆ ಗದ್ಗದಿತರಾಗುತ್ತಾರೆ. ಅವರ ಕಣ್ಣಾಲಿಗಳು ತುಂಬಿ ಬರುತ್ತವೆ. “ನನ್ನ ಶಿಕ್ಷಕ ವೃತ್ತಿಯಲ್ಲಿ ಮತ್ತೊಬ್ಬ ಸಚಿನ್ ನನ್ನು ಕಾಣಲು ಸಾಧ್ಯವೇ ಇಲ್ಲ. ಆತನೊಬ್ಬ ದಂತಕಥೆ” ಎನ್ನುವ ಅವರು ಮುಂದೆ ಮಾತು ಹೊರಡದೆ ಮೂಕರಾಗುತ್ತಾರೆ.
(ಇನ್ನೂ ಇದೆ)
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ