ನೆರೆ, ನೆಱೆ, ನಿಱಿಸು

ನೆರೆ, ನೆಱೆ, ನಿಱಿಸು

ಬರಹ

೧)ನೆರೆ=ಒಂದು ಕಡೆ ಗುಂಪುಗೂಡು, ಒಟ್ಟಾಗು.
ಉದಾಹರಣೆ:- ಜನರೆಲ್ಲ ಸಭೆಯಲ್ಲಿ ನೆರೆದಿದ್ದಾರೆ
ಒಟ್ಟಿಗೆ ಸೇರಿದರೆ ಸಹಾಯವಾಗುವುದಱಿಂದ ಇದಱ ಭಾವನಾಮ ನೆರವು=ಸಹಾಯ, ಗಂಡು ಹೆಣ್ಣುಗಳ ಮಿಲನವೂ ನೆರವು. ನೆರವಿ=ಗುಂಪು

೨)ನೆಱೆ=ಪೂರ್ಣವಾಗು, ತುಂಬು. ವಿಶೇಷಣವಾಗಿ ತುಂಬಾ, ಸಂಪೂರ್ಣವಾಗಿ
ಉದಾಹರಣೆಗೆ:-ನಾನು ದೇವರನ್ನು ನೆಱೆ ನಂಬಿದೆ
ನೆಱೆವೆರೆ=ನೆಱೆ=ಪೂರ್ಣ+ಪೆಱೆ=ಚಂದ್ರ
ಹಾಗೆಯೇ ಅರೆವೆಱೆ=ಅರ್ಧಚಂದ್ರ, ಎಳವೆಱೆ=ಬಾಲಚಂದ್ರ
ನೀರು ತುಂಬಿ ಪ್ರವಾಹವಾಗುವುದಱಿಂದ ನೆಱೆ=ಪ್ರವಾಹ
ಇದಱ ಭಾವನಾಮ ನೆಱವು=ಸಂಪೂರ್ಣತೆ, ಪಕ್ವತೆ, ಸೊಂಪು
ಅವರ ವಿವಾಹ ಸಾಂಗೋಪಾಂಗವಾಗಿ ನೆಱವೇಱಿತು.
ಇಲ್ಲಿ ನೆಱವು+ಏಱಿತು= ಎಂದರೆ ಆಗಬೇಕಾದ ವಿವಾಹ ಎಲ್ಲಾ ರೀತಿಯಲ್ಲಿ ಸಂಪೂರ್ಣವಾಯಿತು. ಈಗಿನ ಗಣಕಯಂತ್ರದ ಕಾರ್ಯವೈಖರಿಯಲ್ಲಿ progress bar ನ್ನು ಉದ್ದವಾಗಿ ಇಟ್ಟಾಗ ಅದಱ ಪ್ರಗತಿ ಮೇಲ್ಮುಖವಾಗಿ ಒಂದೊಂದೇ ಹಂತ ಮುಗಿಯುತ್ತಿದ್ದಂತೆ ತುಂಬುವಂತೆ ಪೂರ್ಣವಾಗಿ ಒಂದು ಕೆಲಸ ಸಂಪೂರ್ಣವಾಗಿ ಆಗುವುದನ್ನು ಏಱುವುದಱಿಂದ ಸೂಚಿಸುವಂತೆ ಈ ಪದವನ್ನು ’ನೆಱವೇಱಿತು’ ಎಂದು ಬೞಸುತ್ತೇವೆ. ಇನ್ನುೞಿದ ಭಾವ ನಾಮಗಳು ನೆಱೆತ, ನೆಱವಣಿಗೆ=ಸಂಪೂರ್ಣತೆ, ಸಮಗ್ರತೆ.

೩)ಇನ್ನೊಂದು ನಿಱಿಗೆ=ನಿಱಿಸು ಕ್ರಿಯಾಪದದ ಭಾವನಾಮ. ಏನನ್ನಾದರೂ ಕ್ರಮಬದ್ಧವಾಗಿ ನಿಲ್ಲಿಸು/ಜೋಡಿಸು.
ಉದಾಹರಣೆ:- ದರ್ಜಿ ಲಂಗದ ನಿಱಿಗೆಯನ್ನು ಸರಿಯಾಗಿ ಸೇರಿಸಿ ಹೊಲಿದಿಲ್ಲ.
ಅವಳಿಗೆ ಸೀರೆಯ ನಿಱಿಗೆಯನ್ನು ಜೋಡಿಸಲು ಬರುವುದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet