ನೆಲದೊಳಗಿನ ಮಾತು ( ಕವನ )

ನೆಲದೊಳಗಿನ ಮಾತು ( ಕವನ )

ಬರಹ

ಭಯ, ಧು:ಖ,ದುಗುಡ,ದುಮ್ಮಾನಗಳಿಂದೊಮ್ಮೆ
ನೀ ಕಟ್ಟಿಕೊಟ್ಟ ನೆನಪಿನ ಗಂಟಿನೆದೆಬಗೆದು
ಮೆಲ್ಲನ್ನೊಮ್ಮೆ ಇಣುಕಿದಾಗ ಕುಣಿಯುತ್ತೇನೆ.
ಮತ್ತದೆ ಖುಷಿಯಿಂದ ಅನಾಧ ಸ್ವರ್ಗದಲ್ಲಿ ತೇಲುತ್ತೇನೆ
ವಾಸ್ತವದ ನೆನಪಾದಾಗ ಬೆಚ್ಚಿ ಬೀಳುತ್ತೇನೆ.

ಬೆತ್ತಲಾದ ಎದೆಯಮೇಲೆ ಅತ್ತಿತ್ತ ಓಲಾಡಿ
ಕಚಗುಳಿಯಿಟ್ಟ ಚಿನ್ನದಳೆಯ ಆ ಬೆರಳುಗಳು
ಮುಖದ ಮೇಲೆ ತಿವಿದು,ತಿದ್ದಿ,ತೀಡಿದ್ದು
ಕಣ್ಮುಂದೆ ಸುಳಿದಾಗಲೆಲ್ಲ
ಅದೇನೋ ಆನಂದದ ಅಳು.

ಬಾಹು ಬಂಧನದ ಚುಂಬನಕೆ
ತೆರೆದುಕೊಂಡ ಮನದೊಳಗೊಂದು
ಚಿತ್ತಾರ ಬಿಡಿಸಲು ಆಡಿದ ಚೆಂದನದಾಟದ
ಹೂಟದ ಪಟ್ಟುಗಳು ನೆನಪಾದಾಗಲೆಲ್ಲ
ಅದಾವುದೋ ನೋವಿನ ಸಂತೋಷ

ಹರಯ ಬಾರಿಸಿದ ಗಜ್ಜೆಯ ಸದ್ದಿಗೆ
ಹೆಜ್ಜೆಹಾಕಿದ ಹೃದಯದ ಕಾಲ್ಗಳಿಗೆ ಕಲ್ಲು-ಮುಳ್ಳು
ಚುಚ್ಚಿ, ರಕ್ತಸೋರಿ ಗಾಯವಾದದ್ದಂದು ತಿಳಿಯಲೇ ಇಲ್ಲ
ಇಂದದು ಮನದಲ್ಲಿಣುಕಿದಾಗ
ಕಣ್ಣಂಚಲಿ ಹತಾಶಯ ಆನಂದ ಭಾಷ್ಪ.

ಬೇಸಿಗೆಯ ಉರಿಬಿಸಿಲ ಝಳಕೆ
ನೆಲದೊಳಗಿನ ಸಾಯುತ್ತಿರುವ ಬೇರುಗಳಿಗೆ
ನಿನ್ನೆ ಮೊನ್ನೆ ಬಿದ್ದ ಮುಂಗಾರಿನ
ಹದಮಳೆಯ ಹನಿಗಳು, ಅವು
ಪಲ್ಲಿಸುವಂತೆ ಮತ್ತೆ ಮತ್ತೆ ಕಾಡುತ್ತಿವೆ.

ನಲದೊಳಗಿನ ಮೌನ ಧ್ವನಿಸುತ್ತಿದೆ.
ಅವು ಮಣ್ಣಲ್ಲಿ ಮಣ್ಣಾಗುವ ಮುನ್ನ
ಆತ್ಮ ಸಂಸ್ಕಾರದ ಸಾಕ್ಷಾತ್ಕಾರದಿಂದೊಂಮ್ಮೆ
ಅವುಗಳಿಗೆ ಮತ್ತೆ ಜೀವಕೊಡಬೇಕೆಂದೆನಿಸುತಿದೆ.
ಹೇಳು ! ನಿನಗೂ ಹೀಗೆನಾ ?