ನೆಲೆ ಕನ್ನಡ (ಒಂದರಿಂದ ಹತ್ತು)

ನೆಲೆ ಕನ್ನಡ (ಒಂದರಿಂದ ಹತ್ತು)

ಕವನ

ಒಂದು ಎರಡು ಕನ್ನಡ ನಾಡು

ಅದರಲೆ ಮಾತಾಡು

ಬಂದು ಹೋಗುವ ಮಂದಿಗು ಕಲಿಸು

ಕನ್ನಡದ ಹಾಡು ||

 

ಮೂರು ನಾಲ್ಕು ಕನ್ನಡ ಪಲುಕು

ದಿನವು ಬಳಸಲೆ ಬೇಕು

ನೂರು ಭಾಷೆ ಜೊತೆಯಲಿದ್ದರು

ಕನ್ನಡವಾಡುತ ಬದುಕು  ||

 

ಐದು ಆರು ಕನ್ನಡ ತೇರು

ಏರಿ ಕಂಪನು ಬೀರು

ಹಾದಿ ಬೀದಿಯಲೆಲ್ಲ ಕನ್ನಡ

ಡಿಂಡಿಮ ಬಾರಿಸಿ ಸಾರು  ||

 

ಏಳು ಎಂಟು ಕನ್ನಡಕೆಂಟು

ಜ್ಞಾನಪೀಠಕೆ ನಮಿಸು

ದಾಳಿಕೋರರಿಗೆ ಅಂಜದೆ ನಿಂತು

ಕನ್ನಡವನು ಬಳಸು  ||

 

ಒಂಬತ್ತು ಹತ್ತು ಕನ್ನಡವೆ ಗತ್ತು

ಗಡಿಯಿಂದಾಚೆಗು ಬೆಳೆಸು

ಹೆತ್ತು ಹೊತ್ತಿಹ ತಾಯಿಯ ನೆಲವಿದು

ಶಾಶ್ವತವಿಲ್ಲಿಯೆ ನೆಲೆಸು  ||

 

ಒಂದರಿಂದ ಹತ್ತು ಹೀಗಿತ್ತು 

ಕನ್ನಡವ ಬಳಸುವ ಮನಸಿಟ್ಟು ||

-ಚನ್ನಕೇಶವ ಜಿ ಲಾಳನಕಟ್ಟೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್