ನೇಗಿಲಯೋಗಿ ರೈತ (ಜಾನಪದಶೈಲಿ)
ತಂದಾನಿ ತಾನೋ ತಂದಾನೋ/
ತಾನಿ ತಂದಾನೋ ತಂದಾನೋ/
ತಂದನ್ನ ತಾನನ ತಂದಾನೋ........//
ಮೂಡಣ ದಿಕ್ಕಲ್ಲಿ ರಂಗು ಚೆಲ್ಯಾನ/
ಸೂರ್ಯ ದ್ಯಾವ್ರು ಮ್ಯಾಲೆ ಬಂದಾನ/
ಅಣ್ಣಯ್ಯಾ/ಚುಮುಚುಮು ಚಳಿಯ ದೂರಮಾಡ್ಯಾನ//
ಹಕ್ಕಿಗಳ ಚಿಲಿಪಿಲಿ ಸುತ್ತಲು ಕೇಳೈತೆ/
ಕುಳಿರ್ಗಾಳಿ ಸೊಂಯ್ ಎಂದು ಬೀಸೈತೆ/
ಅಣ್ಣಯ್ಯಾ/ಮನೆ ಹೈಕ್ಳು ಎದ್ದು ಕುಂತಾರ//
ರೈತಾಪಿ ಜನರು ಬುತ್ತಿ ಕಟ್ಕೊಂಡು/
ಹೆಂಡಿರು ಮಕ್ಕಳ ಜೊತೆಯಾಗೆ/
ಅಣ್ಣಯ್ಯಾ/ಗಂಜಿಯ ಕುಡ್ದು ಹೊಂಟಾರ//
ಹೊಲದಲ್ಲಿ ಕಾಯಕವ ಗೈಯುತ್ತ /
ಉತ್ತುಬಿತ್ತಿ ಫಸಲು ಪಡಿತಾರ/
ಅಣ್ಣಯ್ಯಾ/ನೇಗಿಲಯೋಗಿ ರೈತ ಜನ//
ಬಿಸಿಲು ಮಳೆ ಗಾಳಿಗೆ ಅಂಜದೆ/
ದಿನವಿಡಿ ದುಡಿತಾರ ಹೊಲದಲ್ಲಿ/
ಅಣ್ಣಯ್ಯಾ/ಅನ್ನದಾತರೆ ನಮ್ಮ ದ್ಯಾವಾರು//
ಬಯಲಲ್ಲಿ ಎಲ್ರೂನು ಜ್ವೊತೆಯಾಗೆ ಕುಂತು/
ರೊಟ್ಟಿ ಗಂಜಿ ಉಣುತಾರ/
ಅಣ್ಣಯ್ಯಾ/ಭೂಮಾತೆ ಸೇವೆ ಮಾಡ್ಯಾರ//
ಕರಿಮೋಡ ಎದ್ದ್ಯೆತೆ ಬಾನೆಲ್ಲ ಹರಡೈತೆ/
ಮಳೆ ಹನಿ ಸೂಚನೆ ನೀಡೈತೆ/
ಅಣ್ಣಯ್ಯಾ/ಮೋರೆಲಿ ನಗುವು ಜಿನುಗೈತೆ//
ಹೊತ್ತ ಭೂಮಿಯ ಮುದ್ದಿನ ಕೂಸುಗಳು/
ಹೊಟ್ಟೆಗೆ ಅನ್ನ ನೀಡೋ ರೈತರು/
ಅಣ್ಣಯ್ಯಾ/ಗದ್ದೆ ಬದುವಲ್ಲಿ ಮರಗಿಡ ನೆಟ್ಟಾರು//
-ರತ್ನಾ ಕೆ.ಭಟ್, ತಲಂಜೇರಿ