ನೇತಾಜಿ ಕಣ್ಮರೆ - ಒಂದು ವಿಶ್ಲೇಷಣೆ
ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ. ನಾಯಕತ್ವದ ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ. ಹೀಗಾಗಿ ನೇತಾಜಿಯವರ ಕಣ್ಮರೆಯನ್ನು ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ. ನೇತಾಜಿಯವರು ೧೯೪೫ರ ಆಗಸ್ಟ್ ೧೮ ರಂದು ತೈಹೊಕು (ಇಂದಿನ ತೈವಾನ್ ದೇಶದಲ್ಲಿ) ಎಂಬಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಹೇಳಲಾಗುತ್ತಿದೆ. ಇದನ್ನು ಎಷ್ಟೋ ಜನ ನಂಬುವುದಿಲ್ಲ. ಹೀಗಾಗಿ ಈ ರಹಸ್ಯವನ್ನು ಭೇದಿಸಲು ಎನ್.ಡಿ.ಎ. ಆಡಳಿತಾವಧಿಯಲ್ಲಿ ಸಮಿತಿ ನೇಮಕ ಮಾಡಲಾಗಿತ್ತು. ಆ ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಆ ದಿನ ಯಾವುದೇ ವಿಮಾನ ಅಪಘಾತ ನಡೆದ ದಾಖಲೆ ಲಭ್ಯವಿಲ್ಲ ಎಂದು ಹೇಳಿತು. ನೇತಾಜಿಯವರು ರಶಿಯಕ್ಕೆ ಹೋಗಿ ಅಲ್ಲಿ ಬಂಧಿಯಾಗಿ ಸೈಬೀರಿಯಾದಲ್ಲಿ ಸೆರೆವಾಸದಲ್ಲಿ ಸತ್ತರು ಎಂದು ಇನ್ನೊಂದು ವದಂತಿಯೂ ಇದೆ. ಹೀಗಾಗಿ ರಶಿಯಕ್ಕೂ ಆ ಸಮಿತಿ ತನಿಖೆಗಾಗಿ ಹೋಗಿ ಅಲ್ಲಿ ಸರಿಯಾದ ಸಹಕಾರ ಸಿಗದೇ ವಾಪಸಾಯಿತು ಎಂದು ಹೇಳಲಾಯಿತು. ರಷಿಯದಲ್ಲಿ ರಾಯಭಾರಿಯಾಗಿದ್ದ, ನಂತರ ಭಾರತದ ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ಅವರು ಸೆರೆವಾಸದಲ್ಲಿದ್ದ ನೇತಾಜಿಯವರನ್ನು ಭೇಟಿ ಮಾಡಿದ್ದರು, ಆದರೆ ನೇತಾಜಿಯವರ ಬಿಡುಗಡೆಯ ಬಗ್ಗೆ ಅಂದಿನ ಸರ್ಕಾರ ಕಾಳಜಿ ವಹಿಸಲಿಲ್ಲ ಎಂಬ ವದಂತಿಯೂ ಇದೆ. ಇದೆಲ್ಲ ನಂಬಿಕೆಗೆ ಅರ್ಹ ಎನಿಸುವುದಿಲ್ಲ ಏಕೆಂದರೆ ರಾಧಾಕೃಷ್ಣನ್ ಅವರು ಬೋಸರ ಭೇಟಿ ಮಾಡಿದ್ದಿದ್ದರೆ ಅದನ್ನು ಮುಚ್ಚಿಡುತ್ತಿರಲಿಲ್ಲ ಏಕೆಂದರೆ ರಾಧಾಕೃಷ್ಣನ್ ಒಬ್ಬ ತತ್ವಜ್ಞಾನಿ ಹಾಗೂ ಪ್ರಾಧ್ಯಾಪಕರಾಗಿದ್ದವರು.
ಬೋಸರ ಕಣ್ಮರೆಯ ವಿಷಯದಲ್ಲಿ ಹೆಚ್ಚು ನಂಬಿಕೆಗೆ ಅರ್ಹವಾಗಿರುವುದು ಅವರು ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಗಾಯಗೊಂಡು ಸತ್ತರು ಎಂಬುದು. ಈ ಅಪಘಾತ ನಡೆದಾಗ ಬೋಸರು ಪಯಣಿಸುತ್ತಿದ್ದ ವಿಮಾನದಲ್ಲಿ ಹಬೀಬುರ್ ರೆಹಮಾನ್ ಎಂಬ ನೇತಾಜಿಯ ಸಹವರ್ತಿಯೂ ಪ್ರಯಾಣಿಸುತ್ತಿದ್ದರು ಮತ್ತು ಅವರು ಆ ಅಪಘಾತದಲ್ಲಿ ಗಾಯಗೊಂಡು ಬದುಕಿ ಉಳಿದಿದ್ದರು ಮತ್ತು ಅವರು ೧೯೭೮ರವರೆಗೆ ಬದುಕಿದ್ದರು ಎಂದು ತಿಳಿದು ಬರುತ್ತದೆ. ಸ್ವಾತಂತ್ರ್ಯಾನಂತರ ಹಬೀಬುರ್ ರೆಹಮಾನ್ ಪಾಕಿಸ್ತಾನಿ ಪ್ರಜೆಯಾದರು. ಬ್ರಿಟಿಷರ ದಾರಿ ತಪ್ಪಿಸುವ ಸಲುವಾಗಿ ಬೋಸರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಕಥೆ ಕಟ್ಟಲಾಯಿತು ಎಂಬುದು ಕೆಲವರ ನಂಬಿಕೆ. ಇದು ನಿಜವೇ ಆಗಿದ್ದರೆ ವಿಮಾನ ಅಪಘಾತದಲ್ಲಿ ಬದುಕಿ ಉಳಿದ ನೇತಾಜಿ ಸಹವರ್ತಿ ಹಬೀಬುರ್ ರೆಹಮಾನ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವಾದರೂ ತಾವು ಬ್ರಿಟಿಷರ ದಾರಿ ತಪ್ಪಿಸುವ ಸಲುವಾಗಿ ವಿಮಾನ ಅಪಘಾತದ ಕಥೆ ಕಟ್ಟಿದ್ದು ಎಂದು ಹೇಳಬೇಕಾಗಿತ್ತು. ಆದರೆ ಅವರು ಆ ಬಗ್ಗೆ ಏನೂ ಹೇಳಿಲ್ಲ. ವಿಮಾನ ಅಪಘಾತ ನಡೆದ ದಿನಗಳು ಎರಡನೆಯ ಮಹಾಯುದ್ಧದ ದಿನಗಳಾದುದರಿಂದ ಮತ್ತು ಅವರು ಪಯಣಿಸುತ್ತಿದ್ದ ವಿಮಾನ ಒಂದು ಸಣ್ಣ ಮಿಲಿಟರಿ ವಿಮಾನ ಆದುದರಿಂದ ಈ ಕುರಿತ ದಾಖಲೆ ಇಟ್ಟಿರುವ ಸಾಧ್ಯತೆ ಇಲ್ಲ. (ನೇತಾಜಿಯವರು ಅಪಘಾತಕ್ಕೀಡಾದ ಸನ್ನಿವೇಶದ ಚಿತ್ರಣ ನೋಡಲು ಈ ಲಿಂಕ್ ಸಹಾಯಕ - http://malayaganapathy.blogspot.in/search?q=subhash)
ಕೆಲವರು ೧೯೮೫ರವರೆಗೆ ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ಬದುಕಿದ್ದ ಭಗವಾನ್ಜಿ ಎಂಬ ಸನ್ಯಾಸಿಯೊಬ್ಬರು ಸುಭಾಷರಾಗಿದ್ದರು ಎಂದು ನಂಬುತ್ತಾರೆ. ಆ ಸನ್ಯಾಸಿ ಕೆಲವು ಸಂದರ್ಭಗಳಲ್ಲಿ ತಾನೇ ಸುಭಾಷ್ ಚಂದ್ರ ಬೋಸ್ ಎಂದು ಹೇಳಿಕೊಂಡಿದ್ದರಂತೆ. ಸುಭಾಷರ ವ್ಯಕ್ತಿತ್ವವನ್ನು ನೋಡಿದ ಯಾವುದೇ ಪ್ರಜ್ನಾವಂತನೂ ಇದನ್ನು ನಂಬಲು ಸಾಧ್ಯವಿಲ್ಲ ಏಕೆಂದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿಕೊಂಡು ಸುಭಾಶರಂಥ ಸೇನಾನಿ ತೆಪ್ಪಗೆ ಕುಳಿತುಕೊಳ್ಳುತ್ತಿದ್ದರು ಎಂದರೆ ಅದು ನಂಬಲಸಾದ್ಯ. ಸುಭಾಷರು ಸ್ವಾತಂತ್ರ್ಯಾನಂತರ ಭಾರತದಲ್ಲಿ ಬದುಕಿದ್ದುದೇ ಆಗಿದ್ದರೆ ಅನ್ಯಾಯದ ವಿರುದ್ಧ ಸಿಡಿದೆದ್ದು ಉತ್ತಮ ದೇಶ ನಿರ್ಮಾಣಕ್ಕಾಗಿ ಭಾರೀ ಹೋರಾಟವನ್ನೇ ಕಟ್ಟುತ್ತಿದ್ದರು ಎಂಬುದರಲ್ಲಿ ಸಂಶಯವಿಲ್ಲ.