ನೇಸರನ ಕಿರಣಗಳಿಗಾಗಿ ಕಾಯುತ್ತಾ...

ನೇಸರನ ಕಿರಣಗಳಿಗಾಗಿ ಕಾಯುತ್ತಾ...

ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು|ಹೆಣ್ಣು) ಲೋಕಾಭಿರಾಮವಾಗಿ  ಮಾತನಾಡುತ್ತಿದ್ದೆ. ಅವರು ವಿಶ್ವದ ವಿವಿಧ ದೇಶಗಳ ಪ್ರವಾಸಿಗರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶವನ್ನು ನಿಮ್ಮ ಬಳಿ  ಹಂಚಿಕೊಳ್ಳುತ್ತಿದ್ದೇನೆ.( ಯೂರೋಪಿಯನ್ನರನ್ನು ಹೊರತುಪಡಿಸಿ)

ನಾಲ್ಕೈದು ಜನ ಹೇಳಿದ ಅಭಿಪ್ರಾಯ...

ಪ್ರವಾಸಿಗರಲ್ಲಿ ಜಪಾನ್, ಕೊರಿಯಾ, ವಿಯೆಟ್ನಾಂ ಮುಂತಾದ ಕೆಲವು ದೇಶದ ಜನರು ಅತ್ಯಂತ ಪ್ರಾಮಾಣಿಕರು ಮತ್ತು ಶಿಸ್ತಿನವರು. ಚೀನಾದವರು ಸಹ ಉತ್ತಮ. ಅವರನ್ನು ಹೆಚ್ಚಿನ ತಪಾಸಣೆ ಇಲ್ಲದೆ ನಂಬಬಹುದು. ಆದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಆಫ್ರಿಕಾದ ಕೆಲವು ದೇಶಗಳ ಬಹಳಷ್ಟು ಜನರು ನಂಬಿಕೆಗೆ ಅರ್ಹರಲ್ಲ. ಅವರನ್ನು ಕೂಲಂಕುಷವಾಗಿ ಪರಿಶೀಲಿಸುವ ಅಗತ್ಯತೆ ಇದೆ. ಸುಳ್ಳು ಸಹ ಹೇಳುತ್ತಾರೆ. ಸ್ವಲ್ಪ ಕದಿಯುವ ಬುದ್ದಿ ಇದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕಾದ  ಜನರ ನಾಗರಿಕ ಪ್ರಜ್ಞೆ ಅತ್ಯುತ್ತಮ. ಬ್ರೆಜಿಲ್, ಅರ್ಜೆಂಟೈನಾ, ವೆಸ್ಟ್ ಇಂಡೀಸ್ ಮುಂತಾದ ಜನರಿಗೆ ಸಾಧಾರಣ ಮಟ್ಟದ ತಪಾಸಣೆ ಸಾಕಾಗುತ್ತದೆ. ಇದನ್ನು ನಾನು ನೇರ ಅವರ ಮಾತುಗಳಷ್ಟೇ ಅಲ್ಲದೆ, ವಿದೇಶ ಯಾತ್ರೆ ನಿರ್ವಹಿಸುವ ಕೆಲವು ಭಾರತದ ಕಂಪನಿ ಮ್ಯಾನೇಜರುಗಳು, ವಿದೇಶಗಳಲ್ಲಿ ವಾಸವಿರುವ ನನ್ನ ಸ್ನೇಹಿತರು ಸೇರಿ ಬಹಳಷ್ಟು ಜನರ ಅಭಿಪ್ರಾಯ ಸಂಗ್ರಹಿಸಿ ಮತ್ತು ನನ್ನ ಅನುಭವದ ಭಾರತೀಯರ ಮಾನಸಿಕ ಸ್ಥಿತಿಯ ಗ್ರಹಿಕೆಯಲ್ಲಿ ಹೇಳುತ್ತಿದ್ದೇನೆ.

ಬೇರೆ ದೇಶಗಳ ವಿಷಯ ಪಕ್ಕಕ್ಕೆ ಇಡೋಣ. ಭಾರತದ ಮಟ್ಟಿಗೆ, ಆಧುನಿಕ ಭಾರತದ ಜನರ ಮನಸ್ಥಿತಿ ನಾನು ಕಂಡಂತೆ....

ಇಲ್ಲಿನ ಜನ ಸ್ವಲ್ಪ ಮಟ್ಟಿಗೆ ಸೋಮಾರಿಗಳು, ಅನವಶ್ಯಕ ಮತ್ತು ಅಜ್ಞಾನದ ಅತಿ ಭಾವುಕ ಜೀವಿಗಳು, ತುಂಬಾ ಆದರ್ಶಗಳ ಬಗೆಗೆ ಮಾತನಾಡುವವರು ಆದರೆ  ವಾಸ್ತವದಲ್ಲಿ ಅಗತ್ಯಕ್ಕೆ ತಕ್ಕಂತೆ ಬಣ್ಣ ಬದಲಿಸುವವರು, ಹೆಚ್ಚು ಕಡಿಮೆ ಕೃತಕ ಮುಖವಾಡ ಧರಿಸಿರುವವರು, ಆಡುವ ಮಾತಿಗೂ ನಡವಳಿಕೆಗೂ ಬಹಳ ಅಂತರ ಉಳ್ಳವರು, ತಮಗೆ ತಮ್ಮ ಸಂಬಂಧಿಗಳಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯದ ಪಕ್ಷಪಾತ ಮನೋಭಾವದವರು, ಮಾತಿನಲ್ಲಿ ಇರುವ ಶೂರತ್ವ ಕೃತಿಯಲ್ಲಿ ಇರುವುದಿಲ್ಲ, ಅಸೂಯಾಪರರು, ಹಣ ಆಸ್ತಿ ಅಧಿಕಾರ ಮತ್ತು ಪ್ರಚಾರಕ್ಕಾಗಿ ಬಹಳಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲವರು, ಅತಿಬೇಗ ಉದ್ವೇಗಕ್ಕೆ ಒಳಗಾಗುವವರು, ಅನೇಕರಿಗೆ ಮಾತಿನ ಮೇಲೆ ಹಿಡಿತವಿರುವುದಿಲ್ಲ, ಆತ್ಮವಂಚಕ ಪ್ರವೃತ್ತಿ ಜಾಸ್ತಿ, ಉಡಾಫೆ ಅಭಿಪ್ರಾಯವೇ ಹೆಚ್ಚು,

ಇತರರ ಏಳಿಗೆಯನ್ನು ಅಷ್ಟು ಸುಲಭವಾಗಿ ಸಹಿಸುವುದಿಲ್ಲ, ಗೆದ್ದರೆ ಹೊಗಳುವ ಬಿದ್ದರೆ ತೆಗಳುವ ಮನೋಭಾವ, ವಾಸ್ತವ ಶ್ರಮದ ಪರಿಶೀಲನೆ ಮಾಡುವುದಿಲ್ಲ. ಯೋಚನಾ ಶಕ್ತಿಯಂತು ಪಾತಾಳಕ್ಕೆ ಕುಸಿದಿದೆ. ಪ್ರಾಮಾಣಿಕತೆಗಿಂತ ಭಯದಿಂದ ಮಾತ್ರ ಸ್ವಲ್ಪ ಒಳ್ಳೆಯತನ ಪ್ರದರ್ಶಿಸುತ್ತಾರೆ.

ಹಾಗಾದರೆ ಭಾರತೀಯರಲ್ಲಿ ಒಳ್ಳೆಯತನ ಇಲ್ಲವೇ ?

ಖಂಡಿತ ಇದೆ. ಮೂಲಭೂತವಾಗಿ ನಮ್ಮ ಮನಸ್ಸುಗಳು ಒಳ್ಳೆಯತನಕ್ಕೆ ತುಡಿಯುತ್ತಿರುತ್ತದೆ. ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ತಂದೆ ತಾಯಿಗಳನ್ನು ದೇವರಂತೆ ನೋಡಿಕೊಳ್ಳಬೇಕು, ಅಜ್ಜ, ಅಜ್ಜಿಯರಿಗೆ ನೋವಾಗದಂತೆ ನಡೆದುಕೊಳ್ಳಬೇಕು, ಹೆಂಡತಿಯನ್ನು ಮಹಾರಾಣಿಯಂತೆ ಸಾಕಬೇಕು, ಗಂಡನೇ ಸರ್ವಸ್ವ, ಬೇರೆಯವರ ಆಸ್ತಿಗಳಿಗೆ ಆಸೆ ಪಡಬಾರದು, ಪರಸ್ತ್ರೀಯರನ್ನು ಮೋಹಿಸಬಾರದು, ಲಂಚ ಮುಟ್ಟಬಾರದು, ಇತರರನ್ನು ಹಿಯಾಳಿಸಬಾರದು, ಗುರು ಹಿರಿಯರನ್ನು ಗೌರವಿಸಬೇಕು, ಸಂಪ್ರದಾಯಗಳನ್ನು ಪಾಲಿಸಬೇಕು......ಹೀಗೆ ಮುಗಿಯದ ಪಟ್ಟಿಯೂ ಇದೆ.

ಈ ಕ್ಷಣದಲ್ಲಿ ಮೇಲೆ ಹೇಳಿದ ಒಳ್ಳೆಯ ಮತ್ತು ಕೆಟ್ಟ ಗುಣಾವಗುಣಗಳಲ್ಲಿ, ಆ ಯೂರೋಪಿನ ಮ್ಯಾನೇಜರುಗಳು ಹೇಳಿದ ಅಭಿಪ್ರಾಯದಲ್ಲಿ ಯಾವುದು ಹೆಚ್ಚು ವಾಸ್ತವಕ್ಕೆ ಹತ್ತಿರ ಎಂಬುದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇನೆ....

ವೈಯಕ್ತಿಕವಾಗಿ ನಿಮ್ಮ ಬದುಕಿನಲ್ಲಿ ನಡೆದ ಅನುಭವಗಳನ್ನು ಮಾತ್ರ ಆಧರಿಸಿ ಇದನ್ನು ನಿರ್ಧರಿಸಬೇಡಿ. ಒಟ್ಟು ಸಮಾಜವನ್ನು ಸಮಷ್ಟಿ ಪ್ರಜ್ಞೆಯಿಂದ ಅವಲೋಕಿಸಿ ಅಭಿಪ್ರಾಯ ರೂಪಿಸಿಕೊಳ್ಳಿ. ಸಾರ್ವತ್ರಿಕ ಸತ್ಯದ ಹುಡುಕಾಟ ನಿಮ್ಮ ಧ್ಯೇಯವಾಗಿರಲಿ..

ಮೇಲ್ನೋಟದ ಪರಿಸ್ಥಿತಿಗಿಂತ ಒಳನೋಟ ಬಹಳ ಮುಖ್ಯ. ಯಾವುದೋ ಪತ್ರಿಕೆ, ಟಿವಿಯ ಒಂದು ಲೇಖನ, ಕಾರ್ಯಕ್ರಮ, ಜನಪ್ರಿಯ ವ್ಯಕ್ತಿಯ ಒಂದು ಅಭಿಪ್ರಾಯ ಇಡೀ ಭಾರತೀಯ ಸಮಾಜದ ಮಾನಸಿಕ ಸ್ಥಿತಿ ತಿಳಿಸುವುದಿಲ್ಲ. ನಮ್ಮ ಸುತ್ತಮುತ್ತಲಿನ ಜನರ ಜೀವನಶೈಲಿಯನ್ನು ನಾವು ಗಮನಿಸಿದಾಗ ಮೂಡುವ ಅಭಿಪ್ರಾಯವೇ ಹೆಚ್ಚು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಬದಲಾವಣೆ ಅಗತ್ಯವಿದೆ ಎಂದು ಅನಿಸುತ್ತಿದೆ...........

ಮುಂದಿನ ಪೀಳಿಗೆಯನ್ನು ಹೆಚ್ಚು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಪ್ರಯತ್ನಿಸೋಣ.ಮಂಜಿನ ಹನಿಗಳ ನಡುವೆ ತೂರಿ ಬರುವ ನೇಸರನ ಕಿರಣಗಳಿಗಾಗಿ ಕಾಯುತ್ತಾ......

-ವಿವೇಕಾನಂದ. ಹೆಚ್.ಕೆ., ಬೆಂಗಳೂರು