ನೈಜ ಸ್ತ್ರೀವಾದಿ ಮತ್ತು ಶಾಂತಿಯ ಪ್ರತಿಪಾದಕರು: ಪ್ರವಾದಿ ಮೊಹಮ್ಮದ್ (ಸ)
"He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it much-needed Peace & Happiness"- ಬರ್ನಾಡ್ ಶಾ., The Genuine Islam, Singapore, Vol. 1, No 8, 1936
ಅಜ್ಞಾನದ ಅಂಧಕಾರದಲ್ಲಿ ಮಾನವಕುಲವು ನರಳುತ್ತಿದ್ದಾಗ, ಜ್ಞಾನದ ದೀವಿಗೆಯಾಗಿ ಮನುಕುಲಕ್ಕೆ ಮಾದರಿಯಾದ ಪವಿತ್ರ ಪ್ರವಾದಿ (ಸ) ಅವರ ಜೀವನವೇ ಆದರ್ಶವಾಗಿದೆ; ಸಮಗ್ರ ಮಾನವಕುಲಕ್ಕೆ ಕರುಣೆಯಾಗಿ ಜಗತ್ತಿಗೆ ಆಗಮಿಸಿದರು. ಹೆಣ್ಣು ಮಕ್ಕಳನ್ನು ಜೀವಂತವಾಗಿ ದಫನ ಮಾಡುವುದು, ಸಣ್ಣಪುಟ್ಟ ವಿಚಾರಕ್ಕೆ ಸಂಬಂಧಿಸಿ ರಕ್ತ ಹರಿಸುವುದು ಇತ್ಯಾದಿಗಳಿಗೆ ಕುಖ್ಯಾತಿ ಪಡೆದಿದ್ದ ಪ್ರದೇಶದಲ್ಲಿ ಹುಟ್ಟಿದ ಮುಹಮ್ಮದ್ (ಸ) ಅವರು, ಅದೇ ನೆಲದ ಮೇಲೆ ಶಾಂತಿ-ಸೌಹಾರ್ದತೆ ಮತ್ತು ಹೆಣ್ಣು ಗೌರವವನ್ನು ಸಫಲವಾಗಿ ಸ್ಥಾಪಿಸಿದರು.
ಪ್ರವಾದಿ(ಸ) ಅವರ ಬದುಕಿನ ಕೆಲವೇ ಕೆಲವು ಘಟನೆಗಳು ಅವರನ್ನು ಶಾಂತಿಯ ಪ್ರತಿಪಾದಕರು ಎಂದು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಉದಾಹರಣೆಗೆ, ಒಮ್ಮೆ ಪ್ರವಾದಿ(ಸ) ಅವರು ತಮ್ಮ ಅನುಯಾಯಿಗಳೊಂದಿಗೆ ರಾತ್ರಿಯ ನಮಾಜ್ ಅನ್ನು ಮಾಡಲು ಮಸೀದಿಯತ್ತ ಹೋಗುತ್ತಿದ್ದರು. ದಾರಿಯಲ್ಲಿ ನಾಯಿಯೊಂದು ಮಲಗಿದ್ದ ಕಾರಣ, ಪ್ರವಾದಿ ಅವರು ದಾರಿಯನ್ನು ಬದಲಾಯಿಸಿ, ಬೇರೆ ದಾರಿಯಿಂದ ಮಸೀದಿಗೆ ಹೋದರು. ಕೇಳಿದಾಗ, ತಮ್ಮ ನಡಿಗೆ ನಾಯಿಯ ನಿದ್ರೆಯನ್ನು ಕೆಡಿಸಬಹುದು ಎಂದರು!!
ಹೆಣ್ಣು ಮಕ್ಕಳನ್ನು ಜೀವಂತ ದಫನ ಮಾಡುವವರನ್ನು ಹೆಣ್ಣನ್ನು ಗೌರವಿಸಲು ಕಳಿಸಿಕೊಟ್ಟರು; ತಾಯಿಯ ಪಾದದಡಿ ನಿಮ್ಮ ಸ್ವರ್ಗವಿದೆ, ಮಗಳು ನಿಮ್ಮನ್ನು ನರಕದಿಂದ ಸಂರಕ್ಷಿಸುವಳು, ಮತ್ತು ಮಡದಿ ನಿಮ್ಮ ಅರ್ಧ ಧರ್ಮವನು ಪೂರ್ತಿಗೊಳಿಸುವಳು ಎಂದು ಬೋಧಿಸಿದರು. ಅಲ್ಲದೇ, ವಿಧವೆಯರನ್ನು ಮತ್ತು ವಿಚ್ಛೇದಿತರನ್ನು ಮದುವೆಯಾಗಿಸಿ ಅವರಿಗೆ ಉತ್ತಮ ಬದುಕನ್ನು ನೀಡಲು ಉಪದೇಶಿಸಿದರು. ಆಯಿಶಾ(ರ) ಹೊರತು ಪ್ರವಾದಿ(ಸ) ಅವರ ಎಲ್ಲ ಮಡದಿಯರು ವಿಧವೆಯರಾಗಿದ್ದರು. ಪ್ರವಾದಿ (ಸ) ಅವರು ಋತುವಿನ ಮೊದಲ ಹಣ್ಣು-ಹಂಪಲನ್ನು ಮಕ್ಕಳಲ್ಲಿ ಹಂಚುತ್ತಿದ್ದರು; ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ!
ಶಾಂತಿಯ ಧರ್ಮದ ಸ್ಥಾಪನೆ: ಪವಿತ್ರ ಪ್ರವಾದಿ(ಸ)ಯವರ ಸಾಧನೆಯೆಂದರೆ, ಅವರು ಸ್ಥಾಪಿಸಿದ ಧರ್ಮವು "ಶಾಂತಿ" ಎಂಬ ಹೆಸರಿನಿಂದಲೇ ಬಂದಿದೆ. "ಇಸ್ಲಾಂ" ಎಂಬ ಪದವು 'ಸಲಾಂ' ಎಂಬ ಅರೇಬಿಕ್ ಪದ ಅಥವಾ ಅದೇ ಹೆಸರಿನಿಂದ ಕರೆಯಲ್ಪಡುವ ಧಾರ್ಮಿಕ ವ್ಯವಸ್ಥೆಯ ಮೂಲತತ್ವವನ್ನು ಸೂಚಿಸುತ್ತದೆ. ಪವಿತ್ರ ಪ್ರವಾದಿ(ಸ)ರವರ ಬೋಧನೆಗಳು ಎಲ್ಲಾ ಹಂತಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯನ್ನು ಖಾತರಿಪಡಿಸುತ್ತದೆ ಮತ್ತು ಸ್ಥಾಪಿಸುತ್ತದೆ: ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಷ್ಟ್ರೀಯ, ಮತ್ತು ಅಂತರರಾಷ್ಟ್ರೀಯ ನಿಲುವುಗಳಲ್ಲಿ.
ಒಬ್ಬ ಮುಸಲ್ಮಾನನಾಗುವವನು ಸುರಕ್ಷಿತ ಧಾಮವನ್ನು ಪ್ರವೇಶಿಸುವುದು ಮಾತ್ರವಲ್ಲದೆ ಇತರರಿಗೆ ಅದನ್ನು ಖಾತರಿಪಡಿಸುತ್ತಾನೆ. ಪವಿತ್ರ ಪ್ರವಾದಿ(ಸ) ಅವರು ಮುಸಲ್ಮಾನನಾದವನು ತನ್ನ ನಡೆ ಅಥವಾ ನುಡಿಯಿಂದ ಇತರರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂದು ವ್ಯಾಖ್ಯಾನಿಸಿದ್ದರೆ. ‘ಶಾಂತಿ’ ಎಂಬುದು ಮುಸ್ಲಿಮರ ಸ್ವಭಾವ ಮತ್ತು ‘ಶಾಂತಿ’ ಎಂಬುದು ಸ್ವರ್ಗವಾಸಿಗಳ ನಡೆ ಆಗಿರುತ್ತದೆ ಎಂದು ಉಪದೇಶಿಸಿದರು.
ಅಂತರ್-ಧರ್ಮೀಯ ಶಾಂತಿ: ಪ್ರವಾದಿ(ಸ) ಅವರ ಆಗಮನಕ್ಕಿಂತ ಹಿಂದೆ ಜಗತ್ತಿನಲ್ಲಿ ಧಾರ್ಮ-ಧರ್ಮಗಳ ನಡುವೆ ರಕ್ತಸಿಕ್ತ ಯುದ್ಧಗಳು ನಡೆಯುತಿತ್ತು; ಉದಾಹರಣೆಗೆ: ಕ್ರೈಸ್ತ ಮತ್ತು ಯಹೂದಿ ಧರ್ಮಗಳ ನಡುವೆ ಶತಮಾನಗಳಿಂದ ಯುದ್ಧಗಳು ನಡೆಯುತಿತ್ತು. ಇತರ ಧರ್ಮಿಯರು, ತಮ್ಮ ತಮ್ಮ ಬುಡಕಟ್ಟುಗಳಿಗೆ ದೇವರನ್ನು ಸ್ಥಾಪಿಸಿ, ದೇವರ ನಾಮದಡಿ ಯುದ್ಧವನ್ನು ಮಾಡುತ್ತಿದ್ದರು. ಪ್ರವಾದಿ(ಸ) ಅವರು ಎಲ್ಲರನು ಧರ್ಮದ ಹೆಸರಿನ ಬದಲಿಗೆ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಒಟ್ಟುಗೂಡಿಸಲು ಯತ್ನಿಸಿದರು. ಇದರಿಂದ ಅವರನ್ನು ನಖಶಿಖಾಂತವಾಗಿ ದ್ವೇಷಿಸುವವರೇ ಅವರ ಬೆಂಬಲಿಗರಾದರು. ದ್ವಿತೀಯ ಖಲೀಫರಾದ ಉಮರ್(ರ) ಇದಕ್ಕೆ ಅತ್ಯತ್ತಮ ಉದಾಹರಣೆಯಾಗಿದ್ದಾರೆ. ಪ್ರವಾದಿ(ಸ) ಅವರನ್ನು ಹತ್ಯೆಗೈಯ್ಯಲು ಬಂದಿದ್ದ ಉಮರ್ (ರ) ಅವರು, ಪ್ರವಾದಿ (ಸ) ಅವರ ಮೃದು ಧೋರಣೆಗೆ ಮನಸೋತು, ಅವರ ಅನುಯಾಯಿಯಾದರು.
ಯಹೂದಿಯೊಬ್ಬರ ಶವಮೆರವಣಿಗೆ ಸಾಗುತ್ತಿದ್ದಾಗ ಪ್ರವಾದಿ(ಸ) ಅವರು ಎದ್ದು ನಿಂತು ಗೌರವ ಸಲ್ಲಿಸಿದ್ದರು. ಪ್ರವಾದಿ (ಸ) ಅವರನ್ನು "ಸಾದಿಕ್" ಅಂದರೆ "ಸತ್ಯವಾದಿ" ಮತ್ತು "ಅಮೀನ್" ಅಂದರೆ "ಪ್ರಾಮಾಣಿಕರು" ಎಂದು ಉಪನಾಮದಿಂದ ಕರೆದಿದ್ದು ಮುಸಲ್ಮಾನರಲ್ಲ; ಬದಲಿಗೆ, ಪ್ರವಾದಿ (ಸ) ಅವರ ಶತ್ರುಗಳೇ!
ಇತರ ಧರ್ಮಗಳ ಸ್ಥಾಪಕರನ್ನು ದೇವರ ಸಂದೇಶವಾಹಕರು ಎಂದು ಸ್ವೀಕರಿಸುವ ಏಕೈಕ ಧರ್ಮ ಇಸ್ಲಾಂ ಧರ್ಮವಾಗಿದೆ ಮತ್ತು ಅವರೆಲ್ಲರನ್ನೂ ಗೌರವಿಸಲು, ಪ್ರವಾದಿ (ಸ) ಅವರು ತಮ್ಮ ಅನುಯಾಯಿಗಳಿಗೆ ಕಿವಿಮಾತು ನೀಡಿದರು. ವಿವಿಧ ಧರ್ಮಗಳ ಅನುಯಾಯಿಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಲು ಇಸ್ಲಾಂ ತೆಗೆದುಕೊಂಡಿರುವ ಅತ್ಯಂತ ಪ್ರಾಯೋಗಿಕ ಹೆಜ್ಜೆ ಇದಾಗಿದೆ.
ಸಾಮಾಜಿಕ ಶಾಂತಿ: ಸಾಮಾಜಿಕ ಶಾಂತಿ ಸ್ಥಾಪನೆಯಲ್ಲೂ, ಶಾಶ್ವತ ಸಾಮರಸ್ಯದ ಹಾದಿಯನ್ನು ಬೆಳಗಿಸಲು ಪವಿತ್ರ ಪ್ರವಾದಿಯವರ ಉದಾಹರಣೆಯು ದಾರಿದೀಪವಾಗಿ ನಿಂತಿದೆ. ಅವರ ಬೋಧನೆಗಳು, ಅವರ ಸಲಹೆಗಳನ್ನು ಪಾಲಿಸುವ ಎಲ್ಲರಿಗೂ - ನೆರೆಹೊರೆಯವರು ಮತ್ತು ದಾರಿಹೋಕರು, ಶ್ರೀಮಂತರು ಮತ್ತು ಬಡವರು, ಯುವಕರು ಮತ್ತು ಹಿರಿಯರು, ಪುರುಷರು ಮತ್ತು ಮಹಿಳೆಯರು ಒಳಗೊಂಡ ಎಲ್ಲರಿಗೂ ಶಾಂತಿಯನ್ನು ಒದಗಿಸುತ್ತದೆ.
ಪವಿತ್ರ ಪ್ರವಾದಿ(ಸ)ಅವರ ಆಗಮನದ ಮೊದಲು, ಅರೇಬಿಯಾದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದರು; ಮತ್ತು ಉತ್ತರಾಧಿಕಾರವಾಗಿ ವಿತರಿಸಲ್ಪಟ್ಟರು. ಹೆಣ್ಣಿನ ಸಾಮಾಜಿಕ ಸ್ಥಾನಮಾನ ಮತ್ತು ಸಮಾಜದಲ್ಲಿ ಪತ್ನಿಯರು ಮತ್ತು ತಾಯಂದಿರಾಗಿ ಅವರ ಸರಿಯಾದ ಸ್ಥಾನವನ್ನು ಗುರುತಿಸುವ ಮೂಲಕ; ಆನುವಂಶಿಕವಾಗಿ, ವಿಚ್ಛೇದನದಲ್ಲಿ, ಮಕ್ಕಳ ಪಾಲನೆಯಲ್ಲಿ, ಕುಟುಂಬದ ವ್ಯವಹಾರಗಳ ನಿರ್ವಹಣೆಯಲ್ಲಿ ಮತ್ತು ಪೂಜೆಯಲ್ಲಿ ಅವರ ಹಕ್ಕುಗಳನ್ನು ಭದ್ರಪಡಿಸುವ ಮೂಲಕ; ಪವಿತ್ರ ಪ್ರವಾದಿ ಕುಟುಂಬದಲ್ಲಿ ದೃಢವಾದ ಆಧಾರದ ಮೇಲೆ ಶಾಂತಿಯನ್ನು ಸ್ಥಾಪಿಸಿದರು.
ಅರೇಬಿಯಾ ಮತ್ತು ಜಗತ್ತಿನ ಇತರದೆಡೆಗೆ ವಿಧವೆಯರನ್ನು ಬಹಳ ಕೀಳಾಗಿ ಕಾಣುತ್ತಿದ್ದರು; ಅವರಿಗೆ ಅವರ ಹಕ್ಕುಗಳಿಂದ ವಂಚಿಸಲಾಗುತಿತ್ತು, ಕೆಲವರು ವಿಧವೆಯರನ್ನು ಅವರ ಪತಿಯರ ಚಿತೆಯೊಂದಿಗೆ ಜೀವಂತ ಸುಡುತಿದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಪ್ರವಾದಿ (ಸ) ಅವರು ವಿಧವೆಯರನ್ನು ತಾವು ಮಾಡುವೆ ಆಗಿ, ವಿಧವೆಯರಿಗೆ ಮರುಮದುವೆ ಮಾಡಲು ಪ್ರರಣೆ ನೀಡಿದರು.
ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ನೀಡುತ್ತಾ, ಪ್ರವಾದಿ (ಸ) ಅವರು ವರ್ಣ ಭೇದನೀತಿಯನ್ನು ಜರೆದರು. ಕಪ್ಪು-ಬಿಳಿಯೆಂದು ನೋಡದೆ ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ ನಮಾಜ್ ಮಾಡಲು ಆದೇಶಿಸಿದರು. ಇಸ್ಲಾಮಿನ ಮೊಟ್ಟಮೊದಲ ಅಜಾನ್ (ಪ್ರಾರ್ಥನೆಗೆ ಕೆರೆಯುವ ಪವಿತ್ರ ಸಾಲುಗಳು) ಕರೆಯಲು ಪ್ರವಾದಿ (ಸ) ಅವರು ಬಿಲಾಲ್ (ರ) ಅವರನ್ನು ಆದೇಶಿಸಿದರು; ಬಿಲಾಲ್ (ರ) ಅವರು ಆಫ್ರಿಕಾದ ಕರಿ ಸೇವಕರಾಗಿದ್ದರು. ಪ್ರವಾದಿ(ಸ) ಅವರು ಅರಬ್ ಆದರೂ, ಇತರ ಅರಬ್ ಅನುಯಾಯಿಗಳಿಗೆ ಅಥವಾ ಬಿಳಿ ಅನುಯಾಯಿಗಳಿಗೆ ಅಜಾನ್ ಕರೆಯುವ ಅವಕಾಶ ನೀಡದೆ, ಒಬ್ಬ ಕರಿ ಗುಲಾಮನನ್ನು ಈ ಸ್ವರ್ಣ ಅವಕಾಶ ನೀಡಿ ಜಾತಿ-ವರ್ಣ ಭೇದ ನೀತಿಯನ್ನು ಸೋಲಿಸಿದರು.
ಪ್ರವಾದಿಯವರು ತಮ್ಮ ಮರಣದ ಸ್ವಲ್ಪ ಸಮಯದ ಮೊದಲು, ವಿದಾಯ ಹಜ್ ನಿರ್ವಹಿಸಿದ ಬಳಿಕ ಮಾಡಿದ ಮಹತ್ವದ ಭಾಷಣವು ಇಸ್ಲಾಂನ ಸಂಪೂರ್ಣ ಚೈತನ್ಯ ಮತ್ತು ಬೋಧನೆಯ ಸಾರಾಂಶವಾಗಿದೆ. ಈ ಭಾಷಣದ ಸಂದರ್ಭದಲ್ಲಿ, ಅವರು ಹೀಗೆ ಹೇಳಿದರು:
“ಓ ಪುರುಷರೇ, ನಾನು ನಿಮಗೆ ಹೇಳುವುದನ್ನು ನೀವು ಕೇಳಬೇಕು ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲ್ಲಾ ಮುಸ್ಲಿಮರು ಪರಸ್ಪರ ಸಹೋದರರಂತೆ. ನೀವೆಲ್ಲರೂ ಸಮಾನರು. ಎಲ್ಲಾ ಪುರುಷರು, ಅವರು ಯಾವುದೇ ರಾಷ್ಟ್ರ ಅಥವಾ ಬುಡಕಟ್ಟಿಗೆ ಸೇರಿದವರಾಗಿರಬಹುದು ಮತ್ತು ಅವರು ಜೀವನದಲ್ಲಿ ಯಾವುದೇ ಸ್ಥಾನವನ್ನು ಹೊಂದಿದ್ದರೂ ಸಮಾನರು. ಎರಡು ಕೈಗಳ ಬೆರಳುಗಳು ಸಮಾನವಾಗಿರುವಂತೆಯೇ ಮನುಷ್ಯರು ಪರಸ್ಪರ ಸಮಾನರು. ಇನ್ನೊಬ್ಬರ ಮೇಲೆ ಹಕ್ಕು ಸಾಧಿಸಲು ಯಾರಿಗೂ ಯಾವುದೇ ಹಕ್ಕಿಲ್ಲ, ಯಾವುದೇ ಶ್ರೇಷ್ಠತೆ ಇಲ್ಲ. ನೀವು ಸಹೋದರರಂತೆ ಇದ್ದೀರಿ." ಎಂದು ಉಪದೇಶಿಸಿದರು.
ಬಾಯಾರಿಕೆಯಿಂದ ನರಳುತ್ತಿದ್ದ ನಾಯಿಯೊಂದಕ್ಕೆ ನೀರು ನೀಡಿದ ಕಾರಣ ಒಬ್ಬ ಹೆಣ್ಣನ್ನು ಸ್ವರ್ಗವಾಸಿ ಎಂದು ಹೇಳುತ್ತಾ, ಪ್ರವಾದಿ(ಸ) ಅವರು ಹಸಿದವರನ್ನು ಆಹಾರ ನೀಡಲು ಪ್ರೇರಿಸಿದರು. ರಸ್ತೆಯ ಮೇಲಿನಿಂದ ಒಂದು ಕಲ್ಲನ್ನು ಬದಿಗೆ ಸರಿಸುವುದಕ್ಕೂ ಪುಣ್ಯವಿದೆ ಎಂದು ಸಾರಿದರು. ಮುಗುಳ್ನಗಲು ಪುಣ್ಯವಿದೆ ಎಂದು ಎತ್ತಿ ಹಿಡಿದರು. ಅನಾಥರ ಮುಂದೆ ಸ್ವಂತ ಮಕ್ಕಳನ್ನೂ ಮುದ್ದಿಸಬೇಡಿ ಎನ್ನುತ್ತಾ ಸಾಮಾಜಿಕ ಶಾಂತಿಯನ್ನು ಸಫಲವಾಗಿ ಸ್ಥಾಪಿಸಲು ಪ್ರವಾದಿ (ಸ) ಅವರು ನಮಗೆ ದಾರಿದೀಪರಾದರು.
ಕ್ರೈಸ್ತ ಲೇಖಕರು, ಕರೆನ್ ಆರ್ಮ್ಸ್ಟ್ರಾಂಗ್, ಪಶ್ಚಿಮವು ಇಸ್ಲಾಂ ಅನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುವಾಗ, ಬರೆಯುತ್ತಾರೆ:
“Perhaps one place to start is with the figure of Muhammad: a complex, passionate man who sometimes did things that are difficult for us to accept, but who had the genius of a profound order and founded a religion and a cultural tradition that was not based on the sword – despite the Western myth – and whose name ‘Islam’ signifies ‘peace and reconciliation'. "_ (Muhammad, A Western Attempt To Understand Islam, pp. 265/266)
-ಶಿಕ್ರಾನ್ ಶರ್ಫುದ್ದಿನ್ ಎಂ., ಮಂಗಳೂರು