ನೈತಿಕ ಶಿಕ್ಷಣ ಬೇಕಾಗಿರುವುದು ಯಾರಿಗಾಗಿ...?
"ಶಿಕ್ಷಕರು ಪರೀಕ್ಷೆಗೆ ಒಳಗಾಗಲಿ "- ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ, "ನೀತಿ ಬೋಧಿಸುವವರು ಮೊದಲು ಆಚರಿಸಲಿ"- ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸುತ್ತೂರು ಮಠ, "ಮಾಂಸ ನೇತು ಹಾಕುವುದು ನಿಲ್ಲಲಿ" -ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ,ಪೇಜಾವರ ಮಠ. "ಧರ್ಮಾತೀತವಾಗಿ ಮೌಲ್ಯಗಳ ಬೋದನೆಯಾಗಲಿ"- ರೆವರೆಂಡ್ ಪೀಟರ್ ಮಚಾಡೋ,ಆರ್ಚ್ ಬಿಷಪ್. "ಪುನರ್ ಜನ್ಮದ ಬಗ್ಗೆಯೂ ತಿಳಿಸಿ" - ಬಸವರಾಜ ರಾಜ ಋಷಿ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ. "ಶಿಕ್ಷಣ ಒಗ್ಗೂಡಿಸುವ ಕಾರ್ಯ ಮಾಡಲಿ" - ನಿರ್ಮಾಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ. "ನೈತಿಕ ಶಿಕ್ಷಣ - ಪ್ರೀತಿ ಸೌಹಾರ್ದ ಮೂಡಿಸುವ ಶಿಕ್ಷಣ ಇಂದಿನ ತುರ್ತು ಅಗತ್ಯ"-. ಅಬ್ದುಲ್ ರಹೀಂ, ಮುಸ್ಲಿಂ ಧಾರ್ಮಿಕ ಮುಖಂಡರು. "ಹೀರೋಹಿಸಂ ಹಿಂಸೆಯ ಪ್ರತಿರೂಪವಾಗಬಾರದು"- ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ.,ಆರ್ಟ್ ಆಫ್ ಲಿವಿಂಗ್. "ಶಿಕ್ಷಕರು ಮೊದಲು ಬದಲಾಗಲಿ". -ಮುಕ್ತಿದಾನಂದಜೀ ಮಹಾರಾಜ್, ರಾಮ ಕೃಷ್ಣಾಶ್ರಮ.
"ಶಾಲೆಗಳಲ್ಲಿ ಮುಕ್ತವಾಗಿ ಭಗವದ್ಗೀತೆ ಬೋಧಿಸಬೇಕು. ಸಾತ್ವಿಕ ಆಹಾರವಾದ ಹಾಲು ತುಪ್ಪ ಹೆಚ್ಚಾಗಿ ಬಳಸಬೇಕು"- ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠ. "ನೀತಿ ಬೋದಿಸುವವರು ಮೊದಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು"- ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ. "ಶಿಕ್ಷಕರನ್ನು ಸರಿಪಡಿಸಿದರೆ ಜೊತೆಗೆ ರಾಜಕೀಯ ಧುರೀಣರಿಗೂ ನೈತಿಕ ಶಿಕ್ಷಣ ಬೋಧಿಸಿದರೆ ಎಲ್ಲವೂ ಸರಿಯಾಗುತ್ತದೆ"- ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠ.
ಮೌಲ್ಯ ಶಿಕ್ಷಣ ಕುರಿತು ಸರ್ಕಾರಕ್ಕೆ ಧಾರ್ಮಿಕ ಗುರುಗಳು ನೀಡಿರುವ ಸಲಹೆಗಳು. ಇದರ ಆಧಾರದ ಮೇಲೆ ಕೆಲವು ಪರಿವರ್ತನೆಯ ಪ್ರಶ್ನೆಗಳು ಹುಟ್ಟುತ್ತವೆ. ಭಾರತವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಭ್ರಷ್ಟಾಚಾರ. ಅದನ್ನು ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ. ಭಾರತದ ಸಾಮಾಜಿಕ ವ್ಯವಸ್ಥೆಯ ಶಾಪ ಜಾತಿ ಪದ್ದತಿ. ಅದನ್ನು ಸೃಷ್ಟಿಸಿದ್ದು ಮತ್ತು ಅನುಸರಿಸುತ್ತಿರುವವರು ವಿದ್ಯಾರ್ಥಿಗಳಲ್ಲ. ವಿಶ್ವದಲ್ಲೇ ಅತಿಹೆಚ್ಚು ಮೂಢನಂಬಿಕೆಯ ಕಾರಣದಿಂದ ಶೋಷಣೆ ನಡೆಯುತ್ತಿರುವುದು ಭಾರತದಲ್ಲಿ. ಅದನ್ನು ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ. ಕೊಲೆ, ಸುಲಿಗೆ, ಅನ್ಯಾಯ, ಅತ್ಯಾಚಾರ ಮಾಡುತ್ತಿರುವವರು ಬಹುಪಾಲು ವಿದ್ಯಾರ್ಥಿಗಳದ್ದಲ್ಲ. ಜಾತಿ, ಧರ್ಮದ ವಿಷ ಬೀಜ ಬಿತ್ತಿ ಕೋಮು ದ್ವೇಷವೆಂಬ ಜ್ವಾಲಾಮುಖಿ ಸ್ಫೋಟಗಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿರುವುದು ವಿದ್ಯಾರ್ಥಿಗಳಲ್ಲ. ಚುನಾವಣೆಯಲ್ಲಿ ಮತದಾರರಿಗೆ ಹಣ ಹೆಂಡ ಪಂಚೆ ಸೀರೆ ಹಂಚಿ ಆಯ್ಕೆಯಾಗುತ್ತಿರುವವರು ವಿದ್ಯಾರ್ಥಿಗಳಲ್ಲ. ಕಾವಿ, ಪೈಜಾಮ, ಶ್ವೇತ ನಿಲುವಂಗಿ ಧರಿಸಿ ರಾಜಕೀಯ ಮಾಡುತ್ತಿರುವವರು - ಲೈಂಗಿಕ ದೌರ್ಜನ್ಯ ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ.
ಧರ್ಮದ ಹೆಸರಿನಲ್ಲಿ ಮತಾಂತರ ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ. ಜಾತಿಯ ಹೆಸರಿನಲ್ಲಿ ಮಠ ಮಾನ್ಯಗಳನ್ನು ಸೃಷ್ಟಿಸಿಕೊಂಡು ಆಧ್ಯಾತ್ಮವನ್ನೇ ಕಾರ್ಪೊರೇಟ್ ಶೈಲಿಯಲ್ಲಿ ವ್ಯಾಪಾರ ಮಾಡುತ್ತಿರುವವರು ವಿದ್ಯಾರ್ಥಿಗಳಲ್ಲ. ದೇವರ ಹೆಸರಿನಲ್ಲಿ ಹೆಣ್ಣನ್ನು ವಂಚಿಸಿ ಅತ್ಯಾಚಾರ ಮಾಡಿರುವವರು ವಿದ್ಯಾರ್ಥಿಗಳಲ್ಲ. ಹಾಗಾದರೆ ನೈತಿಕ ಶಿಕ್ಷಣ ಬೇಕಾಗಿರುವುದು ಯಾರಿಗಾಗಿ?
ಮೇಲಿನ ಎಲ್ಲರೂ ಹೇಳಿರುವುದು ಮೌಲ್ಯಗಳನ್ನು ಶಿಕ್ಷಣದಲ್ಲಿ ಬೋಧನೆ ಮಾಡಿ ಎಂದು. ಆದರೆ ವಾಸ್ತವವಾಗಿ ಮೌಲ್ಯಗಳು ಇರುವುದು ಬೋದನೆ ಮಾಡಲು ಅಲ್ಲ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಲು. ಆಗ ಸಹಜವಾಗಿ ವಿದ್ಯಾರ್ಥಿಗಳು ಅದನ್ನು ಅನುಸರಿಸುತ್ತಾರೆ. ಮುಖವಾಡಗಳ ಮರೆಯಲ್ಲಿ ಕೇವಲ ಬೋಧನೆ ಮಾಡಿದರೆ ಅದು ವ್ಯರ್ಥ.
ಇಡೀ ಜಗತ್ತಿನ ನೈತಿಕ ಪ್ರಜ್ಞೆಗೆ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವವರು ಮಹಾತ್ಮ ಗಾಂಧಿ ಮತ್ತು ಗೌತಮ ಬುದ್ಧ, ಸಾಮಾಜಿಕ ಪ್ರಜ್ಞೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರು, ಸಾಂಸ್ಕೃತಿಕ ಪ್ರಜ್ಞೆಗೆ ಸ್ವಾಮಿ ವಿವೇಕಾನಂದರು. ಅದನ್ನು ಪ್ರಾಮಾಣಿಕವಾಗಿ ಬೋದಿಸದೆ ಕೇವಲ ಕಪಟ ನಾಟಕವಾಡಿದರೆ ಪ್ರಯೋಜನವೇನು?
ಆ ಹೇಳಿಕೆಗಳ ಪಟ್ಟಿಯಲ್ಲಿ ಇರುವ ಕೆಲವರು ಆಂತರ್ಯದಲ್ಲಿ ನಾಥುರಾಂ ಘೋಡ್ಸೆ ಆರಾಧಕರು. ಆಹಾರ ಸ್ವಾತಂತ್ರ್ಯ ಗೌರವಿಸದ ಸರ್ವಾಧಿಕಾರಿಗಳು. ತುಪ್ಪ ಮತ್ತು ಮಾಂಸದ ವ್ಯತ್ಯಾಸವನ್ನು ಸ್ವಾರ್ಥಕ್ಕಾಗಿ ಮರು ವ್ಯಾಖ್ಯಾನಿಸುವವರು. ಭ್ರಷ್ಟಾಚಾರದ ಮೂಲವೇ ರಾಜಕಾರಣಿಗಳಾಗಿರುವಾಗ ಅವರ ಆಡಳಿತದಲ್ಲಿ ನಡೆಯುವ ಶಾಲೆಗಳಲ್ಲಿ ನೈತಿಕ ಶಿಕ್ಷಣ ಬೋದಿಸಿದರೆ ಅದರ ಪರಿಣಾಮ ಏನಾಗಬಹುದು?
ಇವತ್ತು ಈ ದೇಶದ ಮಾನವೀಯ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕಾಗಿದ್ದ ಧಾರ್ಮಿಕ ಮುಖಂಡರು ಅದಕ್ಕೆ ವಿರುದ್ಧ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಾ, ರಾಜಕೀಯ ಗುಲಾಮರಾಗಿ, ಸಿರಿವಂತಿಕೆ ಪ್ರದರ್ಶಿಸುತ್ತಾ ನೈತಿಕತೆಯನ್ನೇ ಮರೆತವರು ನೈತಿಕ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತಾರೆ.
ತಮ್ಮ ತಮ್ಮ ಧರ್ಮಗಳ ಸಾರವನ್ನು ಸಂವಿಧಾನದ ಅಡಿಯಲ್ಲಿ ವಿಲೀನಗೊಳಿಸಿ ಬೃಹತ್ ವೈವಿಧ್ಯಮಯ ದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಜವಾಬ್ದಾರಿ ನಿರ್ವಹಿಸದೆ ಸಸ್ಯಹಾರ - ಮಾಂಸಾಹಾರದ ಬಗ್ಗೆ ಪಾಠ ಮಾಡುತ್ತಾರೆ. ದೇಶವನ್ನು ಪ್ರೀತಿಸದೆ ಧರ್ಮದ ಬಗ್ಗೆ ಮಾತನಾಡುತ್ತಾರೆ. ಇವರು ನೈತಿಕತೆಯ ಸಲಹೆ ನೀಡುವವರು. "ನುಡಿದಂತೆ ನಡೆ" ಅದೇ ನೈತಿಕ ಮೌಲ್ಯ. "ನನ್ನ ಜೀವನವೇ ನನ್ನ ಸಂದೇಶ" ಅದೇ ನೈತಿಕತೆಯ ಪಾಠ. ನೈತಿಕತೆ ತಿಳಿವಳಿಕೆಯಲ್ಲ - ನಡವಳಿಕೆ. ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರೆ ಇದನ್ನು ಅರ್ಥಮಾಡಿಕೊಳ್ಳಿ ಮತ್ತು ಅನುಸರಿಸಿ. ಇದು ಪ್ರೀತಿಯ ಪ್ರಜ್ಞಾ ಪೂರ್ವಕ ಮನವಿ..
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ