ನೈಸರ್ಗಿಕ ಆಹಾರಗಳಿಂದ ಪ್ಲೇಟ್ ಲೆಟ್ ಹೆಚ್ಚಿಸಿ

ಮಳೆಗಾಲ ಬಂದೊಡನೆಯೇ ಅನಾರೋಗ್ಯದ ಸೀಸನ್ ಪ್ರಾರಂಭವಾಗುತ್ತದೆ. ಏಕೆಂದರೆ ಮಳೆಗಾಲದಲ್ಲಿ ಅಲ್ಲಲ್ಲಿ ನಿಲುಗಡೆಯಾಗುವ ನೀರಿನ ಕಾರಣದಿಂದ ಸೊಳ್ಳೆಗಳು ತಮ್ಮ ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಕಾರಣದಿಂದ ಇವುಗಳು ಸುಲಭವಾಗಿ ರೋಗವನ್ನು ಉಂಟು ಮಾಡುವ ವೈರಸ್ ಗಳ ವಾಹಕಗಳಾಗುತ್ತವೆ. ಮಲೇರಿಯಾ, ಚಿಕುನ್ ಗುನ್ಯಾ, ಡೆಂಗ್ಯೂ ಮೊದಲಾದ ಜ್ವರಗಳ ಹರಡುವಿಕೆಗೆ ವಿವಿಧ ಬಗೆಯ ಸೊಳ್ಳೆಗಳೇ ಕಾರಣ.
ಜ್ವರ ಬಂದಾಗ ನಮ್ಮ ರಕ್ತದಲ್ಲಿರುವ ಪ್ಲೇಟ್ ಲೆಟ್ ಎಂಬ ಅಂಶವು ಕಡಿಮೆಯಾಗುತ್ತದೆ. ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಪ್ಲೆಟ್ ಲೆಟ್ ಗಳ ಸಂಖ್ಯೆ ಲಕ್ಷಗಟ್ಟಲೆ ಇರುತ್ತದೆ. ಡೆಂಗ್ಯೂ ಜ್ವರ ಬಂದಾಗ ಇವುಗಳ ಸಂಖ್ಯೆ ಸಾವಿರಕ್ಕೆ ಇಳಿಯುತ್ತದೆ. ಇದು ಅತ್ಯಂತ ಅಪಾಯಕಾರಿಯಾದ ಸಂಗತಿ. ಡೆಂಗ್ಯೂ ಜ್ವರ ಬಾರದಂತೆ ಇನ್ನೂ ಪ್ರಭಾವಶಾಲಿ ಮದ್ದು ಕಂಡು ಹಿಡಿಯಲಾಗಿಲ್ಲ. ಮಲೇರಿಯಾ, ಟೈಫಾಯಿಡ್ ರೋಗಕ್ಕೆ ಇರುವಂತೆ ಡೆಂಗ್ಯೂ ಗೆ ಸೂಕ್ತ ಮದ್ದು ಇಲ್ಲ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರಕುವ ಹಲವಾರು ಗಿಡಮೂಲಿಕೆಗಳು, ಹಣ್ಣುಗಳು ಈ ರೋಗಬಾಧೆಯನ್ನು ನಿವಾರಿಸಲು ಶಕ್ತವಾಗಿದೆ. ಅದಕ್ಕೇ ಹಿರಿಯರು ಹೇಳುವುದು “ಎಲ್ಲದ್ದಕ್ಕೂ ಪ್ರಕೃತಿಯಲ್ಲಿ ಪರಿಹಾರ ಇದೆ" ಎಂದು.
ಪ್ಲೇಟ್ ಲೆಟ್ ಕಣಗಳು ನಮ್ಮ ರಕ್ತದಲ್ಲಿ ಕಡಿಮೆಯಾದಾಗ ನಾವು ಯಾವೆಲ್ಲಾ ನೈಸರ್ಗಿಕ ಮನೆಮದ್ದು ಬಳಸಬಹುದು ಎಂಬ ವಿವರ ಇಲ್ಲಿದೆ. ಆದರೆ ನೆನಪಿಡಿ, ಇಲ್ಲಿರುವ ಯಾವುದೇ ಮನೆಮದ್ದನ್ನು ಬಳಸುವ ಮೊದಲು ನಿಮ್ಮ ದೇಹದ ಸ್ಥಿತಿಗತಿಯ ಬಗ್ಗೆ ಅರಿವು ಇರಲಿ. ಹಲವರಿಗೆ ಕೆಲವು ಹಣ್ಣುಗಳು, ತರಕಾರಿಗಳು ಅಲರ್ಜಿಯಾಗುವ ಸಂಭವವಿರುತ್ತದೆ. ಆರೋಗ್ಯಕ್ಕೆ ಉತ್ತಮ ಎಂದು ಅದನ್ನೇ ಅಧಿಕ ಪ್ರಮಾಣದಲ್ಲಿ ಬಳಕೆ ಮಾಡುವುದು ಸರಿಯಲ್ಲ. ಉದಾಹರಣೆಗೆ ಪ್ಲೇಟ್ ಲೆಟ್ ಸುಧಾರಣೆಗೆ ಪಪ್ಪಾಯಿ ಗಿಡದ ಎಲೆಯ ರಸ ಉತ್ತಮ ಎನ್ನುತ್ತಾರೆ. ಹಾಗೆಂದು ಅಧಿಕ ಪ್ರಮಾಣದಲ್ಲಿ ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಅಲರ್ಜಿಯ ಜೊತೆಗೆ ಬೇಧಿಯ ಸಮಸ್ಯೆ ಪ್ರಾರಂಭವಾಗಬಹುದು. ಈ ಕಾರಣದಿಂದ ಇಲ್ಲಿ ನೀಡಿರುವ ಯಾವುದೇ ಮನೆಮದ್ದನ್ನು ಬಳಸುವ ಮೊದಲು ಜಾಗೃತೆ ವಹಿಸಿ.
* ಪಪ್ಪಾಯಿ ಎಲೆಯ ರಸವನ್ನು ಪ್ಲೇಟ್ ಲೆಟ್ ತುಂಬಾ ಕಡಿಮೆಯಾದಾಗ ಎರಡು ಹೊತ್ತು ಒಂದೊಂದು ಚಮಚ ಕುಡಿದರೆ ಮೂರು-ನಾಲ್ಕು ದಿನಗಳಲ್ಲಿ ಪ್ಲೇಟ್ ಲೆಟ್ ಸಂಖ್ಯೆ ಹೆಚ್ಚಾಗುತ್ತದೆ. ಹಾಗೆಂದು ಹೆಚ್ಚಿಗೆ ಕುಡಿಯಲು ಹೋಗದಿರಿ. ಪಪ್ಪಾಯಿ ಹಣ್ಣಿನ ಸೇವನೆಯೂ ಉತ್ತಮ.
* ಲೋಳೆಸರ ಅಥವಾ ಅಲೆವೋರಾ ಸಸ್ಯವನ್ನು ಹಣ್ಣಿನ ಜ್ಯೂಸ್ ಜೊತೆ ಮಿಶ್ರ ಮಾಡಿ ಕುಡಿಯಬಹುದು. ಹಣ್ಣಿನ ರಸ ಅಥವಾ ನಿಂಬೆ ರಸಕ್ಕೆ ೨ ಚಮಚ ಲೋಳೆಸರವನ್ನು ಹಾಕಿ ಮಿಶ್ರ ಮಾಡಿ ಕುಡಿದರೆ ಪ್ಲೇಟ್ ಲೆಟ್ ಗಳ ಸಂಖ್ಯೆ ಅಧಿಕವಾಗುತ್ತದೆ.
* ವಿಟಮಿನ್ ಗಳು ಹೇರಳವಾಗಿರುವ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣು, ದ್ರಾಕ್ಷಿ, ಕಿವಿ, ದಾಳಿಂಬೆ, ನೆಲ್ಲಿಕಾಯಿ ಮೊದಲಾದುವುಗಳನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕಗೊಳ್ಳುತ್ತದೆ.
* ಬೀಟ್ ರೂಟ್ ರಸವನ್ನು ದಿನಕ್ಕೆ ಎರಡು ಲೋಟ ಕುಡಿಯುವುದರಿಂದ ಇದರಲ್ಲಿರುವ ಕಬ್ಬಿಣದ ಅಂಶ, ಫಾಲಿಕ್ ಆಮ್ಲ, ವಿಟಮಿನ್ ಸಿ ಅಂಶಗಳು ಪ್ಲೇಟ್ ಲೆಟ್ ಹೆಚ್ಚಿಸುವುದರಲ್ಲಿ ಸಹಕಾರಿ.
* ಗೋಧಿಹುಲ್ಲಿನ ರಸವನ್ನು ಮಾಡಿ ಕುಡಿಯುವುದರಿಂದಲೂ ಪ್ಲೇಟ್ ಲೆಟ್ ಗಳ ಸಂಖ್ಯೆ ಹೆಚ್ಚುತ್ತದೆ.
* ಸಿಹಿ ಕುಂಬಳಕಾಯಿಯಲ್ಲಿರುವ ವಿಟಮಿನ್ ಎ ಪ್ಲೆಟ್ ಲೆಟ್ ಸಂಖ್ಯೆಗಳನ್ನು ಹೆಚ್ಚಿಸಲು ಸಹಕಾರಿ.
* ಸತುವಿನ ಅಂಶ ಅಧಿಕವಾಗಿರುವ ಚಿಪ್ಪು ಮೀನುಗಳು (ಮರುವಾಯಿ, ಮೃದ್ವಂಗಿಗಳು ಇತ್ಯಾದಿ), ಏಡಿ, ಒಣ ಹಣ್ಣುಗಳು, ನೆಲಗಡಲೆ, ಗೋಡಂಬಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ಲೇಟ್ ಲೆಟ್ ಗಳ ಸಂಖ್ಯೆ ಅಧಿಕವಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
* ವಿಟಮಿನ್ ಕೆ ಅಧಿಕ ಪ್ರಮಾಣದಲ್ಲಿರುವ ಹಸಿರು ಸೊಪ್ಪುಗಳು, ಬ್ರೋಕೋಲಿ, ಕಿಡ್ನಿ ಆಕಾರದ ಬೀನ್ಸ್, ಧಾನ್ಯಗಳ ಸೇವನೆಯಿಂದ ಪ್ಲೆಟ್ ಲೆಟ್ ಗಳ ಸಂಖ್ಯೆ ಗಣನೀಯವಾಗಿ ಏರುತ್ತದೆ.
ಈ ಮೇಲಿನ ಆಹಾರ ಪದ್ಧತಿಗಳಲ್ಲಿ ನಿಮಗೆ ಸೂಕ್ತವಾದುದನ್ನು ಆಯ್ದು ಕೊಂಡು ಅದನ್ನು ನಿಯಮಿತವಾಗಿ ಬಳಸಿ ನಿಮ್ಮ ರಕ್ತದಲ್ಲಿರುವ ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬಹುದು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ