ನೊಣಕ್ಕೊಂದು ನೈಸರ್ಗಿಕ "ಟ್ರ್ಯಾಪ್"

ನೊಣಕ್ಕೊಂದು ನೈಸರ್ಗಿಕ "ಟ್ರ್ಯಾಪ್"

ಬರಹ

ಹುಬ್ಬೇರಿಸದಿರಿ..!!!
ಬಯಲುಸೀಮೆಯ ಬಹುತೇಕ ಹಳ್ಳಿಗಾಡಿನ ಜಂತೆ ಮನೆಗಳಲ್ಲಿ "ಜಾಡು" ಎನ್ನುವ ಕೀಟಗಳ ಬಲೆಯೊಂದನ್ನು ನೇತುಹಾಕುತ್ತಿದ್ದುದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದು ನೆನಪಿದೆ.ಕೆಲ ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಮಂಗಳವಾಡ ಗ್ರಾಮಕ್ಕೆ ಕೆರೆ ಕೆಲಸದ ನಿಮಿತ್ತ ಹೋದಾಗ ಈ ಜಾಡನ್ನು ಕಂಡಿದ್ದೇ ಈ ಲೇಖನದ ಉಗಮಕ್ಕೆ ಕಾರಣ.
ಏನಿದು ಜಾಡು??
ಕುರುಚಲು ಕಾಡಿನ ಊಲಿ, ಊಡುಗ,ನಾಯಿಬೇಲ,ಮುಂತಾದ ಮುಳ್ಲು ಗಿಡಗಳ ಮೇಲೆ ಬಿಳಿತೆನೆಯ ತರಹದ ನೂಲಿನ ಹಂದರವೊಂದನ್ನು ಕಾಣಬಹುದು.ಇದನ್ನು ಕೀಟಗಳ ಊಟದ ಬಟ್ಟಲು ಎಂದು ಮೇಲ್ನೋಟಕ್ಕೆ ಊಹಿಸಲು ಸಾಧ್ಯವಿಲ್ಲ.ಇಂತಹ ಜಾಡಿನ ಗೂಡಿನಲ್ಲಿ ಅಸಂಖ್ಯಾತ ಹುಳುಗಳು ಇರುತ್ತವೆ.(ಈ ಹುಳುಗಳು ಯಾವ ಜಾತಿ/ಪ್ರಭೇದಕ್ಕೆ ಸೇರಿದವುಗಳು ಎನ್ನುವುದು ನನಗೆ ತಿಳಿದಿಲ್ಲ.ಮಾಹಿತಿಯಿದ್ದವರು ಸೇರಿಸಲು ಅಡ್ಡಿಯಿಲ್ಲ).ಸಾಮಾನ್ಯವಾಗಿ ಈ ಜಾಡನ್ನುಬೆರಳಿನಿಂದ ಮುಟ್ಟಿದರೆ ಅಂಟಿಕೊಳ್ಲುವ ಸ್ವಭಾವ ಇರುತ್ತದೆ.ಹಾಗಾಗಿ ಬಯಲು ಪ್ರದೇಶದಲ್ಲಿನ ಹಸಿರು ನೊಣ ,ಸಣ್ಣ ಸಣ್ಣ ಚಿಟ್ಟೆಗಳು,ದುಂಬಿಗಳು ಮತ್ತಿತರ ಕ್ರಿಮಿಕೀಟಗಳು ಈ ಬಲೆಯ ಸಂಪರ್ಕಕ್ಕೆ ಬಂದರೆ ಅಲ್ಲಿಯೇ ಅಂಟಿಕೊಳ್ಳುತ್ತವೆ.ಕ್ಷಣಾರ್ಧದಲ್ಲಿ ಬಲೆಯೊಳಗಿನ ಭಕ್ಷಕ ಹುಳುಗಳಿಗೆ ಭೂರಿ ಭೋಜನವಾಗುತ್ತವೆ.
ಜಾಡು-ಜಾದು...

ಈ ನೈಸರ್ಗಿಕ ಬಲೆಯ ಸಂಪರ್ಕ ತಪ್ಪಿಸಿಕೊಂಡು ಕೆಲವೊಮ್ಮೆ ನೊಣಗಳು ಓಡಾಡಿದರೂ,ಆಕಸ್ಮಿಕವಾಗಿಕಾಲು ರೆಕ್ಕೆ ಹೀಗೆ ಯಾವುದೇ ಅಂಗ ಜಾಡಿಗೆ ತಗುಲಿದರೆ ಸಾಕು ಅವುಗಳ ಅವಸಾನ ಗ್ಯಾರಂಟಿ.ಇಂತಹ ಜಾಡಿನ ಗುಣವನ್ನು ಅರಿತಿದ್ದ ಹಿಂದಿನವರು ಈ ಬಲೆಗಳನ್ನು ಜತನವಾಗಿ ಸಂಗ್ರಹಿಸಿ ಜಂತೆ ಮನೆಗಳಲ್ಲಿ ತೂಗುಹಾಕುತ್ತಿದ್ದರು.ಬೇವಿನಹಣ್ಣಿನ ಕಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಗುಂಗರಿ(ಅತಿ ಸಣ್ಣ ಕಪ್ಪುಹುಳು,ಕಣ್ಣಿನ ಬಳಿಯೇ ಯಾವಾಗಲೂ ಹಾರಾಡುತ್ತ ಕಿರಿಕಿರಿ ಮಾಡುತ್ತದೆ.ಅನುಭವಿಸಿದ್ದವರಿಗೆ ಮಾತ್ರ ಇದರ ಉಪಟಳ ಗೊತ್ತಿರುತ್ತದೆ).ಹುಳುಗಳ ನಿಯಂತ್ರಣಕ್ಕೆ ಇದಕ್ಕಿಂತ ಉತ್ತಮ ಉಪಾಯ ಬೇರೊಂದಿಲ್ಲವೆನ್ನಬಹುದು.
ಜಾಡಿನ ಆಯ್ಕೆ ಹೇಗೆ??
ಮಾಸಲು ಬಣ್ಣ ಇಲ್ಲದ,ಆದಷ್ತು ಹೊಸದಾದದನ್ನು ಮಾತ್ರ ಆಯ್ಕೆ ಮಾಡಬೇಕು.ಈಗಾಗಲೇ ನೊಣ,ಚಿಟ್ಟೆ,ಸಿಕ್ಕಿ ಸತ್ತಿರುವ ಜಾಡು ಬೇಡ.ಇಂತಹ ಜಾಡಿನಲ್ಲಿ ಅಂಟು ಕೂಡಾ ಮುಗಿದು ಹೋಗಿರುವ ಸಾಧ್ಯತೆ ಹೆಚ್ಚು.ಹಾಗಾಗಿ ಬಿಳಿ ಬಣ್ಣದ,ಜಾಡನ್ನು ತಂದು ಮಕ್ಕಳಿಗೆ ಸಿಗದ ಹಾಗೆ ಎತ್ತರದ ಜಾಗದಲ್ಲಿ ನೇತು ಹಾಕುವುದು ಒಳ್ಳೆಯದು.ವಾರಕ್ಕೊಮ್ಮೆ ಬದಲಾಯಿಸಿದರೆ ನೊಣಗಳ ಬೇಟೆ ಸುಲಭ.
ಪ್ರಬಲ ಕೀಟನಾಶಕಗಳನ್ನು ಹೊಂದಿರುವ ವೇಪರೈಸರ್ ಗಳು,ಹೊಗೆಬತ್ತಿಗಳು,ಗುಳಿಗೆಗಳಂತಹ ಮಾರಕ ಔಷಧಗಳನ್ನು ಬಳಸಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ದೇಸೀ ಪದ್ದತಿಯೊಂದರ ಬಗ್ಗೆ ಯಾರಿಗಿದೆ ಗಮನ ??
ನೆನಪಿಡಿ...... ಹಳ್ಳಿಗಾಡಿನವರಿಗಿದು ಬೋನಸ್....ಪಟ್ಟಣದವರಿಗೆ ಗೂಡಿನ ಜಾಡು ಗೊತ್ತಿರಬೇಕಲ್ಲ....