ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?

ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?

ಹಣ ಯಾರಿಗೆ ತಾನೇ ಬೇಡ? ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿದೆ. ಆಯಾ ದೇಶಗಳು ತಮ್ಮ ತಮ್ಮ ದೇಶದ ಆದ್ಯತೆಯ ಮೇರೆಗೆ ನೋಟುಗಳನ್ನು ಮುದ್ರಿಸುತ್ತವೆ. ಬಹಳಷ್ಟು ದೇಶಗಳು ತಮ್ಮ ತಮ್ಮ ದೇಶದ ಮಹಾನ್ ನಾಯಕರ ಚಿತ್ರಗಳನ್ನು ನೋಟಿನಲ್ಲಿ ಮುದಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುತ್ತವೆ. ನಮ್ಮ ದೇಶದ ನೋಟಿನಲ್ಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತ್ರ (ಒಂದು ರೂಪಾಯಿ ನೋಟು ಹೊರತುಪಡಿಸಿ) ಎಲ್ಲಾ ಮೌಲ್ಯದ ನೋಟುಗಳಲ್ಲಿ ಮುದ್ರಿತವಾಗಿದೆ. ಗಾಂಧೀಜಿಯ ಚಿತ್ರ ಪ್ರಕಟವಾಗುವುದಕ್ಕಿಂತ ಮೊದಲು ಯಾವೆಲ್ಲಾ ಚಿತ್ರಗಳು ಮುದ್ರಿತವಾಗುತ್ತಿದ್ದವು? ಗಾಂಧೀಜಿಯ ಚಿತ್ರವನ್ನು ಬಳಸಲು ರಿಜರ್ವ್ ಬ್ಯಾಂಕ್ ಏಕೆ ಮನಸ್ಸು ಮಾಡಿತು? ಇವೆಲ್ಲವನ್ನೂ ನಾವು ಒಂದೊಂದಾಗಿ ತಿಳಿದುಕೊಳ್ಳೋಣ.

೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ನಮ್ಮ ದೇಶದಲ್ಲಿ ಬ್ರಿಟನ್ ಸರಕಾರದ ನೋಟುಗಳೇ ಚಲಾವಣೆಯಲ್ಲಿದ್ದವು. ಈ ನೋಟುಗಳ ಚಲಾವಣೆಯು ೧೯೪೯ರ ತನಕ ಮುಂದುವರಿದಿತ್ತು ಎಂಬ ವಿಷಯ ನಿಮಗೆ ಗೊತ್ತೇ? ಸ್ವತಂತ್ರ ಭಾರತದಲ್ಲೂ ವಿದೇಶೀ ನೋಟುಗಳು ಚಲಾವಣೆಯಾಗುತ್ತಿದ್ದವು. ಇಂಗ್ಲೆಂಡಿನ ರಾಜರಾಗಿದ್ದ ಕಿಂಗ್ ಜಾರ್ಜ್ ೬ ಅವರ ಚಿತ್ರವನ್ನು ಹೊಂದಿದ್ದ ನೋಟುಗಳು ಮುದ್ರಿತವಾಗುತ್ತಿದ್ದವು. ಆದರೆ ೧೯೪೯ರಲ್ಲಿ ಭಾರತ ಸರಕಾರವು ಒಂದು ರೂಪಾಯಿಯ ನೋಟು ಮುದ್ರಿಸಿದಾಗ ಅದರಲ್ಲಿ ಜಾರ್ಜ್ ೬ ಇವರ ಚಿತ್ರವನ್ನು ತೆಗೆದುಹಾಕಿ ಸಾರನಾಥದಲ್ಲಿರುವ ಅಶೋಕ ಸ್ತಂಭದ ಸಿಂಹದ ಲಾಂಛನವಿರುವ ಚಿತ್ರವನ್ನು ಮುದ್ರಿಸಲಾಯಿತು. ಆ ಸಮಯದಲ್ಲೇ ಭಾರತಕ್ಕೆ ಪ್ರತ್ಯೇಕವಾದ ಗುರುತನ್ನು ಹೊಂದುವ ದೃಷ್ಟಿಯಿಂದ ರಾಷ್ಟ್ರನಾಯಕರ ಚಿತ್ರವನ್ನು ಮುದ್ರಿಸುವ ಯೋಚನೆ ಇತ್ತು. ಆಗಲೂ ಗಾಂಧೀಜಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ ಆಗ ಸಾರನಾಥದ ಸಿಂಹಗಳ ಲಾಂಛನವನ್ನೇ ಮುದ್ರಿಸುವ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ನಂತರದ ದಿನಗಳಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಬ್ಯಾಂಕ್ (ರಿಜರ್ವ್ ಬ್ಯಾಂಕ್ ನ ಮೊದಲ ಹೆಸರು) ಸಿಂಹದ ಲಾಂಛನವನ್ನು ಹೊಂದಿದ ನೋಟುಗಳನ್ನು ಮುದ್ರಿಸಿತು. ೧೯೫೦ರಲ್ಲಿ ೨,೫,೧೦ ಮತ್ತು ೧೦೦ರ ನೋಟುಗಳಲ್ಲಿ ಸಿಂಹದ ಲಾಂಛನದ ವಾಟರ್ ಮಾರ್ಕ್ ಅನ್ನು ಮುದ್ರಿಸಲಾಯಿತು.

ಆ ಸಮಯದಲ್ಲಿ ನೋಟಿನ ಮುಂಭಾಗದಲ್ಲಿ ಅದರ ಮೌಲ್ಯ ಮತ್ತು ಸಿಂಹದ ಲಾಂಛನವನ್ನು ದೊಡ್ಡದಾಗಿ ಮುದ್ರಿಸಲಾಗುತ್ತಿತ್ತು. ಹಿಂಬದಿಯಲ್ಲಿ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೃಷಿ ಸಂಬಂಧಿ ಚಿತ್ರಗಳು, ಚಹಾ ಎಲೆ ಕೀಳುವ ಚಿತ್ರ, ಹುಲಿ, ಜಿಂಕೆಯಂತಹ ಚಿತ್ರಗಳನ್ನು ಮುದ್ರಿಸಲಾಯಿತು. ೧೯೮೦ರ ದಶಕದಲ್ಲಿ ದೇಶವು ವೈಜ್ಞಾನಿಕ ರಂಗದಲ್ಲಿ ಕಂಡ ಪ್ರಗತಿಯನ್ನು ಬಿಂಬಿಸುವ ಚಿತ್ರಗಳನ್ನು ಮುದ್ರಿಸಲು ಪ್ರಾರಂಭ ಮಾಡಲಾಯಿತು. ನಮ್ಮ ಮೊದಲ ಕೃತಕ ಉಪಗ್ರಹ ಆರ್ಯಭಟದ ಚಿತ್ರವು ೨ರೂ. ನೋಟಿನಲ್ಲಿ ಮುದ್ರಿತವಾಗಿದೆ. ೫ ರೂ ನೋಟಿನಲ್ಲಿ ಟ್ರಾಕ್ಟರ್ ಚಲಾಯಿಸುತ್ತಿರುವ ಕೃಷಿಕನ ಚಿತ್ರ, ೨೦ ರೂ, ನಲ್ಲಿ ಕೋನಾರ್ಕ್ ನ ಸೂರ್ಯ ಚಕ್ರ ಮುದ್ರಣಗೊಂಡಿದೆ.

ಕ್ರಮೇಣ ಭಾರತೀಯ ನೋಟಿನಲ್ಲಿ ದೇಶ ಕಂಡ ಮಹಾನ್ ನಾಯಕರ ಚಿತ್ರವನ್ನು ಮುದ್ರಿಸಬೇಕು ಎನ್ನುವ ಕೂಗು ಜೋರಾಗತೊಡಗಿತು. ೧೯೯೬ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರಗಳನ್ನು ಮುದ್ರಿಸುವ ನಿರ್ಧಾರ ಕೈಗೊಳ್ಳಲಾಯಿತು. ಆದರೆ ನಿಮಗೆ ತಿಳಿದಿರಲಿ, ಇದಕ್ಕೂ ಬಹಳ ಮೊದಲು ಅಂದರೆ ೧೯೬೯ರಲ್ಲೇ ಗಾಂಧೀಜಿ ಅವರು ನೋಟುಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ೧೦೦ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾದ ನೋಟಿನಲ್ಲಿ ಅವರ ಸೇವಾಗ್ರಾಮ ಆಶ್ರಮದ ಹಿನ್ನಲೆಯಲ್ಲಿ ಗಾಂಧೀಜಿಯ ಚಿತ್ರವನ್ನು ಮುದ್ರಿಸಲಾಗಿತ್ತು. ಆ ಸಮಯ ಎಲ್ ಕೆ ಝಾ ಭಾರತೀಯ ರಿಜರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದರು. ನಂತರ ಅಕ್ಟೋಬರ್ ೧೯೮೭ರಲ್ಲಿ ಚಲಾವಣೆಗೆ ಬಂದ ೫೦೦ ರೂ. ನೋಟಿನಲ್ಲೂ ಗಾಂಧೀಜಿ ಅವರ ಚಿತ್ರವಿತ್ತು. 

ಆದರೆ ೧೯೯೬ರಲ್ಲಿ ಬಿಡುಗಡೆಯಾದ ಎಲ್ಲಾ ಮೌಲ್ಯಗಳ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರ ಕಾಣಿಸಿಕೊಂಡಿತು. ಸಾರನಾಥದ ಸಿಂಹಗಳ ಲಾಂಛನ ಮರೆಯಾಗಿ ಗಾಂಧೀಜಿಯವರ ಚಿತ್ರ ಮುದ್ರಿಸಲಾಯಿತು. ಇದಕ್ಕೆ ಬಳಸಿಕೊಂಡ ಗಾಂಧೀಜಿಯವರ ಚಿತ್ರ ಯಾವುದು ಎಂಬ ಕುತೂಹಲ ನಿಮಗೂ ಇರಬಹುದಲ್ಲವೇ? ಇದು ೧೯೪೬ರಲ್ಲಿ ತೆಗೆದ ನೈಜ ಚಿತ್ರ. ಕೆಲವರು ಈ ಚಿತ್ರವನ್ನು ರೇಖಾಚಿತ್ರವೆಂದು ತಿಳಿದುಕೊಂಡಿದ್ದಾರೆ. ಆದರೆ ಇದು ನೈಜವಾದ ಛಾಯಾಚಿತ್ರ. ಈ ಚಿತ್ರದಲ್ಲಿ ಗಾಂಧೀಜಿಯವರ ಜೊತೆ ಬ್ರಿಟೀಷ್ ಅಧಿಕಾರಿ ಲಾರ್ಡ್ ಫೆಡ್ರಿಕ್ ವಿಲಿಯಂ ಪೆಥಿಕ್ ಲಾರೆನ್ಸ್ ಸಹಾ ಇದ್ದರು. ಇದರಲ್ಲಿ ಗಾಂಧೀಜಿಯವರ ಸಹಜವಾದ ನಗು ಕಂಡು ಬರುತ್ತಿರುವ ಕಾರಣ ಲಾರೆನ್ಸ್ ಅವರನ್ನು ಬೇರ್ಪಡಿಸಿ ಗಾಂಧಿಯವರ ಚಿತ್ರವನ್ನು ನೋಟಿಗೆ ಅಳವಡಿಸಲಾಯಿತು. ದುಃಖದ ವಿಷಯವೆಂದರೆ ಇಂದಿಗೂ ಈ ಚಿತ್ರವನ್ನು ತೆಗೆದ ಛಾಯಾಗ್ರಾಹಕ ಯಾರು ಎಂಬ ವಿಷಯ ತಿಳಿಯದೇ ಇರುವುದು. ನೋಟಿನಲ್ಲಿ ವ್ಯಕ್ತಿಯೊಬ್ಬರ ಮುಖವನ್ನು ಬಳಸಲು ಪ್ರಾರಂಭಿಸಿದ ಪ್ರಮುಖ ಕಾರಣ ನಿರ್ಜೀವ ವಸ್ತುಗಳ ಬದಲು ಮಾನವನ ಮುಖವನ್ನು ಬಳಸಿದರೆ ನೋಟುಗಳು ಇನ್ನಷ್ಟು ಆಕರ್ಷಕ ಮತ್ತು ಪರಿಣಾಮಕಾರಿಯಾಗಿ ಕಾಣಿಸಬಹುದು ಎಂದು ಆರ್ ಬಿ ಐ ಆಶಾಭಾವನೆ ಆಗಿತ್ತು..

೧೯೯೬ರಲ್ಲಿ ಮುದ್ತಿತವಾದ ಗಾಂಧಿ ಸರಣಿಯ ನೋಟುಗಳಲ್ಲಿ ಹಲವಾರು ಗೌಪ್ಯತಾ ಅಂಶಗಳನ್ನು ಭದ್ರತೆಯ ಕಾರಣಗಳಿಗಾಗಿ ಅಳವಡಿಸಲಾಯಿತು. ಇದರಲ್ಲಿ ವಿಂಡೋಡ್ ಸೆಕ್ಯುರಿಟಿ ಥ್ರೆಡ್, ಸುಪ್ತ ಚಿತ್ರ ಮತ್ತು ದೃಷ್ಟಿ ಹೀನರಿಗಾಗಿ ಇಂಟಾಗ್ಲಿಯೋದಂತಹ ವೈಶಿಷ್ಟ್ಯಗಳು ಒಳಗೊಂಡಿದ್ದವು. ೨೦೧೬ರಲ್ಲಿ ೫೦೦ ಮತ್ತು ೧೦೦೦ ನೋಟುಗಳ ನಿಷೇಧದ ಬಳಿಕ ಬಿಡುಗಡೆಯಾದ ಮಹಾತ್ಮ ಗಾಂಧಿಯವರ ನೂತನ ಸರಣಿಯ ನೋಟುಗಳ ಹಿಂಭಾಗದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಲೋಗೋವನ್ನು ಸೇರಿಸಲಾಯಿತು. ಮೊದಲ ಬಾರಿ ಗಾಂಧೀಜಿಯವರ ಮುಖ ನೋಟಿನಲ್ಲಿ ಮುದ್ರಣವಾದಾಗ ಅವರ ಚಿತ್ರದ ಕೆಳಭಾಗದಲ್ಲಿ ಎಂ.ಕೆ.ಗಾಂಧಿ (ಮೋಹನದಾಸ ಕರಮಚಂದ್ ಗಾಂಧಿ) ಎಂದು ಆಂಗ್ಲ ಭಾಷೆಯಲ್ಲೂ, ಮೋ.ಕ.ಗಾಂಧಿ ಎಂದು ಹಿಂದಿಯಲ್ಲೂ ಪ್ರಕಟಿಸಲಾಗಿತ್ತು. ಹಲವಾರು ಮಂದಿಯ ಆಕ್ಷೇಪ ಮತ್ತು ಕೋರಿಕೆಗಳಿಗೆ ತಲೆಬಾಗಿ ನಂತರದ ದಿನಗಳಲ್ಲಿ ಅದನ್ನು ಮಹಾತ್ಮ ಗಾಂಧಿ ಎಂದು ಬದಲಾಯಿಸಲಾಯಿತು.

ಆರ್ ಬಿ ಐ ಕರೆನ್ಸಿ ಮ್ಯಾನೇಜ್ ಮೆಂಟ್ ಇಲಾಖೆಯು ನೋಟುಗಳ ಪರಿಷ್ಕರಣೆ, ವಿನ್ಯಾಸ ಬದಲಾವಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಆದರೆ ಯಾವುದೇ ಬದಲಾವಣೆಗೆ ಮೊದಲು ಕೇಂದ್ರ ಸರಕಾರ ಮತ್ತು ಕೇಂದ್ರ ಬ್ಯಾಂಕ್ ನವರ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ೧೯೩೪ರ ಸೆಕ್ಷನ್ ೨೫ರ ಪ್ರಕಾರ ಬ್ಯಾಂಕ್ ನೋಟುಗಳ ವಿನ್ಯಾಸ, ರೂಪ ಮತ್ತು ವಸ್ತು ಕೇಂದ್ರೀಯ ಮಂಡಳಿಯು ಮಾಡಿದ ಶಿಫಾರಸ್ಸುಗಳನ್ನು ಪರಿಗಣಿಸಿದ ಬಳಿಕ ಕೇಂದ್ರ ಸರಕಾರವು ಅನುಮೋದನೆ ನೀಡುತ್ತದೆ. ಈ ರೀತಿ ಮಾಡಿದ ಬದಲಾವಣೆಗಳನ್ನು ೨೦೧೬ರ ನಂತರ ಹೊರಬಂದ ಗಾಂಧಿ ಸರಣಿಯ ನೂತನ ನೋಟುಗಳಲ್ಲಿ ಗಮನಿಸಬಹುದು. ಎಲ್ಲಾ ನೋಟುಗಳ ಹಿಂದೆ ವಿಜ್ಞಾನ ಮತ್ತು ರಾಷ್ಟ್ರೀಯ ಸ್ಮಾರಕಗಳನ್ನು ಬಳಸಿಕೊಳ್ಳಲಾಗಿದೆ. ಮಂಗಳಯಾನ, ಕೆಂಪು ಕೋಟೆ, ಎಲ್ಲೋರ ಗುಹೆ, ಹಂಪಿಯ ಕಲ್ಲಿನ ರಥ, ಸಾಂಚಿ ಸ್ತೂಪ, ರಾಣಿಯ ವಾವ್ ಸ್ಮಾರಕ ಮೊದಲಾದುವುಗಳು ಮುದ್ರಿತವಾಗಿವೆ. ಈಗಾಗಲೇ ೨೦೦೦ ರೂ. ನೋಟು ಜನಮಾನಸದಿಂದ ಮರೆಯಾಗಿದೆ. ಇನ್ನೂ ಕೆಲವು ಸ್ವಾತಂತ್ರ್ಯವೀರರ ಚಿತ್ರಗಳನ್ನು ನೋಟಿನಲ್ಲಿ ಮುದ್ರಿಸಬೇಕೆಂಬ ಕೂಗು ಬಲವಾಗತೊಡಗಿದೆ. ಈ ಡಿಜಿಟಲ್ ಯುಗದಲ್ಲೂ ಮುಂದಿನ ದಿನಗಳಲ್ಲಿ ಯಾವ ಬಗೆಯ ವಿನ್ಯಾಸದ ನೋಟುಗಳು ಹೊರಬಂದೀತು ಎನ್ನುವ ಕುತೂಹಲವಂತೂ ಇದ್ದೇ ಇದೆ.

ಚಿತ್ರ ವಿವರ: ೧. ನೋಟಿನಲ್ಲಿ ಬಳಸಿಕೊಂಡ ಗಾಂಧೀಜಿಯವರ ನೈಜವಾದ ಛಾಯಾಚಿತ್ರ ಮತ್ತು ನೋಟಿನಲ್ಲಿನ ಮುದ್ರಣ

೨. ಹಳೆಯ ಗಾಂಧಿ ಚಿತ್ರ ಇಲ್ಲದ ನೂರು ರೂಪಾಯೊ ನೋಟು

೩. ಹಳೆಯ ಐದು ರೂಪಾಯಿ ನೋಟಿನಲ್ಲಿ ಕಂಡು ಬರುವ ಕೃಷಿ ಕಾಯಕ

ಚಿತ್ರ ಕೃಪೆ: ಅಂತರ್ಜಾಲ ತಾಣ