ನೋಟು ರದ್ದತಿ: ಉದ್ದೇಶ ಮತ್ತು ಅನಪೇಕ್ಷಿತ ಪರಿಣಾಮ (ಭಾಗ ೧) - ಟಿ.ಆರ್.ಭಟ್

ನೋಟು ರದ್ದತಿ: ಉದ್ದೇಶ ಮತ್ತು ಅನಪೇಕ್ಷಿತ ಪರಿಣಾಮ (ಭಾಗ ೧) - ಟಿ.ಆರ್.ಭಟ್

೨೦೧೬-೧೭ರ ಸಾಲಿನಲ್ಲಿ ದೇಶದಲ್ಲಿ ಬಹುಚರ್ಚಿತವಾದ ಒಂದು ಬೆಳವಣಿಗೆ ಆ ವರ್ಷದ ನವಂಬರ ೮ನೇ ತಾರೀಕಿನಂದು ಭಾರತ ಸರ್ಕಾರ ಪ್ರಕಟಿಸಿದ ನೋಟುಗಳ ರದ್ದತಿ (ಡಿ-ಮೊನಿಟೈ-ಸೇಷನ್). ಈ ನಿರ್ಧಾರ ನಮ್ಮ ಅರ್ಥವ್ಯವಸ್ಥೆಯ ಮೇಲೆ ಮಾತ್ರವಲ್ಲ, ಸಾಮಾಜಿಕ ಜೀವನ, ರಾಜಕೀಯ ಧೋರಣೆ ಹಾಗೂ ಪ್ರಜಾಪ್ರಭುತ್ವದ ಸಾಂಸ್ಥಿಕ ಚೌಕಟ್ಟು-ಹೀಗೆ ವಿಭಿನ್ನ ವಿಷಯಗಳ ಮೇಲೆ ಪ್ರಭಾವ ಬೀರಿದ್ದು ಈಗಾಗಲೇ ನಾವು ತಿಳಿದಿರುವ ವಿಚಾರ. ತಮ್ಮ ನಿರ್ಧಾರದ ಉದ್ದೇಶ ಒಂದಿದ್ದು, ನಿರ್ಧಾರದ ಪರಿಣಾಮ ತೀರಾ ಅನಪೇಕ್ಷಿತ ವಾಗಲು ಸಾಧ್ಯ ಎನ್ನುವುದಕ್ಕೆ ನಮ್ಮ ಕಣ್ಣೆದುರಿಗೇ ಸಂಭವಿಸಿದ ಒಂದು ಜ್ವಲಂತ ಉದಾಹರಣೆ ನೋಟು ರದ್ದತಿಯ ನಿರ್ಧಾರ. ಈ ಲೇಖನದಲ್ಲಿ ರಾಜಕೀಯದ ಹೊರತಾದ ಪ್ರಮುಖವಾದ ಕೆಲವು ವಿಚಾರಗಳನ್ನು ಓದುಗರ ಮುಂದೆ ಇಡಲು ಬಯಸುತ್ತೇನೆ.

ನೋಟು ಮುದ್ರಿಸುವ ಅಧಿಕಾರ:
ಶತಮಾನಗಳ ಹಿಂದೆ ಹಣ ಬೇರೆ ಬೇರೆ ರೂಪಗಳಲ್ಲಿದ್ದು, ಕಾಲಕ್ರಮೇಣ ಆಂತರಿಕ ಮೌಲ್ಯಹೊಂದಿದ ಚಿನ್ನ, ಬೆಳ್ಳಿನಾಣ್ಯಗಳ ರೂಪ ಪಡೆದು ಅದನ್ನು ಟಂಕಿಸಿ ಚಲಾವಣೆಗೆ ಸರಕಾರವೇ ತರುತ್ತಿತ್ತು. ನಾಗರಿಕತೆ ಮುಂದುವರಿದಂತೆ ಆಂತರಿಕ ಮೌಲ್ಯವೇನೂ ಇಲ್ಲದ, ಕಾಗದದ ನೋಟಿನ ರೂಪವನ್ನು ಹಣ ಪಡೆಯಿತು.  ನೋಟುಗಳ ಮುದ್ರಣ ಮತ್ತು ಚಲಾವಣೆಯ ಜವಾಬ್ದಾರಿ ಸರಕಾರದ್ದೇ ಆಗಿತ್ತು. ಆಧುನಿಕ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರ ಬೆಳೆದು ಕೇಂದ್ರೀಯ ಬ್ಯಾಂಕು (ಸೆಂಟ್ರಲ್ ಬ್ಯಾಂಕ್) ಗಳು ಆರಂಭವಾದಾಗ ಸರಕಾರಗಳು ನೋಟು ಮುದ್ರಣದ ಕಾರ್ಯವನ್ನು ಆಯಾಯ ದೇಶದ ಕೇಂದ್ರೀಯ ಬ್ಯಾಂಕುಗಳಿಗೆ  ನೀಡಿದವು.
ನಮ್ಮ ದೇಶದಲ್ಲಿ ಕೇಂದ್ರೀಯ ಬ್ಯಾಂಕು ಎನ್ನಿಸಿಕೊಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ), ೧೯೩೪ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ ೨೨ನೇ ಕಲಂನನ್ವಯ ನೋಟು ಮುದ್ರಿಸಿ ಚಲಾವಣೆಗೆ ತರುವ ಅಧಿಕಾರವನ್ನು ಹೊಂದಿದೆ. ದೇಶದ ಅರ್ಥವ್ಯವಸ್ಥೆಯ ಮೇಲೆ ನೋಟುಗಳ ಲಭ್ಯತೆ ಮತ್ತು ಚಲಾವಣೆ ಅಗಾಧವಾದ ಪ್ರಭಾವ ಬೀರುವುದರಿಂದ ನೋಟುಮುದ್ರಣದ ಕಾರ್ಯ ಸರಕಾರದ ಅಧೀನದಲ್ಲಿರಕೂಡದು ಎಂಬ ನೀತಿಯನ್ನು ಗಮನದಲ್ಲಿಟ್ಟು, ಸ್ವಾಯತ್ತತೆ ಹೊಂದಿದ್ದು, ಅರ್ಥವ್ಯವಸ್ಥೆಯ ಬಗ್ಗೆ ವಿಶೇಷ ಪರಿಣತಿ ಇರುವ ಆರ್.ಬಿ.ಐ.ಗೇ ಈ ಅಧಿಕಾರವನ್ನು ದೇಶದ ಕಾನೂನು ನೀಡಿದೆ. ಆದರೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಆರ್.ಬಿ.ಐ. ಸರಕಾರದ ಅಭಿಪ್ರಾಯವನ್ನು ಅರಿತೇ ಮುಂದುವರಿಯಬೇಕು.
ನೋಟುಗಳನ್ನು ಮುದ್ರಿಸುವಾಗ ಕೆಲವು ನಿಯಮಗಳ ಪಾಲನೆ ಅಗತ್ಯ. ಹಿಂದಿನ ಶತಮಾನದ ಆರಂಭದ ತನಕ ನೋಟುಗಳನ್ನು ಮುದ್ರಿಸುವಾಗ ಒಂದು ನಿರ್ದಿಷ್ಟ ಮೌಲ್ಯದ ಚಿನ್ನವನ್ನು ಭದ್ರತಾ ನಿಧಿಯಾಗಿ ಕಾದಿರಿಸಿಕೊಳ್ಳಬೇಕಿತ್ತು. ಸುಮಾರಾಗಿ ಎರಡು ಮಹಾಯುದ್ಧಗಳ ಮಧ್ಯಭಾಗದಲ್ಲಿಈ ನಿಯಮವನ್ನು ಕೈಬಿಟ್ಟು ಕನಿಷ್ಟ ಭದ್ರತಾನಿಧಿಯ ನೀತಿಯನ್ನು ಅನುಸರಿಸುವ   ಪದ್ಧತಿ ಆರಂಭವಾಯಿತು. ಈ ನೀತಿಯಂತೆ, ಈಗ ೨೦೦ ಕೋಟಿ ರುಪಾಯಿ ಮೌಲ್ಯದ ,ಸರ್ಕಾರದ ಪ್ರತಿಭೂತಿ ಪತ್ರಗಳು (ಗವರ್ನ್-ಮೆಂಟ್ ಸೆಕ್ಯುರಿಟೀಸ್),  ಚಿನ್ನ ಮತ್ತು ವಿದೇಶಿ ವಿನಿಮಯಗಳನ್ನು ಭದ್ರತೆಯಾಗಿ ಆರ್.ಬಿ.ಐ. ಹೊಂದಿರಬೇಕು; ಅದರಲ್ಲಿ ೧೧೫ ಕೋಟಿ ರುಪಾಯಿ ಮೌಲ್ಯದ ಚಿನ್ನದ ನಾಣ್ಯ ಮತ್ತು ಗಟ್ಟಿ (ಬುಲಿಯನ್)ಗಳನ್ನೇ ಕಾಯ್ದಿರಿಸಬೇಕು.
ಈ ಕಾಯ್ದೆಯ ೨೬ನೇ ಕಲಂನ ಪ್ರಕಾರ ರಿಸರ್ವ್ ಬ್ಯಾಂಕ್ ಹೊರತರುವ ಎಲ್ಲಾ ನೋಟುಗಳೂ ಕಾನೂನು ಬದ್ಧ ಬಾಧ್ಯತಾ ಪತ್ರಗಳು (ಲೀಗಲ್ ಟೆಂಡರ್). ನೋಟು ಮೂಲತಃ ಒಂದು ವಚನಪತ್ರ (ಪ್ರಾಮಿಸರಿ ನೋಟ್). ಅಂದರೆ ನೋಟಿನಲ್ಲಿ ಮುದ್ರಿತವಾಗಿರುವ ಆಶ್ವಾಸನೆಯಂತೆ ಅದರಲ್ಲಿ ನಮೂದಿಸಿರುವ ಮೊಬಲಗಿನಷ್ಟು ಮೌಲ್ಯವನ್ನು ಆ ನೋಟನ್ನು ಹೊಂದಿರುವ ವ್ಯಕ್ತಿ ಅಂದರೆ ವಾಹಕ (ಬೇರರ್) ಬಂದು ಕೇಳಿದರೆ ಆರ್.ಬಿ.ಐ. ನೀಡಬೇಕಾಗುತ್ತದೆ.
ಅದೇ ಕಲಂನ ೨ನೇ ಭಾಗದ ಪ್ರಕಾರ, ಆರ್.ಬಿ.ಐ.ಯ ನಿರ್ದೇಶಕ ಮಂಡಳಿಯ ಶಿಫಾರಸಿನಂತೆ, ಕೇಂದ್ರ ಸರಕಾರವು ಯಾವುದೇ ನೋಟನ್ನು ರದ್ದು ಅಥವಾ ಅಮಾನ್ಯಗೊಳಿಸಬಹುದು.

ನೋಟು ರದ್ದತಿಯ ಉದ್ದೇಶ ಮತ್ತು ಪ್ರಕ್ರಿಯೆ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ನವಂಬರ ೮, ೨೦೧೬ ರಂದು ಮಾಡಿದ ಭಾಷಣದ ಪ್ರಕಾರ ೫೦೦ ಮತ್ತು ೧೦೦೦ ರುಪಾಯಿಯ ನೋಟುಗಳ ರದ್ದತಿಯ ಉದ್ದೇಶಗಳು ಮೂರು: ಕಾಳಧನವನ್ನು ಹೊರತರುವುದು, ಉಗ್ರಗಾಮಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಮತ್ತು ನಕಲಿ ನೋಟುಗಳ ಚಲಾವಣೆಯನ್ನು ನಿಯಂತ್ರಿಸುವುದು. ಇವು ಮೂರೂ ಘನವಾದ ಉದ್ದೇಶಗಳೇ; ಹೀಗಾಗಿ ಸಾರ್ವಜನಿಕರ ದೃಷ್ಟಿಯಿಂದ ಸರಕಾರದ ನಿರ್ಧಾರ ಒಂದು ದಿಟ್ಟ ಹೆಜ್ಜೆಯಾಗಿತ್ತು.
ಆ ದಿನದ ನಡು ರಾತ್ರಿಯಿಂದ ಎರಡು ಅಧಿಕಮೌಲ್ಯದ ನೋಟುಗಳು ಬೆಲೆಯಿಲ್ಲದ ರದ್ದಿಯಾದವು. ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಸುಮಾರು ೮೬% ರಷ್ಟು ತಮ್ಮ ಬೆಲೆಯನ್ನು ಕಳಕೊಂಡವು. ನವಂಬರ ೧೦ನೇ ತಾರೀಕಿನಿಂದ ದಶಂಬರ ೩೦ರ ತನಕ ಜನರು ತಮ್ಮಲ್ಲಿದ್ದ ೫೦೦ ಮತ್ತು ೧೦೦೦ದ ನೋಟುಗಳನ್ನು ಬ್ಯಾಂಕುಗಳಲ್ಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನ ಶಾಖೆಗಳಲ್ಲಿ ಬದಲಾಯಿಸಿ ಅಷ್ಟೇ ಮೌಲ್ಯದ ಇತರ ನೋಟುಗಳನ್ನು ಪಡೆಯುವ ಅಥವಾ ತಮ್ಮ ಬ್ಯಾಂಕು ಖಾತೆಗಳಿಗೆ ಜಮಾ ಮಾಡುವ ಅವಕಾಶವನ್ನು ಸರಕಾರ ನೀಡಿತು.

 
ನೋಟು ರದ್ದತಿಯ ಸಂದರ್ಭಗಳು:
ಆಧುನಿಕ ಅರ್ಥವ್ಯವಸ್ಥೆಗೆ ಹಣ ಮೂಲವಸ್ತು: ಮನುಷ್ಯದೇಹ ತನ್ನ ಕೆಲಸ ಮಾಡುತ್ತಾ ಇರಲು ಬೇಕಾದ ರಕ್ತಸಂಚಾರದಂತೆ.  ಜನಸಾಮಾನ್ಯರಿಗೆ ತಮ್ಮ ದೈನಂದಿನ ವ್ಯವಹಾರಕ್ಕೆ ಅಗತ್ಯ ಇರುವಷ್ಟು ಹಣ ಚಲಾವಣೆಯಲ್ಲಿ ಯಾವತ್ತೂ ಪೂರೈಕೆಯಾಗಬೇಕು. ಹಣದ ಪೂರೈಕೆ ಅಗತ್ಯಕ್ಕಿಂತ ಕಡಿಮೆಯಾದಲ್ಲಿ ವ್ಯಾಪಾರ, ದುಡಿಮೆ, ಉತ್ಪಾದನೆ ಮತ್ತು ಸಾಗಾಟ ಮುಂತಾದ ಆರ್ಥಿಕ ಚಟುವಟಿಕೆಗಳು ಕುಂಠಿತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹಣದ ಚಲಾವಣೆಯ ಮೇಲೆ ಹತೋಟಿ ಇಲ್ಲದೆ ಪೂರೈಕೆ ಅಗತ್ಯಕ್ಕಿಂತ ಹೆಚ್ಚಾದರೆ, ಹಣದ ಮೌಲ್ಯ ಕಡಿಮೆಯಾಗಿ ದೈನಂದಿನ ಬಳಕೆಯ ವಸ್ತುಗಳು ದುಬಾರಿಯಾಗುತ್ತವೆ. ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುತ್ತದೆ. ಹೀಗಾಗಿ ಹಣದ ಮುದ್ರಣ ಮತ್ತು ಚಲಾವಣೆ ಪ್ರಕ್ರಿಯೆಗಳು ನಿರ್ದಿಷ್ಟ ನೀತಿಗನುಗುಣವಾಗಿ ನಡೆಯಬೇಕು. ನೋಟುಗಳನ್ನು ರದ್ದು ಮಾಡುವ ಅಧಿಕಾರ, ನೋಟು ಮುದ್ರಿಸುವ ಕೇಂದ್ರೀಯ ಬ್ಯಾಂಕಿಗೂ, ರಾಷ್ಟ್ರದ ಆಡಳಿತೆಯ ಜವಾಬ್ದಾರಿ ಹೊಂದಿರುವ ಸರಕಾರಕ್ಕೂ ಇದೆ.  ಆದರೆ ಈ ಬಗ್ಗೆ ನಿರ್ಧಾರವನ್ನು ಒಂದೇ ಸಂಸ್ಥೆ ತೆಗೆದುಕೊಳ್ಳಲಾಗುವುದಿಲ್ಲ. ದೇಶದ ಹಣಕಾಸು ರಂಗದ ಬಗ್ಗೆ ವಿಶೇಷ ಜ್ಞಾನ ಇರುವ ರಿಸರ್ವ್ ಬ್ಯಾಂಕು ಸರಕಾರದೊಡನೆ ಸಮಾಲೋಚಿಸಿ ನಿರ್ಧಾರವನ್ನು ಕೈಗೊಳ್ಳಬೇಕು. ಅಥವಾ ಸರಕಾರ ತನ್ನ ಮೂಲಗಳಿಂದ ಸಂಪಾದಿಸಿದ ಮಾಹಿತಿಯ ಆಧಾರದಲ್ಲಿ, ರಿಸರ್ವ್ ಬ್ಯಾಂಕಿನೊಡನೆ ಚರ್ಚಿಸಿ ಮುಂದುವರಿಯಬಹುದು. ಎರಡೂ  ಸಂಸ್ಥೆಗಳಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ.
ಅತ್ಯಂತ ವಿಶೇಷವಾದ ಸಂದರ್ಭದಲ್ಲಿ ಒಂದು ದೇಶದಲ್ಲಿ ನೋಟುಗಳ ರದ್ದತಿಯನ್ನು ಮಾಡಬಹುದು. ಬೆಲೆಗಳು ಕ್ಷಣದಿಂದ ಕ್ಷಣಕ್ಕೆ ಮೇಲೆ ಏರುತ್ತಾ ಹೋಗಿ ಚಲಾವಣೆಯಲ್ಲಿರುವ ನೋಟುಗಳಿಗೆ ಬೆಲೆಯೇ ಇಲ್ಲದಾದಾಗ (ತೀವ್ರವಾದ ಹಣದ ಉಬ್ಬರವಾದಾಗ-ಇಂಗ್ಲಿಷಿನಲ್ಲಿ ರನ್-ಎವೇ ಇನ್-ಫ್ಲೇಷನ್ ಎಂಬ ಪದವನ್ನು ಉಪಯೋಗಿಸಲಾಗುತ್ತದೆ) ಅರ್ಥವ್ಯವಸ್ಥೆಯ ರಕ್ಷಣೆಗೆ ಆ ನೋಟುಗಳನ್ನು ರದ್ದು ಪಡಿಸಿ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಬಹುದು. ಹೋದ ಶತಮಾನದ ಮೊದಲನೇ ಮಹಾ ಯುದ್ಧದ ಸಂದರ್ಭದಲ್ಲಿ ಅವಿಭಜಿತ ಜರ್ಮನಿಯಲ್ಲಿ ಇದೇ ಪರಿಸ್ಥಿತಿ ಉಂಟಾಗಿ ನೋಟುಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಒಯ್ಯುವಂತಾಗಿತ್ತು. ಇದಕ್ಕೆ ಪರಿಹಾರವಾಗಿ ಚಲಾವಣೆಯಲ್ಲಿದ್ದ ನೋಟುಗಳನ್ನು ರದ್ದು ಮಾಡಿ ಹೊಸ ನೋಟುಗಳನ್ನು ಜಾರಿಗೆ ತರಲಾಗಿತ್ತು.
ಅಧಿಕೃತ ನೋಟುಗಳಿಗೆ ಪರ್ಯಾಯವಾಗಿ ’ನಕಲಿ’ (ಕಳ್ಳ) ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಾಗ ಅವುಗಳನ್ನು ತಿಳಿಯದೆ ಉಪಯೋಗಿಸುವ ನಾಗರಿಕರಿಗೆ ನಷ್ಟ ಮಾತ್ರವಲ್ಲ, ಕಳ್ಳ ನೋಟುಗಳನ್ನು ಹೊಂದಿರುವುದು ಮತ್ತು ಇತರರಿಗೆ ಕೊಡುವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧ.  ಅಧಿಕೃತ ನೋಟುಗಳಲ್ಲಿ ಸಾಕಷ್ಟು ಭದ್ರತಾ ವೈಶಿಷ್ಟ್ಯಗಳನ್ನು (ಸೆಕ್ಯುರಿಟಿ ಫೀಚರ್ಸ್) ಅಳವಡಿಸಿದರೂ, ಕೆಲವೊಮ್ಮೆ, ಕಳ್ಳ ನೋಟುಗಳಲ್ಲಿಯೂ  ಆ ವೈಶಿಷ್ಟ್ಯಗಳನ್ನು ಮುದ್ರಿಸಿಕೊಳ್ಳುವ ಕೌಶಲ್ಯ ಮುದ್ರಕರಲ್ಲಿದ್ದು ಅವರ ಚಟುವಟಿಕೆ ಹೆಚ್ಚಾದಾಗ ಆರ್ಥಿಕತೆಗೆ ಮತ್ತು ಸಮಾಜಕ್ಕೆ ತೀವ್ರವಾದ ಹಾನಿಯಾಗುವ ಸಾಧ್ಯತೆ ಇದೆ. ಇಂತಹ ಸ್ಥಿತಿ ದೇಶದಲ್ಲಿ ಉಂಟಾಗಿ ಪರಿಸ್ಥಿತಿ ಕೈಮೀರಿದಾಗ ಅಧಿಕೃತ ನೋಟುಗಳನ್ನು ರದ್ದುಮಾಡಿ ಹೊಸ ನೋಟುಗಳನ್ನು ಚಲಾವಣೆಗೆ ತರಬೇಕಾದ ಅನಿವಾರ್ಯತೆ ಕೆಲವೊಮ್ಮೆ ಬರಬಹುದು.
ಇನ್ನೊಂದು ಪರಿಸ್ಥಿತಿಯನ್ನೂ ನಾವು ಗಮನಿಸಬೇಕು. ಒಂದು ಅರ್ಥ ವ್ಯವಸ್ಥೆಯ  ಚೌಕಟ್ಟಿನಲ್ಲಿಯೇ ಎರಡು ಸಮಾನಾಂತರ ಉಪವ್ಯವಸ್ಥೆಗಳು ಹುಟ್ಟಿಕೊಳ್ಳುತ್ತವೆ. ನಾಗರಿಕರು ಉದ್ಯೋಗ, ಸ್ವಂತ ಉದ್ದಿಮೆ, ಕೃಷಿ, ಕೂಲಿ ಕೆಲಸ ಮಾಡಿ ಅಥವಾ ಇನ್ನಿತರ ಅಧಿಕೃತ ಮಾರ್ಗದಲ್ಲಿ ಸಂಪಾದಿಸಿ ಜೀವನ ನಡೆಸುವುದು ಸಾಮಾನ್ಯವಾದ ಒಂದು ವ್ಯವಸ್ಥೆ. ಇಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳನ್ನೂ ಸರಕಾರದ ಬೊಕ್ಕಸಕ್ಕೆ ನೀಡಿ ಕಾನೂನುಗಳನ್ನು ಗೌರವಿಸಿ ಬದುಕುವ ಜನತೆಯನ್ನು ನಾವು ಕಾಣುತ್ತೇವೆ. ಬಹುತೇಕ ನಾಗರಿಕರು ಈ ವ್ಯವಸ್ಥೆಯ ಬೆನ್ನೆಲುಬುಗಳೇ.
ಇದಕ್ಕೆ ವ್ಯತಿರಿಕ್ತವಾಗಿ ಇರುವ ಭ್ರಷ್ಟ ಎನ್ನಬಹುದಾದ ವ್ಯವಸ್ಥೆಯಲ್ಲಿ ಹಣಸಂಪಾದನೆಯ ದಾರಿಯೇ ಭಿನ್ನವಾದುದು. ಇಲ್ಲಿ ಕಾನೂನಿಗೆ, ನೀತಿ ನಿಯಮಗಳಿಗೆ ಬೆಲೆಯಿಲ್ಲ; ಅತಿ ಬೇಗನೇ ಸಂಪಾದನೆ ಮಾಡುವುದೇ ಗುರಿಯಾಗಿ  ಅದಕ್ಕೆ ಅನುಸರಿಸುವ ಮಾರ್ಗ ಅನೈತಿಕವಾಗಿ ಸಮಾಜ ಅನಾರೋಗ್ಯಕ್ಕೆ ಈಡಾಗುತ್ತದೆ.  ಸಂಪಾದನೆಯ ವಿಧಾನಗಳು ಲೆಕ್ಕಕ್ಕೆ ಬಾರದಷ್ಟು ಮಾತ್ರವಲ್ಲ ಸಾಮಾನ್ಯರಿಗೆ ಅರ್ಥವಾಗದಷ್ಟು ಸಂಕೀರ್ಣವಾದ ಪ್ರಕ್ರಿಯೆಯ ಮೂಲಕವೂ ಈ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇವು ಸರಕಾರಿ ಸಂಸ್ಥೆಗಳಲ್ಲಿ ಮಾತ್ರವಲ್ಲ, ದೊಡ್ಡ ಮಟ್ಟದಲ್ಲಿ ಖಾಸಗೀ ವಲಯದಲ್ಲಿಯೂ ತೀರಾ ಸಾಮಾನ್ಯ. (ವಿದೇಶೀಮೂಲದ ಬಹುರಾಷ್ಟ್ರೀಯ ಕಂಪೆನಿಗಳು, ಭಾರತದ ಬಹುದೊಡ್ಡ ಕಂಪೆನಿಗಳು ಈ ಕಲೆಯನ್ನು ಬೆಳೆಸಿಕೊಂಡಿವೆ ಎಂದು ಆಗಾಗ ಮಾಧ್ಯಮಗಳಲ್ಲಿ ವರದಿಗಳು ಬರುತ್ತಲೇ ಇವೆ.)
ಈ ರೀತಿಯ ಚಟುವಟಿಕೆಗಳ ಮೂಲಕ ಸಂಪತ್ತು ಹುಟ್ಟಿಕೊಂಡಾಗ ಅಥವಾ ಆದಾಯವನ್ನು ಸಂಪಾದಿಸಿದಾಗ ಅವುಗಳ ಕುರಿತಾದ ದಾಖಲೆಗಳನ್ನು ಬದಲಾಯಿಸಿ, ತೆರಿಗೆಯನ್ನು ಕೊಡದೆ ಬೆಳೆಸಿದ ಸಂಪತ್ತು ಆರ್ಥಿಕತೆಗೆ ಮಾರಕವಾಗುತ್ತದೆ. ನ್ಯಾಯವಾಗಿ ಬರಬೇಕಾದ ರಾಜಸ್ವ ಬೊಕ್ಕಸಕ್ಕೆ ಲಭಿಸದೆ ನಷ್ಟವಾಗುತ್ತದೆ ಮಾತ್ರವಲ್ಲ, ಆರ್ಥಿಕ ಚಟುವಟಿಕೆಗಳನ್ನು ಈ ಅಕ್ರಮವಾಗಿ ಗಳಿಸಿದ ಸಂಪತ್ತು ನಲುಗಿಸಬಹುದು. ಕಾಳಧನ ಎನ್ನಲ್ಪಡುವ ಈ ರೀತಿಯ ಸಂಪತ್ತು,  ಸಾಮಾಜಿಕ ಜೀವನ ಮತ್ತು ರಾಜಕೀಯ ಪರಿಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರಬಹುದು.
ಮುಖ್ಯವಾಹಿನಿಯಿಂದ ಹೊರಗಿದ್ದು ಅದಕ್ಕೆ ಮಾರಕ ಹೊಡೆತ ನೀಡಬಲ್ಲ ಇಂತಹ ವ್ಯವಸ್ಥೆಯನ್ನು ಹತೋಟಿಗೆ ತರಲು ಅಧಿಕ ಮೌಲ್ಯದ ನೋಟುಗಳ ರದ್ದತಿ ಒಂದು ದಾರಿ. ಆದರೆ ವಾಮಮಾರ್ಗದಲ್ಲಿ ಸಂಗ್ರಹಿಸಿದ ಹಣವನ್ನು ಅಥವಾ ಸಂಪತ್ತನ್ನು ನೋಟುಗಳ ರೂಪದಲ್ಲಿ ಶೇಖರಿಸಿಡುವವರು ವಿರಳ ಎಂದು ತಜ್ಞರ ಅಬಿಪ್ರಾಯ. ಹಾಗಾಗಿ ಎಷ್ಟರ ಮಟ್ಟಿಗೆ ನೋಟು ರದ್ದತಿಯಿಂದ ’ಕಾಳಸಂಪತ್ತಿನ’ ನಿವಾರಣೆಯಾಗಬಹುದು ಎಂದು  ನಿಖರವಾಗಿ ಹೇಳಲು ಅಸಾಧ್ಯ.
ಹಿಂದೆ ಉಲ್ಲೇಖಿಸಿದ ಹಣದ ಉಬ್ಬರದ ಪರಿಸ್ಥಿತಿ ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯಲ್ಲಿ ಉಂಟಾಗಿಯೇ ಇಲ್ಲ. ಮಾತ್ರವಲ್ಲ, ದೇಶದ ಅರ್ಥವ್ಯವಸ್ಥೆ ಸುಮಾರಾಗಿ ಸಮತೋಲನದಲ್ಲಿತ್ತು.  ಹಾಗಾಗಿ ೨೦೧೬ರ ನೋಟು ರದ್ದತಿಗೆ ಈ ಕಾರಣವನ್ನು ಸರಕಾರ ನೀಡಿಲ್ಲ. ಅದರ ಬದಲು ಹೊಸತಾದ ಕಾರಣ ಒಂದನ್ನು ಕೊಟ್ಟಿದೆ. ಉಗ್ರಗಾಮಿಗಳ ಚಟುವಟಿಕೆಗಳು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿವೆ; ಅವರ ವ್ಯವಹಾರಕ್ಕೆ ಅಧಿಕ ಮೌಲ್ಯದ ನೋಟುಗಳ ಪೂರೈಕೆ ಪ್ರೋತ್ಸಾಹ ನೀಡುತ್ತದೆ. ನೋಟು ರದ್ದತಿ ಅದಕ್ಕೆ ಕಡಿವಾಣ ಹಾಕಬಹುದು ಎಂದು ಸರಕಾರದ ಹೇಳಿಕೆಯಾಗಿತ್ತು.