ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಪ್ರಕೃತಿ ಸಹಜವೋ, ಯುಗಧರ್ಮಕ್ಕೆ ಸರಿಹೊಂದುವ ಬದಲಾವಣೆಗಳೋ ಎಂಬುದನ್ನು ಓದುಗರು ತಮ್ಮ ತಮ್ಮ ಜ್ಞಾನಶಕ್ತಿಯಿಂದ ತಿಳಿದುಕೊಂಡು ನಿರ್ಧರಿಸಬೇಕು.  ಪುಟಗಟ್ಟಲೆ ಅಡ್ಡವಿಚಾರಣೆಯನ್ನು ದಾಖಲಿಸುವ, ಗಂಟೆಗಟ್ಟಲೆ ವಾದ ಮಂಡನೆಯನ್ನು ಆಲಿಸುವ, ಪ್ರತಿಯೊಂದನ್ನೂ ತೂಗಿ ನೋಡಿ ನಿರ್ಧರಿಸುವ, ತಿಳಿಯದ್ದನ್ನು ಕೇಳಿ ತಿಳಿದುಕೊಳ್ಳುವ ತಾಳ್ಮೆಯ ಮನೋಭಾವ ಕಾಲಾನುಘಟ್ಟದಲ್ಲಿ ಕಡಿಮೆಯಾಗುತ್ತಾ ಬಂದಿದೆ ಎಂಬ ಸತ್ಯ ಸಂಗತಿಗೆ ಅಂತರ್ಜಾಲದ ವೆಬ್ ಸೈಟ್ ಗಳು, ಯು-ಟ್ಯೂಬ್, ಫೇಸ್ಬುಕ್, ವಾಟ್ಸಾಪ್, ಹಾಗೂ ಇತರೆ ಮಾಧ್ಯಮಗಳು ಒದಗಿಸುವ ಬ್ರಹ್ಮಜ್ಞಾನವೂ  ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನ್ಯಾಯಾಲಯಗಳ ಕಾರ್ಯ ಕಲಾಪಗಳಲ್ಲಿಯೂ ತುಂಬಾ ಬದಲಾವಣೆಗಳು ಆಗಿವೆ ಮತ್ತು ಇನ್ನು ಮುಂದೆಯೂ ಅಗುತ್ತಿರುತ್ತವೆ. ನ್ಯಾಯದಾನದ ಪ್ರಕ್ರಿಯೆ ನಿಂತ ನೀರಲ್ಲ. ಅದು ನಿರಂತರ ಹರಿಯುವ, ಹರಿಯುತ್ತಲೇ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮತ್ತು ಸಕಾರಾತ್ಮಕ ಹಾಗೂ ನಕಾರಾತ್ಮಕ ಚಿಂತನೆಗಳಲ್ಲಿ ಅಡಗಿರುವ ಸುಂದರ ಸತ್ಯವನ್ನು ಸೋಸಿ ಹೀರಿ ತೆಗೆದು ಉಣಬಡಿಸುವ ಮಹತ್ಕಾರ್ಯ.  

ಸರಿ ಸುಮಾರು 2000ನೇ ಇಸವಿಯ ಆರಂಭದಿಂದ ಇಂದಿನವರೆಗೆ ನ್ಯಾಯಾಂಗ ವ್ಯವಸ್ಥೆ ಸರ್ವಾಂಗೀಣ ಅಭಿವೃದ್ಧಿಯನ್ನು ಕಂಡಿದೆ ಎಂಬುದಕ್ಕಿಂತಲೂ ಸರ್ವಾಂಗೀಣ ಬದಲಾವಣೆಗಳನ್ನು ಕಂಡಿದೆ ಎಂಬುದೇ ಸೂಕ್ತವಾದ ಮಾತಾಗುತ್ತದೆ.  ‘ಎಲ್ಲಾ ಬದಲಾವಣೆಗಳು ಅಭಿವೃದ್ಧಿಯ ವಿಷಯಗಳಲ್ಲ’ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ವಕೀಲರುಗಳು, ನ್ಯಾಯಾಧೀಶರುಗಳು, ನ್ಯಾಯಾಂಗ ನೌಕರರುಗಳು ಹೆಜ್ಜೆ ಹಾಕಿದ್ದಂತೂ ಸತ್ಯ. ಹಳೆಯ ಟೈಪ್ ರೈಟರ್ಗಳು, ಕೋರ್ಟ್ ಡೈರಿ, ವಕೀಲ್ ಡೈರಿಗಳು ಮೂಲೆ ಗುಂಪಾಗಿ ಕಂಪ್ಯೂಟರ್ ಗಳು, ಲ್ಯಾಪ್ ಟಾಪ್ ಗಳು, ಟ್ಯಾಬ್ ಗಳು ಸರ್ವಾಂತರ್ಯಾಮಿಯಾಗಿ ಬೆಳವಣಿಗೆಯು ದಾಪುಗಾಲಿಡುವಲ್ಲಿ ಮುಖ್ಯ ಪಾತ್ರವಹಿಸಿದವು.  ವಾರಗಟ್ಟಲೆ ಹುಡುಕಿ ಕೊನೆಗೊಂದು ಸೈಟೇಶನ್(ಪ್ರಕಾಶಿತ ತೀರ್ಪು) ಸಿಗುತ್ತಿದ್ದ ಕಾಲ ಬದಲಾಗಿ ಯಾವ ಸೈಟೇಶನ್ ಬೇಕೆಂದು ಕಂಪೂಟರಿನಲ್ಲಿ ಟೈಪಿಸಿದ ಕ್ಷಣಾರ್ಧದಲ್ಲಿ ಬೇಕಾದ ಸೈಟೇಶನ್ ಕಣ್ಣ ಮುಂದೆ ಪ್ರತ್ಯಕ್ಷವಾಗುವ ಮಾಯಾಲೋಕ ನಿರ್ಮಾಣವಾಗಿದೆ. ಆದೇಶದ ಪ್ರತಿ ಪಡೆಯಲು ವಾರಗಟ್ಟಲೆ ಪರದಾಡುತ್ತಿದ್ದ ಕಾಲ ಇತ್ತು. ಆದರೆ ಇಂದು ಆದೇಶವಾದ ಅರ್ಧ ಗಂಟೆಯಲ್ಲಿ ‘ಇ-ಕೋರ್ಟ್ಸ್’ ಎಂಬ ಸಾಫ್ಟ್ ವೇರ್ ತಂತ್ರಜ್ಞಾನವನ್ನು ಬಳಸಿಕೊಂಡು ನೋಡುವುದಕ್ಕೂ, ಪ್ರತಿ ಪಡೆಯುವುದಕ್ಕೂ ಸಾಧ್ಯವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳಾಗಿದ್ದರೂ ಕೆಳ ನ್ಯಾಯಾಲಯಗಳಲ್ಲಿ ಆ ಹಿಂದಿನ ಅಡ್ಡವಿಚಾರಣೆಯ ವೈಭವ, ವಾದ ಮಂಡಣೆಯ ಮನಮೋಹಕ ದೃಶ್ಯ, ಯಜ್ಞಶಾಲೆಯನ್ನು ಪ್ರವೇಶಿಸುವ ವೇದಜ್ಞಾನಿಯಂತೆ ಕಾನೂನನ್ನು ಅರೆದು ಕುಡಿದು ನ್ಯಾಯಾಲಯವನ್ನು ಪ್ರವೇಶಿಸುವ ವಕೀಲರುಗಳ ಓಜಸ್ಸು, ತಪೋನಿರತ ಋಷಿಗಳಂತೆ, ಸಂತರಂತೆ ಇರುತ್ತಿದ್ದ ನ್ಯಾಯಾಧೀಶರುಗಳ ಆ ಕಾಲ ಮಾಯವಾಗಿ ಕಳೆಗುಂದಿರುವುದು ಸುಮಾರು ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ವಕೀಲಿ ವೃತ್ತಿಯಲ್ಲಿ ಅನುಭವ ಹೊಂದಿರುವ ವಕೀಲರುಗಳ ಅನುಭವಕ್ಕೆ ಬಂದಿರುತ್ತದೆ. ಆದರೆ ಇಂದಿಗೂ ವಕೀಲಿ ವೃತ್ತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವೀಕರಿಸಿ ನಡೆಸುವವರಿಗೇನೇನೂ ಕೊರತೆಯಿಲ್ಲ. ವಕೀಲಿ ವೃತ್ತಿಯೂ ಒಂದು ಬಗೆಯ ದೇವರ ಪೂಜೆ ಎಂದು ತಿಳಿದು ಪ್ರತಿಯೊಬ್ಬ ಕಕ್ಷಿಗಾರನಿಗೂ, ವಾದವನ್ನು ಆಲಿಸುವ ನ್ಯಾಯಾಲಯಕ್ಕೂ ನ್ಯಾಯಕೊಡುವ ಹಾಗೂಪಣತೊಟ್ಟು ದುಡಿಯುವ ಮತ್ತು ಅದಕ್ಕೆಂದೇ ತಮ್ಮ ಆಯುಷ್ಯವನ್ನು ಮುಡಿಪಾಗಿಟ್ಟಿರುವವರು ಹೆಚ್ಚಿಗೆಯೇ ಇದ್ದಾರೆ. ಇನ್ನು ಮುಂದೆಯೂ ಇರುತ್ತಾರೆ. ಅಂತವರೇ ನ್ಯಾಯಾಂಗ ವ್ಯವಸ್ಥೆಯ ನಿಜವಾದ ಆಧಾರ ಸ್ಥಂಬಗಳು. 

ತೀರಾ ಗಂಭೀರ ಚಿಂತನೆಗಳಿಗೆ ಎಡೆಮಾಡಿಕೊಡುವ ವಕೀಲಿ ವೃತ್ತಿ ಸಮಾಜದ ಪ್ರತಿಯೊಂದು ಮಜಲುಗಳ ಒಳಿತು ಕೆಡುಕುಗಳನ್ನು ಅರಗಿಸಿಕೊಳ್ಳುವುದಕ್ಕೂ ಸಹಕಾರ ಮಾಡುತ್ತದೆ. ಮನುಷ್ಯ ಜೀವನದ ನಿಜವಾದ ರೂಪ ಲಾವಣ್ಯ, ಅದರ ಉದ್ದ-ಅಗಲ, ಆಳ- ಎತ್ತರ, ಸಿಹಿ-ಕಹಿಗಳ ಅನುಭವವಾಗುವುದೇ ವಕೀಲಿ ವೃತ್ತಿಯನ್ನು ಆನಂದದಿಂದ ಎದುರುಗೊಂಡು ಪ್ರಾಂಜಲ ಮನಸ್ಸಿನಿಂದ  ಸ್ವಾಗತಿಸಿ ಸ್ವೀಕರಿಸಿ ಸಂಶೋಧನಾತ್ಮಕ ದೃಷ್ಟಿಯಿಂದ ಪ್ರತಿಯೊಂದು ವಿವಾದವನ್ನೂ ನೋಡುವ ಮನಸ್ಸು ಮಾಡಿದಾಗ. ಅಂತಹ ಸ್ವಚ್ಚ ಮನಸ್ಥಿತಿಯಿಂದ ವಕೀಲರುಗಳು ಕಾರ್ಯಪ್ರವೃತ್ತರಾದಾಗ ನ್ಯಾಯಾಲಯವು ನುರಿತ ಆಟಗಾರನ ಆಟದ ಬಯಲಿನಂತಾಗುವುದರಲ್ಲಿ ಸಂಶಯವಿಲ್ಲ. 

ವಕೀಲಿ ವೃತ್ತಿಯಲ್ಲೂ ಹೆಜ್ಜೆ ಹೆಜ್ಜೆಗೂ ಹಾಸ್ಯಗಳಿಗಾಗಲೀ, ನಗುವನ್ನು ಮೊಗೆದೀವ ಸಂದರ್ಭಗಳಿಗಾಗಲೀ ಏನೇನೂ ಕೊರತೆಯಿಲ್ಲ. ಅದನ್ನೆಲ್ಲಾ ನೋಡುವ ದೃಷ್ಟಿಯಲ್ಲಿರುತ್ತದೆ. ಸ್ವೀಕರಿಸುವ ಪ್ರಾಂಜಲ ಮನಸ್ಸಿನಲ್ಲಿರುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ ಯಾವುದೋ ಒಂದು ವಿವಾಹ ವಿಚ್ಚೇದನದ ಪ್ರಕರಣವನ್ನು ನಡೆಸುತ್ತಿರುವ ಸಂದರ್ಭದಲ್ಲಿ ನನ್ನೊಳಗಿನ ಕವಿ ಹೃದಯದಲ್ಲಿ ಜನ್ಮ ಪಡೆದ ಒಂದು ಕವನವನ್ನು ನಾನು ಇಲ್ಲಿ ದಾಖಲಿಸುವುದು ಸೂಕ್ತ ಅಂತ ತಿಳಿದಿದ್ದೇನೆ. 

ವಿವಾಹ ವಿಚ್ಛೇದನ

ಆಕೆ ವಕೀಲರ ಕಚೇರಿಗೆ ಬಂದಳು

ಕಕ್ಷಿಗಾರ್ತಿ!

 

ವಿವಾಹ ವಿಚ್ಚೇದನವನ್ನು ಕೊಡಿಸಿ

ಎಂದಳು ವೃತ್ತಿಯಲ್ಲಿ

ಚಿತ್ರಗಾರ್ತಿ!

 

ವಕೀಲರಿತ್ತ ಬುದ್ಧಿಮಾತುಗಳಿಗೆ

ಮುಗುಳ್ನಕ್ಕು ನಡೆದಳು ಆಕೆ

ಸಂತಸದಿ ಮನೆಗೆ!

 

ಮನೆಗೆ ಹೋದವಳೇ ಕಳುಹಿಸಿದಳು

ವಕೀಲರಿಗೆ ಎಸ್ಸೆಂಮ್ಮೆಸ್ಸು ಸಂದೇಶ

“ನಿಮ್ಮಂತ ಗಂಡ ಇರಬೇಕಿತ್ತು ಎನಗೆ!”

 

ವಕೀಲರ ಮೊಬೈಲಿನಲ್ಲಿ

ಸದ್ದಿಲ್ಲದೇ ಮಲಗಿದ್ದ ಸಂದೇಶವ

ಕದ್ದು ಓದಿದಳು ಅವರ ಮನೆಯಾಕೆ!

 

ಈಗ ವಕೀಲರ ಮನೆಯಲ್ಲಿಯೂ

ಅರ್ಜಿ ತಯಾರಾಗುತ್ತಿದೆ

ವಿವಾಹ ವಿಚ್ಚೇದನಕ್ಕೆ

 ***       

ನನ್ನ ಕೈಯಿಂದ ಇಂತಹ ನೂರಾರು ಕವನಗಳು ಸೃಷ್ಟಿಯಾಗುವುದಕ್ಕೆ ನಾನು ಅಭಿಮಾನದಿಂದ ಆಯ್ಕೆ ಮಾಡಿಕೊಂಡ ವಕೀಲಿ ವೃತ್ತಿಯೇ ಕಾರಣವಾಗಿದೆ. ನನ್ನೆಲ್ಲಾ ಬರಹಗಳಿಗೆ ಪ್ರೇರಕ ಶಕ್ತಿ ನನ್ನ ವೃತ್ತಿ. ಆ ವೃತ್ತಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ವಕೀಲಿ ವೃತ್ತಿಯ ಮೇಲೆ ಗೌರವವನ್ನೂ, ಪ್ರೀತಿಯನ್ನೂ, ಮಮತೆಯನ್ನೂ ಹೊಂದಿರುವುದರ ಜೊತೆಗೆ ನ್ಯಾಯದಾನದ ಪ್ರಜ್ಞೆಯಿಂದಲೂ, ಪರಿಶುದ್ಧವಾದ ಮನಸ್ಸಿನಿಂದಲೂ, ನ್ಯಾಯದೇವತೆಯ ಮೇಲಿನ ಭಕ್ತಿಯಿಂದಲೂ ಪ್ರತಿಯೊಂದು ಹೆಜ್ಚೆಯನ್ನು ಇರಿಸಿ ಗಮಿಸಿದಲ್ಲಿ  ನ್ಯಾಯವಾದಿಗಳ ಹಾಗೂ ನ್ಯಾಯಾಧೀಶರ ಜೀವನ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.  

ವೈದ್ಯನಾದವನು ಹೇಗೆ ರೋಗಿಗಳ ನಡುವೆ ತಾರತಮ್ಯ ಮಾಡುವುದಿಲ್ಲವೋ, ಹೇಗೆ ಪ್ರತಿಯೊಂದು ರೋಗವೂ ಒಂದೆ ಎಂಬ ಭಾವನೆಯಿಂದ ಚಿಕಿತ್ಸೆ ನೀಡುವುದಕ್ಕೆ ಮುಂದಾಗುತ್ತಾನೋ ಹಾಗೆಯೇ ವಕೀಲರಾದವರಿಗೂ ಎಲ್ಲಾ ಕಕ್ಷಿಗಾರರು ಸಮಾನರು. ಪ್ರತಿಯೊಂದು ಪ್ರಕರಣವೂ ಒಂದೇ ಎಂಬ ಮಾನವೀಯ ಸುಂದರ ಭಾವ ಎದೆಯೊಳಗಿರುತ್ತದೆ. ಪ್ರತಿಯೊಂದು ಕೇಸಿನ ಬಗ್ಗೆ ಕಕ್ಷಿಗಾರರಿಂದ ಮಾಹಿತಿ ಕಲೆಹಾಕುವಾಗ ಹೊಸ ಹೊಸ ವಿಷಯಗಳು ವಕೀಲರುಗಳ ಜ್ಞಾನ ಭಂಡಾರವನ್ನು ವೃದ್ಧಿಸುತ್ತಾ ಹೋಗುತ್ತವೆ. “ಪ್ರಪಂಚದಲ್ಲಿ ಹೀಗೂ ಇದೆಯಲ್ಲಾ?! ಹೀಗೂ ನಡೆಯುತ್ತದಲ್ಲಾ?! ಇಂತಹ ಜನರೂ ನಮ್ಮ ಸುತ್ತುಮುತ್ತ ಇದ್ದಾರಲ್ಲಾ?!” ಅಂತ ಅನ್ನಿಸಿ ಜಗತ್ತಿನ ಕಾಳಗರ್ಭದಲ್ಲಿ ಅಡಗಿರುವ ಅಗಾಧವಾದ ಜ್ಞಾನಕ್ಕೆ ಮನಸ್ಸು, ಹೃದಯ ತೆರೆದುಕೊಂಡು ಆಗಾಗ್ಗೆ ಶರಣು ಹೋಗಿ ತನ್ನ ವೃತ್ತಿಗೆ ಕ್ಷಣಕ್ಷಣವೂ ಅಭಿಮಾನದಿಂದ ನಮಿಸುತ್ತಿರುತ್ತಾನೆ ತನ್ನ ವೃತ್ತಿಯನ್ನು ಗೌರವಿಸುವ ಮತ್ತು ಪ್ರೀತಿಸುವ ಪ್ರತಿಯೊಬ್ಬ ಸಹೃದಯಿ ನ್ಯಾಯವಾದಿ. 

(ಮುಗಿಯಿತು)

-“ಮೌನಮುಖಿ” (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ, ಉಡುಪಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ