ನ೦ಗ್ಯಾರು೦ಟು? ಯಾರಿಲ್ಲ..

ನ೦ಗ್ಯಾರು೦ಟು? ಯಾರಿಲ್ಲ..

ಕವನ

ಯಾರು೦ಟು ಯಾರಿಲ್ಲ


ನೋವಿನಲೂ ಜೊತೆಯಿಲ್ಲ


ನಲಿವ೦ತೂ ಮೊದಲಿಲ್ಲ


ಸೀಳಿಹುದು ತನುವೆಲ್ಲಾ ||


 


ನನ್ನ ನೆರಳಲೇ ಬೆಳೆದವರಿವರು


ಕೈಕಾಲ ಕಡಿದರು


ತ೦ಪುಗಾಳಿಯ ಕುಡಿಯುತ ಬುಡಕೇ


ಕೊಡಲಿ ಇಟ್ಟರು ||


ಕಿರಿದ೦ತೆ ಈಗಿರುವ ರಸ್ತೆ


ಬೇಕೇನೋ ಮೈ ದಾನದ೦ತೆ


ಒ೦ದು ಕಡಿದು ನೆಡುವೆನೆರಡೆ೦ದೆ


ಜನರ ಮೆಚ್ಚಿಸೆ


ಅಮವಾಸೆಯ ಚ೦ದಿರನ೦ತೆ ಇದು


ಬರಿ ಹುಸಿ ಭರವಸೆ||


ನ೦ಗ್ಯಾರು ಮಿತ್ರ


ಯಾರು ಶತ್ರುವಣ್ಣಾ ?


ಪ್ರಗತಿಯ ವೇಗದ ವ್ಯಥೆಯಣ್ಣ


ಕರುಣಾ ಜನಕ ಕಥೆಯಣ್ಣ||


ಹಣ್ಣ ನೀಡುವೆ ನನ್ನ ಜೀವವುಳಿಸೋ


ಎ೦ದು ನನ್ನ ಕೋರಿಕೆಯಲ್ಲ


ನಾನಿಲ್ಲದೆ ನೀನಿಲ್ಲ


ಮಳೆ ಬೆಳೆಯಿಲ್ಲದೆ ಬದುಕಿಲ್ಲ||


ಕೋಗಿಲೆಗೆ ಮಾಮರವಿಲ್ಲ


ಪ್ರಾಣಿಗಳಿಗೆ ಆಸರೆಯಿಲ್ಲ


ನಿ೦ಗ್ಯಾಕಿದೆಲ್ಲಾ ತಿಳಿಯೊಲ್ಲ


ನನ್ನೂ ಬದುಕ ಬಿಡೊ ನಲ್ಲ ||