ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೨

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೨

ಕಳೆದ ವಾರ ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ‘ಡೊಂಬರ ಚೆನ್ನೆ' ಎನ್ನುವ ದೀರ್ಘ ಕವನದ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ಬಾರಿ ಎರಡನೇ ಭಾಗ ಪ್ರಕಟಿಸುತ್ತಿದ್ದೇವೆ.

ಡೊಂಬರ ಚೆನ್ನೆ - ೨

ಬಳಿಕ ಬೆನ್ನನು ಕೋದು, ಕೈಕಾಲ್ಗಳನು

ತೇಲಿಸಿ ಹೊಳೆದಳು,

ಮಳೆಯ ಬಿಲ್ಲಿನ ಹಾಗೆ,

ಸ್ಥಾಣುವಿನೆಳೆಯ ಚಂದ್ರನ ಚಂದ್ರದಿ.

 

ಕೊರಳು ಮಾಲಿತು, ಹೆರಳು ಜೋಲಿತು,

ಕುರುಳು ತೇಲಿತು ತರಳೆಯಾ,

ಉರುಳುತಲೆ ಕಾಲ್ ಬೆರಳ ಕೊನೆಯಲಿ

ಮರಳಿ ಹೊಲಿದಳು ಜಡೆಯನು.

 

ಗಳೆಯ ಡೊಂಬತಿಯಾಟದಾ ಪರಿ

ಗಾಳಿ ಕೈಗಿರಿಗಿಟಗಿರಿ,

ಸುಳಿಯ ನೀರಿನ ತಲೆಯ ಹೊಗರಿ

ಸೆಳೆಯೆ ಮಿಂಚಿನ ತೋಳ್ ಸರಿ.

 

ಅರರೆ! ಡೊಂಬರ ಹೆಣ್ಣುಮರಿ

ಗರಗರನೆ ಎತ್ತರ ಭರದಲಿ -

ತಿರುಗುವಾತೆರ ಹುಡಿಯು ಅರಸಿನ

ಎರಚಿತೆರಚಿತು ಕಣ್ಣಿಗೆ.

 

ಬಿಗಿದು ಚಿಚ್ಚುವ, ಬಿಚ್ಚಿ ಬಿಗಿಯುವ,

ಮುಗಿಲ ಕೂದಲ ಬಲೆಯಲಿ

ಇಗೊ ! ಇಗೊ!

ಸಿಲುಕಿದುದು ಅರಸನ 

ಮಿಗದ ಗಣ್ಗಳ ಜೋಡಿಯು !

 

“ಏಕೆ ! ಡೊಂಬನೆ ! ನಿಲ್ಲಿಸಾಟವ ! ಈಕೆಯಲಿ ಮನಸೋತುದು.

ಸಾಕು ! ಬಂಗರು ನಾನೆ ! ಕೈಸರ ಹಾಕುವೀಕೆಯ ಕೊರಳಲಿ !”

 

ಎಂದು ನಂದಾವರದ ಬಂಗರು ನೊಂದು ನಂದದ ತಾಪದಿ,

ಮುಂದೆ ನಿಂದಾ ಡೊಂಬನೊಂದಿಗೆ “ಸಂದಿಸಿವಳನು", ಎಂದನು.

 

ನುಡಿದ ಮಾತಿನ ಮಾನಭಂಗದ ಹೊಡೆತ ನುಂಗಿದ ಸಿಡುಕಿನಾ

ಕಿಡಿಯ ಕಣ್ಣೀರಿನಿಂದ ನಂದಿಸಿ, “ಒಡೆಯ ! ಬಿನ್ನಹ ಲಾಲಿಸು !

 

“ಮಗಳ ಹೆಸರಿನ ಮೈಗೆ ಸೋಳೆ ಬೆಡಗಿನ ಸೀರೆಯ ಉಡಿಸೆನು,

ನಗರೆ? ಹೆಸರಿನ ತಲೆಗೆ ಪಾದರಿ ಮುಗುಳು ಹೂವನು ಮುಡಿಸೆನು".

 

ಉಲಿಯೆ ಡೊಂಬನು, ಕೆಲರ ಪಿಸಿಪಿಸಿ, ಕೆಲರ ಗುಜುಗುಜು, ಕೆಲವರಾ

ಗಲಭೆ ಕಳಕಳ ಆಡದಾ ಕಳದಲಿ ವಿಶಾಲಕೆ ತುಂಬಿತು.

(ಇನ್ನೂ ಇದೆ)

-’ಕವಿಶಿಷ್ಯ’ ಕವನ ಸಂಕಲನದಿಂದ ಆಯ್ದ ಕವನ