ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫

ಎಂಟು ಬೇಡರು
ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ
ಬಗೆ ಬಗೆಯ ಬೇಡರಿಂದಲಿ ದೂರವಾಗು.
ಹೊತ್ತನ್ನು ತಿಂಬ ಸೋಮಾರಿತನ ಬೇಡ !
ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ !
ಕತ್ತು ಕೊಯ್ಕರ ಕೊಡೆ ನಂಟುಬೇಡತನ !
ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ !
ಎತ್ತಿದ್ದ ಸಾಲವನು ಕೊಡದ ಮನ ಬೇಡ !
ವಿತ್ತ ವಸ್ತುವ ನುಂಗುವಾ ಮೋಸ ಬೇಡ !
ಚಿತ್ತವನು ಕೆಡಿಪ ಹೊಟ್ಟೆಯ ಕಿಚ್ಚು ಬೇಡ !
ಮತ್ತೆ ಪಾಪದ ತರುವ ಕೆಡುಗೆಲಸ ಬೇಡ !
***
ಜೇನು ಹುಳು
ಹಸನು ಗೂಡನು, ಮಯಣಬೀಡನು
ಎಸೆವ ಹುಳಗಳ ನೋಡೆಲೊ,
ಬಿಸಿಲು ಕಾಲದೆ, ಗೇದು ಸೋಲದೆ,
ಒಸೆಯುತಿವೆ ಎಚ್ಚರದಲಿ.
ಹುಳಕೆ ದೇವನು ಬುದ್ದಿ ಈವನು
ಕೆಲಸ ಹುಳು ಸರಿಗೈವುದು ;
ಚೆಲುವ ಗೂಡನು ನರನು ಮಾಡನು
ಹುಳುವು ಕಟ್ಟಿದ ಹಾಗೆಯೇ.
ಒಳಗೆ ಸುಳಿವುದು, ಹೊರಗೆ ನಲಿವುದು
ಹುಳುವು ಪರಿವಿಡಿಯಿಂದಲಿ ;
ನೆಲೆಯ ಕಾಂಬುದು, ಜೇನ ತಿಂಬುದು,
ಕೆಲಸ ತಿಳಿವುದು ತನ್ನಯಾ.
ಅತ್ತಮೊರೆವುದು, ಇತ್ತಬರುವುದು
ಮತ್ತೆ ಹಾರ್ವುದು ಹೂವಿಗೆ ;
ಸುತ್ತ ಅಲೆಯದೆ, ಹೊತ್ತು ಕಳೆಯದೆ,
ಎತ್ತಿ ಒಯ್ವುದು ಹನಿಯನು.
ಅಂದು ಚೈತ್ರವು ಬರೆ ವಿಚಿತ್ರವು;
ಒಂದೆ ಹನಿ ಹನಿಯಾದರೂ
ಹಿಂದು ನೋಡದೆ, ಹುಳುಗಳಾಡದೆ
ತಂದು ಮಧು ಕೂಡಿಸುವವು.
ಒಡನೆ ಕೆಲಸದೆ ನಾನು ಆಲಸದೆ
ನೆಡುವೆ ನನ್ನೀ ಮನವನು,
ಹುಡುಕಿ ಎಲ್ಲವ, ಸವಿಯ ಬೆಲ್ಲವ
ಪಡೆವೆ ತುಂಬಿಯ ಹಾಗೆಯೇ.
(‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನಗಳು)