ಪಠ್ಯ ಪ್ರಮಾದ (ಭಾಗ ೧)
ಸಾಕಷ್ಟು ವಾದ -ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಮಾತ್ರವಲ್ಲ, ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿದ್ದ ಅನೇಕ ತಪ್ಪು, ಅವಾಂತರಗಳನ್ನು ನಾವು ಸರಿಪಡಿಸಿದ್ದೇವೆ ಎಂದು ವಿರೋಧಿಗಳಿಗೆ ದಾಖಲೆ ಸಹಿತ ತಿರುಗೇಟು ನೀಡಿದೆ.
ಪಠ್ಯಪರಿಷ್ಕರಣೆ ವಿಚಾರದಲ್ಲಿ ಉದ್ಭವಿಸಿದ್ದ ಎಲ್ಲ ಅನುಮಾನ, ಪ್ರಶ್ನೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಗುರುವಾರ ಸುದೀರ್ಘ ಸುದ್ದಿಗೋಷ್ಟಿ ನಡೆಸಿದ ಕಂದಾಯ ಸಚಿವ ಆರ್. ಅಶೋಕ್, ರೋಹಿತ್ ಚಕ್ರತೀರ್ಥ ಸಮಿತಿಯಿಂದ ನಡೆದ ಪಠ್ಯ ಪರಿಷ್ಕರಣೆಯಲ್ಲೂ ೭-೮ ದೋಷಗಳಾಗಿವೆ. ಅವುಗಳನ್ನು ತಕ್ಷಣವೇ ಸರಿಪಡಿಸಿ, ಶಾಲೆಗಳಲ್ಲಿ ಸರಿಯಾದ ರೀತಿಯಲ್ಲಿ ಕಲಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ೨೦೧೪-೧೫, ೨೦೧೭-೧೮ ಹಾಗೂ ೨೦೨೨-೨೩ನೇ ಸಾಲಿನ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ಪಠ್ಯ ಪುಸ್ತಕಗಳ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ವಿಷಯಗಳಿಗೆ ಸಂಬಂಧಿಸಿದಂತೆ, ಹಿಂದಿನ ಪರಿಷ್ಕರಣೆಯಲ್ಲಿ ಯಾವ ಯಾವ ಲೋಪಗಳಾಗಿದ್ದವು. ಅವುಗಳನ್ನು ತಾವು ಹೇಗೆ ಸರಿಪಡಿಸಿದ್ದೇವೆ ಎಂದು ವಿವರಿಸುವ ಹೋಲಿಕೆ, ವ್ಯತ್ಯಾಸಗಳ ಮಾಹಿತಿಯನ್ನೊಳಗೊಂಡ ೨೦೦ ಪುಟಗಳ ಹೊತ್ತಗೆಯನ್ನು ಅವರು ಬಿಡುಗಡೆ ಗೊಳಿಸಿದರು.
ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜತೆ ಸುದ್ದಿಗೋಷ್ಟಿ ನಡೆಸಿದ ಅಶೋಕ್, ಕೆಲವು ಸಾಹಿತಿಗಳು ಹಾಗೂ ರಾಜಕೀಯ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಇದು ನಮ್ಮ ಉತ್ತರ ಎಂದರು.
ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಇಲ್ಲದ ಲೋಪದೋಷಗಳ ಬಗ್ಗೆ ಈಗ ಮಾತನಾಡುತ್ತಿರುವವರು ಈ ಹಿಂದೆ ಮಾಡಿದ ಅವಾಂತರದ ಬಗ್ಗೆಯೂ ಸ್ವಲ್ಪ ಮಾತನಾಡಬೇಕೆಂದು ಸವಾಲು ಹಾಕಿದ ಅಶೋಕ್, ೨೦೧೪-೧೫ರಲ್ಲಿ ಉತ್ತಮವಾಗಿ ರೂಪಿಸಲ್ಪಟ್ಟ ನೂತನ ಪಠ್ಯ ಪುಸ್ತಕಗಳನ್ನು ಕೇವಲ ಎರಡು ವರ್ಷಗಳಲ್ಲಿ ಅನಗತ್ಯವಾಗಿ ಪರಿಷ್ಕರಿಸಲು ಅಂದಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿ ೨೦೧೭-೧೮ರಲ್ಲಿ ಪರಿಷ್ಕೃತ ಪಠ್ಯಪುಸ್ತಕ ಜಾರಿಗೊಳಿಸಲಾಯಿತು ಎಂದರು. ಪಠ್ಯಪುಸ್ತಕಗಳು ಕೇಸರೀಕರಣವಾಗಿದೆ ಎಂಬ ನೆಪವೊಡ್ಡಿ ಸಿದ್ಧರಾಮಯ್ಯ ಸರ್ಕಾರ ಪರಿಷ್ಕರಿಸಿತ್ತು. ಆ ಸಂದರ್ಭದಲ್ಲಿ ಹಿಂದು, ಭಾರತೀಯತೆಗಳಿಗೆ ಸಂಬಂಧಿಸಿದ ಅಂಶಗಳನ್ನು ತೆಗೆದು, ಅನೇಕರ ಭಾವನೆಗಳಿಗೆ ನೋವುಂಟು ಮಾಡಿತ್ತು. ಇದಕ್ಕಾಗಿ ನಮ್ಮ ಸರಕಾರವು ಪಠ್ಯಪುಸ್ತಕ ಪರಿಶೀಲನಾ ಸಮಿತಿ ರಚಿಸಿ ೧ ರಿಂದ ೧೦ನೇ ತರಗತಿ ಕನ್ನಡ ಭಾಷಾ ವಿಷಯ ಹಾಗೂ ೬ ರಿಂದ ೧೦ನೇ ತರಗತಿಗಳ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ ಎಂದರು. ಪಠ್ಯಪುಸ್ತಕದಲ್ಲಿ ಮೈಸೂರು ಒಡೆಯರ್ ರನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣ, ಹಿಂದುಗಳ ಕಡೆಗಣನೆ, ಮುಸ್ಲಿಮರ ಓಲೈಕೆ, ರಾಷ್ಟ್ರಪ್ರೇಮದ ಕಡೆಗಣನೆ ಮಾಡಿದ್ದು ಸಿದ್ಧರಾಮಯ್ಯ ಸರಕಾರ ಎಂದು ಚಾಟಿ ಬೀಸಿದರು.
ಸಚಿವ ಆರ್ ಅಶೋಕ್ ನೀಡಿದ ಕೆಲವು ಸ್ಪಷ್ಟನೆಗಳು ಈ ರೀತಿ ಇವೆ :
* ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರು ಸ್ವಯಂ ವಿವೇಚನೆಯಿಂದ ನೀಡಿದ ಪಠ್ಯ ಸೇರಿಕೊಂಡಿದೆ ಎಂಬುದು ಸುಳ್ಳು. ಎಲ್ಲ ಸಂಗತಿಗಳು, ವಿವಿಧ ಹಂತಗಳಲ್ಲಿ ಪರಾಮರ್ಶೆಯಾಗಿ ಮುದ್ರಣವಾಗಿವೆ.
* ಮೈಸೂರು ಒಡೆಯರ್ ಪಠ್ಯವನ್ನು ಕೈಬಿಟ್ಟಿಲ್ಲ. ೭ನೇ ತರಗತಿ ಸಮಾಜ ವಿಜ್ಞಾನ ಭಾಗ ೧ ರಲ್ಲಿ ಮೈಸೂರು ಒಡೆಯರು ಎಂಬ ಅಧ್ಯಾಯದಲ್ಲಿ ವಿಷಯಾಂಶ ನೀಡಲಾಗಿತ್ತು. ಪರಿಷ್ಕರಣೆಯಲ್ಲಿ ೧೦ನೇ ತರಗತಿ ಅಧ್ಯಾಯ ೪ರಲ್ಲಿ ಅಳವಡಿಸಲಾಗಿದೆ. ವಿಶ್ವೇಶ್ವರಯ್ಯನವರ ವಿಷಯಾಂಶಗಳನ್ನು ೧೦ನೇ ತರಗತಿ ಅರ್ಥಶಾಸ್ತ್ರ ಭಾಗ ೧ ರಲ್ಲಿ ಅಳವಡಿಸಲಾಗಿದೆ.
ಅಂಬೇಡ್ಕರ್ ಪಠ್ಯದಲ್ಲಿ ಏನಿತ್ತು? ಏನಾಗಿದೆ?
ಹೀಗಿತ್ತು: ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ೨೨ ಸಮಿತಿಗಳನ್ನು, ೫ ಉಪ ಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದದ್ದು ಕರಡು ಸಮಿತಿ. ಡಾ ಬಿ ಆರ್ ಅಂಬೇಡ್ಕರ್ ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎಮ್ ಮುನ್ಶಿ, ಟಿ ಟಿ ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ ಮಾಧವರಾವ್ ಅವರು ಸದಸ್ಯರಾಗಿದ್ದರು.
ಹೀಗಾಗಿದೆ: ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ೨೨ ಸಮಿತಿಗಳನ್ನು ರಚಿಸಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ. ಡಾ ಬಿ ಆರ್ ಅಂಬೇಡ್ಕರ್ ಇದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎಮ್ ಮುನ್ಶಿ, ಟಿ ಟಿ ಕೃಷ್ಣಮಾಚಾರಿ ಮುಂತಾದ ಮುತ್ಸದ್ದಿಗಳು ಇದ್ದರು.
(ಇನ್ನುಳಿದ ವಿವರಗಳು ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ...)
ವರದಿ ಕೃಪೆ: ವಿಜಯವಾಣಿ ದಿ: ೨೪-೦೬-೨೦೨೨, ಚಿತ್ರ ಕೃಪೆ: ಅಂತರ್ಜಾಲ ತಾಣ