ಪತ್ನಿಯ ಶಿಕ್ಷಣಕ್ಕೆ ಅಡ್ಡಿ ಕ್ರೌರ್ಯ : ಹೈಕೋರ್ಟ್ ತೀರ್ಪು ದಾರಿದೀಪ

ಪತ್ನಿಯ ಶಿಕ್ಷಣಕ್ಕೆ ಅಡ್ದಿಪಡಿಸುವುದು ಮಾನಸಿಕ ಕ್ರೌರ್ಯವಾಗಿದ್ದು ಅದು ತಪ್ಪು. ಅಲ್ಲದೆ ಹೀಗೆ ಅಡ್ಡಿಪಡಿಸುವುದು ಹಿಂದೂ ವಿವಾಹ ಕಾಯ್ದೆಯ ಅನ್ವಯ ವಿಚ್ಚೇದನಕ್ಕೆ ಸೂಕ್ತ ಕಾರಣ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಮಹಿಳಾ ಸಶಕ್ತೀಕರಣ ಮತ್ತು ಮಹಿಳೆಯರ ಶಿಕ್ಷಣ ಹಕ್ಕಿನ ವಿಷಯದಲ್ಲಿ ದೂರಗಾಮಿ ಪರಿಣಾಮ ಬೀರುವಂತಹ ತೀರ್ಪು ಇದಾಗಿದೆ.
ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾ। ವಿವೇಕ್ ರೂಸಿಯಾ ಮತ್ತು ನ್ಯಾ। ಗಜೇಂದ್ರ ಸಿಂಗ್ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದೆ. ಮೂಲತಃ ಇದೊಂದು ವಿಚ್ಚೇದನಕ್ಕೆ ಅರ್ಜಿ ಪ್ರಕರಣವಾಗಿದ್ದು, ಅರ್ಜಿದಾರ ಮಹಿಳೆ ಪತಿಯಿಂದ ವಿಚ್ಚೇದನ ಕೋರಿದ್ದರು. ಈ ದಂಪತಿ ೨೦೧೫ರಲ್ಲಿ ಮದುವೆಯಾಗಿದ್ದು ಆಗ ಅರ್ಜಿದಾರ ಮಹಿಳೆ ೧೨ ನೇ ತರಗತಿ ಪೂರೈಸಿ ಮುಂದಿನ ಶಿಕ್ಷಣ ಪಡೆಯಲು ಬಯಸಿದ್ದರು. ಆದರೆ ಪತಿ ಮತ್ತು ಅತ್ತೆ-ಮಾವ ಇದನ್ನು ವಿರೋಧಿಸಿದ್ದರು. ತನ್ನ ಶಿಕ್ಷಣದ ಹಕ್ಕನ್ನು ನಿರಾಕರಿಸಿದ್ದಲ್ಲದೇ ವರದಕ್ಷಿಣೆಗಾಗಿ ಆಗ್ರಹಿಸಲಾಗಿತ್ತು ಮತ್ತ್ ಹಿಂಸೆಯನ್ನೂ ನೀಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು. ಆರಂಭದಲ್ಲಿ ಆಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿ ಪತಿಯ ಪರವಾಗಿ ತೀರ್ಪು ಬಂದಿತ್ತು. ಇದನ್ನು ಆಕೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿದೆ.
ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆರ್ಟಿಕಲ್ ೨೧ನ್ನು ನ್ಯಾಯಪೀಠವು ಉಲ್ಲೇಖಿಸಿದೆ. ಶಿಕ್ಷಣವು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಬದುಕಿನ ಹಕ್ಕಿನ ಭಾಗವಾಗಿಯೂ ಪರಿಗಣಿಸಲಾಗುತ್ತಿದೆ. ಹೀಗಾಗಿ ಪತ್ನಿಯನ್ನು ಶಿಕ್ಷಣ ಮುಂದುವರಿಸದಂತೆ ಕಡ್ಡಾಯ ಪಡಿಸುವುದು ಅಥವಾ ಆಕೆ ಕಲಿಕೆಯನ್ನು ಮುಂದುವರಿಸಲಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ವೈವಾಹಿಕ ಬದುಕಿನ ಆರಂಭದಲ್ಲಿಯೇ ಆಕೆಯ ಕನಸುಗಳನ್ನು ನಾಶ ಪಡಿಸಿದ್ದಕ್ಕೆ ಸಮಾನ, ಅಲ್ಲದೆ ಶಿಕ್ಷಣ ಪಡೆಯದ ಮತ್ತು ತನ್ನ ಈ ಅನಕ್ಷರಸ್ಥ ಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲದ ವ್ಯಕ್ತಿಯ ಜತೆಗೆ ಬದುಕುವಂತೆ ಆಕೆಯನ್ನು ಬಲವಂತಪಡಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿದೆ. ಜತೆಗೆ ೧೯೫೫ರ ಹಿಂದೂ ವೈವಾಹಿಕ ಕಾಯ್ದೆಯ ಪ್ರಕಾರ ಇದು ವಿವಾಹ ವಿಚ್ಚೇದನಕ್ಕೆ ಸಕಾರಣ ಎನ್ನಿಸಿಕೊಳ್ಳುತ್ತದೆ ಎಂಬುದಾಗಿ ನ್ಯಾಯಪೀಠ ವಿಸ್ತೃತ ಅಭಿಪ್ರಾಯ ಪ್ರಕಟಿಸಿದೆ. ದೇಶದಲ್ಲಿ ಈ ಕಾಲಘಟ್ಟದಲ್ಲಿಯೂ ಅದೆಷ್ಟೋ ಹೆಣ್ಣು ಮಕ್ಕಳು ನಿರಕ್ಷರಿಗಳಾಗಿದ್ದಾರೆ ಎಂದು ದುಃಖಕರ ವಿಷಯ. ವಿವಿಧ ರಾಜ್ಯ ಸರಕಾರಗಳು, ಕೇಂದ್ರ ಸರಕಾರ ಶಿಕ್ಷಣವು ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಎಷ್ಟೆಷ್ಟೋ ಯೋಜನೆ, ಕಾರ್ಯಕ್ರಮಗಳನ್ನು ತಂದಿದ್ದರೂ ಶಿಕ್ಷಣವು ಇನ್ನು ಎಲ್ಲರನ್ನೂ ತಲುಪಿಲ್ಲ ಎನ್ನುವುದು ವಾಸ್ತವ. ಆರಂಭಿಕ ವಿದ್ಯಾಭ್ಯಾಸ ಪಡೆದು ಮುಂದೆ ಮನೆಯಲ್ಲಿ ಬಡತನ, ಹೆತ್ತವರ ನಿರಾಸಕ್ತಿ, ಮದುವೆ ಇತ್ಯಾದಿ ಹಲವು ಕಾರಣಗಳಿಂದ ಕಲಿಕೆ ಮುಂದುವರೆಸಲಾಗದ ಸ್ಥಿತಿ ಇನ್ನು ಎಷ್ಟೋ ಬಾಲಕಿಯರದ್ದು. ಈ ನಡುವೆ ಅನೇಕ ಮಂದಿ ಯುವತಿಯರು ವಿವಾಹ ಪ್ರಾಯಕ್ಕೆ ಬಂದಾಗ ಹೆತ್ತವರು ಅವರನ್ನು ವಿದ್ಯಾಭ್ಯಾಸ ಪಡೆಯುತ್ತಿರುವ ನಡುವೆಯೇ ವೈವಾಹಿಕ ಬಂಧನಕ್ಕೆ ಒಳಪಡಿಸುತ್ತಾರೆ. ಇಂಥವರಲ್ಲಿ ಕೆಲವಷ್ಟೇ ಶಿಕ್ಷಣ ಮುಂದುವರೆಸಲು ಪತಿ ಮತ್ತು ಅವರ ಮನೆಯವರ ಬೆಂಬಲ ಹೊಂದುವ ಭಾಗ್ಯಶಾಲಿಗಳಾಗಿರುತ್ತಾರೆ. ಸಾವಿರಾರು ಮಂದಿ ಹೆಣ್ಣುಮಕ್ಕಳ ಶಿಕ್ಷಣದ ಕನಸು ಮದುವೆಯೊಂದಿಗೆ ಸಮಾಪ್ತಿಯಾಗುತ್ತದೆ ಎಂಬ ಕಟು ವಾಸ್ತವ ಈಗಲೂ ಇದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತದೆ.
ಪತ್ನಿಯ ಶಿಕ್ಷಣವನ್ನು ಮೊಟಕುಗೊಳಿಸುವುದು ಮಾನಸಿಕ ಕ್ರೌರ್ಯ ಎಂಬ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವೂ ಕಲಿಕೆಯನ್ನು ಮುಂದುವರಿಸುವ ಕನಸು ಹೊಂದಿರುವ ಯುವತಿಯರಿಗೆ ದಾರಿದೀಪವಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೧-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ