ಪತ್ರಿಕೋದ್ಯಮದ ಮೇಷ್ಟ್ರು `USELESSFELLOW' ಅಲ್ಲ.. `USEDLESS FELLOW!'

ಪತ್ರಿಕೋದ್ಯಮದ ಮೇಷ್ಟ್ರು `USELESSFELLOW' ಅಲ್ಲ.. `USEDLESS FELLOW!'

ಬರಹ

ನೇರವಾಗಿ ವಿಷಯಕ್ಕೆ ಬರುತ್ತೇನೆ.

ಧಾರವಾಡದ ದಾನುನಗರ. ರೈಲು ನಿಲ್ದಾಣದ ಪಕ್ಕದಲ್ಲಿರುವ ಆಳ ಪ್ರಪಾತದ ಅತ್ತಿಕೊಳ್ಳಕ್ಕೆ ಹತ್ತಿಕೊಂಡಿರುವ ‘ಸ್ಲಂ’ ಸದೃಷ ಪ್ರದೇಶ. ಅಲ್ಲಿ ಒಂದು ಅಲ್ಪತೃಪ್ತ ಸುಖಿ ಹಿಂದು ಅವಿಭಕ್ತ ಕುಟುಂಬ. ಮನೆಯ ವ್ಯಾವಹಾರಿಕ ಊರುಗೋಲಾಗಿ ಕಿರಾಣಿ ಅಂಗಡಿ. ಮನೆಯ ಕೊನೆಯ ಮಗ ಎಲ್ಲರಿಗೂ ಕಣ್ಮಣಿ. ಆದರೆ ಆ ಪ್ರೀತಿ ಉಳಿಸಿಕೊಳ್ಳುವ ಹರಕತ್ತು ಇಲ್ಲದ ಜೀವಿ. ಆತನಿಗೂ ಮದುವೆ ಮಾಡಿದ್ದರು. ಸದ್ಗೃಹಿಣಿ ಪತ್ನಿ. ಮುತ್ತಿನಂತಹ ಎರಡು ಮಕ್ಕಳು. ಉಪಜೀವನಕ್ಕೆ ರಿಕ್ಷಾ ಆತನಿಗೆ ಜೀವನ ಸಾಥಿಯಾಗಿತ್ತು. ಬಹುತೇಕ ಇದು ನಮ್ಮ ಮಧ್ಯಮ ವರ್ಗದ ಕುಟುಂಬಗಳ ಚಿತ್ರಣಕ್ಕಿಂತ ಬೇರೆ ಏನಲ್ಲ.

ಪರಿಸರ ಅತ್ಯುತ್ತಮವಾಗಿದ್ದರೆ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬಹುದು. ಇದು ಚರ್ಚೆಯ ವಿಷಯವೂ ಹೌದು. ಅದಿರಲಿ. ಸಂಗತಿ, ಸಾಂಗತ್ಯದ ದೋಷ. ಆ ಶ್ರಮಜೀವಿ ರಿಕ್ಷಾಚಾಲಕ ಪ್ರಕಾಶ ಸಾಲೋಡಗಿ ಜವಾಬ್ದಾರಿ ಮರೆತ. ಕುಡಿತ, ಸಿಗರೇಟು, ಜೂಜು ಲೆಕ್ಕತಪ್ಪಿತು. ಸ್ವಂತ ರಿಕ್ಷಾ ಒತ್ತೆ ಇಟ್ಟ. ಬಿಡಿಸಿಕೊಳ್ಳಲಾಗದೇ ಮಾರಿದ. ಕೊನೆಗೆ ಮಾಲೀಕರಿಂದ ದಿನದ ಬಾಡಿಗೆ ಕರಾರಿನ ಮೇಲೆ ಆಳಾದ. ಮನೆಯವರ ಪರಿಸ್ಥಿತಿ ದೇವರಿಗೇ ಪ್ರೀತಿ.

ಆರೋಗ್ಯ ಕ್ಷೀಣಿಸಿತು. ಕೊನೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಧು-ಬಾಂಧವರು ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿದರು. ಕೊನೆಗೆ ದಿಢೀರ್ ಎಂದು ಸಿಡಿಲು ಬಂದೆರಗಿತು ಪ್ರಕಾಶ್ ಕುಟುಂಬಕ್ಕೆ. ಆ ಪ್ರತಿಷ್ಠಿತ ಆಸ್ಪತ್ರೆಯ ಪ್ರಯೋಗಾಲಯದ ವರದಿ ಅವರನ್ನೆಲ್ಲ ದಿಗಿಲುಗೊಳಿಸಿತ್ತು. ಪ್ರಕಾಶ್ ಅವರಿಗೆ ‘ಎಚ್.ಐ.ವಿ- ಪೊಸಿಟಿವ್’ ಅರ್ಥಾತ್ ಏಡ್ಸ್ ಇದೆ ಎಂದು ವರದಿ ಹೇಳಿತ್ತು. ನೋಡಲು ಸಹ ಎಲುವು-ತೊಗಲಿಗೆ ಸಮನಾಗಿದ್ದ ಆತನನ್ನು ಯಾರು ನೋಡಿದರು ಆ ವರದಿಯನ್ನು ಅನುಮೋದಿಸುತ್ತಿದ್ದರು.

ತಂದೆ-ತಾಯಿ ಪ್ರಕಾಶ್ ನನ್ನು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೆಂಡತಿ ಸಹ ಎರಡು ಮುದ್ದು ಮಕ್ಕಳೊಂದಿಗೆ ತವರಿಗೆ ವಾಪಸ್ಸಾದಳು. ಅಣ್ಣ-ತಮ್ಮಂದಿರು ಆಸ್ಪತ್ರೆಯಲ್ಲಿ ಕೈಬಿಟ್ಟು ಬೇರೆ ಮನೆ ಮಾಡಿ ‘ನಿನ್ನ ಹಣೆ ಬರಹ’ ಎಂದು ಕೈ ಚೆಲ್ಲಿದರು. ಆಸ್ಪತ್ರೆಯಿಂದ ಮನೆಗೆ ಹಾಗೆಯೇ ಸಾವು-ಬದುಕಿನ ಮಧ್ಯೆ ಹೋರಾಡುತ್ತ ವಾಪಸ್ಸಾದ ಪ್ರಕಾಶ್ ಬದುಕುವ ಆಸೆ ಕೈಬಿಟ್ಟ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಪ್ರಯತ್ನಿಸಿಯೂ ಬಿಟ್ಟ. ಆದರೆ ಅದೃಷ್ಟ ಚೆನ್ನಾಗಿತ್ತು. ದಾನು ನಗರದ ಪಕ್ಕದ ಮನೆಯ ಗೆಳೆಯ ಓಡಿ ಬಂದು ಬದುಕಿಸಿಕೊಂಡ.

ಆತನೇ ತಲೆ ಓಡಿಸಿ ಗೆಳೆಯ ಪ್ರಕಾಶ್ ನನ್ನು ಸರಕಾರಿ ಆಸ್ಪತ್ರೆಗೆ ಕರೆದು ತಂದು ಪರೀಕ್ಷೆ ಮಾಡಿಸಿದ. ವಿಚಿತ್ರ. ಅವನಿಗಿದ್ದದ್ದು ಕ್ಷಯ ರೋಗವೇ ಹೊರತು ಏಡ್ಸ್ ರೋಗವಲ್ಲ! ಎಂದು ವರದಿಯಲ್ಲಿತ್ತು. ಖಾತರಿ ಪಡಿಸಿಕೊಳ್ಳಲು ಹುಬ್ಬಳ್ಳಿಯ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ/ ಆರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲಿಯೂ ಪ್ರಕಾಶ್ ಅವರಿಗೆ ಕ್ಷಯರೋಗವಿರುವುದು ಪತ್ತೆಯಾಯಿತು. ಬದುಕುವ ಆಸೆ ಆತನಲ್ಲಿ ಮೊಳಕೆಯೊಡೆಯಿತು. ಪಾಪ ಆ ಗೆಳೆಯನನ್ನು ಕರೆದುಕೊಂಡು ಎಲ್ಲ ಬಂಧು-ಬಾಂಧವರ ಮನೆ-ಮನೆ ಅಲೆದ. ‘ನಾನು ಏಡ್ಸ್ ರೋಗಿಯಲ್ಲ’ ಎಂದು ಪರಿಪರಿಯಾಗಿ ಹೇಳಿದ. ನಮ್ಮ ಜನ ನಂಬುವ ಸ್ಥಿತಿಯಲ್ಲಿರಲಿಲ್ಲ. ಮಾನಸಿಕವಾಗಿ ಕುಂದಿಹೋದ. ಕೊನೆಗೆ ಏಡ್ಸ್ ರೋಗಿ ಎಂಬ ಪಟ್ಟ ಕಟ್ಟಿದ್ದ ಆಸ್ಪತ್ರೆಗೆ ಹೋದ. ೬ ತಿಂಗಳುಗಳ ಬಳಿಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡ. ಅವರೇ ಪ್ರಮಾಣ ಪತ್ರ ನೀಡಿದರು. ಕ್ಷಯದಿಂದ ಬಳಲುತ್ತಿದ್ದಾನೆ ಎಂದು!

ಗೆಳೆಯರೆಲ್ಲ ಸೇರಿ ಆತನಿಗೆ ಕ್ಷಯರೋಗಕ್ಕೆ ಚಿಕಿತ್ಸೆ ಕೊಡಿಸಿದರು. ೬ ತಿಂಗಳಲ್ಲಿ ಗುಣಮುಖನಾದ. ಆದರೆ ಜನ ಆತನ ರಿಕ್ಷಾ ಹತ್ತಲು ಸಹ ಮೀನಮೇಷ ಎಣಿಸಿದ್ದು ಒಪ್ಪೊತ್ತಿನ ಊಟಕ್ಕೂ ಸಂಚಕಾರ ತಂದಿತು. ತನ್ನ ಬದುಕನ್ನು ಮೂರಾಬಟ್ಟೆ ಮಾಡಿದ ಆ ಆಸ್ಪತ್ರೆಯ ವಿರುದ್ಧ ಹೋರಾಡುವ ಪಣತೊಟ್ಟ. ಆದರೆ ಬಡವನ ಕೋಪ ದವಡೆಗೆ ಮೂಲ. ನಾನು ಆಗ ಕನ್ನಡಪ್ರಭದ ವರದಿಗಾರ. ವಿಷಯ ಅರಿತು ಪ್ರಕಾಶ್ ಭೇಟಿ ಮಾಡಲು ಮನೆಗೆ ಹೋದೆ. ನಂದಗೋಕುಲದಂತಹ ಮನೆ ಸ್ಮಶಾನ ಸದೃಶವಾಗಿತ್ತು. ಮನೆಯ ಎಲ್ಲ ಮೂಲೆಗಳಲ್ಲಿ ಕುಣಿಕೆಗಳನ್ನು ಪುಣ್ಯಾತ್ಮ ಬಿಗಿದಿಟ್ಟು ಕೂತಿದ್ದ. ನನ್ನ ಹೃದಯ ಬಾಯಿಗೆ ಬಂದಿತ್ತು ಈ ವೀರಬಾಹುವಿನ ಅವತಾರ ನೋಡಿ.

ಹಾಗು ಹೀಗೂ ಸಂಪಾದಕರೊಂದಿಗೆ ಚರ್ಚಿಸಿ, ವಿಷಯ ಮನವರಿಕೆ ಮಾಡಿಸಿ ಎರಡೂ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುವಂತೆ ನೋಡಿದೆವು. ಜಾಹಿರಾತು ಪ್ರೇರಿತ ಈ ಸುದ್ದಿಗಳ ಜಗತ್ತಿನಲ್ಲಿ ಮಾನವೀಯತೆಗೆ ಕನ್ನಡಪ್ರಭ ಸ್ಪಂದಿಸಿದ ರೀತಿ ಅನನ್ಯವಾದದ್ದು ಎಂದು ಅಭಿಮಾನದಿಂದ ಹೇಳುತ್ತೇನೆ. ಅಲ್ಲೋಲಕಲ್ಲೋಲವಾಯಿತು. ಆ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಮ್ಮ ಕಚೇರಿಗೆ ದೂರವಾಣಿ ಮಾಡಿ ನಮಗೆಲ್ಲ ಧಮಕಿ ಹಾಕುವ ಪ್ರಯತ್ನ ಮೊದಲು ಮಾಡಿದರು. ನಾವಂತೂ ಖಂಡಿತವಾಗಿ ಹೇಳಿದೆವು. ಪ್ರಕಾಶ್ ಬೆಂಬಲಕ್ಕೆ ನಾವಿದ್ದೇವೆ. ಆಸ್ಪತ್ರೆ ಆತನ ಕೌಟುಂಬಿಕ, ಮಾನಸಿಕ ನಷ್ಠ ತುಂಬಿಕೊಡಲು ಸಿದ್ಧವಾದರೆ ಸರಿ. ಇಲ್ಲದೇ ಹೋದರೆ ಕಾನೂನು ಸಮರ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆತನ ಆತ್ಮಸ್ಥೈರ್ಯ ಮೆಚ್ಚುವಂತಹದ್ದು. ಎಲ್ಲವನ್ನೂ ಕಳೆದುಕೊಂಡಿದ್ದರೂ ಸ್ಥಿತಪ್ರಜ್ನನಾಗಿ ನಡೆದುಕೊಂಡ ನಮ್ಮ ಪ್ರಕಾಶ್. ಕೊನೆಗೆ ನಾಲ್ಕೈದು ಸುತ್ತಿನ ಮಾತು-ಕತೆಗಳ ನಂತರ ಸಾರ್ವಜನಿಕ ಸಂಪರ್ಕಾಧಿಕಾರಿಗಳು ೧.೫ ಲಕ್ಷ ರೂಪಾಯಿ ಆಸ್ಪತ್ರೆಯಿಂದ ಪರಿಹಾರ ಕೊಡಿಸುವುದಾಗಿ ಹೇಳಿ, ಕೊನೆಗೆ ಯಶಸ್ವಿಯೂ ಆದರು. ಪ್ರಕಾಶ್ ಮರಳಿ ಮತ್ತೆ ತನ್ನ ಹೆಂಡತಿಯ ತವರಿಗೆ ಹೋದ. ಆದರೆ ತಾಯಿಯಿಲ್ಲದ ತವರು ಅವರಿಗೂ ನರಕವಾಗಿತ್ತು. ಗದುಗಿನ ಗಾರ್ಮೆಂಟ್ ಕಾರ್ಖಾನೆಯಲ್ಲಿ ದಿನಗೂಲಿ ನೌಕರಿ ಮಾಡುತ್ತ ಅವರು ಮಕ್ಕಳನ್ನು ಓದಿಸುತ್ತಿದ್ದರು. ಪ್ರಕಾಶ್ ಹೇಗೋ ಗುರುತಿಸಿದ. ಎಲ್ಲರೂ ಅವರ ಮನವೊಲಿಸಿದ್ದಾಯಿತು. ಮತ್ತೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಖಾತ್ರಿ ಪಡಿಸಿಕೊಂಡಿದ್ದಾಯಿತು.

ಈಗ ಹುಬ್ಬಳ್ಳಿಯಲ್ಲಿ ನಮ್ಮ ಪ್ರಕಾಶ ರಿಕ್ಷಾ ಓಡಿಸುತ್ತಿದ್ದಾನೆ. ಪುಟ್ಟ ಸಂಸಾರ ಮತ್ತೆ ನಂದಗೋಕುಲವಾಗಿದೆ. ಆಗಾಗ ಧಾರವಾಡಕ್ಕೆ ಅಪ್ಪ-ಅಮ್ಮನ ಮನೆಗೆ ಹೋಗಿ ಎಲ್ಲರನ್ನೂ ಭೇಟಿ ಮಾಡಿ ಬರುತ್ತಾರೆ. ಮೊನ್ನೆ ಹುಬ್ಬಳ್ಳಿಯಲ್ಲಿ ಮಳೆ ಹಚ್ಚಿಹೊಯ್ಯುತ್ತಿದ್ದಾಗ ತೋಯಿಸಿಕೊಳ್ಳುತ್ತ ಗಿಡದ ಬುಡದಲ್ಲಿ ನಿಂತಿದ್ದ ನಾನು ಬಡ ಮಾಸ್ತರ್ ನನ್ನು ಗುರುತಿಸಿದ ಪ್ರಕಾಶ್ ರಿಕ್ಷಾದಿಂದ ಇಳಿದು ಬಂದ. ಒತ್ತಾಯದಿಂದ ಕೊಡಿಸಿಕೊಂಡು ಕಿಮ್ಸ್ ಆಸ್ಪತ್ರೆಯ ಎದುರಿಗೆ ತಂದು ಬಿಟ್ಟ. ಹಳೆಯ ಪತ್ರಕರ್ತ ನೌಕರಿಯ ದಿನಗಳು ಒಮ್ಮೆ ಕಣ್ಣುಗಳ ಮುಂದೆ ಮಂಜಿನಂತೆ ಅಸ್ಪಷ್ಠವಾಗಿ ಹಾಯ್ದುಹೋದವು.

ಇಷ್ಟೆಲ್ಲ ಏಕೆ ಹೇಳಿದೆ ಎಂದರೆ ಇತ್ತೀಚೆಗೆ ವಿಶ್ವೇಶ್ವರ ಭಟ್ ಅವರು ಮತ್ತೊಂದು ಹೊಸ ಪುಸ್ತಕ ಬರೆದಿದ್ದಾರೆ. ಆ ಪುಸ್ತಕದ ಶೀರ್ಷಿಕೆ ‘ಸಂಪಾದಕ ಅಂದ್ರೆ ಗಂಡ ಇದ್ದಂತೆ’ ಅಂತ. ಪುಸ್ತಕದ ಪುಟ ಸಂಖ್ಯೆ ೨೯-೩೦ರಲ್ಲಿ ಅವರು ನಮ್ಮ ನಾಡಿನ ಪತ್ರಿಕೋದ್ಯಮ ವಿಭಾಗಗಳನ್ನು, ಅಲ್ಲಿನ ಪ್ರಾಧ್ಯಾಪಕರನ್ನು, ಅವರು ತಯಾರಿಸುವ ಭಾವಿ ಪತ್ರಕರ್ತರ ಕುರಿತು ತೀರ ಕೆಟ್ಟದಾಗಿ ಬರೆದಿದ್ದಾರೆ. ಆ ಎಲ್ಲ ವಿಷಯ ಇಲ್ಲಿ ಪ್ರಸ್ತಾಪಿಸದಿದ್ದರೆ ಒಳಿತು. ತಮ್ಮ ತಿಳಿವಳಿಕೆ ಹಾಗು ಅನುಭವ ಉಲ್ಲೇಖಿಸುವಾಗ - ‘ಕೆಲವು ಮಹಾವಿದ್ಯಾಲಯಗಳು, ಕೆಲವು ಪ್ರಾಧ್ಯಾಪಕರು, ಕೆಲವು ವಿದ್ಯಾರ್ಥಿಗಳು’ ಎಂಬ ಒಂದು ಪದವನ್ನಾದರೂ ನಾಡಿನ ಖ್ಯಾತ ಪತ್ರಕರ್ತರು ಸೇರಿಸಿದ್ದರೆ?

ಪರಿಸ್ಥಿತಿ ಮೊದಲಿನಂತಿಲ್ಲ. ಸಾಕಷ್ಟು ಬದಲಾವಣೆಗಳು ಆಗಿವೆ. ಆಗುತ್ತಿವೆ. ಅದು ನಿರಂತರ ಪ್ರಕ್ರಿಯೆ. ಅಂತ್ಯ ಎಂಬುದಿಲ್ಲ. ಅನುಭವವಿಲ್ಲದವರು ಪಾಠ ಮಾಡುತ್ತಿದ್ದಾರೆ ಎಂದು ದೂಷಿಸುವ ಬದಲು, ಆ ವಿಭಾಗಗಳಿಂದ, ಅಲ್ಲಿನ ಪ್ರಾಧ್ಯಾಪಕರಿಂದ ೨ ಅಕ್ಷರವಾದರೂ ಕಲಿತು ಹೋದ ಅದೆಷ್ಟು ಪತ್ರಕರ್ತರು ಸಂಬಂಧ ಇಟ್ಟುಕೊಂಡಿದ್ದಾರೆ? ಹೇಳಿ. ಕರೆದಾಗ ಬಂದು ನಮಗೂ/ ನಮ್ಮ ಮಕ್ಕಳಿಗೂ ಪ್ರೀತಿಯಿಂದ ಪಾಠ ಮಾಡುವ ಸೃಜನಶೀಲ ಪತ್ರಕರ್ತರು ಎಷ್ಟಿದ್ದಾರೆ ಹೇಳಿ?

ಆದರೂ ಜನ ತಮಗೆ ತಿಳಿದ, ತಿಳಿಯಲಾರದ ಎಲ್ಲ ವಿಷಯಗಳ ಬಗ್ಗೆ ಮಾತನಾಡಬಲ್ಲರು..! ಬರೆಯಬಲ್ಲರು..! ಬಹುಶ: ಇದಕ್ಕೆ ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆದಿದ್ದೇವೆ. ತಕ್ಕ ಮಟ್ಟಿಗೆ ದುರುಪಯೋಗವನ್ನೂ ಮಾಡಿಕೊಂಡಿದ್ದೇವೆ ಎಂದರೆ ಅತಿಶಯೋಕ್ತಿ ಏನಲ್ಲ.

ಒಂದಂತೂ ಸತ್ಯ. ನಾವು ನಮ್ಮ ಮಕ್ಕಳಿಗೆ ಏನೇ ಹೇಳಿಕೊಡಲಿ.. ಬಿಡಲಿ ಪತ್ರಕರ್ತರ ಕೆಟ್ಟ ಧಾರ್ಷ್ಟ್ಯತೆ, ಮಂಗಳ ಗ್ರಹದಿಂದ ಬಂದ ಮಾನವ ಜೀವಿಯಂತಹ ವಿಚಿತ್ರ ನಡುವಳಿಕೆ ಮಾತ್ರ ನಮಗೆ ಕಲಿಸಲಾಗಿಲ್ಲ. ಅವರು ಕಲಿತಿರುವುದು ಪತ್ರಿಕಾ ಕಚೇರಿಯಿಂದ!