ಪದ್ಮನಾಭ ಪಾಹಿಮಾಂ

ಪದ್ಮನಾಭ ಪಾಹಿಮಾಂ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಕಡಿಯಾಳಿ ಬಾಲಕೃಷ್ಣ ಆಚಾರ್ಯ ಮತ್ತು ವಾಣಿ ಬಿ.ಆಚಾರ್ಯ
ಪ್ರಕಾಶಕರು
ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ
ಪುಸ್ತಕದ ಬೆಲೆ
ಬೆಲೆ: ಉಚಿತ, ಮುದ್ರಣ: ೨೦೦೯

ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ"

"ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು ಜಂಟಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಪಾದಿಸಿ ತಮ್ಮದೇ ಆದ " ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ" ಇದರ ಮೂಲಕ ಪ್ರಕಟಿಸಿದ ಕೃತಿ.

ಕಡಿಯಾಳಿ ಬಾಲಕೃಷ್ಣ ಆಚಾರ್ಯರು ಬಹುಮುಖ ಸಾಧಕರಾಗಿ ಪ್ರಸಿದ್ಧಿ ಪಡೆದವರು. ಇವರ ಪತ್ನಿ ವಾಣಿ ಬಿ. ಆಚಾರ್ಯ ಅವರು ಸಹ ಪ್ರತಿಭಾ ಸಂಪನ್ನೆ. ಇವರೀರ್ವರೂ ಸಹ ಮಂಗಳೂರು ತಾಲೂಕು ಕಿನ್ನಿಗೋಳಿ ಬಳಿಯ ಪಾಂಪೈ ಪದವಿಪೂರ್ವ ಕಾಲೇಜಿನಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದು ನಿವೃತ್ತರಾದವರು. ಇಬ್ಬರೂ ಮೂಲತಹಃ ಉಡುಪಿಯವರು. ಬಾಲಕೃಷ್ಣ ಆಚಾರ್ಯರು ಈಗಿಲ್ಲ. ವಾಣಿ ಆಚಾರ್ಯರು ಬೆಂಗಳೂರಿನಲ್ಲಿ ಮಗನೊಂದಿಗೆ ವಾಸವಾಗಿದ್ದಾರೆ.

270 + 18 ಪುಟಗಳ ಈ ಹೊತ್ತಗೆಯನ್ನು 2009ರಲ್ಲಿ ಪ್ರಕಟಿಸಲಾಗಿದೆ. ಕೆ. ಎಸ್. ಪದ್ಮನಾಭ ಆಚಾರ್ಯರ ವಿವಿಧ ಕ್ಷೇತ್ರಗಳ ಒಡನಾಡಿಗಳಾಗಿದ್ದವರು, ಶಿಕ್ಷಕ ಶಿಕ್ಷಕಿ ಸಹೋದ್ಯೋಗಿಗಳು, ಸಾಹಿತ್ಯ - ಸಂಗೀತ - ಕಲಾ ಕ್ಷೇತ್ರಗಳಲ್ಲಿನ ಆಪ್ತರು, ಶಿಷ್ಯರಾಗಿದ್ದವರು, ಬಂಧುಗಳು ಹೀಗೆ ಹಲವರು ಪದ್ಮನಾಭ ಆಚಾರ್ಯರ ಜೀವನ ಮತ್ತು ಸಾಧನೆಯ ಬಗ್ಗೆ ಆಪ್ತವಾಗಿ ಬರೆದಿದ್ದಾರೆ. ಪದ್ಮನಾಭ ಆಚಾರ್ಯರಿಗೆ ಬಂದ ಪತ್ರಗಳು, ಅವಿಸ್ಮರಣೀಯ ಭಾವಚಿತ್ರಗಳ ಜೊತೆಗೆ ಪದ್ಮನಾಭ ಆಚಾರ್ಯರ ಸ್ವರಚಿತ ಬರಹಗಳನ್ನೂ ಕೃತಿಯಲ್ಲಿ ಅಲ್ಲಲ್ಲಿ ಮುದ್ರಿಸಲಾಗಿದೆ. ಪ್ರಕಟಿತ - ಅಪ್ರಕಟಿತ ಬರಹಗಳ ವಿವರಗಳನ್ನೂ ಸಂಗ್ರಹಿಸಿ ಕೊಡಲಾಗಿದೆ.

ಇಲ್ಲಿರುವ ಬರಹಗಳನ್ನು ಐದು ಭಾಗಗಳನ್ನಾಗಿ ಮಾಡಲಾಗಿದೆ. ಕೆ. ಎಸ್. ಪದ್ಮನಾಭ ಆಚಾರ್ಯರನ್ನು ಹತ್ತಿರದಿಂದ ಕಂಡ ಹಿರಿಯರ ಮತ್ತು ಕಿರಿಯರು ಅವರ ವ್ಯಕ್ತಿತ್ವದ ಬಗ್ಗೆ ಬರೆದ ಬರಹಗಳು, ತಂದೆ ತಾಯಿಯರ ಬಗ್ಗೆ ಬಾಲಕೃಷ್ಣ ಆಚಾರ್ಯರು ಬರೆದ "ನನ್ನ ಹೆತ್ತವರ ಜತೆ ಕೆಲವೊಂದು ಮಧುರ ಸ್ಮೃತಿಗಳು" ಎಂಬ ಸುಧೀರ್ಘವಾದ ಆತ್ಮ ವೃತ್ತಾಂತದಂತೆ ಅನಿಸುವ ಬರಹ, ಪದ್ಮನಾಭ ಆಚಾರ್ಯರ ಪ್ರಕಟಿತ ಮತ್ತು ಅಪ್ರಕಟಿತ ಬರಹಗಳ ಪಟ್ಟಿ, ಭಾವಚಿತ್ರಗಳು, ಅಪರೂಪದ ಪತ್ರಗಳು ಇತ್ಯಾದಿಗಳಿವೆ.

ಕೆ. ಎಸ್. ಪದ್ಮನಾಭ ಆಚಾರ್ಯರು ನಾಟಕ, ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಬಹಳವಾಗಿ ತೊಡಗಿಸಿಕೊಂಡಿದ್ದವರು.  ಕವಿಯಾಗಿ, ಲೇಖಕರಾಗಿ, ವಾಗ್ಮಿಯಾಗಿ, ನಾಟಕ ನಿರ್ದೇಶಕರಾಗಿ, ನಾಟಕ ರಚನಾಕಾರರಾಗಿ, ಹಾಡುಗಾರರಾಗಿ ಸಂಗೀತ ಕ್ಷೇತ್ರದಲ್ಲಿ ಹೀಗೆ ಎಲ್ಲದರಲ್ಲೂ ತೊಡಗಿಕೊಂಡು ಖ್ಯಾತರಾದವರು. ಈ ಹೊತ್ತಗೆಯಲ್ಲಿ ಇವರ ಸಾಧನೆಗಳನ್ನು, ವ್ಯಕ್ತಿತ್ವವನ್ನು ಇವರನ್ನು ಹತ್ತಿರದಿಂದ ಕಂಡುಂಡ ಸಾಧಕರು ಆಪ್ತವಾಗಿ ಚಿತ್ರಿಸಿದ್ದಾರೆ.

ಕೆ.ಎಸ್.ಪದ್ಮನಾಭ ಆಚಾರ್ಯರ ಆಯ್ದ ಪ್ರಕಟಿತ ಕೃತಿಗಳ ವಿವರ: ಯತಿವರರು (ಪುತ್ತಿಗೆ ಮಠ ಮತ್ತು ಸುಜ್ಞಾನೇಂದ್ರ ತೀರ್ಥ ಸ್ವಾಮೀಜಿಗಳ ಚರಿತ್ರೆ), ಎಲ್ಲಿ ಪ್ರೀತಿಯೋ ಅಲ್ಲಿ ದೇವರು (ಏಕಾಂಕ ಸರಸ ಸಂಗೀತ ನಾಟಕ), ಸಹ ಜೀವನ (ಸಾಮಾಜಿಕ ನಾಟಕ), ಆದರ್ಶ ನಿಧಿ (ಮಣಿಪಾಲ ಮಾಧವ ಪೈಗಳ ದಿವ್ಯ ಚರಿತ್ರೆ), ಕರ್ಮಯೋಗ - ಜ್ಞಾನಯೋಗ (ಗೀತಾಮೃತ ರಸಬಿಂದುಗಳು), ಆದಿಕವಿ ವಾಲ್ಮೀಕಿ (ವ್ಯಕ್ತಿ ಚಿತ್ರ), ಗೋವಿನ ಗೋಳಿನ ಕನಸು ( ಕವನ), ಶ್ರೀಗಿಂತ ಧೀ ಮೇಲು ( ಏಕಾಂತ ನಾಟಕ), ಮಕ್ಕಳ ಹಾಡುಗಳು (ಅಭಿನಯ ಗೀತೆಗಳು), ಗಾನ ಕುಸುಮ (ಸಂಗೀತ ಸ್ವರ ಸಾಹಿತ್ಯ ಸಹಿತ ಹಾಡುಗಳು), ದಂತ ಧಾವನ (ಒಂದು ಸೃಶ್ಯದ ಗೀತ ನಾಟಕ), ನೈತಿಕ ವಿಜಯ (ಒಂದೇ ದ ದೃಶ್ಯದ ಗೀತಾ ನೃತ್ಯ ನಾಟಕ), ಪ್ರಜೆಗಳದೇ ಪರಮಾಧಿಕಾರ (ರೂಪಕ), ಆತ್ಮ ನಿಷ್ಠೆ (ಕಥನ ಕವನ), ಸಖ್ಯ ಭಕ್ತಿಯ ಸಾಕ್ಷಾದ್ರೂಪ, ಸದ್ಭಾವನೆ, ಕಳ್ಳಸಂತೆ, ಲಾವಣಿ, ಸತ್ಪ್ರೇರಣೆ, ಸಾಹಸದ ಸಾಧನೆ, ಪರ್ಯಾಯ ಪ್ರಶಂಸೆ, ಕನ್ನಡಕ್ಕೆ ಗೆಲುವಕ್ಕೆ, ಪರ್ಯಾಯ ಮಹೋತ್ಸವ ಇತ್ಯಾದಿ ಇತ್ಯಾದಿ.

~ ಶ್ರೀರಾಮ ದಿವಾಣ, ಉಡುಪಿ