ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೧)


ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಪದ್ಮ ಪ್ರಶಸ್ತಿಗಳ ಮೌಲ್ಯ ಅಧಿಕವಾಗಿದೆ ಎಂದರೆ ತಪ್ಪಾಗೋಲ್ಲ. ಏಕೆಂದರೆ ಹಿಂದೆಲ್ಲಾ ಇದ್ದ ಸರಕಾರಗಳು ಈ ಪ್ರಶಸ್ತಿಗಳನ್ನು ತಮಗೆ ತೋಚಿದವರಿಗೆ, ತಮಗೆ ಉಪಕಾರ ಮಾಡಿದವರಿಗೆ ಕೊಟ್ಟು ಧನ್ಯರಾಗುತ್ತಿದ್ದರು. ಆದರೆ ಈಗ ಪದ್ಮ ಪ್ರಶಸ್ತಿಗಳು ಘೋಷಣೆಯಾಗುವಾಗ ಆ ಪಟ್ಟಿಯಲ್ಲಿರುವ ೫೦% ಹೆಸರುಗಳನ್ನು ನಾವು ಕೇಳಿಯೇ ಇರುವುದಿಲ್ಲ. ಇದು ನಿಜ. ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಎಲೆಮರೆಯ ಕಾಯಿಗಳಂತಿರುವ ಪ್ರತಿಭಾವಂತ ವ್ಯಕ್ತಿಗಳು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಿಂದಾಗಿ ಅವರು ತೆರೆಮರೆಯಲ್ಲಿ ನಡೆಸುತ್ತಿದ್ದ ಕಾರ್ಯಗಳು ಜಗಜ್ಜಾಹೀರಾಗಿವೆ. ಹೀಗೂ ಇರ್ತಾರಾ? ಇಂಥವರೂ ಇದ್ದಾರಾ? ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗಿದೆ.
೨೦೨೨-೨೩ರ ಸಾಲಿನ ಪದ್ಮ ಪ್ರಶಸ್ತಿಗಳು ಕಳೆದ ಜನವರಿಯಲ್ಲಿ ಘೋಷಣೆಯಾದಾಗ ಅದರಲ್ಲೂ ಹಲವಾರು ಸದ್ದಿಲ್ಲದ ಸಾಧಕರ ಹೆಸರುಗಳು ಕಂಡುಬಂದವು. ಕೆಲವು ಮಂದಿಯ ಪರಿಚಯ ‘ಗೂಗಲ್’ ಬಾಬಾನಿಗೂ ಗೊತ್ತಿರಲಿಲ್ಲ. ಕೆಲವರ ಬಗ್ಗೆ ಮಾಹಿತಿಯನ್ನು ಅರಿಯಲು ಕೇಂದ್ರ ಸರಕಾರದ ಪ್ರಕಟಣೆಯನ್ನೇ ಗಮನಿಸಬೇಕಾಯಿತು. ಅಂತಹ ಕೆಲವು ಮಂದಿ ಪದ್ಮಶ್ರೀ ಪುರಸ್ಕೃತರ ಪುಟ್ಟ ಪುಟ್ಟ ವಿವರಗಳು ನಿಮ್ಮ ಮಾಹಿತಿಗಾಗಿ…
ಗುರುವಿಂದರ್ ಸಿಂಗ್: ಹರಿಯಾಣಾ ರಾಜ್ಯದ ಸಾಮಾಜಿಕ ಕಾರ್ಯಕರ್ತರಾಗಿರುವ ಗುರುವಿಂದರ್ ಸಿಂಗ್ ವಿಶೇಷ ಚೇತನ ವ್ಯಕ್ತಿ ಎನ್ನುವುದು ಉಲ್ಲೇಖನೀಯ. ಅವರು ಒಂದು ಲಾರಿ ಅಪಘಾತದಲ್ಲಿ ತಮ್ಮ ಸೊಂಟದ ಕೆಳಗಿನ ಸ್ವಾಧೀನವನ್ನು ಕಳೆದುಕೊಂಡು ಬಿಡುತ್ತಾರೆ. ಊರಿನವರೆಲ್ಲಾ ಕೈಲಾಗದವ ಎಂದು ಮೂದಲಿಸುತ್ತಿದ್ದರೂ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದ ಇವರು ತಮ್ಮಂತೆಯೇ ಇರುವ ಹಲವಾರು ಮಂದಿ ವಿಕಲಾಂಗರಿಗೆ ದಾರಿದೀಪವಾಗಿದ್ದಾರೆ. ಸ್ವತಃ ಗಾಲಿಕುರ್ಚಿಯಲ್ಲಿ ಕುಳಿತು ನಿರ್ಗತಿಕರು, ಗರ್ಭಿಣಿಯರು, ಅನಾಥರು, ಅನಾರೋಗ್ಯ ಪೀಡಿತರ ಸೇವೆ ಮಾಡಿದ್ದಾರೆ. ಪಾರ್ಶ್ವವಾಯು ಪೀಡಿತರಾಗಿದ್ದರೂ ಗುರುವಿಂದರ್ ಸಿಂಗ್ ಅವರು ತಮ್ಮ ಬಳಿ ಸಹಾಯ ಕೇಳಿಕೊಂಡು ಬಂದವರಿಗೆ ನಿರಾಶೆ ಮಾಡಿಲ್ಲ.
ಗುರುವಿಂದರ್ ಸಿಂಗ್ ಅವರು ಇಲ್ಲಿಯವರೆಗೆ ೩೦೦ಕ್ಕೂ ಅಧಿಕ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಹಲವರಿಗೆ ಶಾಶ್ವತ ನೆಲೆಯನ್ನು (ದತ್ತು ಸ್ವೀಕಾರದ ಮೂಲಕ) ಕಲ್ಪಿಸಿದ್ದಾರೆ. ಆರು ಸಾವಿರಕ್ಕೂ ಮಿಕ್ಕ ಅಪಘಾತ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಪಘಾತದ ಗಾಯಾಳುಗಳ ಮತ್ತು ಗರ್ಭಿಣಿ ಸ್ತ್ರೀಯರಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿಕೊಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗಮನಿಸಿದ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
ಚಾಮಿ ಮುರ್ಮು: ನಿಮಗೆ ನಮ್ಮ ರಾಷ್ಟ್ರಪತಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಗೊತ್ತು. ಕರ್ನಾಟಕದವರಾದ ನಿಮಗೆ ಸಾಲು ಮರದ ತಿಮ್ಮಕ್ಕ, ವೃಕ್ಷ ಮಾತೆ ತುಳಸೀಗೌಡ ಇವರ ಬಗ್ಗೆ ಕೇಳಿಯೇ ಇರುತ್ತೀರಿ. ಆದರೆ ಜಾರ್ಖಂಡ್ ರಾಜ್ಯದಲ್ಲಿ ‘ಸಾಲು ಮರದ ಲೇಡಿ ಟಾರ್ಜನ್’ ಇದ್ದಾರೆ. ಅವರೇ ಚಾಮಿ ಮುರ್ಮು. ಜಾರ್ಖಂಡ್ ರಾಜ್ಯದ ಸೆರಾಯ್ ಕೆಲಾ ಗ್ರಾಮದವರಾದ ಚಾಮಿ ಮುರ್ಮು ಬಹಳ ಧೈರ್ಯಸ್ಥ ಮಹಿಳೆ. ಏಕೆಂದರೆ ಇವರು ಮರಕಳ್ಳರು, ನಕ್ಸಲರು ಮೊದಲಾದವರ ವಿರುದ್ಧ ಸಾರಿದ ಸಮರದ ಕಥೆ ಒಂದು ದೊಡ್ಡ ಗ್ರಂಥಕ್ಕೆ ಆಗುವಷ್ಟಿದೆ. ತಮ್ಮ ಗ್ರಾಮದ ಸುಮಾರು ಮೂರು ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ೩೦ ಲಕ್ಷ ಸಸಿಗಳನ್ನು ನೆಟ್ಟು ಅಪರೂಪದ ಸಾಧನೆಗೈದವರು ಇವರು. ಗಿಡ ನೆಟ್ಟರೆ ಮಾತ್ರ ಸಾಕೇ? ಅದಕ್ಕೆ ಕಾಲಕಾಲಕ್ಕೆ ನೀರುಣಿಸಿ, ಸಂರಕ್ಷಿಸಿ ದೊಡ್ದ ದೊಡ್ಡ ಮರಗಳಾಗುವಂತೆ ಮಾಡಿದ ಕೀರ್ತಿ ಚಾಮಿ ಮುರ್ಮು ಅವರಿಗೆ ಸಲ್ಲುತ್ತದೆ.
ತಮ್ಮ ಗ್ರಾಮದಲ್ಲಿರುವ ಮರಗಳ ಕಳ್ಳ ಸಾಗಣೆ ಮಾಡುತ್ತಿದ್ದ ಟಿಂಬರ್ ಮಾಫಿಯಾ ವಿರುದ್ಧ ಇವರು ನಡೆಸಿದ ಹೋರಾಟದಿಂದ ಅವರಿಗೆ ‘ಲೇಡಿ ಟಾರ್ಜನ್' ಎಂಬ ಹೆಸರು ಬಂದಿದೆ. ಬಡ ಕುಟುಂಬದ ಮಕ್ಕಳ ತಲೆ ಕೆಡಿಸಿ, ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ನಕ್ಸಲ್ ಆಗುವಂತೆ ಪ್ರೇರೇಪಿಸುವ ಮಾವೋವಾದಿಗಳ ವಿರುದ್ಧ ಇವರ ಹೋರಾಟ ಶ್ಲಾಘನೀಯ. ಇವರ ಈ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಅರ್ಹವಾಗಿಯೇ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
(ಇನ್ನಷ್ಟು ಸಾಧಕರ ವಿವರ ಮುಂದಿನ ಭಾಗದಲ್ಲಿ)
ಚಿತ್ರ ಕೃಪೆ: ಅಂತರ್ಜಾಲ ತಾಣ