ಪದ್ಮಶ್ರೀ ಪುರಸ್ಕೃತ ಪಾರಂಪರಿಕ ನಾಟಿ ವೈದ್ಯೆ - ಲಕ್ಷ್ಮಿ ಕುಟ್ಟಿ

ಪದ್ಮಶ್ರೀ ಪುರಸ್ಕೃತ ಪಾರಂಪರಿಕ ನಾಟಿ ವೈದ್ಯೆ - ಲಕ್ಷ್ಮಿ ಕುಟ್ಟಿ

ಕಲ್ಲಾರ್ ಎನ್ನುವುದು ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಸಣ್ಣ ಗ್ರಾಮ. ಜೀವನಕ್ಕೆ ಬೇಕಾಗುವ ಪ್ರಾಥಮಿಕ ಸೌಲಭ್ಯಗಳ ಕೊರತೆಗಳು ಈ ಗ್ರಾಮದಲ್ಲಿ ಬಹಳಷ್ಟಿದೆ. ಆದರೆ ಇಲ್ಲಿನ ಗ್ರಾಮಸ್ಥರು ಯಾರಿಗಾದರೂ ಆರೋಗ್ಯದ ಸಮಸ್ಯೆ ಅಥವಾ ವಿಷಪೂರಿತ ಹಾವು ಕಚ್ಚಿದರೆ ಗಾಬರಿ ಪಡುವುದಿಲ್ಲ. ಏಕೆಂದರೆ ಇಲ್ಲಿದ್ದಾರೆ ಅವರೆಲ್ಲರ ‘ಅಮ್ಮ' ಲಕ್ಷ್ಮಿ ಕುಟ್ಟಿ. ಈ ಆದಿವಾಸಿ ಹೆಂಗಸು ಇವರೆಲ್ಲರ ಪಾಲಿಗೆ ಸಾಕ್ಷಾತ್ ಸಂಜೀವಿನಿ. ಏಕೆಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇ ಬೇಕು.

೧೯೪೩ರಲ್ಲಿ ಕಲ್ಲಾರ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆದಿವಾಸಿ ಬಡ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ಕುಟ್ಟಿ ಎಂಬ ಹೆಣ್ಣು ಮಗಳು ಮುಂದೆ ಒಂದು ದಿನ ಭಾರತದ ರಾಷ್ಟ್ರಪತಿಯವರ ಕೈಯಿಂದ ಪ್ರತಿಷ್ಟಿತ ‘ಪದ್ಮಶ್ರೀ’ ಪ್ರಶಸ್ತಿಯ ಗೌರವವನ್ನು ಪಡೆಯುತ್ತಾರೆ ಎಂದು ಯಾರು ಅಂದುಕೊಂಡಿದ್ದರು? ಇದೆಲ್ಲಾ ಸಾಧ್ಯವಾದದ್ದು ಲಕ್ಷ್ಮಿ ಕುಟ್ಟಿಯ ಪಾರಂಪರಿಕ ಔಷಧ ಜ್ಞಾನ ಹಾಗೂ ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ. ಬಾಲ್ಯದಿಂದಲೂ ತಮ್ಮ ತಾಯಿಯು ತಯಾರಿಸುತ್ತಿದ್ದ ಗಿಡಮೂಲಿಕೆಗಳ ಮದ್ದುಗಳನ್ನು ಗಮನಿಸುತ್ತಾ ಬೆಳೆದ ಲಕ್ಷ್ಮಿ ಕುಟ್ಟಿ ಅವುಗಳ ಬಗ್ಗೆ ಅಧಿಕ ಮಾಹಿತಿಯನ್ನು ಅವರಿಂದ ತಿಳಿದುಕೊಳ್ಳುತ್ತಾರೆ. ಇವರ ತಾಯಿ ಉತ್ತಮ ಸೂಲಗಿತ್ತಿಯೂ ಆಗಿದ್ದರಿಂದ ಅವರ ಬಳಿ ಸುಲಭವಾಗಿ ಹೆರಿಗೆ ಮಾಡಿಸುವ ಅಪಾರ ಜ್ಞಾನ ಸಂಪತ್ತು ಇತ್ತು. ಇವರದ್ದು ಕಾನಿ ಅಥವಾ ಕಾಣೀ ಎಂಬ ಆದಿವಾಸಿ ಕುಟುಂಬ. ಇವರಲ್ಲಿ ಶಾಲೆಯ ಮೆಟ್ಟಲು ಹತ್ತಿದವರ ಸಂಖ್ಯೆಯೇ ವಿರಳ.

ಲಕ್ಷ್ಮಿ ಕುಟ್ಟಿ ಈ ಆದಿವಾಸಿ ಜನಾಂಗದಿಂದ ಶಾಲೆಯ ಮೆಟ್ಟಲೇರಿದ ಪ್ರಥಮ ಮಹಿಳೆ. ಅದೂ ೧೯೫೦ರ ಸಮಯದಲ್ಲಿ. ಅವರಿಗೆ ವಿದ್ಯಾರ್ಜನೆ ಮಾಡುವ ಅಪಾರ ಆಸಕ್ತಿ ಇದ್ದರೂ ಅವರು ಇದ್ದ ಪರಿಸ್ಥಿತಿಯಲ್ಲಿ ಅವರಿಗೆ ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೂ ಅವರು ಉತ್ತಮವಾಗಿ ಕವನ, ನಾಟಕಗಳನ್ನು ರಚಿಸುತ್ತಾರೆ. ಹಲವಾರು ಮಂದಿಗೆ ತಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಹಂಚುತ್ತಾರೆ. ಉತ್ತಮವಾದ ಸಂಸ್ಕೃತ ಭಾಷಾ ಜ್ಞಾನ ಇವರಿಗಿದೆ. ಇವರು ಸುಮಾರು ೫೦೦ ಗಿಡಮೂಲಿಕೆಗಳ ಹೆಸರುಗಳನ್ನು, ಅವುಗಳ ಪರಿಚಯ ಮತ್ತು ಮದ್ದುಗಳನ್ನು ಹೇಳುತ್ತಾರೆ. ಇದು ಇವರ ಹೆಗ್ಗಳಿಕೆಯೇ ಸರಿ. ಇವರ ಈ ಜ್ಞಾನವನ್ನು ಗಮನಿಸಿ ಎಲ್ಲರೂ ಇವರನ್ನು ‘ವನಮುತ್ತಸಿ' (ಮಲಯಾಳಂನಲ್ಲಿ ಅರಣ್ಯಗಳ ಅಜ್ಜಿ ಎಂದರ್ಥ) ಎಂದು ಪ್ರೀತಿಯಿಂದ ಕರೆಯುತ್ತಾರೆ. 

ದಕ್ಷಿಣ ಭಾರತದ ಹಲವಾರು ಸಂಸ್ಥೆಗಳು ಇವರನ್ನು ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಭಾಷಣ ಮಾಡಲು ಕರೆದಿದ್ದಾರೆ. ಹಾವುಗಳ ವಿಷವನ್ನು ಇಳಿಸಿ, ರೋಗಿಯ ಜೀವ ಉಳಿಸುವುದರಲ್ಲಿ ಇವರು ಹೆಸರು ವಾಸಿ. ಪ್ರಧಾನಿ ನರೇಂದ್ರ ಮೋದಿಯವರೂ ತಮ್ಮ ‘ಮನ್ ಕೀ ಬಾತ್' ಭಾಷಣದಲ್ಲಿ ಲಕ್ಷ್ಮೀ ಕುಟ್ಟಿಯವರ ಜ್ಞಾನವನ್ನು ಪ್ರಸ್ತಾಪ ಮಾಡಿದ್ದಾರೆ. ೧೯೯೫ರಲ್ಲಿ ಕೇರಳ ಸರಕಾರ ಇವರಿಗೆ ‘ನಾಟ್ಟು ವೈದ್ಯ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೨೦೧೮ರಲ್ಲಿ ಪದ್ಮಶ್ರೀ ಪುರಸ್ಕಾರವೂ ಇವರನ್ನು ಹುಡುಕಿಕೊಂಡು ಬಂತು.

ಇಷ್ಟೆಲ್ಲಾ ಗೌರವ, ಸನ್ಮಾನಗಳು ಇವರಿಗೆ ಒಲಿದರೂ ಲಕ್ಷ್ಮಿ ಕುಟ್ಟಿಯಮ್ಮ ಇನ್ನೂ ತಮ್ಮ ಸಣ್ಣದಾದ ಗುಡಿಸಲಿನಲ್ಲಿ ಒಬ್ಬರೇ ವಾಸ ಮಾಡುತ್ತಿದ್ದಾರೆ. ಇವರಿಗಿದ್ದ ಮೂವರು ಗಂಡು ಮಕ್ಕಳಲ್ಲಿ ಈಗ ಉಳಿದಿರುವುದು ಒಬ್ಬ ಮಾತ್ರ. ನಿಧನ ಹೊಂದಿದ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ವಿಷಪೂರಿತ ಹಾವಿನ ಕಡಿತದಿಂದ ನಿಧನ ಹೊಂದಿದ್ದ. ಇದೇ ಲಕ್ಷ್ಮಿ ಕುಟ್ಟಿಯವರಿಗೆ ಹಾವಿನ ವಿಷವನ್ನು ನಿವಾರಿಸುವ ಔಷಧಿಯನ್ನು ಕಂಡು ಹಿಡಿಯಲು ಪ್ರೇರಣೆ ಆಯಿತಂತೆ. ಬದುಕಿ ಉಳಿದ ಓರ್ವ ಮಗ ರೈಲು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವನೂ ಇವರ ಜೊತೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಲಕ್ಷ್ಮಿ ಕುಟ್ಟಿ ತನ್ನ ಮನೆಯ ಸುತ್ತಲೂ ಆಯುರ್ವೇದ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಜನರ ಸೇವೆ ಮಾಡಲು ಸದಾ ಮುಂದೆ ಇರುವ ಲಕ್ಷ್ಮಿ ಕುಟ್ಟಿಯವರಿಗೆ ಈಗ ೭೫ ವರ್ಷ ತುಂಬಿದೆ. ಕಳೆದ ಐವತ್ತು ವರ್ಷಗಳಿಂದ ತಮ್ಮ ಪಾರಂಪರಿಕ ಔಷಧ ಜ್ಞಾನದಿಂದ ಸಾವಿರಾರು ಮಂದಿಯ ಜೀವ ಉಳಿಸಿರುವ ಲಕ್ಷ್ಮಿ ಕುಟ್ಟಿಯವರು ಇನ್ನಷ್ಟು ವರ್ಷ ಹೀಗೆಯೇ ಜನರ ಸೇವೆ ಮಾಡಲಿ ಎಂದೇ ನಮ್ಮ ಹಾರೈಕೆ.       

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ