ಪನೀರ್ ಸೇವನೆಯಿಂದ ಲಾಭವಿದೆಯೇ?


ಪಾಲಕ್ ಪನೀರ್, ಪನೀರ್ ಟಿಕ್ಕಾ, ಪನೀರ್ ಮಸಾಲಾ, ಪನೀರ್ ಕೋಫ್ತಾ, ಪನೀರ್ ಪೆಪ್ಪರ್ ಹೀಗೆಲ್ಲಾ ಹೆಸರು ಹೇಳುತ್ತಾ ಹೋದರೆ ಆಹಾರಪ್ರಿಯರ ಬಾಯಿಯಲ್ಲಿ ನೀರೂರುವುದು ಸಹಜ. ಏಕೆಂದರೆ ಹಾಲಿನಿಂದ ತಯಾರಿಸಲಾಗುವ ಉತ್ಪನ್ನವಾದ ಪನೀರ್ ಈಗ ಬಹುಜನರ ಸಹಜ ಆಹಾರವಾಗಿದೆ. ಆದರೆ ಸುಮಾರು ಎರಡು ದಶಕಗಳ ಹಿಂದೆ ಪನೀರ್ ಎಂಬುವುದು ಉಳ್ಳವರ ಆಹಾರವಾಗಿತ್ತು. ಕೆಲವೇ ಕೆಲವು ಅಂಗಡಿಗಳಲ್ಲಿ ಪನೀರ್ ಸಿಗುತ್ತಿತ್ತು. ಕೆಲವು ಕಡೆ ಮೊದಲೇ ಹೇಳಿದರೆ ಮಾತ್ರ ತಯಾರಿಸಿ ಅಥವಾ ತರಿಸಿ ಕೊಡುತ್ತಿದ್ದರು. ನೀಲಗಿರೀಸ್ ನ ಶಾಖೆಗಳಲ್ಲಿ ಪನೀರ್ ಸಿಗುತ್ತಿತ್ತು ಎಂದು ನನಗೆ ನೆನಪು. ಉಳಿದಂತೆ ಬೇರೆ ಯಾವ ಖ್ಯಾತನಾಮ ಸಂಸ್ಥೆಗಳು ಪನೀರ್ ತಯಾರಿಸುತ್ತಿರಲಿಲ್ಲ.
ಆದರೆ ಇಂದು ಹಲವಾರು ಸಂಸ್ಥೆಗಳು ಪನೀರ್ ತಯಾರಿಸುತ್ತಿವೆ. ನಮ್ಮದೇ ರಾಜ್ಯದ ಹಾಲು ಉತ್ಪಾದಕ ಮಂಡಳಿಯ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಉತ್ತಮ ಪನೀರ್ ಅನ್ನು ತಯಾರಿಸುತ್ತಿದೆ. ಈ ಕಾರಣದಿಂದ ಮನೆಗಳಲ್ಲಿ ಪನೀರ್ ಬಳಕೆ ಸರ್ವೇ ಸಾಮಾನ್ಯವಾಗಿದೆ. ಪನೀರ್ ಪದಾರ್ಥಗಳು ‘ಲಕ್ಷುರಿ' ಐಟಂ ಆಗಿ ಉಳಿದಿಲ್ಲ. ದೊಡ್ಡ ದೊಡ್ದ ಹೋಟೇಲ್ ಮಾತ್ರವಲ್ಲ ರಸ್ತೆ ಬದಿಯ ಗೂಡಂಗಡಿ, ತಳ್ಳು ಗಾಡಿಗಳಲ್ಲೂ ಪನೀರ್ ನಿಂದ ತಯಾರಿಸಿದ ಆಹಾರ ಪದಾರ್ಥಗಳು ದೊರೆಯುತ್ತಿವೆ.
ಈ ಪನೀರ್ ಎಂಬುದು ಹಾಲಿನಿಂದ ತಯಾರಿಸಲಾಗುವ ಉತ್ಪನ್ನ ಎಂಬ ವಿಷಯ ಎಲ್ಲರಿಗೂ ಗೊತ್ತು. ಆದುದರಿಂದ ಇದು ಬಹುಮಟ್ಟಿಗೆ ಆರೋಗ್ಯದಾಯಕವೇ ಆಗಿರುತ್ತದೆ. ಆದರೆ ಪನೀರ್ ತಯಾರಿಕೆಗೆ ಬಳಸಿರುವ ಹಾಲು ಪ್ಯಾಶ್ಚರೀಕರಣ ಮಾಡಿರದೇ ಇದ್ದಲ್ಲಿ ಅಥವಾ ಪನೀರನ್ನು ಸರಿಯಾಗಿ ಬೇಯಿಸದೇ ಹಸಿಯಾಗಿ ತಿಂದಲ್ಲಿ ಅದರಲ್ಲಿ ಉಳಿದುಕೊಂಡಿರುವ ಬ್ಯಾಕ್ಟೀರಿಯಾ ಮೂಲಕ ನಮಗೆ ಸೋಂಕು ತಗಲುವ ಸಾಧ್ಯತೆ ಇದ್ದೇ ಇರುತ್ತದೆ. ಪನೀರ್ ತಯಾರಿಕೆಯಲ್ಲಿ ಕೆಲವರು ಉಪ್ಪನ್ನು ಬಳಸುತ್ತಾರೆ. ಈ ರೀತಿಯ ಪನೀರ್ ಬಳಕೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿ ಅಧಿಕ ಬಿಪಿ ಸಮಸ್ಯೆ ಕಾಣಿಸಬಹುದು. ಅಧಿಕ ಕೊಬ್ಬಿನ ಅಂಶವಿರುವ ಹೋಲ್ ಮಿಲ್ಕ್ ಬಳಸಿ ಪನೀರ್ ತಯಾರಿಸಿದರೆ ದೇಹದಲ್ಲಿ ಕೊಬ್ಬಿನ ಪ್ರಮಾಣ (ಕೊಲೆಸ್ಟ್ರಾಲ್) ಅಧಿಕವಾಗುತ್ತದೆ. ಆದರೆ ಇವೆಲ್ಲಾ ಅಂಶಗಳನ್ನು ಬದಿಗಿರಿಸಿ ಉತ್ತಮ ರೀತಿಯಲ್ಲಿ ಪನೀರ್ ತಯಾರಿಸಿದರೆ ಅದು ದೇಹಕ್ಕೆ ಬಹಳ ಉತ್ತಮ.
ಪನೀರ್ ನಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುವುದರಿಂದ ಅದರಲ್ಲಿ ವಿಟಮಿನ್ ಬಿ ಅಂಶ ಹೆಚ್ಚಿರುತ್ತದೆ. ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ಬಹಳ ಸಹಕಾರಿ. ಅದೇ ರೀತಿ ಇದರಲ್ಲಿರುವ ಪ್ರೋಟೀನ್, ಫಾಸ್ಲೋರಸ್, ಪೊಲೆಟ್ ಮೊದಲಾದ ಪೋಷಕಾಂಶಗಳು ಗರ್ಭಿಣಿ ಸ್ತ್ರೀ ಮತ್ತು ಮಗುವಿನ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತದೆ.
ಸಸ್ಯಹಾರಿಗಳಿಗಂತೂ ಪನೀರ್ ಉತ್ತಮ ಆಹಾರ. ಏಕೆಂದರೆ ಸಸ್ಯಹಾರಿಗಳಿಗೆ ಅವಶ್ಯಕವಾದ ಪ್ರೋಟೀನ್, ಪನೀರ್ ಸೇವನೆಯಿಂದ ಸಿಗುತ್ತದೆ. ಮಾಂಸಖಂಡಗಳ ಬೆಳವಣಿಗೆಗೆ ಇದು ಉತ್ತಮ. ಪನೀರ್ ನಲ್ಲಿ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರ. ಮಧುಮೇಹಿಗಳು ಅಲ್ಪ ಪ್ರಮಾಣದಲ್ಲಿ ಪನೀರ್ ಅನ್ನು ತಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸಬಹುದು. ಪನೀರ್ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಪನೀರ್ ನಲ್ಲಿ ಪೊಟ್ಯಾಷಿಯಂ ಇರುವುದರಿಂದ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿರುವ ಸೆಲೆನಿಯಮ್ ಆಂಟಿ ಆಕ್ಸಿಡೆಂಟ್ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ವಯಸ್ಸಾಗುವ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಪನೀರ್ ನ ಸೇವನೆಯಿಂದ ಮೆಟಬಾಲಿಸಂ ಅಧಿಕ ಗೊಂಡು ತೂಕ ಇಳಿಸಲು ಸಹಕಾರಿ. ಪನೀರ್ ಸೇವನೆಯಿಂದ ನರವ್ಯೂಹ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಅಸ್ತಮಾ, ಮಲಬದ್ಧತೆ ಮುಂತಾದ ಸಮಸ್ಯೆಗಳು ತಲೆದೋರದಂತೆ ತಡೆಯಲು ಪನೀರ್ ಸೇವನೆ ಸಹಕಾರಿ.
ನಾವಿಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ನಾವು ಪನೀರ್ ಅನ್ನು ಯಾವುದರ ಜೊತೆ ಬಳಸಿ ಆಹಾರವಾಗಿ ಸೇವಿಸುತ್ತಿದ್ದೇವೆ ಎಂದು. ಏಕೆಂದರೆ ನೀವು ಪನೀರ್ ಜೊತೆ ಅಧಿಕ ಪ್ರಮಾಣದಲ್ಲಿ ಎಣ್ಣೆ, ಮೆಣಸು ಬಳಸಿದರೆ ನಿಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು. ಈಗಂತೂ ಪನೀರ್ ಕಬಾಬ್, ಮಸಾಲಾ ಫ್ರೈ, ಪನೀರ್ ಸಮೋಸಾ ಮೊದಲಾದ ಬಾಯಿಗೆ ರುಚಿ ಅನಿಸುವ ತಿಂಡಿಗಳು ಬಂದಿವೆ. ಇವುಗಳು ಎಷ್ಟರ ಮಟ್ಟಿಗೆ ಆರೋಗ್ಯದಾಯಕ ಎನ್ನುವುದನ್ನೂ ಗಮನಿಸಬೇಕು. ಪನೀರ್ ಜೊತೆ ಪಾಲಕ್ ಬಳಕೆ ಬಹಳ ಉತ್ತಮ. ಅದೇ ರೀತಿ ಪನೀರ್ ಬಳಸಿ ಬಿರಿಯಾನಿ ತಯಾರಿಸಿದರೂ ಉತ್ತಮ ಪೌಷ್ಟಿಕ ಆಹಾರವಾಗಬಲ್ಲದು. ಬಗ್ಗೆ ಜಾಗೃತೆ ವಹಿಸಿ ಪನೀರ್ ಅನ್ನು ನಿಮ್ಮ ಆಹಾರ ಕ್ರಮದಲ್ಲಿ ನಿಯಮಿತವಾಗಿ ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.
ಚಿತ್ರ ಕೃಪೆ: ಅಂತರ್ಜಾಲ ತಾಣ