ಪನ್ನೀರ್ ಡ್ರೈ ಪೆಪ್ಪರ್ ಫ್ರೈ

ಪನ್ನೀರ್ ಡ್ರೈ ಪೆಪ್ಪರ್ ಫ್ರೈ

ಬೇಕಿರುವ ಸಾಮಗ್ರಿ

ಪನ್ನೀರ್ ೨೦೦ ಗ್ರಾಂ, ಕಾರ್ನ್ ಫ್ಲೋರ್ ೪ ಚಮಚ, ಕಡಲೆ ಹಿಟ್ಟು ೨ ಚಮಚ, ಗರಂ ಮಸಾಲಾ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಕರಿಮೆಣಸಿನ (ಪೆಪ್ಪರ್) ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ಉಪ್ಪು, ಕರಿಯಲು ಎಣ್ಣೆ, ಕರಿಬೇವಿನ ಸೊಪ್ಪು, ಅರಸಿನ ಹುಡಿ, ಕೆಂಪು ಮೆಣಸಿನ ಹುಡಿ. ಕಾಯಿ ಮೆಣಸು, ಕೊತ್ತಂಬರಿ ಸೊಪ್ಪು, ಲಿಂಬೆ ಹಣ್ಣು.

ತಯಾರಿಸುವ ವಿಧಾನ

ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲೆ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಕರಿಮೆಣಸಿನ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಸ್ವಲ್ಪ ನೀರು ಸೇರಿಸಿ ಕಲಸಿ ಪೇಸ್ಟಿನಂತೆ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆ ಮಿಶ್ರಣಕ್ಕೆ ಕತ್ತರಿಸಿಟ್ಟುಕೊಂಡ ಪನ್ನೀರನ್ನು ಹಾಕಿ ಮಿಶ್ರ ಮಾಡಿ. ಪನ್ನೀರಿಗೆ ಆ ಮಿಶ್ರಣ ಸರಿಯಾಗಿ ಅಂಟಿಕೊಳ್ಳುವಂತೆ ಬೆರೆಸಿ. ಆ ಮಿಶ್ರಣವನ್ನು ಹದಿನೈದು ನಿಮಿಷ ಇಟ್ಟು ಬಿಡಿ. 

ಒಂದು ಕಾವಲಿಯಲ್ಲಿ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಬಳಿಕ ಪನ್ನೀರ್ ತುಂಡುಗಳನ್ನು ಒಂದೊಂದಾಗಿ ಕಾಯಿಸಿ. ಪನ್ನೀರ್ ತುಂಡಿನ ಎಲ್ಲಾ ಬದಿಗಳು ಕಾಯುವಂತೆ ನೋಡಿಕೊಳ್ಳಿರಿ. ಸರಿಯಾಗಿ ಕಾದು ಹೊಂಬಣ್ಣ ಬರುವಾಗ  ತುಂಡುಗಳನ್ನು ತೆಗೆದಿರಿಸಿ. ನಂತರ ಒಂದು ಬೌಲ್ ಗೆ ತಲಾ ಒಂದು ಚಮಚದಷ್ಟು ಗರಂ ಮಸಾಲಾ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಉಪ್ಪು, ಕರಿಮೆಣಸಿನ ಹುಡಿ, ಕಾಲು ಚಮಚ ಅರಸಿನ ಹುಡಿ ಹಾಗೂ ಕೆಂಪು ಮೆಣಸಿನ ಹುಡಿಯನ್ನು ಹಾಕಿ ಮಿಶ್ರ ಮಾಡಿ ಪಕ್ಕಕ್ಕೆ ಇಡಿ. ಒಂದು ಬಾಣಲಿಯಲ್ಲಿ ೩-೪ ಚಮಚ ಎಣ್ಣೆ ಹಾಕಿ ಕಾದ ನಂತರ ಒಂದು ಕಾಯಿ ಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಅದಕ್ಕೆ ಮೊದಲೇ ತಯಾರಿಸಿದ ಗರಂ ಮಸಾಲೆಗಳ ಮಿಶ್ರಣವನ್ನು ಹಾಗೂ ಕರಿದು ತಯಾರಿಸಿದ ಪನ್ನೀರಿನ ತುಂಡುಗಳನ್ನು ಸೇರಿಸಬೇಕು. ಮಂದವಾದ ಉರಿಯಲ್ಲಿ ಬೇಯಲು ಬಿಡಿ. ಬೇಯುವ ಸಮಯದಲ್ಲಿ ಅರ್ಧ ಹೋಳು ಲಿಂಬೆ ರಸ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ. ಸರಿಯಾಗಿ ಕಾದ ಬಳಿಕ ಬಾಣಲಿಯನ್ನು ಒಲೆಯಿಂದ ಕೆಳಗಿಳಿಸಿ. ನಿಮ್ಮ ಪನ್ನೀರ್ ಪೆಪ್ಪರ್ ಡ್ರೈ ತಯಾರು.        

-ವಾಣಿಶ್ರೀ ವಿನೋದ್, ಪೇರ್ಲಗುರಿ, ಮಂಗಳೂರು