ಪಪ್ಪಾಯಿ ಹಣ್ಣಿನ ರೋಗಗಳು ಮತ್ತು ಹತೋಟಿ ಕ್ರಮಗಳು (ಭಾಗ ೧)




ಪಪ್ಪಾಯಿ ಅಥವಾ ಪಪಾಯ ಉಷ್ಣವಲಯದ ಶೀಘ್ರ ಫಲ ಕೊಡುವ ಪ್ರಮುಖ ಹಣ್ಣಿನ ಬೆಳೆ. ಈ ಹಣ್ಣು ದೇಹ ಪೋಷಣೆಗೆ ಬೇಕಾದ " ಎ" ಮತ್ತು "ಸಿ" ಜೀವಸತ್ವಗಳಿಂದ ಸಂಪದ್ಬರಿತವಾಗಿದೆ. ತಾಜಾ ಹಣ್ಣಿಗಾಗಿ ಹಾಗೂ ಕಾಯಿಗಳಿಂದ ಪಡೆದ “ಪೆಪೈನ” ಪುಡಿಗಾಗಿ ಇದಕ್ಕೆ ಅಪಾರ ಆರ್ಥಿಕ ಮಹತ್ವ ದೊರಕಿದೆ. ಉಷ್ಣಪ್ರದೇಶದ ಮೆಕ್ಸಿಕೋ ದೇಶ ಇದರ ತವರೂರಾಗಿದ್ದು, ಪ್ರಪಂಚದ ವಿವಿದೆಡೆ ಬೆಳೆಯುತ್ತಿದ್ದರೂ ವಾಣಿಜ್ಯ ಬೆಳೆಯಾಗಿ ಇದನ್ನು ಎಂಟು ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಅಧಿಕ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರದ ಸ್ಥಾನ ಭಾರತಕ್ಕೆ ಸಲ್ಲುತ್ತದೆ. ಪಪ್ಪಾಯಿ ಬೆಳೆಗೆ ಹಲವಾರು ರೋಗ ಮತ್ತು ಕೀಟಗಳು ಬಾಧಿಸುವವು. ಇವುಗಳನ್ನು ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಪಪ್ಪಾಯಿ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ರೋಗಗಳೆಂದರೆ ಸಸಿ ಕೊಳೆ ರೋಗ, ಕತ್ತು ಕೊಳೆ ರೋಗ, ಉಂಗುರ ಚುಕ್ಕೆ ಮೊಸಾಯಿಕ್ ನಂಜುರೋಗ, ಚಿಬ್ಬುರೋಗ (ಆಂಥ್ರಕ್ನೋಸ್), ಎಲೆಮುರುಟು ರೋಗ ಮತ್ತು ಬೂದಿರೋಗ.
ಅ. ಶಿಲೀಂಧ್ರ ರೋಗಗಳು
೧) ಸಸಿ ಕೊಳೆ ರೋಗ:
ರೋಗದ ಲಕ್ಷಣಗಳು: ಬೀಜಗಳು ಮೊಳಕೆಯೊಡೆಯುವಾಗ ಮತ್ತು ನಂತರದ ಎಳೆಸಸಿಗಳಲ್ಲಿ, ಬೇರಿನ ಮತ್ತು ಮಣ್ಣಿಗೆ ಸಮನಾಂತರವಾದ ಕಾಂಡದ ಭಾಗ ಕೊಳೆಯುತ್ತದೆ. ಇದರಿಂದಾಗಿ ಸಸ್ಯದ ಮೇಲು ಭಾಗದ ಭಾರವನ್ನು ತಡೆದುಕೊಳ್ಳಲಾರದೆ ಸಸಿಯು ನೆಲದ ಮೇಲೆ ಒರಗುತ್ತದೆ. ಈ ರೀತಿ ಸಸಿಗಳು ಗುಂಪಾಗಿ ಸಾಯುತ್ತವೆ. ಹಲವು ಬಾರಿ, ಪೂರ್ತಿ ಸಸಿಮಡಿಗಳು ಹಾಳಾಗುವ ಸಂಭವವಿದ್ದು, ನಾಟಿ ಮಾಡಲು ಸಸಿಗಳು ಸಿಗದೇ ಹೋಗುತ್ತವೆ.
ರೋಗಾಣು: ಈ ರೋಗವು ಶಿಲೀಂಧ್ರಗಳಾದ ಪಿತಿಯಂ, ಫೈಟೋಪ್ತೆರಾ ಮತ್ತು ರೈಜೋಕ್ಟೋನಿಯಾಗಳಿಂದ ಬರುತ್ತದೆ.
ಶಿಲೀಂಧ್ರವು ಮಣ್ಣಿನಲ್ಲಿ ಜೀವಿಸುತ್ತದೆ ಮತ್ತು ಸಸಿಮಡಿಗಳಲ್ಲಿ ಹೆಚ್ಚಿನ ತೇವಾಂಶವಿದ್ದು ನೀರು ಸರಿಯಾಗಿ ಬಸಿದು ಹೋಗದೆ, ಉಷ್ಣಾಂಶ ೩೦ - ೩೫ ಡಿಗ್ರಿ ಸೆಂ. ಇದ್ದಾಗ ರೋಗ ಬೇಗನೆ ಕಾಣಿಸಿಕೊಳ್ಳುತ್ತದೆ.
ನಿರ್ವಹಣೆ: ಸಸಿಮಡಿಯಲ್ಲಿ ಸರಿಯಾಗಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು.
ರೋಗ ಕಾಣಿಸಿಕೊಂಡ ನಂತರ ಸಸಿಮಡಿಯನ್ನು ೨ ಗ್ರಾಂ ಸೈಮೊಕ್ಸಾನಿಲ್+ಮ್ಯಾಂಕೊಜೆಬ್ ಅಥವಾ ಮೆಟಲಾಕ್ಸಿಲ್ ಎಮ್.ಝಡ್ ೭೨ ಡಬ್ಲ್ಯೂ. ಪಿ. (೨ ಗ್ರಾಂ ಪ್ರತಿ ಲೀ.) ದ್ರಾವಣದಿಂದ ಮಣ್ಣನ್ನು ಚೆನ್ನಾಗಿ ತೋಯಿಸಬೇಕು.
೨. ಕತ್ತು ಕೊಳೆರೋಗ ಅಥವಾ ಬುಡಕೊಳೆರೋಗ
ರೋಗದ ಲಕ್ಷಣಗಳು: ಕಾಂಡದ ಬುಡದಲ್ಲಿ ನೀರಿನಿಂದ ಸೋಂತ ಮಚ್ಚೆ/ಕಲೆಗಳು ಕಾಣಿಸುತ್ತವೆ. ಈ ಮಚ್ಚೆಗಳು ದೊಡ್ಡದಾಗಿ ಕಾಂಡವು ಉಬ್ಬಿದ ಹಾಗೆ ಕಾಣಿಸುತ್ತದೆ. ಈ ಭಾಗವು ಕಡುಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಸೀಳಿ ಕೊಳೆಯಲಾರಂಭಿಸುತ್ತದೆ. ಗಿಡದ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಸೊರಗಿ ಬಿದ್ದು ಹೋಗುತ್ತವೆ.
ರೋಗದ ತೀವ್ರತೆ ಜಾಸ್ತಿಯಾದಾಗ ಗಿಡವು ತಲೆಕೆಳಗಾಗಿ ಬೀಳುವುದು. ರೋಗ ಪೀಡಿತ ಕಾಂಡದ ಭಾಗವನ್ನು ಸೀಳಿ ನೋಡಿದಾಗ ಒಳಗಿನ ಭಾಗವು ಒಣಗಿದಂತೆ ಮತ್ತು ಜೇನಿನಗೂಡಿನಂತೆ ಕಂಡುಬರುತ್ತದೆ. ಈ ರೋಗವು ಗಿಡಗಳು ಚಿಕ್ಕದಾಗಿದ್ದಾಗ ಕಂಡುಬಂದರೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ರೋಗಾಣು: ಈ ರೋಗವು ಪಿತಿಯಂ ಅಫಾನಿಡರ್ಮಾಟಂ ಎಂಬ ಶಿಲೀಂಧ್ರಗಳಿಂದ ಬರುತ್ತದೆ. ಸಾಮಾನ್ಯವಾಗಿ ಜೂನ್‌ನಿಂದ ಆಗಸ್ಟ್ ತಿಂಗಳಲ್ಲಿ ಕಾಣಿಸುತ್ತದೆ. ರೋಗಾಣುಗಳು ಮಣ್ಣಿನಲ್ಲಿ ಜೀವಿಸುತ್ತವೆ. ಅತಿಯಾದ ತೇವಾಂಶ, ನೀರು ನಿಲ್ಲುವುದು ಮತ್ತು ನೀರು ಚೆನ್ನಾಗಿ ಬಸಿಯದಿರುವುದು ರೋಗ ಹೆಚ್ಚಾಗಲು ಮುಖ್ಯ ಕಾರಣಗಳು. ಈ ರೋಗವು ನೀರಿನಿಂದ ಮತ್ತು ಕೃಷಿಗೆ ಬಳಸುವ ಉಪಕರಣಗಳಿಂದ ಹರಡುತ್ತದೆ.
ನಿರ್ವಹಣೆ: ನೀರು ಚೆನ್ನಾಗಿ ಬಸಿದು ಹೋಗದಿರುವಂತಹ ಮಣ್ಣಿನಲ್ಲಿ ಪಪ್ಪಾಯಿಯನ್ನು ಬೆಳೆಯಬಾರದು.
ರೋಗಪೀಡಿತ ಗಿಡಗಳನ್ನು ಕಿತ್ತು ಸುಡಬೇಕು. ಶಿಲೀಂದ್ರನಾಶಕಗಳಾದ ಕ್ಯಾಪ್ಟಾನ್ ೮೦ ಡಬ್ಲ್ಯೂಪಿ ೨ ಗ್ರಾಂ ಒಂದು ಕಿ.ಗ್ರಾಂ ಬೀಜಕ್ಕೆ ಉಪಚರಿಸಿ ಬಿತ್ತನೆಮಾಡಬೇಕು. ರೋಗ ಕಂಡು ಬಂದಾಗ, ಭೂಮಿಗೆ ಸಮನಾಂತರ ಭಾಗದ ಕಾಂಡವನ್ನು ಶೇ. ೧ರ ಬೋರ್ಡೊ ದ್ರಾವಣ ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ ೫೦ ಡಬ್ಲ್ಯೂಪಿ. (೩ ಗ್ರಾಂ ಪ್ರತಿ ಲೀ.) ಅಥವಾ ೨ ಗ್ರಾಂ. ಮೆಟಲಾಕ್ಸಿಲ್ +ಮ್ಯಾಂಕೋಜೆಬ್ ೭೨ ಡಬ್ಲೂ.ಪಿ. ನಿಂದ ಚೆನ್ನಾಗಿ ನೆನೆಸಬೇಕು. ಜೈವಿಕ ನಿಯಂತ್ರಣ ಶಿಲೀಂಧ್ರವನ್ನು (ಟ್ರೈಕೋಡರ್ಮಾ ಹಾರ್ ಜಿಯಾನಮ್ ೧೮) ಬೇವಿನ ಹಿಂಡಿಯಲ್ಲಿ ಅಭಿವೃದ್ಧಿ ಪಡಿಸಿ ಒಂದು ಮರಕ್ಕೆ ೨ ಕೆ.ಜಿ. ಹಾಕಬೇಕು.
೩) ಚಿಬ್ಬುರೋಗ (ಆಂಥ್ರಕ್ನೋಸ್)
ರೋಗದ ಲಕ್ಷಣಗಳು: ರೋಗದ ಚಿಹ್ನೆಗಳು, ಎಲೆ ಮತ್ತು ಮಾಗಿದ ಹಣ್ಣುಗಳ ಮೇಲೆ ಕಂಡು ಬರುತ್ತದೆ. ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು ವೃದ್ದಿಗೊಂಡು ತೀವ್ರವಾಗಿ ಸುಟ್ಟಂತೆ ಕಾಣುತ್ತದೆ. ಹಣ್ಣುಗಳ ಮೇಲೂ ಚುಕ್ಕೆ ಕಂಡುಬಂದು ಮಾಗುವ ಹಂತದಲ್ಲಿ ತೀವ್ರವಾಗಿ ಹಬ್ಬಿ, ಹಣ್ಣು ಕೊಳೆಯುವಂತೆ ಮಾಡುತ್ತದೆ.
ನಿರ್ವಹಣೆ: ಈ ರೋಗ ಕಂಡು ಬಂದಾಗ ಎಲೆ ಹಾಗೂ ಹಣ್ಣುಗಳಿಗೆ ೩ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಲ್ಯೂಪಿ./ ೨ ಗ್ರಾಂ ಕ್ಲೋರೊಥಲೊನಿಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಲೀ ನೀರಿಗೆ ೦.೫ ಗ್ರಾಂ ನೆಟಿವೊ ಅಥವಾ ೧ ಗ್ರಾಂ ಹೆಕ್ಸಕೋನಾಜೋಲ್/ಪ್ರೊಪಿಕೊನಲ್ ಜೆಲ್ ಅನ್ನು ಬೆರೆಸಿ ಸಿಂಪಡಿಸಬೇಕು.
(ಇನ್ನೂ ಇದೆ)
ಚಿತ್ರ ೧: ಸಸಿ ಕೊಳೆ ರೋಗ ಲಕ್ಷಣ
ಚಿತ್ರ ೨: ಕೊಳೆರೋಗ ಲಕ್ಷಣ
ಚಿತ್ರ ೩ ಮತ್ತು ೪ : ಚಿಬ್ಬು ರೋಗದ ಲಕ್ಷಣ
ಚಿತ್ರಗಳು ಮತ್ತು ಮಾಹಿತಿ ಕಾವ್ಯಶ್ರೀ ಎಂ. ಸಿ, ಡಾ. ಹನುಮಂತಪ್ಪ ಎಂ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ.