ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)
ಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ ಆ ಪಟ್ಟಿಗೆಯಲ್ಲಿ ಜೇನು ಆಗಿದೆ ಎಂಬುದನ್ನು ಅಲ್ಲಿ ಬರುವ ಪರಿಮಳ ತಿಳಿಸುತ್ತಿತ್ತು. ಅದು ಕುಂಟು ನೇರಳೆ ಹೂವಿನ ಜೇನು. ಆಗ ಈಗ ರಬ್ಬರ್, ಅಡಿಕೆ ಬೆಳೆಯಲಾಗುತ್ತಿರುವ ಗುಡ್ಡ ಬೆಟ್ಟಗಳಲ್ಲೆಲ್ಲಾ ಕುಂಟು ನೇರಳೆ, ನೇರಳೆ ಮರಗಳು ಇದ್ದವು. ಜೇನು ನೊಣಗಳಿಗೆ ಅದು ಗರಿಷ್ಟ ಪ್ರಮಾಣದ ಮಧುವನ್ನು ಕೊಡುತ್ತಿತ್ತು. ಅ ಸಮಯದಲ್ಲಿ ಎಲ್ಲೋ ಪಾಲಾಗಿ ಬಂದು ಆಯಾಸ ಪರಿಹಾರಕ್ಕಾಗಿ ಮರದ ಗೆಲ್ಲುಗಳಲ್ಲಿ ಆಶ್ರಯ ಪಡೆಯುವ ಜೇನು ಕುಟುಂಬಗಳು ಎಷ್ಟೋ ದೊರೆಯುತ್ತಿದ್ದವು. ಜೇನು ನೊಣಗಳು ಹಾರಾಡುವುದು ಕಂಡರೆ ಅದು ತಗ್ಗಿನಲ್ಲಿ ಇದ್ದರೆ, ಅದಕ್ಕೆ ನೀರು ಚೆಲ್ಲುವಂತೆ ಹೇಳುತ್ತಿದ್ದರು. ಹಾಗೆ ಮಾಡುವುದರಿಂದ ನೊಣಗಳ ರೆಕ್ಕೆ ಒದ್ದೆಯಾಗಿ ಎಲ್ಲಾದರೂ ಅಲ್ಲೇ ಪಕ್ಕದಲ್ಲಿ ತಗ್ಗಿನಲ್ಲಿ ವಿರಮಿಸುತ್ತಿದ್ದವು. ಆ ನಂತರ ಅದನ್ನು ಹಿಡಿದು ಪೆಟ್ಟಿಗೆಗೆ ಕೂಡಿಹಾಕುತ್ತಿದ್ದೆವು. ಕೆಲವೊಮ್ಮೆ ಜೇನು ಕುಟುಂಬ ಇದ್ದರೂ ಪೆಟ್ಟಿಗೆ ಇಲ್ಲದೆ ಅದನ್ನು ಬಿಟ್ಟುದೂ ಉಂಟು. ಇಷ್ಟು ಅಲ್ಲದೆ ಆಗ ಎಲ್ಲಿ ನೋಡಿದರಲ್ಲಿ ಕೋಲು ಜೇನು. ಅದು ನಾನು ಪಿಯುಸಿ ಓದುವ ಸಮಯ ಇದ್ದಿರಬೇಕು. ಸುಮಾರು ೧೦ ಕೋಲು ಜೇನಿನ ಕುಟುಂಬಗಳು ನಮ್ಮ ಹೊಲದಲ್ಲಿ ಇದ್ದವು. ಕೆಲವು ಬಿದಿರು ಮೆಳೆಯಲ್ಲಿ, ಮತ್ತೆ ಕೆಲವು ಕರಿ ಮೆಣಸಿನ ಬಳ್ಳಿಯಲ್ಲಿ, ಕೆಲವು ಕಾಡು ಗಿಡಗಳಲ್ಲಿ ಈ ಜೇನು ಕುಟುಂಬ ಕೋಲಿನ ಮೇಲೆ ಎರಿ ಬಿಟ್ಟು ವಾಸಿಸುತ್ತಿದ್ದವು.
ನಮಗೆ ಆ ಜೇನನ್ನು ತೆಗೆಯುವ ಉಪಾಯವನ್ನು ಹೇಳಿಕೊಟ್ಟಿದ್ದರು. ಆ ಪ್ರಕಾರ ವಾರ ವಾರವೂ ಪ್ರತೀ ಜೇನು ಕುಟುಂಬದಿಂದ ಜೇನನ್ನು ತೆಗೆಯುತ್ತಿದ್ದೆವು. ಅದು ಈಗಲೂ ನೆನಪಿದೆ. ಬಿದಿರು ಮೆಳೆ ಬಿಡಿಸಲು ಹೋಗಿ ಬಿದಿರ ಮುಳ್ಳು ಬೆನ್ನಿಗೆ ತಾಗಿ ರಕ್ತ ಸುರಿದದ್ದು. ಕೋಲು ಜೇನಿನಲ್ಲಿ ಕೆಲವು ಸಣ್ಣ ಎರಿಯ ಕುಟುಂಬ ಮತ್ತು ಕೆಲವು ದೊಡ್ದ ಎರಿಯವು (ಹಿಂಡು ಮತ್ತು ಗೆರಸೆ) ಎಂಬ ಎರಡು ವಿಧಗಳಿದ್ದುದನ್ನು ಆಗಲೇ ತೋರಿಸಿಕೊಟ್ಟಿದ್ದರು. ಕೋಲು ಜೇನಿನ ಕುಟುಂಬ ಒಂದು ಕೋಲಿನ ಆಸರೆಯಲ್ಲಿ ವಾಸಿಸುತ್ತದೆ. ಕೋಲನ್ನು ತನ್ನ ಎರಿಗೆ ಆಧಾರವಾಗಿಸಿಕೊಂಡು ಅದರ ಕೆಳ ಭಾಗದಲ್ಲಿ ಎರಿಯನ್ನು ಇಳಿಸುತ್ತದೆ. ಕೋಲಿನ ಮೇಲು ಭಾಗದಲ್ಲಿ ಉಬ್ಬಿದ ತರಹ ಜೇನನ್ನು ಮಾಡುತ್ತದೆ. ಕೆಳ ಭಾಗದಲ್ಲಿ ಬರೇ ಮೊಟ್ಟೆಗಳು. ನಾವು ಒಂದು ಹಸಿ ಹಾಳೆಯನ್ನು ಸುತ್ತಿ ಅದರ ಒಳಗೆ ಸ್ವಲ್ಪ ತೆಂಗಿನ ಸಿಪ್ಪೆ ಇಟ್ಟು ಅದಕ್ಕೆ ಬೆಂಕಿ ಕೊಟ್ಟು, ಆದನ್ನು ಒಂದು ಬದಿಯಿಂದ ಊದಿ ಹೊಗೆಯನ್ನು ಎರಿಯ ಮೇಲು ಭಾಗಕ್ಕೆ ಬಿಟ್ಟರೆ ನೊಣಗಳು ತುಂಬಾ ಸಾಧುವಾಗುತ್ತವೆ. ಎಲ್ಲಾ ನೊಣಗಳು ಕೆಳಭಾಗಕ್ಕೆ ಇಳಿಯುವಂತೆ ಮಾಡಿ ದೊಡ್ಡ ಚೂರಿಯ ಸಹಾಯದಿಂದ ಕೋಲಿನ ಮೇಲು ಭಾಗವನ್ನು ಕೊಯ್ದು, ಆ ಭಾಗವನ್ನು ಮೆಲ್ಲಗೆ ಹತ್ತಿರದಲ್ಲಿ ಒಂದು ಬಟ್ಟಲನ್ನು ಹಿಡಿದು ದೂಡಿದರೆ, ಆಯಿತು. ಜೇನು ದೊರೆಯುತ್ತಿತ್ತು. ಈ ರೀತಿಯಲ್ಲಿ ತುಂಬಾ ಹೂವು ಇರುವ ಸೀಸನ್‌ನಲ್ಲಿ ವಾರಕ್ಕೊಮ್ಮೆ ಜೇನು ತೆಗೆದದ್ದೂ ಉಂಟು. ಕೆಲವೊಮ್ಮೆ ಕತ್ತರಿಸಿದ್ದು ಹೆಚ್ಚಾಗಿ ಅದು ಮತ್ತೆ ಇಳಿಯುವ ಸಮಯದಲ್ಲಿ ಅಲುಗಾಡಿ, ಜೇನು ನೊಣಗಳಿರುವ ಎರಿಯೇ ಕಳಚಿಕೊಂಡು ತಲೆ ಮೇಲೆ ಬಿದ್ದದ್ದೂ ಇದೆ.!
ಪ್ರಪಂಚದಾದ್ಯಂತ ನಾಲ್ಕು ಬಗೆಯವು ನೊಣಗಳು ಜೇನು ಉತ್ಪಾದನೆ ಮಾಡುವವು. ಇವು ಮಿಸಿರಿ ಜೇನು, ಕೋಲು ಜೇನು, ತೊಡುವೆ ಜೇನು ಮತ್ತು ಹೆಜ್ಜೇನು. ಈ ನಾಲ್ಕು ಬಗೆಯ ಜೇನು ನೊಣಗಳ ಶರೀರ ಪ್ರಕೃತಿ ಭಿನ್ನ. ವಾಸದ ಸ್ಥಾನವೂ ಭಿನ್ನ. ಆದರೆ ಕೆಲಸಕ್ಕೆ ಮಾತ್ರ ಸಾಮ್ಯತೆ ಇದೆ. ಇವು ತಮ್ಮ ಆಹಾರಕ್ಕಾಗಿ ಮಧು ಮಕರಂದವನ್ನು ಪುಷ್ಪಗಳ ಪುಷ್ಪ ಕೇಸರದ ಮೂಲಕ ಹೀರುತ್ತಾ ತಮ್ಮ ಕರ್ತವ್ಯವನ್ನು ಮಾಡುತ್ತವೆ. ಆ ಕರ್ತವ್ಯದ ಜೊತೆಗೆ ಅವು ಪರಿಸರದ ಜೀವ ಸಸ್ಯ ವೈವಿಧ್ಯಗಳ ಸಂಮೃದ್ದಿಗೂ ಕಾರಣವಾಗಿವೆ. ಒಂದು ಹೂವಿನ ಮೇಲೆ ಕುಳಿತು ಅದರದ ಮಧುವನ್ನು ತನ್ನ ಬಾಯಿಯ, ಕೊಂಡಿಯ ಮೂಲಕ, ಹೀರಿ ತನ್ನ ಶರೀರದೊಳಕ್ಕೆ ಸೇರಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಅದರ ಕಾಲುಗಳು ಪುಷ್ಪದ ಕೇಸರದ ಮೇಲೆಲ್ಲಾ ತಾಗಲ್ಪಟ್ಟು ಅದು ಮತ್ತೊಂದು ಹೂವಿನ ಮೇಲೆ ಕುಳಿತಾಗ ಅದಕ್ಕೆ ಮಕರಂದದ ಸ್ಪರ್ಶವಾಗುತ್ತದೆ. ಆ ಕಾಯಿ ಫಲಿತವಾಗುತ್ತದೆ, ಬೀಜವಾಗುತ್ತದೆ. ಅದು ಹುಟ್ಟಿ ಮತ್ತೆ ಸಸ್ಯವಾಗುತ್ತದೆ. ಇದು ಜೇನು ನೊಣಕ್ಕೆ ಗೊತ್ತಿಲ್ಲದೆ ನಡೆಯುವ ಕಾರ್ಯ. ನಮ್ಮ ಪರಿಸರದಲ್ಲಿರುವ ಬಹುತೇಕ ಹೂವುಗಳು ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವವುಗಳು. ಈ ಕಾರ್ಯಕ್ಕೆ ನೆರವಾಗುವವುಗಳು ಜೇನು ನೊಣಗಳು ಮತ್ತು ಇನ್ನೂ ಹಲವಾರು ದುಂಬಿಗಳು. ಈ ದುಂಬಿಗಳಿಗೆ ಮರಮಟ್ಟು ಸಸ್ಯಗಳ ಹೂವುಗಳೇ ಆಸರೆ. ಈಗೀಗ ಪರಾಗದಾನಿಗಳೆನಿಸಿದ ನೊಣ, ದುಂಬಿಗಳಿಗೆ ನೈಸರ್ಗಿಕ ಆಸರೆಗಳೆನಿಸಿದ ಪುಷ್ಪಗಳ ಕೊರತೆ ಉಂಟಾಗಿದೆ.
ಪ್ರಪಂಚದಾದ್ಯಂತ ಪರಾಗದಾನಿಗಳ ಸಾಲಿನಲ್ಲಿ ಗುರುತಿಸಲ್ಪಟ್ಟ ಜೀವಿಗಳೆಂದರೆ ಕೆಲವು ಪಕ್ಷಿಗಳು , ಕೆಲವು ಚಿಟ್ಟೆಗಳು, ಕಂಚುಕಾರ ಜಾತಿಯ ನೊಣ, ಜೇನು ನೊಣಗಳು, ಕಾಡು ನೊಣಗಳು, ಬಾವಲಿಗಳು, ಇರುವೆಗಳು, ದುಂಬಿಗಳು. ಪ್ರಪಂಚದಾದ್ಯAತ ಇಂತಹ ಪರಾಗದಾನಿ ಜೀವಿಗಳು ಸುಮಾರು ೨೦,೦೦೦ ಕ್ಕೂ ಮಿಕ್ಕಿ ಇವೆ ಎಂಬ ಲೆಕ್ಕಾಚಾರ ಇದೆ. ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ನೊಣದಷ್ಟೇ ಮಹತ್ವ ಕಾಡು ನೊಣಗಳಿಗೂ ಇದೆ. ಇವು ಎಲ್ಲೆಂದರಲ್ಲಿ ಹೂವುಗಳನ್ನು ಅರಸುತ್ತಾ ಪರಾಗಸ್ಪರ್ಶ ಕ್ರಿಯೆನ್ನು ಮಾಡಿ ಕಾಯಿ ಕಚ್ಚಲು ಸಹಕರಿಸುತ್ತವೆ. ಪ್ರಪಂಚದಲ್ಲಿ ಎಲ್ಲಾ ಪುಷ್ಪಗಳಿಗೂ ಜೇನು ನೊಣಗಳೇ ಪರಾದಾನಕ್ಕೆ ಮಧ್ಯವರ್ತಿಗಳಾಗಿದ್ದರೆ. ಇಂದು ಹಣ್ಣು ಹಂಪಲು ತರಕಾರು ಫಲವಸ್ತುಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುತ್ತಿತ್ತು. ಇವುಗಳಲ್ಲಿ ೧೬ % ವರ್ಟಿಬ್ರೇಟ್‌ಗಳಾದ ಪಕ್ಷಿಗಳು, ಬಾವಲಿಗಳು ನಾಶವಾಗಿದ್ದು, ಸುಮಾರು ೨೦೦೦ ಕ್ಕೂ ಹೆಚ್ಚು ಹೂವಿನಿಂದ ಹೂವಿಗೆ ಹಾರುವ ದುಂಬಿಗಳು ನಾಶವಾಗಿವೆಯಂತೆ. ಸುಮಾರು ೯% ಚಿಟ್ಟೆಗಳೂ ಸಹ ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲಾ ಕಾರಣ ರೈತರು ಅಧಿಕ ಇಳುವರಿ ಆಶೆಗೆ ತೀವ್ರ ತರಹದ ಬೇಸಾಯ ಕ್ರಮವನ್ನು ಅನುಸರಿಸಿದ್ದು ಎನ್ನುತ್ತಾರೆ.
ಹಳ್ಳಿಗಳಲ್ಲಿಕೆಲಸ ಬೇಡ ಅಥವಾ ಇಲ್ಲ ಎಂದು ಪಟ್ಟಣದೆಡೆಗೆ ಜನ ಕೆಲಸ ಅರಸುತ್ತಾ ಹೋದಂತೆ ಪರಾಗದಾನಿಗಳೆನಿಸಿದ ಜೇನು ನೊಣಗಳು ಈಗೀಗ ಪೇಟೆಯತ್ತ ವಲಸೆ ಹೋಗಿವೆ.! ಪೇಟೆ ಪಟ್ಟಣಗಳ ಕಬ್ಬಿನ ರಸ ತೆಗೆಯುವ ಕಡೆ, ದ್ರಾಕ್ಷಿ ಇತ್ಯಾದಿ ಹಣ್ಣು ಹಂಪಲು ಮಾರುವ ಕಡೆ, ಮಳೆಗಾಲದಲ್ಲಿ ದಿನಸಿ ಅಂಗಡಿಯ ಬೆಲ್ಲ ಸಕ್ಕರೆ ತುಂಬಿಟ್ಟ ಗೋಣಿ ಚೀಲದ ಪಕ್ಕ ಅವು ಆಹಾರ ಹುಡುಕುತ್ತಾ ಸುತ್ತಾಡುವುದನ್ನು ಕಾಣಬಹುದು. ಹಳ್ಳಿಯಲ್ಲಿ ಇವುಗಳಿಗೆ ನಿರಂತರ ಆಹಾರ ದೊರೆಯುತ್ತಿಲ್ಲ.
ಹಳ್ಳಿಯಲ್ಲಿ ಈಗ ಕಾಡು ಕಡಿಮೆಯಾಗಿದೆ. ಕಾಡಿದ್ದರೂ ಕಾಡಿನಲ್ಲಿ ನೈಸರ್ಗಿಕ ಪುಷ್ಪಗಳಿಲ್ಲ. ಪುಷ್ಪ ಇಲ್ಲದ ಮರಮಟ್ಟುಗಳು ಪರಾಗ ದಾನಿಗಳಿಗೆ ಆಸರೆಯಾಗಲಾರದು. ಇದರಿಂದ ಪರಾಗದಾನಿಗಳ ಅವನತಿಯಾಗಲಾರಂಭಿಸಿದೆ. ಬರೇ ಕಾಡು ಮರಮಟ್ಟುಗಳು ಮಾತ್ರವಲ್ಲ. ಪರಾಗದಾನಿಗಳಿಗೆ ಕುರುಚಲು ಗಿಡಗಳು, ಹುಲ್ಲು,ಬಳ್ಳಿ, ಕಳೆ ಗಿಡಗಳೂ ಸಹ ಮಧು ಮಕರಂದಗಳನ್ನು ಒದಗಿಸುವ ಸಸ್ಯಗಳು. ಇವುಗಳ ಪ್ರಮಾಣ ಕಡಿಮೆಯಾಗಿದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇರುವ ಸಮಸ್ಯೆ. ಪರಾಗದಾನಿಗಳ ಸಂತತಿಗೂ ಕೃಷಿಗೂ ಅಭೇಧ್ಯ ಸಂಬಂಧ ಇದೆ.
ಕೆಲವು ಬುದ್ಧಿ ಜೀವಿಗಳು ಹೇಳುವುದುಂಟು: ಪ್ರಪಂಚದಾದ್ಯಂತ ಬುದ್ಧಿಜೀವಿಗಳೆಂಬ ಒಂದು ವರ್ಗ ಇದ್ದೇ ಇದೆ. ಇವರಿಗೆ ಅಭಿವೃದ್ದಿಯನ್ನು ತೆಗಳುವುದು ಒಂದು ವ್ಯವಹಾರ. ಬರೇ ದುಖಃವನ್ನು ಜನರ ಮುಂದೆ ಆಕರ್ಷಕ ಭಾಷೆಗಳಲ್ಲಿ ವರ್ಣಿಸುತ್ತಾ ತಮ್ಮ ಬುದ್ದಿಮತ್ತೆಯನ್ನು ಪ್ರದರ್ಶಿಸುತ್ತಾರೆ. ಆದರೆ ಅವರಲ್ಲಿ ಇದಕ್ಕೇನು ಪರಿಹಾರ ಎಂಬುದು ಇಲ್ಲ.ಕೃಷಿಕ ಹಾಗೆ ಮಾಡುತ್ತಾನೆ, ಹೀಗೆ ಮಾಡುತ್ತಾನೆ ಎಂಬುದಾಗಿ ಹೇಳಿ ಒಟ್ಟಾರೆ ಸಮುದಾಯವನ್ನು ದೂರುತ್ತಾರೆ. ಆದರೆ ಅದೆಲ್ಲಾ ಪ್ರಯೋಜನಕ್ಕೆ ಇಲ್ಲದ ಮಾತುಗಳು. ಕೀಟನಾಶಕ, ಕಳೆನಾಶಕ ತಯಾರಕರು ತಯಾರಿಸುತ್ತಲೇ ಇದ್ದಾರೆ.ಅವರ ವ್ಯವಹಾರ ಇಮ್ಮಡಿ ಮುಮ್ಮಡಿ ಆಗುತ್ತಲೇ ಇದೆ. ಅದೇ ರೀತಿ ಅವರನ್ನು ಬೊಟ್ಟು ಮಾಡಿ ರೈತರನ್ನು ಟೀಕಿಸುವಂತಹ ಬುದ್ಧಿಜೀವಿಗಳ ಆದಾಯವೂ ಹೆಚ್ಚುತ್ತಿದೆ. ರೈತನ ಆದಾಯ ಮಾತ್ರ ಹಾಗೆಯೇ ಇರುತ್ತದೆ. ಬುದ್ಧಿ ಜೀವಿಗಳು ಹೇಳುವಂತೆ ಯಾವುದೂ ಆಗಿಲ್ಲ. ಯಾವ ಕೀಟನಾಶಕ – ಕಳೆನಾಶಕಗಳನ್ನೂ ಯಾವುದೇ ತಯಾರಕರೂ ತಾಯಿ ಭೂಮಾತೆಯನ್ನು÷ ಕಲುಷಿತ ಮಾಡಿ ಎಂದು ಉಚಿತವಾಗಿ ಕೊಟ್ಟಿಲ್ಲ. ರೈತ ತನ್ನ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಅದನ್ನು ಬಳಸಿದ್ದಾನೆ. ಒಂದು ವೇಳೆ ಅದಕಿಂತ ಉತ್ತಮವಾದುದನ್ನು ನಮ್ಮ ಬುದ್ಧಿಜೀವಿಗಳು ಸಂಶೋಧನೆ ಮಾಡಿ ರೈತರಿಗೆ ಕೊಟ್ಟರೆ ಅದನ್ನೂ ರೈತರು ಬಳಸಬಲ್ಲರು. ಯಾಕಾಗಿ ಪರಾಗದಾನಿಗಳ ಸಂತತಿ ಕಡಿಮೆಯಾಗುತ್ತಿದೆ.
(ಇನ್ನೂ ಇದೆ)
ಅನುಭವ ಮಾಹಿತಿ ಮತ್ತು ಚಿತ್ರ : ರಾಧಾಕೃಷ್ಣ ಹೊಳ್ಳ