ಪರಿವರ್ತನೆ

ಪರಿವರ್ತನೆ

ಬರಹ

ಪರಿವರ್ತನೆ

ಬೆಳ್ಳಂಬೆಳಗೇ ಕೆಲಸದೋಳು ಬಂದು,

ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು

ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು;

ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು.

ಹಿತ್ತಲಿಗೆ ಹೋಗಿ, ಇದ್ದಬದ್ದ ಬಟ್ಟೆಯನ್ನೆಲ್ಲ ಒಗೆದು ಹರವಿ ಹಾಕಿಬಿಟ್ಟಳು.

ಮನೆಯೆಲ್ಲ ತೊಳೆದ ಕನ್ನಡಿ.

ರಜೆ ಹಾಕಿ ಮಲಗಿದ್ದರೂ, ಸಂಬಳದ

ಚೆಕ್ಕು ಪೋಸ್ಟಿನಲ್ಲಿ ಬಂದು ಬಿತ್ತು. ಯಾವುದೋ ನೆನೆಸಿರದ

ಬೋನಸ್ ಬೇರೆ.

ಮಧ್ಯಾಹ್ನ ಸರಿಯಾಗಿ ಹೇಳಿದ ಹೊತ್ತಿಗೆ ಬಂದ ಪ್ಲಂಬರ್,

ಬಚ್ಚಲಲ್ಲಿ ಸೋರುತ್ತಿದ್ದ ನಲ್ಲಿ ಸರಿಮಾಡಿ ಹೋಗಿಬಿಟ್ಟ.

ಸಂಜೆ ಹೊತ್ತಿಗೆ, ತಿಂಗಳಿಂದ ಮುನಿಸಿಕೊಂಡು ಹೋಗಿದ್ದ ಹೆಂಡತಿ

ಫೋನ್ ಮಾಡಿ, ಆರೋಗ್ಯ ವಿಚಾರಿಸಿದಾಗ, ಪಕ್ಕದಲ್ಲೇ ಇದ್ದ ಮಗು

ನಕ್ಕಿದ್ದೂ ಕೇಳಿಸುತ್ತೆ.

ಈ ಎಲ್ಲ ಶುಭ್ರತೆಯ, ಎಲ್ಲ ಸ್ಪಷ್ಟತೆಯ ನಡುವೆ ಕೂತಿದ್ದೀನಿ.

ಮುಸ್ಸಂಜೆಯ ನೀರವ ಮೌನ.

 

ಯಾಕೋ ಪ್ರಕ್ಷುಬ್ಧತೆಯೇ ಆಪ್ಯಾಯಮಾನ ಅನಿಸುತ್ತೆ.

ಎಲ್ಲ ಅಸ್ತವ್ಯಸ್ತ ಇರುವಾಗಲೇ ಚೆನ್ನ ಅನಿಸುತ್ತೆ.

 

ಅಂತರಂಗ ಹಂಚಿಕೊಳ್ಳೋಕೆ ಒಂದು ಜಿರಳೆಯೂ ಸಿಗದೆ,

ಖೇದವಾಗುತ್ತೆ - ಸ್ವಾಸ್ಥ್ಯದ ಹಾಳು ಜಾಳುತನ.

ಅವ್ಯವಸ್ಥೆಯ ಅಂತ್ಯದಲ್ಲಿ ನಾನು ಕಳೆದುಕೊಂಡಿರುವುದು

ನನ್ನ ಲಯ,

ನನ್ನ ನಿದ್ದೆ,

ನನ್ನ ಹಸಿವು,

ನನ್ನಿಂದ ದೋಚಲ್ಪಟ್ಟಿರುವ ನನ್ನ ಕೊಳಕುತನ.

 

                                                ರವಿಶಂಕರ (ಚಾರ್ಲ್ಸ್ ಬಕೊವ್ಸ್ಕಿ Metamorphosis  ಪದ್ಯದ ಭಾವಾನುವಾದ)