ಪರಿವರ್ತನೆ
“ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎಂಬ ಕವಿವಾಣಿಯಂತೆ ಶಿಕ್ಷಕರಾದ ನಮ್ಮ ವೃತ್ತಿ ಜೀವನದಲ್ಲಿ ಹತ್ತು ಹಲವು ಸಿಹಿ ನೆನಪುಗಳು ಸ್ಮೃತಿ ಪಟಲದಲ್ಲಿ ಉಳಿದಿರುತ್ತವೆ. ನನಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ ಹೆಚ್ಚು ದೊರಕಿದ್ದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಏಕೆಂದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಹೆಚ್ಚಿನ ಗೌರವ, ಪ್ರೀತಿ, ವಿಶ್ವಾಸಗಳಿರುತ್ತವೆ.
ಸುಮಾರು ಹದಿನೈದು ವರ್ಷಗಳ ಹಿಂದಿನ ನನ್ನ ವಿದ್ಯಾರ್ಥಿಯೊಬ್ಬ ನನಗೆ ಈಗಲೂ ನೆನಪಾಗುತ್ತಿರುತ್ತಾನೆ. ಅವನ ಹೆಸರು ಶಿವಪ್ರಕಾಶ್. ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ಆತ ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಸವಾಲಿನ ವಿದ್ಯಾರ್ಥಿಯಾಗಿದ್ದ. ಶಾಲೆಗೆ ಸೇರುವಾಗಲೇ ಎರಡು ತಿಂಗಳು ತಡವಾಗಿ ಸೇರಿದ್ದ. ಅದೂ ಕೂಡ ಪೋಷಕರ, ಶಿಕ್ಷಕರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಶಾಲೆಗೆ ಬಂದಿದ್ದ. ತರಗತಿಯಲ್ಲಿ ಇತರ ಮಕ್ಕಳ ಜೊತೆಗೆ ಬೆರೆಯದೆ ಒಂಟಿಯಾಗಿ ಇರುವ ಆತನನ್ನು ನೋಡಿ ನನಗೆ ಅವನ ಬಗ್ಗೆ ಕಾಳಜಿ ತೋರಿಸುವ ಮನಸ್ಸಾಗಿ ಅವನಲ್ಲಿ ಮಾತನಾಡಲು ಪ್ರಯತ್ನಿಸಿದೆ. ತುಂಬಾ ಸಂಕೋಚ ಸ್ವಭಾವದ ಆತ ನನ್ನೊಂದಿಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದ. ಪದೇಪದೇ ಗೈರು ಹಾಜರಾಗುತ್ತಿದ್ದ ಆತ ನಮಗೆ ಒಂದು ಕಗ್ಗಂಟಾಗಿ ಬಿಟ್ಟ. ಮಧ್ಯಾವಧಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಸಮುದಾಯದತ್ತ ಶಾಲಾ ದಿನ ಅವನ ಅಮ್ಮ ಶಾಲೆಗೆ ಬಂದವರು ಅವನ ಅಂಕಗಳನ್ನು ನೋಡಿ ಬಹಳ ನೊಂದುಕೊಂಡು ಅವನೆದುರು ಅತ್ತು ಬಿಟ್ಟರು. ಅಮ್ಮನ ಅಳುವನ್ನು ಕಂಡು ಶಿವಪ್ರಕಾಶ್ ನ ಮನಸ್ಸಿಗೆ ಬಹಳ ನೋವಾಗಿ ತಾನೂ ಅತ್ತುಬಿಟ್ಟ. ಮುಂದೆ ಕಲಿಕೆಯ ಬಗ್ಗೆ ಆಸಕ್ತಿ ವಹಿಸುವುದಾಗಿ ಅಮ್ಮನಿಗೆ ಮಾತು ಕೊಟ್ಟ. ಅಂದಿನಿಂದ ಅವನಲ್ಲಿ ಪರಿವರ್ತನೆ ಕಾಣಲಾರಂಭಿಸಿತು. ಗೈರುಹಾಜರಾಗದೆ ಪ್ರತಿದಿನ ಶಾಲೆಗೆ ಬರಲಾರಂಭಿಸಿದ. ಶಾಲೆಯಲ್ಲಿ ಕೊಟ್ಟ ಮನೆಗೆಲಸ ಮಾಡತೊಡಗಿದ. ಅಂತು ಇಂತು ಶಿವಪ್ರಕಾಶ್ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗುವಷ್ಟು ಬದಲಾದ. ಮುಂದೆ ನನಗೆ ವರ್ಗಾವಣೆಯಾಗಿ ನನ್ನೂರಿಗೆ ಬಂದ ನಂತರ ಶಿವಪ್ರಕಾಶ್ ನನ್ನು ಮರೆತು ಬಿಟ್ಟಿದ್ದೆ.
ಸುಮಾರು ಹನ್ನೆರಡು ವರ್ಷಗಳ ನಂತರ ನನ್ನ ಮೊಬೈಲ್ ನಂಬರನ್ನು ಹೇಗೋ ಸಂಗ್ರಹಿಸಿ ಒಂದು ದಿನ ನನ್ನ ಮೊಬೈಲ್ ಗೆ ಕರೆ ಮಾಡಿದ ಶಿವಪ್ರಕಾಶ್ ಬಹಳ ಪ್ರೀತಿಯಿಂದ ಮಾತನಾಡಿದ. ಹತ್ತನೇ ತರಗತಿ ಮುಗಿದ ಬಳಿಕ ತಾನು ತಾಯಿ ಜೊತೆ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಬಗ್ಗೆ ತಿಳಿಸಿದ. ನಂತರ ಆಟೋರಿಕ್ಷಾ ಖರೀದಿಸಿ ತನ್ನೂರಿನಲ್ಲಿ ದುಡಿಯಲಾರಂಭಿಸಿದ. ತನ್ನ ದುಡಿಮೆಯಿಂದ ಹೊಸ ಮನೆ ಕಟ್ಟಿ ನೆಮ್ಮದಿಯ ಬದುಕು ನಡೆಸುತ್ತಿರುವ ಬಗ್ಗೆ ತಿಳಿಸಿದ. ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಆತ ಮರೆತಿರಲಿಲ್ಲ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ತಾನು ಕಲಿತ ಶಾಲೆಗೆ ಹಲವಾರು ವ್ಯವಸ್ಥೆಗಳನ್ನು ಮಾಡಿಸಿಕೊಟ್ಟ ಬಗ್ಗೆ ತಿಳಿಸಿದಾಗ ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅಂದು ತರಗತಿಯ ಒಂದು ಮೂಲೆಯಲ್ಲಿ ಮುದುರಿಕೊಂಡು ಕೂತಿರುತಿದ್ದ ಶಿವಪ್ರಕಾಶ್ ನಿಗೂ ಇಂದು ಗ್ರಾಮ ಪಂಚಾಯತ್ ನ ಸದಸ್ಯ ನಾಗಿರುವ ಶಿವಪ್ರಕಾಶ್ ನಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅವನಲ್ಲಾದ ಬದಲಾವಣೆ ನೋಡಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ನಮಲ್ಲಿರಬೇಕು ಎಂಬ ಅಂಶವನ್ನು ಮನದಟ್ಟು ಮಾಡಿಕೊಟ್ಟಿದೆ.
-ಶಾಂತಾ ಎಸ್, ಪುಂಜಾಲಕಟ್ಟೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ