ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ

ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ

ಕಳೆದ ನಾಲ್ಕು ದಿನಗಳಿಂದ ಇಡೀ ಉತ್ತರ ಭಾರತ ವರುಣಾಕ್ರೋಶದಿಂದ ತತ್ತರಿಸಿಹೋಗಿದ್ದು, ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ನಷ್ಟವೂ ಉಂಟಾಗಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳೂ ಹಿಂದೆಂದೂ ಕಾಣದಂತ ಮಳೆಯನ್ನು ಕಂಡಿದ್ದು, ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಆಗಿರುವ ನಷ್ಟದ ಅಂದಾಜೇ ಸಿಗುತ್ತಿಲ್ಲ. ಯಮುನೆ, ಬಿಯಾಸ್ ಸಹಿತ ಉತ್ತರ ಭಾರತದಲ್ಲಿನ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಭೀತಿಯೂ ಎದುರಾಗಿದೆ.

ಕೇವಲ ಈ ಎರಡು ರಾಜ್ಯಗಳಷ್ಟೇ ಅಲ್ಲ ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೂಡ ಮಳೆಯ ಅಬ್ಬರಕ್ಕೆ ತತ್ತರಿಸಿದೆ. ಜುಲೈ ತಿಂಗಳ ಆರಂಭದಲ್ಲಿ ಮುಂಗಾರು ಕೊರತೆಯ ಸ್ಥಿತಿ ಎದುರಾಗಿದ್ದು ೧೦ ದಿನಗಳಲ್ಲೇ ಮುಂಗಾರು ಮಳೆ ಅಗತ್ಯಕ್ಕಿಂತ ಹೆಚ್ಚೇ ಬಂದಿದೆ ಎಂಬಂಥ ಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕವೇ ಕಳೆದ ಐದು ದಿನಗಳಲ್ಲಿ ಸುರಿದ ಮಳೆಯ ಬಗ್ಗೆ ಲೆಕ್ಕ ಹಾಕಬಹುದು.

ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ರಾಜ್ಯವೊಂದರಲ್ಲೇ ಸರಕಾರದ ಮೂಲಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ ೩೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ೩,೦೦೦ ಕೋಟಿ ರೂ. ನಷ್ಟ ಸಂಭವಿಸಿದೆ. ಶಿಮ್ಲಾವೊಂದರಲ್ಲೇ ಹತ್ತಕ್ಕಿಂತಲೂ ಅಧಿಕ ಮಂದಿ ಮೃತರಾಗಿದ್ದಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ೫೦೦ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿದ್ದು, ಇವರ ರಕ್ಷಣಾ ಕಾರ್ಯಾಚರಣೆಯೂ ಸಾಗಿದೆ. ಉನಾ ಜಿಲ್ಲೆಯ ಸ್ಲಂವೊಂದರಲ್ಲಿಯೇ ೫೦೦ ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಪ್ರವಾಹದಡಿ ಸಿಲುಕಿದ್ದಾರೆ. ಹಾಗೆಯೇ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ೧,೩೦೦ ರಸ್ತೆಗಳು ಹಾಳಾಗಿವೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಸುರಿಯಬಹುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಸಾಮಾನ್ಯವಾಗಿ ಭಾರೀ ಪ್ರಮಾಣದ ಮಳೆ ಸುರಿದಾಗ ಮೊದಲಿಗೆ ಹೆಚ್ಚು ಹಾನಿಯಾಗುವುದು ಗುಡ್ಡಗಾಡು ಪ್ರದೇಶಗಳಲ್ಲಿ ಇದಕ್ಕೆ ಉದಾಹರಣೆ ೨೦೧೮ರಲ್ಲಿ ಕರ್ನಾಟಕದ ಕೊಡಗಿನಲ್ಲಿ ಭಾರೀ ಪ್ರಮಾಣದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಆಗ ಗುಡ್ಡಗಳು ಕುಸಿದು ಮನೆಗಳ ಸಮೇತ ಎಲ್ಲವೂ ಮಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ಹಿಂದೆ ಉತ್ತರಾಖಂಡದ ಕೇದಾರನಾಥದ ಬಳಿಯೂ ಇಂಥದ್ದೇ ಅನಾಹುತ ಸೃಷ್ಟಿಯಾಗಿತ್ತು. ಅಲ್ಲಿನ ರಸ್ತೆಗಳು, ಜನವಸತಿ ಪ್ರದೇಶಗಳೆಲ್ಲ ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು.

ಈಗ ಹಿಮಾಚಲ ಪ್ರದೇಶದ ಸರದಿ. ಅಲ್ಲಿಯೂ ಇಂಥದ್ದೇ ಪರಿಸ್ಥಿತಿ ತಲೆದೋರಿದೆ. ಗುಡ್ಡಗಾಡು ಪ್ರದೇಶಗಳಲ್ಲಿನ ಜನವಸತಿ ಕೇಂದ್ರಗಳೇ ಹೆಚ್ಚು ಹಾನಿಗೀಡಾಗಿದೆ. ಇದಕ್ಕೆ ಅಳತೆ ಮೀರಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿರುವುದೇ ಕಾರಣವೇ? ಅಥವಾ ಮಾನವನ ಅತಿಯಾಸೆಯಿಂದಾಗಿ ಇಂಥ ಅನಾಹುತಗಳು ಸಂಭವಿಸುತ್ತಿವೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಸರಕಾರಗಳು ಪರಿಸರ ಸೂಕ್ಷ್ಮ ಪ್ರದೇಶಗಳ ಸುರಕ್ಷತೆ ಕುರಿತಂತೆ ನಿರ್ಲಕ್ಷ್ಯ ವಹಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಲಾದರೂ, ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಪರಿಸರ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಗುಡ್ದಗಳು ಜರುಗದಂಥ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಕೆಲಸ ಮಾಡಬೇಕು. 

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೨-೦೭-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ