ಪರಿಸರ ಸ್ನೇಹಿ ಗಣಪ

ಪರಿಸರ ಸ್ನೇಹಿ ಗಣಪ

ಕವನ

ಮಣ್ಣಲಿ ಗಣಪನ ಮಾಡುತ ನಲಿಯಿರಿ

ಬಣ್ಣವ ಬಳಿಯದೆ ಕುಣಿದಾಡಿ

ನುಣ್ಣಗೆ ಕಲೆಯಲಿ ಬೆರೆಯುತ ಕಲಿಯಿರಿ

ಕಣ್ಣಿಗೆ ತಂಪನು ಎರಚಾಡಿ....

 

ಪರಿಸರ ರಕ್ಷಿಸಿ ಸ್ವಚ್ಛತೆ ಹೆಚ್ಚಿಸಿ

ಸರಿಗಮ ರಾಗವ ಹಾಡುತಿರಿ

ಮರಿಯದೆ ರಂಗನು ಹಾಕದೆ ನೋಡಿರಿ

ಪರಿಪರಿ ಸ್ವಚ್ಛತೆ ಕಾಪಾಡಿರಿ..

 

ಹಸಿರಿನ ಸಿರಿಯಲಿ ಚೈತನ್ಯ ಕಾಣುತ

ಹೊಸತನ ಕಳೆಯಲಿ ಮಿಂದುತಲಿ

ಯಶವದು ಧರೆಯನು ಮಿಂಚಿಸಿ ಏರಿಸಿ

ನಶಿಸದೆ ಹಸಿರನು ಉಳಿಸುತಲಿ...

 

ಸ್ವಚ್ಛತೆ ಕಾಪಾಡಿ ಮನವನು ಚಿಗುರಿಸಿ

ಬೆಚ್ಚನೆ ಪರಿಸರ ಉಳಿಸೋಣ

ಕೆಚ್ಚನೆ ಸಮರದಿ ನಾಶಕ ತಡೆಯುತ

ಮೆಚ್ಚುಗೆ ಕೊಡುತಲಿ ಸಾಗೋಣ....

 

ಸಲಿಲವ ಕದಡದೆ ರಾಡಿಯ ಮಾಡದೆ

ಮಲಿನತೆ ನಿಲ್ಲಿಸಿ ಮೆರೆಯೋಣ

ಕಲೆಯಲಿ ಇಳೆಯನು ಬಣ್ಣಿಸಿ ವರ್ಣಿಸಿ

ಛಲದಲಿ ಬಾಳುತ ನಲಿಯೋಣ..

 

ನಾಡಿನ ಚಂದವ ಹೆಚ್ಚಿಸಿ ಬೆಳೆಸುತ

ಕಾಡುವ ಕ್ರಿಮಿಯನು ಕೊಲ್ಲೋಣ

ಬೇಡುವ ಕೈಗಳ ರಕ್ಷಣೆ ಮಾಡುತ

ಕಾಡಿನ ಹಸಿರನು ಬೆಳೆಸೋಣ...

 

ಗಣೇಶ ನೋಡುತ ಮಣ್ಣಲಿ ಮಿಂದುತ

ಗೆಣೆಯರ ಸಂಗಡ ಕುಶಾಗ್ರನೆ

ಕಣಕಣದಲ್ಲಿಯು ಮಣ್ಣಿನ ಗಣಪನೆ

ಗಣಗಳ ನಾಯಕ ಗಣಪತಿಯೆ....

 

ಎಲ್ಲರು ಮಾಡಿರಿ ಮಣ್ಣಲಿ ಮಾತ್ರವೆ

ಮೆಲ್ಲನೆ ಖರ್ಚನು ಉಳಿಸುತಲಿ

ಬಲ್ಲೆವು ಗಣೇಶ ಮೂರ್ತಿಗೆ ವಂದಿಸಿ

ಪಲುಕನು ಹಾಡುತ ಸಾಗುತಲಿ..ˌ

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್