ಪರಿಹರಿಸು ಸುಪ್ರೀತ !

ಪರಿಹರಿಸು ಸುಪ್ರೀತ !

ಕವನ

ಭಾದ್ರಪದ ಶುಕ್ಲದ ಚೌತಿ ದಿನವು

ಗಣೇಶ ಚತುರ್ಥಿ ಪೂಜೆ ಸಂಭ್ರಮವು

ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು

ಮೋದಕ ಕಡುಬು ಪಾಯಸ ನೀಡುವೆವು

 

ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ

ಪರಮೇಶ ಸುಕುಮಾರ ಬಹಳ ಅಂದ

ಕರಿಮುಖನೆ ಗಣಪನೆ ಮಹದಾನಂದ

ಗಜವದನ ಸುಮುಖನೆ ದೇವ ಚಂದ

 

ಇಡಗುಂಜಿಯಲಿ ನೆಲೆಸಿದ ಬಾಲಗಣಪ

ಇಷ್ಟಾರ್ಥ ನೀಡುವ ಹೃದಯವಂತ

ಚಂದಗುಳಿ ವಾಸ ಘಂಟೆ ಗಣೇಶ

ಸಂತಾನ ಭಾಗ್ಯವನು ನೀಡಿ ಪೊರೆವ

 

ಆತ್ಮಲಿಂಗವನು ಪ್ರತಿಷ್ಠಾಪಿಸಿದ ವಟುರೂಪಿ 

ಅಭಯಹಸ್ತ ಸ್ವರೂಪಿ ಗೋಕರ್ಣ ಮೂರುತಿ

ಬಯಲು ಆಲಯದ ಸೌತಡ್ಕ ಸ್ವಾಮಿ

ಅವಲಕ್ಕಿ ಪಂಚಕಜ್ಜಾಯ ಸೇವೆ ವಿಶೇಷ

 

ಶಿಲಾಮಯ ಸಂಕಲ್ಪ ಶ್ರೀ ಸಿದ್ಧಿವಿನಾಯಕ

ಮಾತನಾಡುವ ಗಜಾನನ ಹಟ್ಟಿಯಂಗಡಿ ಗಣಪ

ಪರಮೇಶ ಪೂಜಿಸಿದ ವಿಘ್ನೇಶ್ವರ

ಕೌಂಡಿನ್ಯ ಋಷಿಗಳ ದಿವ್ಯಾಶ್ರಮ ಪವಿತ್ರ

 

ಗರಿಕೆ ಜಾಜಿ ಸಂಪಿಗೆ ಸೇವಂತಿಗೆ ಹೂಗಳನು

ಅರ್ಪಿಸಿ ನಮಿಸಿ ಬೇಡುವೆವು ಏಕದಂತನೆ

ಮೊದಲ ಪೂಜೆಯ ಕೈಗೊಂಬವನೆ

ಮೂಕರಿಗೆ ಮಾತುಗಳ ಅಭಯವನು ನೀಡುವನೆ

 

ಜಗವಂದ್ಯ ಅರವಿಂದ ಗಜಾನನ ವಕ್ರತುಂಡ

ಕಷ್ಟ-ನಷ್ಟ -ಸೋಲುಗಳ ಪರಿಹರಿಸು  ಸುಪ್ರೀತ

ಮಹಾಗಣಪತಿ ಮನಸಾ ಸ್ಮರಿಪೆವು ನಿನ್ನನು

ಅನುಗಾಲ ಕೃಪೆದೋರಿ ಕಾಪಾಡು ಮಹಾತ್ಮನೆ

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು

ಚಿತ್ರ್