ಪರಿಹಾರ ವ್ಯವಸ್ಥೆ ಶೀಘ್ರವಾಗಲಿ
ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೂರಾರು ಮನೆಗಳು, ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬೆಳೆ ಹಾಳಾಗಿದೆ. ಆದರೆ ಮಧ್ಯ ಕರ್ನಾಟಕದ ಹಲವು ಭಾಗಗಳಲ್ಲಿ ಹಾಕಿರುವ ಬೆಳೆಗೆ ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಳೆ ಹಾಳಾಗಿರುವ ವರದಿಗಳು ಬರುತ್ತಿವೆ. ಅನಾವೃಷ್ಟಿಗಿಂತ ಅತಿವೃಷ್ಟಿಗೆ ಬೆಳೆ ಹಾಳಾಗಿರುವ ವರದಿಗಳೇ ಹೆಚ್ಚಾಗಿರುವುದರಿಂದ, ರಾಜ್ಯ ಸರಕಾರ ಈಗಾಗಲೇ ೫೦೦ ಕೋಟಿ ಪ್ರಾಥಮಿಕ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಪ್ರಕೃತಿ ವಿಕೋಪದಿಂದ ಆಗಿರುವ ಅನಾಹುತಗಳ ತುರ್ತು ಪರಿಸ್ಥಿತಿ ನಿಭಾಯಿಸಲು ಈ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಇನ್ನು ಬೆಳೆ ಹಾಳಾಗಿರುವ ಹಾಗೂ ಮನೆಗಳಿಗೆ ಆಗಿರುವ ಹಾನಿಗೆ ಪರಿಹಾರ ನೀಡಲು ಸರಕಾರ ಸಿದ್ಧವಿದೆ ಎಂದು ಈಗಾಗಲೇ ಘೋಷಿಸಿದ್ದು, ಆನ್‌ಲೈನ್ ಮೂಲಕವೇ ಪರಿಹಾರವನ್ನು ಪಾವತಿಸುವುದಾಗಿ ಹೇಳಿದೆ. ಕಳೆದ ವರ್ಷ ಪ್ರಕೃತಿ ವಿಕೋಪದ ಸಮಯದಲ್ಲಿ ರಾಜ್ಯಾದ್ಯಂತ ಆಗಿರುವ ಹಾನಿಯನ್ನು ಒಟ್ಟುಗೂಡಿಸಿ, ವರದಿ ಪಡೆದು ಪರಿಹಾರ ನೀಡುವುದಕ್ಕೆ ವಿಳಂಬವಾಗುತ್ತಿದೆ ಎಂದು ಆಗ್ಗಾಗೆ, ಪರಿಹಾರವನ್ನು ವಿತರಿಸುವ ಮೂಲಕ ದೇಶಕ್ಕೆ ಕರ್ನಾಟಕ ಸರಕಾರ ಮಾದರಿಯಾಗಿತ್ತು. ಈ ಬಾರಿಯೂ ಇದೇ ಮಾದರಿಯನ್ನು ಅನುಸರಿಸುವುದಾಗಿ ಸರಕಾರ ಹೇಳಿರುವುದು ಸ್ವಾಗತಾರ್ಹ. ಆನ್‌ಲೈನ್ ಮೂಲಕವೇ ಪರಿಹಾರ ಒದಗಿಸುವುದಾಗಿ ಹೇಳಿದ್ದರೂ, ಕೆಲವು ಪ್ರದೇಶಗಳಲ್ಲಿ ಇದಕ್ಕೆ ಬೇಕಿರುವ ಅಗತ್ಯ ತಂತ್ರಜ್ಞಾನದ ಸಮಸ್ಯೆಯಿದೆ. ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆಯೂ ಗೊಂದಲವಿರುತ್ತದೆ. ಆದ್ದರಿಂದ ಈ ವಿಷಯವನ್ನು ಸರಕಾರ ಗಮನದಲ್ಲಿರಿಸಿಕೊಂಡು, ಜನರಿಗೆ ಸಹಾಯ ಮಾಡಬೇಕಿದೆ. ಇದರೊಂದಿಗೆ ಕಳೆದ ಬಾರಿಯಂತೆಯೇ ಈ ಬಾರಿಯೂ ಮಳೆಯಿಂದ ಆಗಿರುವ ಅನಾಹುತಕ್ಕೆ ಪರಿಹಾರವನ್ನು ಸರಕಾರ ಶೀಘ್ರವೇ ನೀಡುವ ಮೂಲಕ ಸಂತ್ರಸ್ತರಿಗೆ ಸಹಾಯ ಮಾಡಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೫-೦೮-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ