ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ...

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ...

ಶಿಕ್ಷಣ...

ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ, ಗುರುಕುಲ ವ್ಯವಸ್ಥೆ ಸರಿಯೇ, ಮೆಕಾಲೆ ಪದ್ದತಿ ಸರಿಯೇ, ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ, ಪ್ರಾಣಿ ಪಕ್ಷಿಗಳಂತೆ  ಪ್ರಾಕೃತಿಕ ಶಿಕ್ಷಣ ಸರಿಯೇ, ಕೃತಕ ಜ್ಞಾನಾರ್ಜನೆಯ ಪದ್ದತಿ ಸರಿಯೇ, ಎಂಬ ಗೊಂದಲಗಳ ನಡುವೆ, ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಬೆಳೆಸುವ ಕ್ರಮಗಳಲ್ಲಿ, ನೆನಪಿನ ಶಕ್ತಿ ಮುಖ್ಯವೇ, ಮಾನವೀಯ ಮೌಲ್ಯಗಳು ಮುಖ್ಯವೇ, ಶ್ರದ್ಧೆ ಮತ್ತು ಸ್ಪಂದನೆ ಮುಖ್ಯವೇ, ದೈಹಿಕ ಸಾಮರ್ಥ್ಯ ಮುಖ್ಯವೇ, ಮಾನಸಿಕ ದೃಢತೆ ಮುಖ್ಯವೇ, ಅಕ್ಷರ ಜ್ಞಾನ ಮುಖ್ಯವೇ, ಲಲಿತ ಕಲೆಗಳ ಅಭಿವ್ಯಕ್ತಿ ಮುಖ್ಯವೇ, ದುಡಿದ ತಿನ್ನುವ ಕಾಯಕದ ಸಾಮರ್ಥ್ಯ ಮುಖ್ಯವೇ, ಅಥವಾ ಈ ಎಲ್ಲಾ ಒಟ್ಟು ವ್ಯಕ್ತಿತ್ವ ಮುಖ್ಯವೇ, ಮುಂತಾದ ಅನೇಕ ಪ್ರಶ್ನೆಗಳು ಕಾಡುತ್ತವೆ.

ಒಟ್ಟು ಭಾರತೀಯ ಸಮಾಜದಲ್ಲಿ ಇದಕ್ಕೆ ಒಂದೇ ರೀತಿಯ ಉತ್ತರ ಸಿಗುವುದಿಲ್ಲ. ಎಲ್ಲವೂ ಮುಖ್ಯ ಎನ್ನುವುದಾದರೆ ಎಲ್ಲವನ್ನೂ ಶಿಕ್ಷಣದಲ್ಲಿ ಅಳವಡಿಸಿ ಕಲಿಸಲು ಸಾಧ್ಯವಿಲ್ಲ ಹಾಗೆ ಎಲ್ಲವನ್ನೂ ಬೇರೆ ಬೇರೆ ವೈಯಕ್ತಿಕ ಆಸಕ್ತಿಗಳ ಆಧಾರದ ಮೇಲೆ ಕಲಿಸುವಷ್ಟು ವಿಭಿನ್ನತೆಯೂ ಇಂದಿನ ವೇಗದ ಆಧುನಿಕ ಯುಗದಲ್ಲಿ ಅಸಾಧ್ಯ.

ಏಕರೂಪದ ಶಿಕ್ಷಣಕ್ಕೆ ಒತ್ತಾಯ ಒಂದು ಕಡೆ, ಮಾತೃಭಾಷೆ ಮತ್ತು ಇತರ ಭಾಷೆಗಳ ಆಯ್ಕೆಯ ಗೊಂದಲ ಮತ್ತೊಂದು ಕಡೆ, ಮಕ್ಕಳ ಮೇಲೆ ಶಿಕ್ಷಣ ಹೊರೆಯಾಗುತ್ತಿದೆ ಎಂಬ ಭಾವನೆ ಇನ್ನೊಂದು ಕಡೆ, ಮಕ್ಕಳ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ ಎಂಬ ಅಳಲು ಕೆಲವು ಕಡೆ, ವಿದ್ಯಾರ್ಥಿಗಳ ಸಾಮರ್ಥ್ಯ ವಾರ್ಷಿಕ ಪರೀಕ್ಷೆಯ 3 ಗಂಟೆಗಳ ನೆನಪಿನ ಶಕ್ತಿಯ  ಆಧಾರದ ಮೇಲೆ ‌ಅಂಕಗಳು ನಿರ್ಧರಿಸುವುದೇ ಅವೈಜ್ಞಾನಿಕ ಎಂಬ ಅಳಲು ಹಲವರಿಂದ,  ಈ ಶಿಕ್ಷಣ ಕ್ರಮದಿಂದ ಹೆಚ್ಚು ಅಂಕ ಪಡೆದವರು ನೌಕರಿಗೂ, ಕಡಿಮೆ ಅಂಕ ಪಡೆದವರು ರಾಜಕೀಯಕ್ಕೂ ಬಂದು ಇಡೀ ವ್ಯವಸ್ಥೆ ಆಧೋಗತಿಗೆ ಇಳಿದಿದೆ ಎಂಬ ಆರೋಪ, ಮಕ್ಕಳು ಅಂಕ ಹೆಚ್ಚು ಪಡೆದರೂ ಸಾಮಾನ್ಯ ಜ್ಞಾನದಲ್ಲಿ ತುಂಬಾ ಹಿಂದುಳಿದಿದ್ದಾರೆ ಎಂಬ ಗೊಣಗಾಟ ಒಂದು ಕಡೆ.

ಇದನ್ನೆಲ್ಲಾ ಯೋಚಿಸುವಾಗ ಶಿಕ್ಷಣದ ಸುಧಾರಣೆ ಎಲ್ಲಿಂದ ಪ್ರಾರಂಭಿಸುವುದು ಎಂಬುದೇ ದೊಡ್ಡ ಸಮಸ್ಯೆ. ದೇಶದ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣದಲ್ಲಿ ಉತ್ತರವಿದೆ ಎಂಬ ಅಭಿಪ್ರಾಯ ಇರುವಾಗ ಅದನ್ನೊಂದು ಉದ್ಯಮವಾಗಿ ಬೆಳೆಸುತ್ತಿದ್ದೇವೆ. ಅಲ್ಲಿಗೆ ಶಿಕ್ಷಣದ ನೈತಿಕ ಅಧಃಪತನ ಶತಸಿದ್ದ. ಈಗ ಮಾಡುವುದಾದರೂ ಏನು.? ಅತಿಹೆಚ್ಚು ಅಂಕ ಪಡೆದವರ ಸಾಮಾನ್ಯ ಜ್ಞಾನದ ಪೆದ್ದುತನ, ಅನುತ್ತೀರ್ಣರಾದವರ ನಿರಾಸೆ ಮತ್ತು ಆತ್ಮಹತ್ಯೆಗಳ ಪ್ರಯತ್ನ, ಸಮಾಜದ ದೃಷ್ಟಿಕೋನ, ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಎಲ್ಲವೂ ಒಂದಕ್ಕೊಂದು ಸೇರಿ ಶಿಕ್ಷಣದ ನಿಜವಾದ ಅರ್ಥವೇ ಮಾಯವಾಗಿದೆ.

ಶಿಕ್ಷಣದ ಕ್ರಮವನ್ನೇ ಭಾರತದಲ್ಲಿ ಅಮೂಲಾಗ್ರವಾಗಿ ಬದಲಾಯಿಸಬೇಕಿದೆ. ಮಕ್ಕಳ ವಯಸ್ಸು ಮತ್ತು ಆಸಕ್ತಿಗೆ ಅನುಗುಣವಾಗಿ, ಸಾಮಾಜಿಕ ಶಿಕ್ಷಣ, ಪ್ರಾಕೃತಿಕ ಶಿಕ್ಷಣ, ಉದ್ಯೋಗವಕಾಶದ ಶಿಕ್ಷಣ, ವೃತ್ತಿ ಶಿಕ್ಷಣ, ಪರಿಸರ ಶಿಕ್ಷಣ,

ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳ ಶಿಕ್ಷಣ, ಸಮಾನತೆಯ ಶಿಕ್ಷಣ, ಮಿಲಿಟರಿ ಶಿಕ್ಷಣ, ಮಾನಸಿಕ ದೃಢತೆಯ ಶಿಕ್ಷಣ, ದೇಶ ಪ್ರೇಮದ ಶಿಕ್ಷಣ, ಸಂವಿಧಾನದ ಕರ್ತವ್ಯ - ಹಕ್ಕುಗಳು ಮತ್ತು ಜವಾಬ್ದಾರಿಯ ಶಿಕ್ಷಣ, ತಾಂತ್ರಿಕ ಶಿಕ್ಷಣ, ಲೈಂಗಿಕ ಶಿಕ್ಷಣ, ಕೌಟುಂಬಿಕ ಶಿಕ್ಷಣ, ಆಸಕ್ತಿಗೆ ಅನುಗುಣವಾಗಿ ಕಲೆ, ಕ್ರೀಡೆ, ಸಂಗೀತ, ವಿಜ್ಞಾನ, ಆಧ್ಯಾತ್ಮ, ರಾಜಕೀಯ, ಸಮಾಜ ಸೇವೆ, ವಾಣಿಜ್ಯ ಮುಂತಾದ ಎಲ್ಲಾ ಕ್ಷೇತ್ರಗಳ ಶಿಕ್ಷಣವನ್ನೂ ವಿವಿಧ ಹಂತಗಳಲ್ಲಿ ಕಲಿಸಬೇಕಿದೆ.

ಈಗಾಗಲೇ ಈ ರೀತಿಯ ಕೆಲವು ಶಿಕ್ಷಣಗಳು ಇದ್ದರೂ ಅಂಕಗಳು ಮತ್ತು ಉದ್ಯೋಗಕ್ಕೆ ನೇರ‌ ಸಂಪರ್ಕ ಕಲ್ಪಿಸಿರುವುದರಿಂದ ಅವು ಹೆಚ್ಚು ಪರಿಣಾಮಕಾರಿಯಾಗಿಲ್ಲ. ವಿಷಯ ಜ್ಞಾನದ ಜೊತೆಗೆ ವಿದ್ಯಾರ್ಥಿಗಳ ಒಟ್ಟು ವ್ಯಕ್ತಿತ್ವ ರೂಪಿಸಲು ಮತ್ತು ಅದರ ಆಧಾರದ ಮೇಲೆ ಅವರ ಸಾಮರ್ಥ್ಯ ಅಳೆಯುವ ವ್ಯವಸ್ಥೆ ರೂಪಿಸಬೇಕು.

ಮೌಖಿಕ ಮತ್ತು ಪ್ರಾಯೋಗಿಕ ಎರಡಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಮೂಲಭೂತವಾಗಿ ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸಬೇಕು. ಅಕ್ಷರ ಮತ್ತು ಅಂಕಿ ಸಂಖ್ಯೆಗಳು ಹಾಗು ಅಂಕಗಳು ಮಾತ್ರ ಶಿಕ್ಷಣವಲ್ಲ ಎಂಬ ಅಭಿಪ್ರಾಯ ಮೂಡಿಸಬೇಕು.

ಪ್ರತಿ ಮಗುವಿಗೂ ನಾನು  ಪ್ರಕೃತಿಯ ಶಿಶು, ಈ ಸಮಾಜದ ಒಂದು ಭಾಗ. ಇತರರ ಸ್ವಾತಂತ್ರ್ಯ ಗೌರವಿಸಿ ನಾನು ಬದುಕಬೇಕು. ನನ್ನ ನಿಷ್ಠೆ ಈ ಸೃಷ್ಟಿಗೆ ಎಂಬ ಅಂಶವನ್ನು ಕಲಿಸಬೇಕು. ಅದೇ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಆಗ ಜಾತಿ ಧರ್ಮ ಪ್ರದೇಶ ಆಸ್ತಿ ಅಧಿಕಾರ ನಾನು ನನ್ನದು ಎಂಬ ಸ್ವಾರ್ಥ ಕಡಿಮೆಯಾಗಿ ಉಳಿದ ಎಲ್ಲವೂ ತನ್ನಿಂದ ತಾನೇ ಅರ್ಥವಾಗಿ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ.

ಇದು ಹೇಳುವಷ್ಟು ಸುಲಭವಲ್ಲ. ಶಿಕ್ಷಣ ಸಮಾಜದ ಒಂದು ಭಾಗ ಮಾತ್ರ. ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾದರೆ ಮಾತ್ರ ಶಿಕ್ಷಣದ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳೇ ಮುಖ್ಯವಾಗಿ, ಉದ್ಯೋಗವೇ ಪ್ರಮುಖವಾಗಿ ಶಿಕ್ಷಣ ವ್ಯಾಪಾರವಾಗಿ ನಾವು ಅಕ್ಷರ ಕಲಿತ ಅನಾಗರಿಕತೆಯತ್ತ ಸಾಗಬೇಕಾಗುತ್ತದೆ. ಈಗ ಆ ಹಾದಿಯಲ್ಲಿ ಇದ್ದೇವೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ