ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ

ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ

ಬರಹ

 

ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ
ಪರೀಕ್ಷೆಗಳಲ್ಲಿ ಮೋಸ ಮಾಡಿ,ನಕಲು ಮಾಡಲು ಹೈಟೆಕ್ ಸಾಧನಗಳ ಬಳಕೆ ಒಂದೇ ಸವನೆ ಹೆಚ್ಚುತ್ತಿದೆ.ಮೊಬೈಲ್ ಅಂತಹ ಸಾಧನಗಳನ್ನು ಪರೀಕ್ಷಾ ಕೊಟಡಿಗಳಿಗೆ ಒಯ್ಯುವುದಕ್ಕೆ ನಿಷೇಧವಿದ್ದರೂ,ಅವುಗಳ ಕಿರುಗಾತ್ರದಿಂದ ಕೊಟಡಿಯೊಳಗವನ್ನು ಅವಿತು ಕೊಂಡೊಯ್ಯುವುದು ಕಷ್ಟದ ಕೆಲಸವಲ್ಲ,ಕಿವಿಗೆ ಸಿಕ್ಕಿಸಿದ ಇಯರ್ ಫೋನ್ ಮೂಲಕ,ಮೊಬೈಲನ್ನು ನಿಸ್ತಂತುವಾಗಿ ಕೇಳುವ ಸೌಕರ್ಯದಿಂದ,ಉತ್ತರವನ್ನು ಆಲಿಸಿ,ಬರೆಯುವುದು ಸುಲಭವಾಗಿದೆ.ಐಪಾಡುಗಳಂತಹ ಮ್ಯೂಸಿಕ್ ಪ್ಲೇಯರುಗಳೂ ಪ್ರೊಗ್ರಾಮುಗಳು,ಪ್ರಶ್ನೆಗಳಿಗೆ ಉತ್ತರಗಳನ್ನು ಇರಿಸಿಕೊಳ್ಳಲು ಅವಕಾಶ ನೀಡುತ್ತವೆ.ಪ್ರಶ್ನೆಗಳಿಗೆ ಉತ್ತರಗಳನ್ನು ಓದಿ ಹೇಳಿ ಮುದ್ರಿಸಿಕೊಂಡು,ಅವನ್ನು ಆಲಿಸಿಕೊಂಡು ಉತ್ತರ ಬರೆಯಲು ಸಾಧ್ಯ.ನಿಸ್ತಂತು ಇಯರ್‌ಪೋನ್‌ಗಳು,ಕರ್ತವ್ಯದಲ್ಲಿರುವ ಶಿಕ್ಷಕರನ್ನು ವಂಚಿಸಲು ಸಹಾಯ ಮಾಡುತ್ತವೆ.ಕಂಪ್ಯೂಟರ್ ಲ್ಯಾಬ್ ಪರೀಕ್ಷೆಗಳಲ್ಲಿ,ಕಂಪ್ಯೂಟರ್ ಜಾಲದಲ್ಲಿ ಅವತಿರಿಸಿದ ಉತ್ತರಗಳನ್ನು ಬಳಸುವುದು,ಪ್ರೊಗ್ರಾಮುಗಳನ್ನು ಕಂಪ್ಯೂಟರ್ ಜಾಲದಿಂದ,ಇಲ್ಲವೇ ಕಂಪ್ಯೂಟರಿನ ಹಾರ್ಡ್‌ಡಿಸ್ಕಿನ ಒಂದು ಫೋಲ್ಡರಿನಲ್ಲಿ ಅಡಗಿಸಿಟ್ಟು,ಪರೀಕ್ಷೆಯಲ್ಲಿ ಬಳಸುವುದು ಸುಲಭಸಾಧ್ಯ.ಇನ್ನು ಫ್ಲಾಶ್ ಸ್ಮೃತಿಕೋಶಗಳಲ್ಲಿ ಅವಿತಿರಿಸಿದ ಉತ್ತರಗಳನ್ನು ಕಂಪ್ಯೂಟರಿಗೆ ನಕಲಿ ಮಾಡಿಕೊಳ್ಳಲು,ಯು ಎಸ್ ಬಿ ಪೋರ‍್ಟ್ ಸುಲಭದಲ್ಲಿ ಅವಕಾಶ ನೀಡುತ್ತದೆ.
ಹಳೆಕಾಲದ ಕಾಗದ ಚೀಟಿಗಳಿಗೂ ತಂತ್ರಜ್ಞಾನ ಹೊಸ ಮೆರುಗು ನೀಡಿದೆ.ನ್ಯಾನೋಗಾತ್ರದ ಚೀಟಿಗಳಲ್ಲಿ ಪುಟಗಟ್ಟಲೆ ನಕಲಿ ಸಾಮಗ್ರಿ ತುಂಬಿಸಲು ಪೊಟೋಸ್ಟಾಟ್ ತಂತ್ರಜ್ಞಾನದ ಗಾತ್ರ ಇಳಿಸುವ ತಂತ್ರಜ್ಞಾನ ಸಹಾಯ ಮಾಡಿದೆ.ಬೆರಳಿನ ನಡುವೆ ಇಂತಹ ಚೀಟಿಗಳನ್ನಿರಿಸಿಕೊಂಡು,ಅನುಕೂಲಕರ ಸಮಯದಲ್ಲಿ ನಕಲಿ ಮಾಡುವ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಳ್ಳುವುದು ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ.ಇಂಗ್ಲೆಂಡ್,ವೇಲ್ಸ್,ಅಯರ್ಲ್ಯಾಂಡಿನಲ್ಲಿ ಕಳೆದವರ್ಷವೊಂದರಲ್ಲಿ ಪರೀಕ್ಷಾ ಅಕ್ರಮಗಳಲ್ಲಿ ನಾಲ್ಕುಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.ಅಂದಹಾಗೆ,ನಕಲು ತಡೆ ಸಾಧನಗಳೂ ಲಭ್ಯವಿವೆ.ಅನಧಿಕೃತ ಮೊಬೈಲ್ ಬಳಕೆಯನ್ನು ಗುರುತಿಸಲು,ಮೊಬೈಲ್ ಸಂಕೇತಗಳನ್ನು ಜ್ಯಾಮ್ ಮಾಡುವ ತಂತ್ರಜ್ಞಾನಗಳೂ ಇವೆ.ನಮ್ಮ ವಿದ್ಯಾರ್ಥಿಗಳೂ ತಂತ್ರಜ್ಞಾನದ ಬಳಕೆಯನ್ನು ನಕಲು ಮಾಡಲು ಬಳಸುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಬೇಸರ ತರುವ ವಿಷಯ.ಪ್ರೊಗ್ರಾಮ್ ಮಾಡಬಲ್ಲ ಕ್ಯಾಲ್ಕ್ಯುಲೇಟರುಗಳೂ ಅಕ್ರಮಗೈಯಲು ಸುಲಭ ಸಾಧನಗಳಾಗಿವೆ.ಅವನ್ನು ಪರಿಶೀಲಿಸಲು,ಆ ಸಾಧನಗಳನ್ನು ಬಳಸಲು ಬರಬೇಕು.ಇಲ್ಲವೇ ಅತ್ಯಾಧುನಿಕ ಕ್ಯಾಲ್ಕ್ಯುಲೇಟರ್ ಬಳಕೆಯನ್ನೇ ನಿಷೇಧಿಸಬೇಕು.
------------------------------------------------------------------------
ಫೇಸ್‌ಬುಕ್‌ಗೀಗ ಆರು ವರ್ಷ


ಜಗತ್ತಿನ ಅತ್ಯಂತ ಜನಪ್ರಿಯ ತಾಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ಫೇಸ್‌ಬುಕ್ ಇದೀಗ ಆರನೇ ವರ್ಷಕ್ಕೆ ಕಾಲಿಟ್ಟಿದೆ.ನಲುವತ್ತುಕೋಟಿ ಚಂದಾದಾರರನ್ನು ಹೊಂದಿರುವ ಈ ಅಂತರ್ಜಾಲ ತಾಣ ಬಳಸಲು ಅತಿ ಸುಲಭವಾದ ವಿನ್ಯಾಸವನ್ನು ಹೊಂದಿದೆ.ಈ ತಾಣದ ವಾರ್ಷಿಕ ಆದಾಯ ಮುನ್ನೂರೈವತ್ತು ಮಿಲಿಯನ್ ಡಾಲರುಗಳು.ಮಾರ್ಕ್  ಜ್ಯುಕರ್‌ಬರ್ಘ್ ಈ ತಾಣದ ಒಡೆತನ ಹೊಂದಿದ್ದಾನೆ.ಒಂಭೈನೂರು ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.ದಿನಾಲೂ,ಅರುವತ್ತಾರು ದಶಲಕ್ಷ ಸಂದೇಶಗಳು ಇಲ್ಲವೇ ವಿಡಿಯೋಗಳ ವಿನಿಮಯವಾಗುತ್ತವೆ.ಅಂದಹಾಗೆ ಇದೊಂದು ಸಾಮಾಜಿಕ ಸಂಪರ್ಕ ತಾಣ.
-----------------------------------------------------------------------------
ಓದುಬಜಾರ್


ಬ್ಲಾಗ್‌ಲೋಕದ ಮಹಾಮರ್ಜರ್ ಎನ್ನುವ ಹಣೆಪಟ್ಟಿಯೊಂದಿಗೆ ಕಾಣಿಸಿಕೊಳ್ಳುವ ಓದುಬಜಾರ್,ಪುಸ್ತಕಗಳ ಬಿಡುಗಡೆ,ಉತ್ತಮ ಓದಿನ ಬಗ್ಗೆ ಮೀಸಲಾದ ಬ್ಲಾಗ್.ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಬಗೆಗಿನ ಚಿತ್ರ-ವರದಿಗಳು ಇಲ್ಲಿನ ಹೈಲೈಟ್.ಓದಲೇಬೇಕಾದ ಪುಸ್ತಕದ ಬಗ್ಗೆ ಶಿಫಾರಸ್ಸು ಕೂಡಾ ಓದುಬಜಾರಿನಲ್ಲಿದೆ.http://odubazar.wordpress.com ವಿಳಾಸದಲ್ಲಿ ಓದುಬಜಾರ್ ಲಭ್ಯ.
ಅವಧಿhttp://avadhi.wordpress.com ವಿಳಾಸದಲ್ಲಿ ಕಾಣುವ ಬ್ಲಾಗ್‌ತಾಣ.ಸಮಾರಂಭಗಳ ಬಗ್ಗೆ ಸೂಚನೆಗಳು,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವರದಿಗಳು,ಚಿತ್ರಗಳು,ಕನ್ನಡದ ಬ್ಲಾಗುಗಳ ಬಗ್ಗೆ ಮಾಹಿತಿ,ಬಿಸಿ-ಬಿಸಿ ಸುದ್ದಿಗಳು,ಸಂವಾದಗಳು ಎಲ್ಲವೂ ಒಂದೇ ಕಡೆ ಲಭ್ಯವಾಗಿಸಿರುವುದು ಅವಧಿಯ ಹಿರಿಮೆ.ಅತ್ಯಂತ ಜನಪ್ರಿಯ ಬ್ಲಾಗುಗಳಲ್ಲೊಂದಾಗಿರುವುದು ಯು ಎಸ್ ಬಿ ಪೋರ್ಟಿನ ಹೆಗ್ಗಳಿಕೆ.ಟ್ವಿಟರ್ ಮಾಧ್ಯಮದ ಮೂಲಕವೂ ಸತತವಾಗಿ ಪ್ರಕಟನೆ ಹೊರಡಿಸಿ,ಜನರನ್ನು ತಲುಪುವ ಪ್ರಯತ್ನವೂ ಇದಕ್ಕೆ ಕಾರಣವೆಂದರೆ ತಪ್ಪಲ್ಲ.
-------------------------------------------------------------------------
ಶರವೇಗದ ಯುಎಸ್‌ಬಿ 3.0
ಇನ್ನು ಹೊಸ ಕಂಪ್ಯೂಟರ್ ಮತ್ತು ಸಾಧನಗಳಲ್ಲಿ ಲಭ್ಯವಾಗಲಿರುವ ಯು ಎಸ್ ಬಿ ಪೋರ್ಟ್ ಹೊಸ ಆವೃತ್ತಿಯದ್ದಾಗಿ ಯು ಎಸ್ ಬಿ-3.0 ಎಂದು ಕರೆಯಲಾಗುತ್ತದೆ.ಪ್ರತಿ ಸೆಕೆಂಡಿಗೆ ನಾಲ್ಕು ಜಿಬಿ ವೇಗದಲ್ಲಿ ದತ್ತಾಂಶವನ್ನು ಕಂಪ್ಯೂಟರಿನಿಂದ ವಿನಿಮಯ ಮಾಡಲಿದು ನೆರವಾಗುತ್ತದೆ.ಯು ಎಸ್ ಬಿ 2.0ರ ಹತ್ತು ಪಟ್ಟು ವೇಗದಲ್ಲಿದು ಕೆಲಸ ಮಾಡುತ್ತದೆ.ಕಂಪ್ಯೂಟರಿಗೆ ಕ್ಯಾಮರಾ,ಪ್ರಿಂಟರ್,ಹೊರಗಿನ ಹಾರ್ಡ್‌ಡಿಸ್ಕ್ ಹೀಗೆ ಯಾವ ಸಾಧನವನ್ನು ಸಂಪರ್ಕಿಸಲು ಅವಕಾಶ ನೀಡುವುದೇ ಅಲ್ಲದೆ,ಸಾಧನವನ್ನು ಗುರುತಿಸಲು ತಕ್ಷಣ ನೆರವಾಗುವುದು ಇದರ ವೈಶಿಷ್ಟ್ಯವಾಗಿದೆ.ಆಯತಾಕಾರದ ಗುಳಿ ಇರುವ ಯು ಎಸ್ ಬಿಗೆ ಸಾಧನವನ್ನು ಸಂಪರ್ಕಿಸುವುದೂ ಬಹುಸುಲಭ-ಸ್ಕ್ರೂ ಇತ್ಯಾದಿಗಳ ಹಂಗಿಲ್ಲ,ಪಿನ್‌ಗಳು ಮುರಿಯುವ ಭಯವಿಲ್ಲ.ಇದರ ಸಂಶೋಧನೆಯಲ್ಲಿ ಇಂಟೆಲ್ ಕಂಪೆನಿಯ ಅಜಯ ಭಟ್ ಅವರ ಸಂಶೋಧನೆಯ ಪಾಲೂ ಇದೆ.ಹೊಸ ಯು ಎಸ್ ಬಿ ಇರುವ ಕಂಪ್ಯೂಟರುಗಳಿಗೆ ಹಳೆಯ ಸಾಧನಗಳನ್ನು ತುರುಕಿದರೂ ಸಮಸ್ಯೆಯಾಗದು ಎನ್ನುವುದು ಸಮಾಧಾನ ತರುವ ವಿಷಯವಾಗಿದೆ.
------------------------------------------------------------------
ಸಿಂಬಿಯನ್ ಮೊಬೈಲ್ ತಂತ್ರಾಂಶವೀಗ ಮುಕ್ತ..ಮುಕ್ತ..
ನೋಕಿಯಾ, ಏಟಿ&ಟಿ,ಎಲ್ಜಿ, ಮೊಟೊರೊಲಾ, ಎನ್ ಟಿ ಟಿ  ಡೊಕೊಮೊ, ಸಾಮ್ಸಂಗ್, ಸೋನಿ ಎರಿಕ್ಸನ್, ಎಸ್ ಟಿ ಎಂ ಮೈಕ್ರೊ ಎಲೆಕ್ಟ್ರೊನಿಕ್ಸ್, ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಮತ್ತು ವೊಡಾಫೋನ್ ಮೊಬೈಲ್ ಕಂಪೆನಿಗಳು ಸೇರಿ ಸ್ಥಾಪಿಸಿದ ಸಿಂಬಿಯನ್ ಫೌಂಡೇಶನ್ ವತಿಯಿಂದ ಸಿಂಬಿಯನ್ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಮುಕ್ತವಾಗಿಸುವ ಯೋಜನೆ ಎರಡು ವರ್ಷಗಳ ಹಿಂದೆಯೇ ಆರಂಭವಾಗಿತ್ತು.ಈಗದು ಕೊನೆಗೂ ನಿಜವಾಗಿದೆ.ಸುಮಾರು ಮೂವತ್ತಮೂರು ಕೋಟಿ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಸಿಂಬಿಯನ್ ವ್ಯವಸ್ಥೆಯನ್ನು ಬಳಸಿ,ಅತಿ ಹೆಚ್ಚು ಜನಪ್ರಿಯ ವ್ಯವಸ್ಥೆಯಾಗಿದೆ.ಆದರೆ ಗೂಗಲ್‌ನ ಆಂಡ್ರಾಯಿಡ್ ನಿರ್ವಹಣಾ ವ್ಯವಸ್ಥೆಯು ಲಭ್ಯವಾದ ನಂತರ ಸಿಂಬಿಯನ್ ವ್ಯವಸ್ಥೆಯ ಜನಪ್ರಿಯತೆಯ ಬಗ್ಗೆ ಸಂಶಯ ವ್ಯಕ್ತವಾಗಿತ್ತು.ಈಗ ಇದು ಮುಕ್ತವಾಗಿ,ತಂತ್ರಾಂಶದ ಸಾಲುಗಳನ್ನು ಬಹಿರಂಗಗೊಳಿಸುವುದು,ತಂತ್ರಾಂಶ ಅಭಿವೃದ್ಧಿಗೆ ಹೊಸ ಚಾಲನೆ ನೀಡಿ,ಸಿಂಬಿಯನ್ ತನ್ನ ಮೇಲುಗೈಯನ್ನು ಉಳಿಸಿಕೊಳ್ಳಲು ನೆರವಾಗುವುದು ನಿಶ್ಚಿತ.

UDAYAVANI