ಎಂದಿನಂತೆ ಬೆಳಿಗ್ಗೆಯೇ ಎದ್ದು ತೋಟದ ಕಡೆ ಹೋಗಿ ಒಂದು ಸುತ್ತು ಹಾಕಿ ಮನೆಗೆ ಬಂದ ಕೆಂಪೇಗೌಡರು ಮಗ ಕೃಷ್ಣನ ರೂಮಿನತ್ತ ಒಂದು ಬಾರಿ ಇಣುಕಿ ನೋಡಿ ಅವನು ಅಲ್ಲಿರದಿದ್ದನ್ನು ಕಂಡು ‘ಎಲ್ಲೋದ್ನೆ.. ನಿನ್ನ ಮುದ್ದಿನ ಮಗರಾಯ..’ ಎಂದು ನಡುಮನೆಯಲ್ಲಿ ನಿಂತು ಕೇಳಿದರು. ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುತ್ತಿದ್ದ ಅವರ ಪತ್ನಿ ಸುಶೀಲಮ್ಮ ‘‘ಇನ್ನೆಲ್ಲಿಗೋಯ್ತನೆ.. ಬೆಳಿಗ್ಗೇನೆ ಸೈಕಲ್ ತಗಂಡು ಮೇಷ್ಟ್ರು ಮನೆಗೆ ಪಾಠುಕ್ಕೋದ..’ ಎಂದು ಅಲ್ಲಿಂದಲೇ ಉತ್ತರಿಸಿದರು. ಈ ನನ್ಮಗನ್ನ ತಲೇಲಿ ದೇವ್ರು ಅದೇನ್ ತುಂಬವ್ನೋ.. ಬರೀ ಪಾಠುಕ್ಕೇಂತ ಎಲ್ಡು ವರ್ಸುದಿಂದ ಮೇಷ್ಟ್ರು ಮನೆಗೆ ಸೈಕಲ್ ತುಳಿದಿದ್ದೇ ಆಯ್ತು.. ಪಾಸಂತೂ ಆಗಲಿಲ್ಲ .. ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡು ಹೆಗಲ ಮೇಲಿದ್ದ ಟವಲನ್ನು ತೆಗೆದು ದಿವಾನದ ಮೇಲೆ ಬಿಸಾಕಿ ಮರದ ಕುರ್ಚಿಯಲ್ಲಿ ಕುಳಿತರು. ‘ಕೈ ತೊಳ್ಕಂಡು ಬರೋಗು.. ರೊಟ್ಟಿ ಸುಡ್ತಾ ಇದೀನಿ..’ ಎಂದು ಸುಶೀಲಮ್ಮ ಕೂಗಿ ಹೇಳಿದರು. ಗೌಡರು ಬಚ್ಚಲ ಮನೆಗೆ ಹೋಗಿ ಕೈ ತೊಳೆದುಕೊಂಡು ಬಂದು ಕುಳಿತ ಮೇಲೆ ಸುಶೀಲಮ್ಮ ತಟ್ಟೆಯಲ್ಲಿ ಬಿಸಿಬಿಸಿ ರಾಗಿರೊಟ್ಟಿಯ ಜೊತೆ ಕಾಯಿಚಟ್ನಿ ಹಾಕಿ ತಂದುಕೊಟ್ಟರು. ರೊಟ್ಟಿ ತಿನ್ನುತ್ತಾ ಮನಸ್ಸಿನಲ್ಲಿಯೇ ಮಗನ ಬಗ್ಗೆ ಯೋಚಿಸುತ್ತಿದ್ದ ಗೌಡರಿಗೆ ‘ಏನೋ ಚೆನ್ನಾಗಿ ಓದಿ ಎಂತದೋ ಒಂದು ಕೆಲ್ಸ ಅಂತ ಹುಡುಕ್ಕಂಡು ಸುಖವಾಗಿ ಇರ್ಲಿ, ನಮ್ಮಂಗೆ ಮೈಕೈಯೆಲ್ಲಾ ಮಣ್ಣು ಮಾಡ್ಕಂಡು ಮುದ್ದೆ ತಿನ್ಕಂಡು ಇರದೆ ಹೋಗ್ಲಿ ಅಂದ್ರೆ ಈ ನನ್ಮಗುನ್ನ ತಲೆಗೆ ವಿದ್ಯೆನೇ ಹತ್ತಂಗೆ ಕಾಣಿಸ್ತಿಲ’್ಲ ಅನ್ನಿಸಿ ಬೇಸರವಾಯಿತು.
ಇನ್ನೊಂದು ರೊಟ್ಟಿಯನ್ನು ತಟ್ಟೆಯಲ್ಲಿ ಹಿಡಿದು ತಂದ ಸುಶೀಲಮ್ಮನವರಿಗೆ ‘ಸಾಕು ತಗೋಂಡೋಗೆ’ ಎಂದು ತುಸು ಅನ್ಯಮನಸ್ಕರಾಗಿಯೇ ನುಡಿದರು. ದಿನಾ ಎರಡು ರೊಟ್ಟಿಯನ್ನು ತಿಂದು ಉದ್ದನೆಯ ಲೋಟದಲ್ಲಿ ಕಾಫಿ ಕುಡಿಯುತಿದ್ದ ಗಂಡ ಯಾಕೋ ಬೇಸರದಲ್ಲಿರುವುದು ಕಂಡು ಸುಶೀಲಮ್ಮನವರಿಗೆ ಕರುಳು ಚುರುಗುಟ್ಟಿತು. ‘ ಅದೇನು ಅಂಗೆ ಯೋಚ್ನೆ ಮಾಡ್ತಿದೀ.. ಯೋಚ್ನೆ ಮಾಡ್ಬುಟ್ರೆ ಆಗೋದೇನು ತಪ್ಪಿಸಕ್ಕಾಯ್ತದಾ.. ಸುಮ್ನೆ ಹೊಟ್ಟೆತುಂಬಾ ತಿಂದು ಎದ್ದೋಳು..’ ಎಂದು ಬಲವಂತವಾಗಿಯೇ ರೊಟ್ಟಿಯನ್ನ ತಟ್ಟೆಯಲ್ಲಿ ಇಟ್ಟರು. ಗೌಡರಿಗೆ ತನ್ನ ಹೆಂಡತಿಯ ಒತ್ತಾಯದ ಹಿಂದೆ ಇದ್ದ ಪ್ರೀತಿಯ ಅರಿವಿತ್ತು. ಆಗಾಗ ತುಸು ಮುನಿಸು ತೋರುವ, ಸಣ್ಣಪುಟ್ಟದಕ್ಕೆಲ್ಲಾ ಜಗಳ ಮಾಡುವ ಹೆಂಡತಿ ಏನೇ ಮಾಡಿದರೂ ಸಂಸಾರದ ಒಳಿತಿಗಾಗಿಯೇ ಎಂಬುದನ್ನು ಅವರು ಮನಗಂಡಿದ್ದರು. ಯಾವುದೇ ವ್ಯವಹಾರವಾಗಲೀ ‘ಸ್ವಲ್ಪ ಮನೇಲಿ ಕೇಳಿ ಹೇಳ್ತೀನಿ’ ಎನ್ನುತಿದ್ದ ಗೌಡರ ಮಾತಿನಿಂದ ಊರಿನಲ್ಲಿ ಗೌಡರು ‘ಹೆಡ್ ಮೇಡಮ್’ ಮಾತಿಲ್ಲದೆ ಏನೂ ಮಾಡಲ್ಲಪ್ಪೊ ಎಂಬ ಅಣಕ ಜನಜನಿತವಾಗಿತ್ತು. ಅದಕ್ಕೇನೂ ಅವರು ಸೊಪ್ಪು ಹಾಕತ್ತಿರಲಿಲ್ಲ.
ತಟ್ಟೆಗೆ ರೊಟ್ಟಿಯನ್ನು ಬಡಿಸಿ ಒಳಗಿನಿಂದ ಇನ್ನಷ್ಟು ಚಟ್ನಿ ತಂದು ಹಾಕಿದ ಸುಶೀಲಮ್ಮನವರಿಗೆ ತನ್ನ ಗಂಡ ಏನು ಯೋಚನೆ ಮಾಡುತ್ತಿರಬಹುದೆಂಬುದನ್ನು ತಿಳಿಯದೆ ಸಮಾಧಾನವಿರಲಿಲ್ಲ. ಅಲ್ಲಿಯೇ ಎದುರಿಗೆ ನಿಂತು,
‘ಅದೇನು ಅಂಗೆ ಯೋಚ್ನೆ ಮಾಡ್ತಾ ಇದೀಯಾ..’ ಎಂದು ಮತ್ತೊಮ್ಮೆ ಕೇಳಿದರು.
‘ಇನ್ನೇನು ಯೋಚ್ನೆ ಮಾಡಾನ.. ನಿನ್ ಮಗಂದೇ ಯೋಚ್ನೆ’ ಗೌಡರು ಕತ್ತು ಎತ್ತದೇ ನುಡಿದರು.
‘ಅಯ್ಯೋ ನಿಂಗೊಂತರ ಭ್ರಾಂತು.. ಉಣ್ಣಾಕೆ ಚಿಂತಿಲ್ಲ.. ಉಡೋಕೆ ಚಿಂತಿಲ್ಲ.. ಅದಕ್ಕೆ ನಿಂಗೆ ಅವುಂದೇ ಯೋಚ್ನೆ. ಏನೋ ವಿದ್ಯೆ ಅವನ ತಲೆಗೆ ಹತ್ತುತಾ ಇಲ್ಲ.. ಏನ್ಮಾಡೋಕಾಯ್ತದೆ.. ಐದು ಬೆಳ್ಳೂ ಒಂದೇ ಸಮುಕ್ಕೆ ಇರೋಕಾಯ್ತದಾ..’ ಸುಶೀಲಮ್ಮ ಮಗನನ್ನು ಸಮರ್ಥಿಸಿಕೊಂಡರು. ಗೌಡರಿಗೆ ಹೆಂಡತಿ ಹೇಳಿದ್ದು ಸರಿ ಅನ್ನಿಸುತ್ತಿದ್ದರೂ ಅವರ ಮನಸ್ಸು ಮಾತ್ರ ಅದನ್ನು ಒಪ್ಪಲು ತಯಾರಿರರಲಿಲ್ಲ.
‘ಎಂತೆಂತೋರ ಮಕ್ಕಳೋ ಹೆಂಗೆಂಗೋ ಓದಿ ಉದ್ಧಾರ ಆಗಿ ಬೆಂಗಳೂರು ಸೇರ್ಕಂಡೋ.. ಈ ನನ್ನ ಮಗುಂಗೆ ಎಲ್ಡು ವರ್ಸುದಿಂದ ಇರೋದು ಒಂದು ಗಣಿತ ಪಾಸು ಮಾಡಕ್ಕಾಗಲಿಲ್ಲ.’ ಗೌಡರು ತುಸು ಅಸಮಾಧಾನದಿಂದಲೇ ನುಡಿದರು.
‘ನೀನೊಂತರ ಆಡಿದ್ದೇ ಆಡೋ ಕಿಸ್ಬಾಯಿ ದಾಸ ಇದ್ದಂಗೆ.. ಅದುನ್ನೇ ಆಡ್ಕೊಂಡು ಕೂತಿದ್ರೆ ನಮ್ ಕೈಲಿ ಏನಾರ ಮಾಡಕ್ಕಾಯ್ತದಾ.. ಅವ್ನು ಬೆಳಿಗ್ಗೇನೆ ಹೇಳೋಗವ್ನೆ.. ಏನ್ ಮಾಡದ್ರೂ ತಲೆಗೆ ಹೋಯ್ತಾ ಇಲ್ಲ.. ನಂಗೂ ಪರೀಕ್ಷೆ ಬರೆದು ಸಾಕಾಗದೆ. ಇಲ್ ನೋಡುದ್ರೆ ಎಲ್ಲಾದುಕ್ಕೂ ಅಪ್ಪನ್ನೇ ದುಡ್ ಕೇಳ್ಬೇಕು.. ಒಂದ್ ಜತಿ ಬಟ್ಟೆ ಹೊಲಿಸ್ಕೊಬೇಕು ಅಂದ್ರೂ ಮನಸ್ ಬತ್ತಾ ಇಲ್ಲ.. ಅಪ್ಪುಂಗೆ ಎಲ್ಡು ಸೀಮೆಹಸು ತಂದ್ಕೊಡಕ್ಕೇಳು, ತೋಟದತ್ರ ಸಾಕ್ಕಂಡು ಡೈರಿಗೆ ಹಾಲು ಹಾಕ್ತೀನಿ ಅಂತ.. ’ ಸುಶೀಲಮ್ಮ ತನ್ನ ಮಗ ತಿಳಿಸಿದ್ದನ್ನು ಗಂಡನಿಗೆ ಒಪ್ಪಿಸಿದರು.
ಗೌಡರಿಗೆ ಹೆಂಡತಿಯ ಮಾತು ಕೇಳಿ ಮೈಯೆಲ್ಲಾ ಉರಿದುಹೋಯಿತು. ‘ ನಿಂಗೂ ನಿನ್ಮಗುಂಗೂ ಸರಿಯಾಗದೆ. ಅವು ಹೇಳ್ದ ಇವ್ಳು ಕೇಳುದ್ಲು. ಹೆಂಗೋ ಪಾಸ್ ಮಾಡಕಂಡು ಒಂದು ಏನೋ ಓದಿ ಒಂದು ಸಣ್ಣ ಕೆಲ್ಸ ಹುಡುಕ್ಕಂಡು ಜೀವ್ನ ಮಾಡಾದು ಬುಟ್ಟು ಹಸ ಸಾಕ್ತನಂತೆ.. ಅದ್ಯಾಕೆ.. ಒಂದು ಕುದುರೇನೆ ತಂದ್ಕೊಡ್ತೀನಿ, ಚೆನ್ನಾಗಿ ಸಾಕಿ ಹತ್ಕೊಂಡು ಊರೂರು ತಿರಗಕ್ಕೇಳು.. ನೋಡ್ದೋರಾದ್ರೂ ಕೆಂಪೇಗೌಡುನ ಮಗ ಕುದುರೇಲ್ಲಿ ಓಡಾಡ್ತನೆ ಅಂದ್ಕತಾರೆ..’ ಗೌಡರು ಮುಖಗಂಟಿಕ್ಕಿಕ್ಕೊಂಡು ನುಡಿದರು.
‘ಅವನು ಪಾಸಾಗಕ್ಕಿಲ್ಲ.. ನಿನ್ ತಲೇಗೆ ಹತ್ತಿರೋ ದೆವ್ವ ಬಿಡಾಕಿಲ್ಲ.. ಈ ಮನೇಲಿ ನಿಮ್ಮಿಬ್ರು ಮದ್ಯ ಬೇಯ್ಯೋದು ನಂಗ್ ಬಂದದೆ.. ಅದೇನು ಎಲ್ಲಾರೂ ಹೋಗುವಾಗ ಇದ್ದಿದೆಲ್ಲಾ ತಲೆ ಮ್ಯಾಲೆ ಹೊತ್ಕೊಂಡು ಹೋಯ್ತರೆ ಅನ್ನಂಗೆ ಮಾತಾಡ್ತೀಯೋ ನಂಗೆ ಒಂದೂ ತಿಳಿಯಲ್ಲ.. ಅವ್ನು ಹೆಂಗೋ ಏನೋ ಹೊಟ್ಟೆಬಟ್ಟಿಗೆ ದಾರಿ ಮಾಡಕಂಡು ನಮ್ ಕಣ್ಮುಂದೆ ನೆಟ್ಟಗಿದ್ರೆ ಸಾಕು ಅಂತ ನಾನು ಅನ್ಕಂಡ್ರೆ ನಿಂದೊಂದು ಗೋಳು.. ನಂಗಂತೂ ನಿನ್ ಜೊತೆ ಎಣಗಿ ಎಣಗಿ ಸಾಕಾಗೋಗದೆ..’ ಎಂದು ಮುಖ ಊದಿಸಿಕೊಂಡು ಸುಶೀಲಮ್ಮ ಮುನಿಸಿನಿಂದಲೇ ಕಾಫಿ ಮಾಡಲು ಅಡುಗೆ ಮನೆಗೆ ತೆರಳಿದರು.
ರೊಟ್ಟಿ ತಿಂದಿದ್ದ ತಟ್ಟೆಯನ್ನು ಕೆಳಗಿಟ್ಟು ಕೈತೊಳೆದುಕೊಂಡು ಚೆಂಬನ್ನೆತ್ತಿ ನೀರು ಕುಡಿದ ಗೌಡರಿಗೆ ಏನೊಂದೂ ತೋಚದೆ ಮುಂಬಾಗಿಲನ್ನೇ ನೋಡುತ್ತಾ ಕುಳಿತುಬಿಟ್ಟರು.
* * * * * *
ಮದುವೆಯಾಗಿ ಐದು ವರ್ಷಗಳ ನಂತರ ಹುಟ್ಟಿದ ಗಂಡುಮಗುವನ್ನು ಕಂಡು ಗಂಡಹೆಂಡತಿ ಇಬ್ಬರಿಗೂ ಮಹದಾನಂದವಾಗಿತ್ತು. ವಾರದ ದಿನವಾದ ಶುಕ್ರವಾರ ತಪ್ಪದೇ ಗಂಡಹೆಂಡತಿ ಕುಲದೇವತೆ ಪಟ್ಟಲದಮ್ಮನವರ ಗುಡಿಗೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದರು. ಹುಟ್ಟಿದ ಮಗು ಅಮ್ಮನವರ ವರಪ್ರಸಾದವೆಂದೇ ಭಾವಿಸಿದ್ದರು. ಊರಿನ ಎಲ್ಲಾ ದೇವರುಗಳನ್ನು ಮೆರವಣಿಗೆಯಲ್ಲಿ ಕರೆತಂದು ಹರಿಸೇವೆ ಮಾಡಿಸಿ ಸುತ್ತಲ ಹಳ್ಳಿಗಳ ಜನರಿಗೆಲ್ಲಾ ಬಾಡೂಟ ಹಾಕಿಸಿದ್ದರು. ಊರಿನಲ್ಲಿ ಯಾವಾಗ ಕುರುಕ್ಷೇತ್ರ ನಾಟಕ ಆಡಿದರೂ ಅದರಲ್ಲಿ ಕೃಷ್ಣನ ಪಾತ್ರವನ್ನೇ ಮಾಡುತ್ತಿದ್ದ ಗೌಡರು ಅದೇ ಹೆಸರನ್ನು ಮಗುವಿಗೆ ಇಟ್ಟಿದ್ದರು. ಕೃಷ್ಣ ಅಪ್ಪ ಅವ್ವನ ಆರೈಕೆಯಲ್ಲಿ ದಷ್ಟಪುಷ್ಟವಾಗಿ ಬೆಳೆಯತೊಡಗಿದ. ಊರಿನಲ್ಲಿನ ಕೆಲವೊಬ್ಬರ ಮಕ್ಕಳು ಇಂಜನಿಯರ್ರು, ಡಾಕ್ಟರು, ಸರ್ಕಾರಿ ಅಧಿಕಾರಿಗಳಾಗಿದ್ದನ್ನು ನೋಡಿದ್ದ ಗೌಡರಿಗೆ ತಮ್ಮ ಮಗನೂ ಏನಿಲ್ಲವೆಂದರೂ ಇಂಜಿನಿಯರೋ, ಡಾಕ್ಟರೋ ಆಗಬೇಕೆಂಬ ಮಹದಾಸೆಯಿತ್ತು. ಆದರೆ ಶಾಲೆಗೆ ಹೋಗತೊಡಗಿದ ಕೃಷ್ಣ ಹಗಲು ರಾತ್ರಿ ನಿದ್ರೆಗೆಟ್ಟು ಓದಿದರೂ ಓದಿದ್ದು ತಲೆಗತ್ತದೆ ಎಲ್ಲಾ ತರಗತಿಗಳಲ್ಲೂ ಸಾಮಾನ್ಯ ದರ್ಜೆಯಲ್ಲಿ ಪಾಸಾಗುತ್ತಿದ್ದುದು ಗೌಡರ ರಕ್ತದೊತ್ತಡ ಹೆಚ್ಚಿಸಿತ್ತು. ಈಗ್ಲೇ ಹಿಂಗಾದ್ರೆ ಮುಂದಕ್ಕೆ ಏನ್ ಮಾಡ್ತೀಯೋ ಎಂದು ಮಗನ ತಲೆಕೊರೆಯತೊಡಗಿದಾಗ ಕೃಷ್ಣ ಅಪ್ಪನ ಜೊತೆ ಹೆಚ್ಚು ಮಾತನಾಡುವುದನ್ನು ಬಿಟ್ಟು ಎಲ್ಲಾದಕ್ಕೂ ಅವ್ವನನ್ನೇ ಆಶ್ರಯಿಸುತಿದ್ದ. ಸುಶೀಲಮ್ಮನವರಿಗೂ ಮಗ ಓದಿ ದೊಡ್ಡ ಕೆಲಸಕ್ಕೆ ಹೋಗಬೇಕು ಎಂಬ ಆಸೆ ಮನದಲ್ಲಿದ್ದರೂ ‘ಅಯ್ಯೋ..ಏನ್ಮಾಡಕಾಯ್ತದೆ. ನಿನ್ ಕೈಲಿ ಎಷ್ಟಾಯ್ತದೋ ಅಷ್ಟು ಓದ್ಕಳೋ..’ ಎಂದು ಮಗನಿಗೆ ಧೈರ್ಯ ತುಂಬಿದ್ದರು.
ಅಪ್ಪನ ವರಾತವನ್ನು ತಡೆಯಲಾಗದೇ ಕೃಷ್ಣ ಹೇಗೋ ಕಷ್ಟಪಟ್ಟು ಓದಿ ಹತ್ತನೇ ತರಗತಿಯನ್ನು ಪಾಸು ಮಾಡಿದ. ಪಿಯೂಸಿ ಸೇರುವಾಗ ಆರ್ಟ್ಸ್ಗೆ ಸೇರ್ಕಂಡು ಬಿಎ ಮಾಡ್ತೀನಿ ಎಂದ ಮಗನ ಮಾತನ್ನು ಕೇಳಿ ಕೆಂಡಾಮಂಡಲರಾದ ಗೌಡರು ‘ಸೈನ್ಸ್ಗೆ ಸೇರ್ಕಳ್ಳೋ ಮುಂದುಕ್ಕೇನಾಯ್ತದೋ ನೋಡನ’ ಎಂದು ಬಲವಂತ ಮಾಡಿ ಸೇರಿದರು. ಅವನು ಎರಡನೇ ಪಿಯೂಸಿಯಲ್ಲಿ ಮೂರು ವಿಷಯಗಳಲ್ಲ್ಲಿ ಫೇಲಾದ. ಗೌಡರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಾಗಿ ಇಂಜಿನಿಯರೂ ಬ್ಯಾಡ, ಡಾಕ್ಟರೂ ಬ್ಯಾಡ, ಪಿಯೂಸಿ ಪಾಸು ಮಾಡಿ ಬಿಎನೇ ಮಾಡ್ಕಂಡು ಮಗ ನೌಕರಿಗೆ ಸೇರಿದರೆ ಸಾಕು ಎನಿಸಿ ಯಡಿಯೂರಿನಲ್ಲಿ ಮನೆಪಾಠಕ್ಕೆ ಸೇರಿಸಿದ್ದರು. ನಾಲ್ಕು ಸರ್ತಿ ಪರೀಕ್ಷೆ ಬರೆದು ಎರಡು ವಿಷಯಗಳನ್ನು ಪಾಸು ಮಾಡಿಕೊಂಡ ಕೃಷ್ಣ ಗಣಿತದಲ್ಲಿ ಮಾತ್ರ ಪಾಸಾಗಿರಲಿಲ್ಲ.
ಊರಿನಲ್ಲಿ ಯಾರಾದರೂ ‘ಮಗ ಎಂಗವ್ನೆ ಗೌಡ್ರೇ’ ಅಂದ್ರೆ ‘ಅಂಗೇ ಅವ್ನೆ ದಡ್ ನನ್ ಮಗ. ಒಂದು ಪರೀಕ್ಷೆ ಪಾಸು ಮಾಡಕಳ್ಳಿಲ್ಲ’ ಎಂದು ಹೇಳಿ ನಿಟ್ಟುಸಿರು ಬಿಡುತಿದ್ದರು. ಗೌಡರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಎರಡು ಎಕರೆ ತೆಂಗಿನ ತೋಟ. ಒಂದು ಎಕರೆ ಗದ್ದೆ ಮೂರು ಎಕರೆ ಹೊಲ ಇದ್ದಿತು. ಇದನ್ನು ತಿಳಿದವರು ‘ನಿಮಗಿರೋ ಆಸ್ತೀನಲ್ಲಿ ಒಂದ್ ಸಂಸಾರ ಕುತ್ಕಂಡು ತಿನ್ಬೋದು ಬುಡಿ.. ಯಾಕಿಂಗ್ ಕೊರಗ್ತೀರಾ..’ ಅಂದರೆ ‘ಈ ಮಳೆ ನೆಚ್ಕಂಡು ಬೆಳೆ ಬೆಳ್ದು ಕುತ್ಕಂಡು ತಿನ್ನದೆಲ್ಲಿ ಬಂತು.. ಮೈಮುರಿದು ದುಡುದ್ರೂ ಹೊಟ್ಟೆಬಟ್ಟೆಗೆ ನ್ಯಾರ ಆಗೋದಿಲ್ಲ’ ಎಂದು ವಿಷಾದದಿಂದ ಹೇಳುತ್ತಿದ್ದರು.
ಮನೆಪಾಠಕ್ಕೆಂದೇ ಅಲ್ಲದೆ ಸಂತೆಯಲ್ಲಿ ಸಾಮಾನು ತರೆಲೆಂದೋ, ಇನ್ನಾವುದೋ ಸಣ್ಣಪುಟ್ಟ ಕೆಲಸಗಳಿಗಾಗಿ ಆಗಾಗ ಕೃಷ್ಣ ಯಡಿಯೂರಿಗೆ ಹೋಗಿ ಬರುತ್ತಿದ್ದ. ಹೋದ ವಾರ ಅವನು ಕೆಟ್ಟು ಹೋಗಿದ್ದ ಬೋರ್ವೆಲ್ಲಿನ ಸ್ಟಾರ್ಟರ್ ರಿಪೇರಿ ಮಾಡಿಸಿಕೊಂಡು ಬರುವಾಗ ಯಡಿಯೂರಿನಲ್ಲಿ ಕಾಲೇಜು ಮುಗಿಸಿಕೊಂಡು ಬಸ್ಸಿಗಾಗಿ ಕಾಯುತ್ತಿದ್ದ ಮೇಗಲಮನೆ ತಮ್ಮೇಗೌಡರ ಮಗಳು ಚೈತ್ರಾಳನ್ನು ಸೈಕಲ್ಲಿನ ಮೇಲೆ ಕುಳ್ಳಿರಿಸಿಕೊಂಡು ಬಂದದ್ದು ಊರಿನ ತುಂಬಾ ಬಿಸಿ ಸುದ್ದಿಯೇ ಆಗಿತ್ತು. ಇಬ್ರೂ ಪಿಚ್ಚರ್ ನೋಡೋಕೋಗಿದ್ರಂತೆ ಎಂದು ಯಾರೋ ಹಬ್ಬಿಸಿದ ಸುದ್ದಿ ನಾನಾ ರೂಪ ತಳೆದು ಇಬ್ರೂ ಪ್ರೀತಿ ಮಾಡ್ತಾವ್ರಂತೆ ಎನ್ನುವವರೆಗೂ ತಲುಪಿತ್ತು. ವಿಷಯ ತಿಳಿದ ಸುಶೀಲಮ್ಮನವರಿಗೆ ಹುಡ್ಗೀನೂ ಚೆನ್ನಾಗವಳೆ.. ಒಂದೇ ಊರು ಮನೆ.. ಕಷ್ಟಸುಖುಕ್ಕೆ ಹೊಂದ್ಕಂಡು ಹೋಯ್ತಳೆ ಅನ್ನುವ ದೂರದ ಆಸೆ, ಲೆಕ್ಕಾಚಾರಗಳು ಮನಸ್ಸಿನಲ್ಲಿ ಮೂಡಿದರೂ ಅದನ್ನು ಮಗನ ಎದುರಲ್ಲಿ ತೋರ್ಪಡಿಸಿಕೊಂಡಿರಲಿಲ್ಲ. ಗೌಡ್ರು ಮಾತ್ರ ‘ಇನ್ನೂ ಸರಿಯಾಗಿ ಕಣ್ಣೇ ಬುಟ್ಟಿಲ್ಲ.. ಇಲ್ಲುದ್ ಆಟ ಸುರು ಮಾಡ್ಕಂಡಿದೀಯಾ.. ಮೈಯ್ಯಿಗೆ ಎಂಗಾಯ್ತದೆ ನಿಂಗೆ..’ ಎಂದು ಏರು ಧ್ವನಿಯಲ್ಲಿ ಗದರಿಸಿದ್ದರು. ಯಾವತ್ತೂ ಅಪ್ಪನಿಗೆ ಎದುರುತ್ತರ ನೀಡದ ಕೃಷ್ಣ ’ಬಸ್ಸು ಬಂದಿಲ್ಲ ಅಂತ ಅಲ್ಲಿ ನಿಂತಿದ್ಲು. ಕರ್ಕಂಡು ಬಂದೆ. ಏನೀಗ..’ ಎಂದು ಪ್ರಶ್ನಿಸಿ ದುರುಗುಟ್ಟಿಕೊಂಡು ನೋಡಿದಾಗ ಗೌಡರಿಗೆ ಹೇಗೇಗೋ ಆಗಿತ್ತು.
* * * * * *
ಸುಶೀಲಮ್ಮ್ಮ ಉದ್ದನೆಯ ಲೋಟದಲ್ಲಿ ತಂದುಕೊಟ್ಟ ಕಾಫಿ ಕುಡಿದು ಟವಲ್ಲು ಹೆಗಲ ಮೇಲೆ ಹಾಕಿಕೊಂಡು ಜೇಬಿನಲ್ಲಿದ್ದ ಬೀಡಿ ತೆಗೆದು ಹತ್ತಿಸಿ ಬುಸುಬಸುನೆ ಸೇದಿಕೊಂಡು ಗೌಡರು ಹೊರಗೆ ಬಂದರು. ಮನೆಯ ಮುಂದೆ ನಿಂತ ಮೋಟಾರ್ ಸೈಕಲ್ಲಿನಲ್ಲಿ ಇನ್ನೊಬ್ಬರನ್ನು ಕೂರಿಸಿಕೊಂಡು ಬಂದ ತಮಗೆ ಪರಿಚಯವಿದ್ದ ಕಾನ್ಸ್ಟೇಬಲ್ ಕರಿಯಪ್ಪನವರನ್ನು ಕಂಡು ‘ಏನ್ ಗಾಚಾರನಪ್ಪಾ.. ಬೆಳಿಗ್ಗೇನೆ ಮನೆ ಮುಂದೆ ಪೋಲೀಸ್ನೋರು..’ ಎಂದುಕೊಂಡು ಕೈಯಲ್ಲಿದ್ದ ಬೀಡಿ ಬಿಸಾಕಿ ‘ಏನ್ ಕರಿಯಪ..್ಪ ಬೆಳಿಗ್ಗೆ ಬೆಳಿಗ್ಗೆನೆ ಇತ್ಲಾಗ್ ಬಂದ್ರಿ’ ಎಂದರು. ‘ಏನೂ ಇಲ್ಲ ಗೌಡ್ರೆ.. ನಿಮ್ ಮಗ ಕೃಷ್ಣ ಇಲ್ವಾ.. ವಿಷ್ಯ ಗೊತ್ತಿಲ್ವಾ..’ ಎಂದ ಕರಿಯಪ್ಪನವರ ಮಾತು ಕೇಳಿ ಗೌಡರ ಜಂಘಾಬಲವೇ ಉಡುಗಿಹೋಯಿತು. ಮೋಟಾರ್ ಸೈಕಲ್ಲಿನ ಶಬ್ದ ಕೇಳಿ ಹಿಂದೆ ಬಂದು ನಿಂತಿದ್ದ ಸುಶೀಲಮ್ಮನವರಿಗೂ ಅತೀವ ಗಾಬರಿಯಾಯಿತು. ಗೌಡರಿಗೆ ಈ ನನ್ಮಗ ಏನ್ ಯಡವಟ್ ಕೆಲ್ಸ ಮಾಡುಬುಟ್ಟನೊ ಎಂದು ಹೆದರಿಕೆಯಾಗಿ ಏನ್ ಸಮಾಚಾರ ಕರಿಯಪ್ಪ ಎಂದು ಕ್ಷೀಣ ದನಿಯಲ್ಲಿ ಕೇಳಿದರು. ‘ಏನೂ ಇಲ್ಲ ಗೌಡ್ರ್ರೆ.. ನಿಮ್ ಮಗುಂಗೆ ನಾಳೆ ಸ್ಟೇಷನ್ನಲ್ಲಿ ಸನ್ಮಾನ ಇಟ್ಕಂಡಿದೀವಿ.. ಹೇಳ್ಬುಟ್ಟು ಬಾ ಅಂತ ಸಾಹೇಬ್ರು ಕಳ್ಸಿದ್ರು’ ಎಂದಾಗ ಪೋಲೀಸ್ ಸ್ಟೇಷನ್ನಿನಲ್ಲಿ ಸನ್ಮಾನ ಅಂದ ತಕ್ಷಣ ಗೌಡರು ಹೆದರಿಕೆ ಮತ್ತು ಆತಂಕಗಳಿಂದ ‘ನನ್ಮಗ ಏನ್ಮಾಡ್ದಾ ಕರಿಯಪ್ಪ’ ಅಂತ ಕೇಳಿದರು.
ಕರಿಯಪ್ಪ ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು ತೋರಿಸಿ ‘ಇವ್ರು ಮಲ್ಲೇನಳ್ಳಿಯೋರು.. ಮಾದಪ್ಪ ಅಂತ. ನೆನ್ನೆ ಇವ್ರು ಮಗಳ ಮದ್ವೆಗೆ ಬಟ್ಟೆ ತರಕ್ಕೆ ಅಂತ ಬ್ಯಾಂಕಲ್ಲಿ ಐವತ್ತು ಸಾವ್ರ ದುಡ್ ತಗಂಡು ಸಂತೆ ಸಾಮಾನೆಲ್ಲಾ ಟಿವಿಎಸ್ಸಿನ ಮ್ಯಾಲೆ ಹೇರ್ಕಂಡು ಬತ್ತಿದ್ರಂತೆ.. ದುಡ್ಡಿದ್ದ ಹ್ಯಾಂಡ್ಬ್ಯಾಗು ಎಲ್ಲೋ ಬಿದ್ದೋಗದೆ, ಇವ್ರು ನೋಡ್ಕಂಡಿಲ್ಲ.. ನಿಮ್ ಮಗ ಕೃಷ್ಣ ಸೈಕಲ್ಲಲ್ಲಿ ಬರ್ವಾಗ ಸಿಕ್ತು ಅಂತ ಅದುನ್ನ ಸ್ಟೇóಷನ್ನಿಗೆ ತಂದ್ಕೊಟ್ಟ. ಅದುಕ್ಕೆ ನಮ್ ಸಾಹೇಬ್ರು ಫುಲ್ ಖುಷಿಯಾಗಿ ಹುಟ್ಟಿದ್ರೆ ಇಂತ ಮಕ್ಕಳು ಹುಟ್ಟಬೇಕು ಕಣ್ರೀ.. ಅಂತ ಪೇಪರ್ನೋರಿಗೆಲ್ಲಾ ಫೋನ್ ಮಾಡಿ ಹೇಳವ್ರೆ. ನಾಳೆ ನಿಮ್ ಮಗನ ಜೊತೆ ಅಕ್ಕಾರ್ನೂ ಕರ್ಕಂಡು ಬರ್ಬೇಕು’ ಎಂದಾಗ ಏನನ್ನೋ ನೆನೆದು ಗೌಡರ ಕಣ್ಣಂಚುಗಳು ಒದ್ದೆಯಾದವು. ಸುಶೀಲಮ್ಮನವರ ಮುಖದಲ್ಲಿ ಎಂದೂ ಕಾಣದ ಸಂತೋಷ ಲಾಸ್ಯವಾಡುತಿತ್ತು.
ಹಿಂದೆ ನಿಂತಿದ್ದ ಮಾದಪ್ಪ ಕೈಮುಗಿದು ‘ಗೌಡ್ರೆ, ನಿಮ್ ಮಗನಂತೋರು ಲಕ್ಷಕ್ಕೊಬ್ರು ಗೌಡ್ರೆ .. ಮದುವೆಗೆ ನೀವೂ ನಿಮ್ ಮನೇರು ಮಗನ ಜೊತೆ ಬರ್ಬೇಕು’ ಅಂತ ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ‘ನಿಮ್ ಮಗ ಏನ್ಮಾಡಿಕೊಂಡವ್ನೆ’ ಎಂದರು. ‘ಏನೂ ಇಲ್ಲ.. ಪಿಯೂಸಿ ಫೇಲಾಗಿ ಮನೇಲೇ ಅವ್ನೆ..’ ಅಂದ ಗೌಡರ ದನಿಯಲ್ಲಿ ಎಂದಿನ ನಿರಾಸೆ ಇರಲಿಲ್ಲ.
‘ಅಯ್ಯೋ ಬುಡಿ ಗೌಡ್ರೆ.. ಪರೀಕ್ಷೇಲಿ ಫೇಲಾದ್ರೆ ಏನಾಯ್ತು.. ಜೀವುನದ ಪರೀಕ್ಷೇಲಿ ಪಾಸಾಗವ್ನೆ’ ಎಂದ ಕಾನ್ಸ್ಟೇಬಲ್ ಕರಿಯಪ್ಪನವರ ಮಾತು ಕೇಳಿ ಗೌಡರಿಗೆ ಅದೇನೋ ನಿಜ ಎನ್ನಿಸಿತು.
*************
Comments
ವಿಶಿಷ್ಟವಾದ ವಿಷಯಗಳನ್ನು
In reply to ವಿಶಿಷ್ಟವಾದ ವಿಷಯಗಳನ್ನು by partha1059
ಹಿರಿಯ ಕಥೆಗಾರರಾದ ಪಾರ್ಥಸಾರಥಿ
ನಮಸ್ಕಾರ ತಿಮ್ಮಪ್ಪನವರೆ. ಹಳ್ಳಿ
In reply to ನಮಸ್ಕಾರ ತಿಮ್ಮಪ್ಪನವರೆ. ಹಳ್ಳಿ by swara kamath
ರಮೇಶ್ ಕಾಮತ್ ರವರಿಗೆ ನಮಸ್ಕಾರ..
ನಿಮ್ಮ ಕಥೆಯ ಬಗ್ಗೆ
In reply to ನಿಮ್ಮ ಕಥೆಯ ಬಗ್ಗೆ by spr03bt
ಶಿವಪ್ರಕಾಶ ರೆಡ್ಡಿಯವರಿಗೆ
+1
In reply to +1 by makara
ಶ್ರೀಧರ ಬಂಡ್ರಿಯವರೇ ನಮಸ್ಕಾರ..
"‘ಏನ್ ಗಾಚಾರನಪ್ಪಾ.. ಬೆಳಿಗ್ಗೇನೆ
In reply to "‘ಏನ್ ಗಾಚಾರನಪ್ಪಾ.. ಬೆಳಿಗ್ಗೇನೆ by venkatb83
ಏಳುಗುಡ್ಡದಯ್ಯ, ಸಪ್ತಗಿರಿವಾಸಿ