ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು…(ಭಾಗ 2)
ಕರ್ನಾಟಕದ ರಾಜಕೀಯ ಬಹುತೇಕ ಜಾತಿ ಆಧಾರದಲ್ಲಿ ವಿಭಜನೆಯಾಗಿ ಅದು ಚುನಾವಣಾ ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದೆ ಎಂಬುದು ಸಹ ಅಷ್ಟೇ ಸತ್ಯ. ಸಾಮಾನ್ಯವಾಗಿ ಒಕ್ಕಲಿಗ ಮತಗಳು ಜನತಾದಳ ಪಕ್ಷದಲ್ಲೂ, ವೀರಶೈವ, ಬ್ರಾಹ್ಮಣ, ಜೈನ ಮತಗಳು ಬಿಜೆಪಿ ಪಕ್ಷದಲ್ಲೂ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಹೆಚ್ಚು ಕಡಿಮೆ ಕಾಂಗ್ರೆಸ್ ಪಕ್ಷದಲ್ಲೂ ಐಕ್ಯಗೊಂಡಿವೆ. ಇತ್ತೀಚೆಗೆ ಕೆಲವು ಬದಲಾವಣೆಗಳು ಸಹ ಆಗುತ್ತಿವೆ ಎಂಬುದನ್ನು ಸಹ ಪರಿಗಣಿಸಬೇಕು. ಈಗ ಪರ್ಯಾಯ ರಾಜಕೀಯ ಶಕ್ತಿ ಇದನ್ನು ಮೀರಿ ಬೆಳೆಯಬೇಕಾಗಿದೆ. ಜೊತೆಗೆ ಸಂಘ ಪರಿವಾರದ ಪ್ರಬಲ ಧರ್ಮ ಮತ್ತು ಸಂಘಟನೆಯ ಶಕ್ತಿ, ಅಂಬೇಡ್ಕರ್ ವಾದದ ಜಾಗೃತ ಮನಸ್ಸುಗಳ ಒಂದು ಶಕ್ತಿ, ಮುಸ್ಲಿಂ ಮತಗಳು ಒಂದೇ ಕಡೆ ಐಕ್ಯವಾಗುವ ಸವಾಲು, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಹೊಸ ಚಿಂತನೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಯುವ ಸಮೂಹ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕಿದೆ.
ಇದು ಒಂದು ಕಡೆಯಾದರೆ ಸಂಘಟನೆ, ಸಂಪನ್ಮೂಲ, ನಾಯಕತ್ವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರ ಮನಸ್ಸುಗಳನ್ನು ಗೆಲ್ಲುವ ಮಾರ್ಗಗಳೇ ಎವರೆಷ್ಟ್ ಶಿಖರ ಹತ್ತಿದಷ್ಟು ಸವಾಲಿನ ಕೆಲಸ. ಪರ್ಯಾಯ ರಾಜಕೀಯ ಶಕ್ತಿಯ ಪ್ರಾರಂಭಿಸುವಾಗಲೇ ಅನೇಕ ಪ್ರಶ್ನೆಗಳು ಎದುರಾಗತೊಡಗುತ್ತದೆ. ನೀವು ಎಡಪಂಥೀಯರೇ ಬಲಪಂಥೀಯರೇ, ಆಸ್ತಿಕರೇ ನಾಸ್ತಿಕರೇ, ಮೀಸಲಾತಿ ಪರವೇ ಅಥವಾ ವಿರುದ್ದವೇ, ಮಹಿಳಾ ಸ್ವಾತಂತ್ರ್ಯ ನಿಮಗೆ ಒಪ್ಪಿತವೇ, ಮದ್ಯಪಾನದ ಬೆಂಬಲಿಗರೇ ಅಥವಾ ನಿಷೇಧಿಸುವವರೇ, ಜಾತ್ಯಾತೀತರೇ ಅಥವಾ ಹಿಂದುತ್ವವಾದಿಯೇ, ಬಂಡವಾಳಶಾಹಿಗಳೇ ಅಥವಾ ರೈತ ಕಾರ್ಮಿಕರ ಪರ ಒಲವುಳ್ಳವರೇ, ಉಚಿತ ಯೋಜನೆಗಳ ಪರವೇ, ವಿರುದ್ಧವೇ ಹೀಗೆ ಪ್ರತಿಯೊಂದರಲ್ಲೂ ನಿಮ್ಮನ್ನು ಕಾಡತೊಡಗುತ್ತಾರೆ. ಇನ್ನು ನಾಯಕತ್ವ ವಹಿಸುವವರ ವೈಯಕ್ತಿಕ ಬದುಕನ್ನು ಎಂದೋ ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು ಮುಂದು ಮಾಡಿ ಅವರ ನೈತಿಕತೆಯನ್ನೇ ಕುಸಿಯುವಂತೆ ಮಾಡುತ್ತಾರೆ. ಸ್ಪಷ್ಟವಾಗಿ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿ ಬೇಕಂತಲೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ಪ್ರಖ್ಯಾತ ಸಿನಿಮಾ ನಟನೋ, ಬಹುಸಂಖ್ಯಾತ ಜಾತಿಯ ವ್ಯಕ್ತಿಯೋ, ಆಗರ್ಭ ಶ್ರೀಮಂತನೋ ಆದರೆ ಒಂದಷ್ಟು ಜನಪ್ರಿಯ ಚಟುವಟಿಕೆ ಮಾಡುವುದು ಸುಲಭ. ಅದೆಲ್ಲವೂ ಇಲ್ಲದೇ ಕೇವಲ ಪ್ರಾಮಾಣಿಕತೆ, ದಕ್ಷತೆ ಮತ್ತು ವಿಚಾರಗಳ ಆಧಾರದ ಮೇಲೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವುದು ತುಂಬಾ ತುಂಬಾ ಕಷ್ಟ. ಹಾಗೆಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಈಗಿನ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಜನರನ್ನು ಬೇಗ ತಲುಪುವ ಅನುಕೂಲಗಳೂ ಇವೆ. ಹೊಸ ಪ್ರಯೋಗಗಳಿಗೆ ಮಾದರಿಯಾಗಿ ದೇಶದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿವೆ. ಅದರಲ್ಲಿ ಬಹುಮುಖ್ಯ ಉದಾಹರಣೆ ಇತ್ತೀಚಿನ ದೆಹಲಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ.
ನಾಯಕತ್ವದಲ್ಲಿ ಅತ್ಯಂತ ಪ್ರಾಮಾಣಿಕ, ಶುದ್ದ ಮತ್ತು ಅಧಿಕಾರದ ಆಸೆಗಿಂತ ಜನರಿಗೆ ಒಳಿತು ಮಾಡುವ ವ್ಯಕ್ತಿತ್ವವನ್ನು ಹೊಂದಿರುವವರು ಎಂಬ ನಂಬಿಕೆ ಜನರಲ್ಲಿ ಬೆಳೆದರೆ ಅದು ಪರ್ಯಾಯ ರಾಜಕೀಯ ಶಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು. ಅಧಿಕಾರಕ್ಕೆ ಬಂದರೇ ಯಾವ ಯಾವ ಕೆಲಸಗಳನ್ನು ಈಗಿನ ವ್ಯವಸ್ಥೆಗಿಂತ ಭಿನ್ನವಾಗಿ ಜನರಿಗೆ ತಲುಪಿಸುತ್ತೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಎರಡನೇ ಮೆಟ್ಟಿಲು. ಈಗಿನ ಸಂದರ್ಭದಲ್ಲಿ ಸಂಘಟನಾತ್ಮಕ ಹೋರಾಟಕ್ಕಿಂತ ಜನ ಸಮೂಹವೇ ಆ ನಾಯಕತ್ವದ ಪರವಾಗಿ ಒಲವು ಹೊಂದಿ, ಒಬ್ಬರಿಂದೊಬ್ಬರಿಗೆ ಮಾತುಗಳ ಮುಖಾಂತರವೇ ಹರಡಿ ಮತಗಳಾಗಿ ಪರಿವರ್ತನೆ ಆಗುವ ಪ್ರಕ್ರಿಯೆಗೆ ಒಳಗಾಗುವಂತೆ ಮಾಡಿದರೆ ಅದು ಮೂರನೇ ಮೆಟ್ಟಿಲು.
ಪರ್ಯಾಯ ರಾಜಕೀಯ ಪಕ್ಷ ಸಾಂಪ್ರದಾಯಿಕ ಪಕ್ಷಗಳಿಗಿಂತ ನಡೆ ನುಡಿಗಳಲ್ಲಿ, ಆಡಳಿತಾತ್ಮಕ ದಕ್ಷತೆಯಲ್ಲಿ, ತನ್ನ ಅಭಿವೃದ್ಧಿಯ ಚಿಂತನೆಗಳಲ್ಲಿ, ಅಧಿಕಾರದ ಹಂಚಿಕೆಯಲ್ಲಿ, ಹಣಕಾಸಿನ ವ್ಯವಹಾರದಲ್ಲಿ, ಎಲ್ಲಕ್ಕಿಂತ ಮುಖ್ಯವಾಗಿ ತಾನು ರೂಪಿಸುವ ಯೋಜನೆಗಳು ಜನರನ್ನು ಹೇಗೆ ಸಮರ್ಪಕವಾಗಿ ತಲುಪುತ್ತವೆ ಎಂಬುದನ್ನು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಪ್ರತಿ ಹಳ್ಳಿಗಳನ್ನು ತಲುಪುವಂತಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಹೌದು, ಇದು ಅಕ್ಷರಗಳಲ್ಲಿ ಬರೆದಷ್ಟು ಸುಲಭವಲ್ಲ ಎಂಬ ಅರಿವಿದೆ. ಅಸಾಧ್ಯ ಎಂಬುದೇ ಹೆಚ್ಚು ಸೂಕ್ತ. ಆದರೆ ಅಸಾಧ್ಯವೂ ಸಾಧ್ಯ ಎಂಬುದನ್ನು ಸಹ ಮರೆಯಬಾರದು. ಜನ ವ್ಯವಸ್ಥೆಯ ವಿರುದ್ಧ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪರ್ಯಾಯ ಆಡಳಿತ ವ್ಯವಸ್ಥೆ ರೂಪಿಸಲು ಇದು ಸೂಕ್ತ ಸಮಯ ಎಂದು ಭಾವಿಸಬಹುದು. ಆಸಕ್ತ ಮನಸ್ಸುಗಳು ಈ ಬಗ್ಗೆ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬಹುದು. ಆದರೆ ಬಹುದೊಡ್ಡ ನಿರೀಕ್ಷೆ ಬೇಡ. ಅದು ನಿರಾಸೆಯ ಕೂಪಕ್ಕೆ ತಳ್ಳುತ್ತದೆ.
ಪ್ರಾಮಾಣಿಕ ಪ್ರಯತ್ನ, ನಿಸ್ವಾರ್ಥ ಸೇವೆ, ಏನನ್ನೂ ತನಗಾಗಿ ನಿರೀಕ್ಷಿಸದ ನಿರ್ಲಿಪ್ತತೆ ಖಂಡಿತ ಜನರ ಮನವೊಲಿಸಲು ಯಶಸ್ವಿಯಾಗುತ್ತದೆ. ಈಗಲೂ ಸಾಕಷ್ಟು ಜನ ಒಳ್ಳೆಯವರು ಇದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಮತ್ತು ಪರ್ಯಾಯ ಇಲ್ಲ. ಅದನ್ನು ಒದಗಿಸಿದರೆ ಖಂಡಿತ ಜನ ಸಮೂಹ ಒಪ್ಪಬಹುದು. ಆ ದಿನಗಳು ಬೇಗ ಬರಲಿ ಎಂದು ನಿರೀಕ್ಷಿಸುತ್ತಾ… ಇದು ಒಂದು ವೈಯಕ್ತಿಕ ಅಭಿಪ್ರಾಯ. ನೀಡಿದ ಮಾಹಿತಿಗಳಲ್ಲಿ ತಪ್ಪು ಇದ್ದರೆ ಒಪ್ಪಿಕೊಳ್ಳುವೆ, ಹಾಗೆಯೇ ಇದು ಅಂತಿಮವಲ್ಲ. ಈ ಬಗ್ಗೆ ವಾಸ್ತವ ನೆಲೆಯಲ್ಲಿ ಇನ್ನಷ್ಟು ಚರ್ಚೆಗಳನ್ನು ಆಹ್ವಾನಿಸುತ್ತಾ… ಮನಸ್ಸುಗಳ ಅಂತರಂಗದ ಚಳವಳಿ ಸಹ ಜನರ ಒಟ್ಟು ಚಿಂತನೆ ಮತ್ತು ವ್ಯಕ್ತಿತ್ವಗಳನ್ನು ವಿಶಾಲ ಗೊಳಿಸುವ ನಿಟ್ಟಿನಲ್ಲಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಜ್ಞೆ ಮಾಡುತ್ತಾ.....
(ಮುಗಿಯಿತು)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ