ಪರ್ವತಗಳ ಬೆಳವಣಿಗೆ ಮತ್ತು ಉಪಯೋಗ

ಪರ್ವತಗಳ ಬೆಳವಣಿಗೆ ಮತ್ತು ಉಪಯೋಗ

ನಾವು ಈಗಾಗಲೇ ಪರ್ವತಗಳ ಹುಟ್ಟು ಹಾಗೂ ಪರ್ವತಗಳ ವಿವಿಧ ವಿಧಗಳನ್ನು ತಿಳಿದುಕೊಂಡಿದ್ದೇವೆ. ಪರ್ವತಗಳ ಬಗ್ಗೆ ಇದು ಕೊನೆಯ ಅಧ್ಯಾಯ. ಈ ಅಧ್ಯಾಯದಲ್ಲಿ ನಾವು ಪರ್ವತಗಳ ಬೆಳವಣಿಗೆ ಹೇಗಾಗುತ್ತೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಅದರ ಜೊತೆಗೆ ಪರ್ವತಗಳಿಂದ ನಮಗೆ ಏನು ಪ್ರಯೋಜನವಿದೆ? ಎನ್ನುವ ಬಗ್ಗೆಯೂ ತಿಳಿಯುವ.

ಪರ್ವತಗಳ ಹುಟ್ಟಿನ ಬಳಿಕ ಅವುಗಳು ನಿರಂತರ ಬೆಳೆಯುತ್ತಲೇ ಇರುತ್ತವೆ. ನಿರ್ಜೀವ ಪರ್ವತಗಳು ಬೆಳೆಯುವುದಾದರೂ ಹೇಗೆ ಎಂಬ ಸಂಶಯ ನಿಮ್ಮಲ್ಲಿ ಕಾಡುತ್ತಿರಬಹುದಲ್ಲವೇ? ಅಗ್ನಿ ಪರ್ವತದ ಸ್ಪೋಟಗಳಿಂದ ಹೊರಹೊಮ್ಮಿದ ಪದಾರ್ಥಗಳು ಒಂದು ಕಡೆ ಒಟ್ಟಾಗುವುದು, ಶಿಲೆಗಳು ಮೇಲಕ್ಕೆ ಎತ್ತಿದ್ದಾಗ ಪರ್ವತಗಳ ಬೆಳವಣಿಗೆಯು ಬಹಳ ನಿಧಾನವಾಗಿ ನಡೆಯುವ ಕ್ರಿಯೆ. ಇಲ್ಲವಾದಲ್ಲಿ ನಿಮ್ಮ ಮನೆ ಬಳಿ ಇರುವ ಪರ್ವತ ಒಂದೆರಡು ದಿನಗಳಲ್ಲೇ ಆಕಾಶದೆತ್ತರಕ್ಕೆ ಬೆಳೆದು ಬಿಡುತ್ತಿತ್ತು. ಆಗಾಗ ನಡೆಯುವ ಭೂಕಂಪನಗಳೂ ಸಹ ಪರ್ವತಗಳ ಬೆಳವಣಿಗೆಗೆ ಪರ್ಯಾಯ ಕಾರಣಗಳಾಗಿವೆ. ಅದರ ಮೇಲ್ಭಾಗವನ್ನು ವಾತಾವರಣ, ನದಿಗಳ ಹರಿಯುವಿಕೆ. ಹಿಮ ಪ್ರವಾಹಗಳು ಹರಿಯುತ್ತಾ ದಾಳಿ ಮಾಡುತ್ತಲೇ ಇದ್ದು ಆ ಭಾಗವನ್ನು ಸವೆಸುತ್ತಾ ಬರುತ್ತವೆ. 

ನಾವು ‘ಯಂಗ್ ಮೌಂಟನ್ಸ್’ ಅಥವಾ ಚಿಕ್ಕ ಪ್ರಾಯದ ಪರ್ವತಗಳು ಸುಮಾರು ಸಾವಿರ ವರ್ಷಗಳ ಹಿಂದೆ ಜನಿಸಿದವು. ಹಿಮಾಲಯ, ರಾಕಿ ಪರ್ವತಗಳು ಅತಿ ಎತ್ತರವೂ ಕಡಿದಾಗಿಯೂ ಇವೆ. ಸೂಜಿ ಮೊನೆಯಾಕಾರದ ಕಡಿದಾದ ಶಿಖರಗಳು ಉಂಟಾಗಿವೆ. ಅಷ್ಟೇ ಇಳಿಜಾರಾದ ಭೀಕರ ಕಣಿವೆಗಳೂ ಇವೆ. ಹಿಮ ಗೆಡ್ಡೆಗಳು ಉಂಟಾಗುವ ಮಿತಿಯ ಎತ್ತರವನ್ನು ಮೀರಿ ಬೆಳೆದು ಹೋಗಿ, ಅಪಾರವಾಗಿ ಹಿಮ ಉಂಟಾಗುವುದಕ್ಕೆ ಆಸ್ಪದವಾಗುತ್ತದೆ. 

ಭೂಮಧ್ಯರೇಖೆಯ ಪ್ರದೇಶ ಉಷ್ಣವಲಯವಾಗಿರುವುದರಿಂದ ಈ ಭಾಗ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುತ್ತದೆ. ಆ ಕಾರಣ ಈ ಭಾಗದಲ್ಲಿ ಶಾಖ ಜಾಸ್ತಿ. ಈ ಪ್ರದೇಶಗಳಲ್ಲಿರುವ ಕೆಲವು ಪರ್ವತಗಳು ಅತೀ ಎತ್ತರವಾಗಿವೆ. ಇವುಗಳು ಎತ್ತರವಾಗಿದ್ದರೂ ಪ್ರಾಯ ಕಮ್ಮಿ. ತಮ್ಮ ಶೃಂಗಗಳಿಗೆ ಹಿಮ ಕಿರೀಟವನ್ನು ಧರಿಸಿರುತ್ತವೆ. ಇವುಗಳ ಕಡಿದಾದ ಇಳಿಜಾರಿನಲ್ಲಿ ಮಂಜಿನ ಹಾರುವಿಕೆ, ಭೂಭಾಗ ಜಾರುವುದು, ಹಿಮ ಪ್ರವಾಹಗಳು ಅಧಿಕ. ಅದರಲ್ಲೂ ಭೂಕಂಪಗಳು ಇರುವ ಜಾಗದಲ್ಲಿ ಇನ್ನೂ ಅಧಿಕ. ಸಾವಿರಾರು ಮೀಟರುಗಳ ಎತ್ತರವಿರುವ ಭಾಗದಿಂದ ಸವೆದು ಹೋಗುವ ಶಿಲೆಗಳು, ಕಾಲ ಕಳೆದಂತೆ ಅದರ ಬುಡದ ಭಾಗದಲ್ಲಿ ಮತ್ತು ಪ್ರಪಾತ ಕಣಿವೆಗಳಲ್ಲಿ ಶೇಖರವಾಗುತ್ತಾ ಹೋಗುತ್ತವೆ. ಸವೆದು ಹೋದ ಈ ಶಿಲಾತುಂಡುಗಳನ್ನು ರಾಕ್ ಡೆಬ್ರಿಸ್ (ಚಿತ್ರ ೧ ) ಅಥವಾ ಟ್ಯಾಲಸ್ ಎನ್ನುತ್ತಾರೆ. 

ಸಣ್ಣ ಪ್ರಾಯದ ಪರ್ವತಗಳಿಂದ ಹರಿಯುವ ನದಿಗಳು ಬಹಳ ವೇಗವಾಗಿ ಹರಿಯುತ್ತವೆ. ಇವು ಹರಿಯುವ ಕಣಿವೆಗಳು ‘ವಿ’ (V) ಆಕಾರದಲ್ಲಿರುತ್ತವೆ. ಪರ್ವತಗಳಲ್ಲಿ ಹರಿಯುವ ನದಿಗಳು ಕಡಿದಾದ ಕಣಿವೆಯಲ್ಲಿ ಹರಿಯುವಾಗ ಜಲಪಾತಗಳ ನಿರ್ಮಾಣವಾಗುತ್ತದೆ. ಹಿಮ ಕರಗುವಾಗ ಆ ನೀರಿನಿಂದ ಶೀತಲ ಸರೋವರಗಳು ಉಂಟಾಗುತ್ತವೆ. 

ಪರ್ವತಗಳ ಬೆಳವಣಿಗೆಯ ಮುಂದಿನ ಹಂತ  ಪ್ರೌಢಾವಸ್ಥೆ. ಈ ಹಂತ ತಲುಪಿದ ಪರ್ವತಗಳ ಬೆಳವಣಿಗೆಗಳು ನಿಂತು ಹೋಗುತ್ತವೆ. ಈ ಸಮಯದಲ್ಲಿ ಪರ್ವತಗಳ ಒರಟು ತುದಿಗಳು ದುಂಡನೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಮೇಲ್ಭಾಗಗಳು, ಕುಳ್ಳಾದ ಶಿಖರಗಳು, ಸಾಧಾರಣವಾದ ಇಳಿಜಾರು ರೂಪುಗೊಳ್ಳುತ್ತವೆ. ಜಲಪಾತಗಳು ಹಾಗೂ ಹಿಮ ನದಿಗಳು ಈ ಪ್ರೌಢಾವಸ್ಥೆಯ ಶಿಖರಗಳಲ್ಲಿ ಕಮ್ಮಿ. 

ಪರ್ವತಗಳ ಕೊನೆಯ ಹಂತ ಮುಪ್ಪು ಅಥವಾ ಅವಸಾನ. ಈ ಹಂತದಲ್ಲಿ ಪರ್ವತಗಳು ನಿರಂತರವಾಗಿ ಸವೆಯುತ್ತಾ ಹೋಗಿ ಸಮತಟ್ಟಾಗಿ ಮೈದಾನಗಳ ನಿರ್ಮಾಣವಾಗುತ್ತದೆ. ಇಳಿಜಾರು, ವಾತಾವರಣದ ನಿರಂತರ ದಾಳಿ, ನೀರಿನ ಹರಿವು ಇವೆಲ್ಲಾ ಪರ್ವತಗಳ ಸಾವಿನ ಮುನ್ನುಡಿಯನ್ನು ನಿಧಾನವಾಗಿ ಬರೆಯುತ್ತವೆ. ಸಾವಿರಾರು ವರ್ಷಗಳ ತನಕ ನಿರಂತರವಾಗಿ ಪರ್ವತಗಳು ಸವೆದು ಹೋಗಿ ಸಮತಟ್ಟಾದ ಮೈದಾನದ ನಿರ್ಮಾಣವಾಗುತ್ತದೆ. ಈ ಹಂತವನ್ನು ‘ಪೆನಿಪ್ಲೇನ್' (ಚಿತ್ರ ೨) ಎನ್ನುತ್ತಾರೆ. ಹಳೆಯ ಮನೆಗಳು ಜೋರಾದ ಮಳೆ ಗಾಳಿಗೆ ಕುಸಿದಾಗ, ನಂತರ ದಿನಕಳೆದತೆ ಅವುಗಳು ಸಮತಟ್ಟಾಗುತ್ತವೆಯಲ್ಲಾ ಹಾಗೆ. ಮುಂದಿನ ದಿನಗಳಲ್ಲಿ ಅದೇ ಮೈದಾನದಲ್ಲಿ ಮತ್ತೊಂದು ಪರ್ವತ ನಿರ್ಮಾಣವಾಗಲೂ ಬಹುದು. ಈ ವಿಧಾನವನ್ನು ‘ಪರ್ವತ ಚಕ್ರ' ಎನ್ನುತ್ತಾರೆ. ಭೂಮಿಯಲ್ಲಿನ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ, ನಂತರ ಮೋಡವಾಗಿ ಮಳೆ ಮೂಲಕ ನೀರು ಸುರಿದು ಮತ್ತೆ ನೀರು ಆವಿಯಾಗುತ್ತದೆಯಲ್ಲಾ ಅದೇ ರೀತಿ ಪರ್ವತಗಳೂ ನಿರ್ಮಾಣ ಹಾಗೂ ಅವಸಾನವಾಗುತ್ತವೆ. ಆದರೆ ಪರ್ವತಗಳ ಯಾವುದೇ ಹಂತ ನಿರ್ಮಾಣವಾಗಲು ಸಾವಿರಾರು ವರ್ಷಗಳು ತಗಲುತ್ತವೆ.

ಪರ್ವತಗಳ ಉಪಯೋಗ: ಪರ್ವತಗಳಿಂದ ನಮಗೆ ಏನು ಉಪಯೋಗವಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಹಲವರಲ್ಲಿ  ಕಾಡಬಹುದು ಅಲ್ಲವೇ? ಪರ್ವತಗಳು ಇಳಿಜಾರಾಗಿರುವುದರಿಂದ ಸರಾಗವಾಗಿ ನೀರು ಹರಿದುಹೋಗುವ ಕಾರಣ ಹಲವಾರು ಬೆಳೆಗಳನ್ನು ಬೆಳೆಸಬಹುದು. ಕಾಫಿ, ಸಾಗುವಾನಿ, ಚಹಾ ಮುಂತಾದ ಗಿಡ ಮರಗಳಿಗೆ ಇದು ಉತ್ತಮ ಸ್ಥಳ. ದೊಡ್ಡದಾದ ಪರ್ವತಗಳಿಂದ ಧುಮುಕುವ ಜಲಪಾತಗಳಿಂದ ಜಲವಿದ್ಯುತ್ ತಯಾರಿಸುತ್ತಾರೆ. ಪರ್ವತಗಳಲ್ಲಿ ಬೆಲೆ ಬಾಳುವ ಖನಿಜಗಳು ಲಭ್ಯವಾಗುತ್ತವೆ. ದೊಡ್ಡ ಪ್ರಮಾಣದಲ್ಲಿ ಚಿನ್ನ, ತಾಮ್ರ, ಮ್ಯಾಂಗನೀಸ್, ಸತು, ಸೀಸ, ಕಬ್ಬಿಣದ ಅದಿರುಗಳನ್ನು ಪರ್ವತದಲ್ಲಿ ಗಣಿಗಾರಿಕೆ ಮಾಡುವುದರ ಮೂಲಕ ಪಡೆದುಕೊಳ್ಳುತ್ತಾರೆ. ಹಾಗೆಯೇ ಮನೆ ನಿರ್ಮಾಣಕ್ಕೆ ಉಪಯೋಗವಾಗುವ ಗ್ರಾನೈಟ್ ಮೊದಲಾದ ಶಿಲೆಗಳು ಪರ್ವತಗಳಲ್ಲಿ ಸಿಗುತ್ತವೆ. ಪರ್ವತಗಳಲ್ಲಿ ಕಲ್ಲಿದ್ದಲು, ಗಂಧಕ ಮುಂತಾದ ವಸ್ತುಗಳೂ ಇರುವ ಸಾಧ್ಯತೆ ಇವೆ. 

ಇದರ ಜೊತೆಗೆ ಪ್ರವಾಸಕ್ಕೆ ಯೋಗ್ಯವಾದ ಸುಂದರ ಗಿರಿಧಾಮಗಳನ್ನು ಪರ್ವತಗಳ ಶಿಖರದಲ್ಲಿ ರಚನೆ ಮಾಡಬಹುದು. ಇದರಿಂದಾಗಿ ಪ್ರವಾಸೋದ್ಯಮವೂ ಬೆಳೆಯುತ್ತದೆ. ಪರ್ವತಗಳಿಂದ ಹವೆಯೂ ತಂಪಾಗಿರುತ್ತದೆ. ಅಪಾರ ಸಸ್ಯ ಸಂಪತ್ತೂ ಬೆಳವಣಿಗೆಯಾಗುತ್ತದೆ. ಮಳೆ ಮೋಡಗಳನ್ನು ತಡೆದು ನಿಲ್ಲಿಸಿ ಮಳೆಯಾಗಿಸುವ ಸಾಮರ್ಥ್ಯವೂ ಪರ್ವತಗಳಿಗೆ ಇವೆ. ಪರ್ವತಗಳು ಇದ್ದ ಪ್ರದೇಶ ಸುಂದರವಾಗಿದ್ದು, ಸಮೃದ್ಧವೂ ಆಗಿರುತ್ತದೆ.

(ಆಧಾರ: ಕನ್ನಡ ಸಾಹಿತ್ಯ ಪರಿಷತ್ತು ಇವರ ‘ಪರ್ವತಗಳು' ಪುಸ್ತಕ)  

ಚಿತ್ರ ಕೃಪೆ: ಅಂತರ್ಜಾಲ ತಾಣ