ಪರ್ವತಗಳ ಹುಟ್ಟಿನ ಕಥೆ

ಪರ್ವತಗಳ ಹುಟ್ಟಿನ ಕಥೆ

ನಾವು ಸಣ್ಣವರಿರುವಾಗ ಶಾಲೆಗಳಲ್ಲಿ ಕಲಿಸುತ್ತಿದ್ದ ಸಾಮಾನ್ಯ ವಿಷಯವೆಂದರೆ ಪರ್ವತ ಶ್ರೇಣಿಗಳು. ನಮ್ಮ ದೇಶದ ಒಂದು ಭಾಗ ಹಿಮಾಲಯ ಪರ್ವತಗಳಿಂದ ಸುತ್ತುವರಿದಿರುವುದರಿಂದ ಅವುಗಳು ನಮ್ಮ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸುತ್ತವೆ. ಆ ಪರ್ವತಗಳು ಸದಾ ಕಾಲ ಹಿಮದಿಂದ ಆವೃತ್ತವಾಗಿರುವುದರಿಂದ ಶತ್ರುಗಳಿಗೆ ಅವುಗಳನ್ನು ಹತ್ತಿ ಇಳಿಯುವುದು ಕಷ್ಟ ಸಾಧ್ಯ. ಇವುಗಳ ಜೊತೆಗೆ ನಮ್ಮ ಹಲವಾರು ಪುರಾಣದ ಕಥೆಗಳೂ ಈ ಪರ್ವತಗಳ ಹುಟ್ಟಿನ ಬಗ್ಗೆ ಹೇಳುತ್ತವೆ. ಹಾಗೆಯೇ ವಿಜ್ಞಾನವೂ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡುತ್ತದೆ. ನಾವು ಎರಡನ್ನೂ ಒಂದೊಂದಾಗಿ ಗಮನಿಸುವ.

ಹಿಂದೂ ಪುರಾಣಗಳ ಮಾನ್ಯತೆಯ ಪ್ರಕಾರ ಈಶ್ವರನು ತ್ರಿಮೂರ್ತಿಗಳಲ್ಲಿ ಒಬ್ಬ. ಉಳಿದಿಬ್ಬರೆಂದರೆ ಬ್ರಹ್ಮ ಹಾಗೂ ವಿಷ್ಣು. ಈಶ್ವರನ ಹೆಂಡತಿ ಪಾರ್ವತಿ. ಇವಳು ಪರ್ವತ ರಾಜನ ಮಗಳಾದುದರಿಂದ ಅವಳಿಗೆ ಪಾರ್ವತಿ ಎಂಬ ಹೆಸರು ಬಂದಿದೆ. ಪಾರ್ವತಿಗೆ ಗಿರಿಜಾ, ಗೌರಿ ಮುಂತಾದ ಹಲವು ಹೆಸರುಗಳಿವೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿರುವ ಎರಡನೆಯ ಅತ್ಯಂತ ಎತ್ತರದ ಶಿಖರವನ್ನು ಗೌರಿ ಶಂಕರ ಎಂದೂ ಕರೆಯುತ್ತಾರೆ. ಪರ್ವತರಾಜನನ್ನು ಹಿಮವಂತನೆಂದೂ ಕರೆಯುತ್ತಾರೆ. ನಮ್ಮ ಪುರಾಣಗಳಲ್ಲಿ ಪ್ರತಿಯೊಂದು ವಿಷಯ ಅಥವಾ ವಸ್ತುಗಳಿಗೆ ಒಂದೊಂದು ದೇವರು ಅಥವಾ ದೇವತೆಗಳ ಉಸ್ತುವಾರಿಯಿದೆ. (ರಾಜಕಾರಣದಲ್ಲಿ ಬೇರೆ ಬೇರೆ ಖಾತೆಗಳಿಗೆ ಮಂತ್ರಿಗಳಿದ್ದಂತೆ) ಉದಾಹರಣೆಗೆ ಬೆಂಕಿಗೆ ಅಗ್ನಿದೇವ, ಮಳೆ ಅಥವಾ ನೀರಿಗೆ ವರುಣ ದೇವ, ಗಾಳಿಗೆ ವಾಯುದೇವ, ಕಡಲಿಗೆ ಸಮುದ್ರ ರಾಜ ಈ ದೇವತೆಗಳಿಗೆಲ್ಲಾ ಅಧಿಪತಿ ಇಂದ್ರ (ನಮ್ಮ ಮುಖ್ಯಮಂತ್ರಿ ಇದ್ದಂತೆ). ಹೀಗೆ ಪುರಾಣದ ಪ್ರಕಾರ ಪರ್ವತ ರಾಜನ ವಾಸಸ್ಥಾನವೇ ಪರ್ವತ ಎಂದು ನಂಬಲಾಗುತ್ತದೆ. ಆದರೆ ಕಥೆಗಳೇ ಬೇರೆ, ವಿಜ್ಞಾನವೇ ಬೇರೆ ಅಲ್ಲವೇ?

ವಿಜ್ಞಾನಿಗಳ ಪ್ರಕಾರ ನಮ್ಮ ಪರ್ವತಗಳು ಹುಟ್ಟಲು ‘ಒರೋಜಿನಿಕ್' ಎಂಬ ಚಲನೆಯೇ ಕಾರಣವಂತೆ. ಓರೋ ಮತ್ತು ಜಿನಿಕ್ ಎಂಬ ಎರಡು ಗ್ರೀಕ್ ಪದಗಳ ಸಂಯೋಜನೆಯಿಂದ ಈ ಪದ ಹುಟ್ಟಿಕೊಂಡಿದೆ. ಕನ್ನಡದಲ್ಲಿ ಪರ್ವತಗಳ ನಿರ್ಮಾಣ ಎಂದು ಹೇಳಬಹುದಾಗಿದೆ. ನಮ್ಮ ಭೂಮಿ ಗೋಲಾಕಾರವಾಗಿದೆ ಎಂದು ನಮಗೆಲ್ಲಾ ತಿಳಿದೇ ಇದೆ. ಈ ಭೂಮಿಯ ಮಧ್ಯ ಭಾಗದಲ್ಲಿ ಅಖಂಡವಾದ ಒಂದು ಶಕ್ತಿ ಸದಾಕಾಲ ಇರುತ್ತದೆ. ಈ ಶಕ್ತಿಯ ಇರುವಿಕೆಯನ್ನು ಹೇಗೆ ತಿಳಿಯುವುದು ಎಂಬ ಸಂಶಯ ನಿಮ್ಮ ಮನದಲ್ಲಿ ಮೂಡುತ್ತಿರಬಹುದು. ಈ ಶಕ್ತಿಯಿಂದಾಗಿಯೇ ಭೂಮಿಯ ಭಾಗಗಳು ಚಲನೆಯಲ್ಲಿರುತ್ತವೆ. ಶಕ್ತಿಯು ವಿವಿಧ ರೀತಿಯ ಅಲೆಗಳ ರೂಪದಲ್ಲಿ ಭೂಮಿಯ ಒಳಪದರಗಳಲ್ಲೆಲ್ಲಾ ಹಾವಿನಂತೆ ಕೆಳಮುಖವಾಗಿ , ಮೇಲ್ಮುಖವಾಗಿ ಅಡ್ಡಡ್ಡಲಾಗಿ ಚಲಿಸುತ್ತಲೇ ಇರುತ್ತದೆ. ಇದರಿಂದ ಉಂಟಾಗುವ ಎಲ್ಲಾ ರೀತಿಯ ಭೂ ಚಲನೆಗಳನ್ನು ‘ಡಯಾಸ್ಟ್ರೋಪಿಸಮ್' ಎನ್ನುತ್ತಾರೆ. 

ಪ್ರಮುಖವಾದ ಎರಡು ಚಲನೆಗಳೆಂದರೆ ಎಪಿರೋಜಿನಿಕ್ ಹಾಗೂ ಒರೋಜಿನಿಕ್. ಎಪಿರೋಜಿನಿಕ್ ಎಂದರೆ ಇದು ಭಾರೀ ಗಾತ್ರವೂ, ವಿಸ್ತಾರವೂ ಆದ ಭೂಮಿಯ ಭಾಗಗಳನ್ನು ಮೇಲ್ಮುಖವಾಗಿಯೋ ಅಥವಾ ಕೆಳಮುಖವಾಗಿಯೋ ಅಲುಗಾಡಿಸುತ್ತದೆ. ಆಗ ಭೂಮಿಯ ಯಾವುದೇ ಭಾಗವು ಮೇಲೇಳುತ್ತದೆ. ಬೇರೆ ಯಾವುದೋ ಭಾಗ ಭೂಮಿಯು ಬಿರುಕು ಬಿಟ್ಟು ಬಾಯ್ದೆರೆದಾಗ ಆ ಬಿರುಕಿನಲ್ಲಿ ಮುಳುಗಿಹೋಗುತ್ತದೆ. ಇದನ್ನು ನಾವು ಸರಳವಾಗಿ ಭೂಕಂಪಗಳು ಎಂದು ಕರೆಯುತ್ತೇವೆ.
ಎರಡನೇ ಚಲನೆಯೇ ಒರೋಜಿನಿಕ್. ಇದನ್ನು ಮೊದಲೇ ಹೇಳಿದಂತೆ ಪರ್ವತ ನಿರ್ಮಾಣದ ಚಲನೆ ಎನ್ನಬಹುದು. ಈ ಚಲನೆಗಳು ಬೃಹದಾಕಾರದಲ್ಲಿ ಭೂಮಿಯ ಮೇಲ್ಪದರದಲ್ಲಿ ಮಾಡಿದ ಸುಕ್ಕುಗಳೇ ಪರ್ವತಗಳು, ಪರ್ವತ ಶ್ರೇಣಿಗಳು, ಗುಡ್ಡ ಬೆಟ್ಟಗಳು ಎನಿಸಿವೆ. ಪರ್ವತ ನಿರ್ಮಾಣ ಚಲನೆ ನೇರವಾಗಿ, ಓರೆಯಾಗಿ ಮತ್ತು ಅಡ್ಡವಾಗಿರುತ್ತದೆ. ಭೂಮಿಯ ಭಾಗಗಳು ಕೆಳಗೆ ಮೇಲೆ ಸರಿದುದರ ಫಲಿತಾಂಶವಾಗಿ ಆ ಪ್ರದೇಶಗಳಲ್ಲಿ ಬಿರುಕುಗಳು (Faults) ಅಥವಾ ಮಡಿಕೆಗಳು (Folds) ಅಥವಾ ಭೂಭಾಗದ ಅಲುಗಾಟವೇ ಆಗಿರಬಹುದು. ಭೂಕಂಪದ ಅಲೆಗಳ ಚಲನೆ ಎಷ್ಟು ವೇಗವಾಗಿರುತ್ತದೆಯೋ ಅಷ್ಟೇ ನಿಧಾನಗತಿಯಲ್ಲಿರುತ್ತದೆ ಪರ್ವತಗಳ ನಿರ್ಮಾಣಗಳ ಭೂಚಲನೆ. ಪರ್ವತಗಳ ನಿರ್ಮಾಣವು ಶತಶತಮಾನಗಳ ನಿರಂತರ ಪ್ರಕ್ರಿಯೆಯಿಂದ ಆಗಿದೆ ಎನ್ನುತ್ತದೆ ವಿಜ್ಞಾನ.

ಪರ್ವತಗಳ ಬೃಹತ್ ಆಕಾರದಿಂದಾಗಿ ಅವುಗಳು ಕೆಲವೆಡೆ ಪೂಜನೀಯ ಸ್ಥಳಗಳಾಗಿವೆ. ಭಾರತ ದೇಶ ಮಾತ್ರವಲ್ಲ ಜಪಾನ್, ನೇಪಾಳ, ಗ್ರೀಸ್ ದೇಶಗಳ ಜನರು ಪರ್ವತವನ್ನು ಪೂಜಿಸುತ್ತಾರೆ. ಜಪಾನ್ ದೇಶದವರು ಫ್ಯೂಜಿಯಾಮಾ ಪರ್ವತವನ್ನೂ, ಗ್ರೀಕರು ಒಲಿಂಪಸ್ ಪರ್ವತವನ್ನು ಪರಮಾತ್ಮನ ವಾಸಸ್ಥಳವೆಂದು ಪೂಜಿಸುತ್ತಿದ್ದರು. ನೇಪಾಳ ದೇಶದವರು ಮೌಂಟ್ ಎವರೆಸ್ಟ್ ಅನ್ನು ಪೂಜನೀಯ ಭಾವದಿಂದ ‘ಚೋಮೋಲುಂಗ್ಮಾ’ ಎಂದು ಕರೆಯುತ್ತಾರೆ. 

ಪರ್ವತಗಳು ಭೂಪದರಗಳ ಸುಕ್ಕಾಗುವಿಕೆಯಿಂದ ಉಂಟಾಗುತ್ತವೆ ಎಂದು ತಿಳಿಯಿತಲ್ಲವೇ? ಪರ್ವತಗಳು ಹಲವು ಆಕಾರ, ಎತ್ತರಗಳಲ್ಲಿ ಇರುತ್ತವೆ. ಅವುಗಳಲ್ಲಿ ಒಂಟಿಯಾಗಿ ಎತ್ತರವಾಗಿರುವ ವಿನ್ಯಾಸವನ್ನು ಶೃಂಗ ಅಥವಾ ಶಿಖರ ಎನ್ನುತ್ತಾರೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಗೌರೀಶಂಕರ, ಕಾಂಚನಗಂಗಾ, ಮೌಂಟ್ ಎವರೆಸ್ಟ್, ಅನ್ನಪೂರ್ಣಾ, ನಂದಾ ದೇವಿ, ನೀಲಕಂಠ, ಕೆ-೨ ಮೊದಲಾದ ಹೆಸರಿನ ಶಿಖರಗಳಿವೆ. 

ಬಹಳ ವರ್ಷಗಳ ಹಿಂದೆ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ದೇವರ ವಾಸವಿದೆಯೆಂದು ಜನರು ನಂಬುತ್ತಿದ್ದರು. ಈಗಲೂ ನಂಬುವ ಜನರಿದ್ದಾರೆ. ಆ ಸಮಯದಲ್ಲಿ ಹಿಮದಿಂದ ಆವೃತ್ತವಾಗಿದ್ದ ಆ ಪರ್ವತಗಳನ್ನು ಏರುವುದು ಸುಲಭವಾಗಿರಲಿಲ್ಲ. ೧೯೫೩ ಮೇ ೨೯ರಂದು ನ್ಯೂಜಿಲ್ಯಾಂಡ್ ದೇಶದ ಎಡ್ಮಂಡ್ ಹಿಲರಿ ಹಾಗೂ ಅವರ ಸಹಾಯಕ ನೇಪಾಳದ ತೇನ್ ಸಿಂಗ್ ಅವರು ಪ್ರಪ್ರಥಮ ಬಾರಿಗೆ ಮೌಂಟ್ ಎವರೆಸ್ಟ್ ನ ತುತ್ತ ತುದಿಯನ್ನು ತಲುಪಿದರು. ಅಲ್ಲಿಂದ ಹಿಂದೆ ತಿರುಗಿ ಬಂದ ನಂತರ ಜನರು ತೇನ್ ಸಿಂಗ್ ಅವರಲ್ಲಿ ಕುತೂಹಲದಿಂದ ಕೇಳಿದರಂತೆ ‘ನೀವು ಹಿಮಾಲಯದ ತುದಿಯಲ್ಲಿ ಶಿವ ಪಾರ್ವತಿಯನ್ನು ಕಂಡಿರಾ?’ ಎಂದು. ತೇನಸಿಂಗ್ ‘ಅಲ್ಲಿ ಯಾರೂ ಇಲ್ಲ' ಎಂದು ಉತ್ತರಿಸಿದಾಗ ಜನರು ನಿರಾಶಾ ಭರಿತ ಅಚ್ಚರಿಯಲ್ಲಿ ಮುಳುಗಿ ಹೋದರಂತೆ. ತನ್ನ ಉತ್ತರ ಅವರ ಪ್ರಾಚೀನ ನಂಬಿಕೆಗಳಿಗೆ ಘಾಸಿಯಾಗಿತ್ತು ಎಂದು ತೇನಸಿಂಗ್ ಅವರಿಗೆ ಅನಿಸಿತಂತೆ. ಇದು ಅವರವರ ನಂಬಿಕೆ ಅಷ್ಟೇ. ಈಗಲೂ ಪರ್ವತ ಶ್ರೇಣಿಗಳಲ್ಲಿ ದೇವರ ವಾಸವಿದೆ ಎಂದು ನಂಬುವ ಜನರು ಇದ್ದಾರೆ. ಇದೇ ನಿಟ್ಟಿನಲ್ಲಿ ಪ್ರತೀ ವರ್ಷ ಅಮರನಾಥ, ಬದರೀನಾಥ, ಕೇದಾರನಾಥ ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಅಲ್ಲಿರುವ ದೇವಾಲಯ, ಹಿಮದಿಂದ ನಿರ್ಮಾಣವಾಗುವ ಪ್ರಕೃತಿ ಸಹಜ ಶಿವಲಿಂಗ ಇವನ್ನೆಲ್ಲಾ ನೋಡಿ ಭಯಭಕ್ತಿಯಿಂದ ಮನದುಂಬಿಸಿಕೊಳ್ಳುತ್ತಾರೆ. 

ಮುಂದಿನ ದಿನಗಳಲ್ಲಿ ಅಗ್ನಿ ಪರ್ವತ, ಪರ್ವತಗಳ ಬೆಳವಣಿಗೆ, ಪರ್ವತಗಳ ಉಪಯೋಗ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ. ಪರ್ವತ ಶ್ರೇಣಿಗಳು ನೋಡಲು ಎಷ್ಟು ಸುಂದರವೋ, ಅಷ್ಟೇ ರೋಮಾಂಚನ ನೀಡುವ ಸ್ಥಳಗಳಾಗಿವೆ. 

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು ಇವರು ಪ್ರಕಟಿಸಿದ ‘ಪರ್ವತಗಳು'ಪುಸ್ತಕ

ಚಿತ್ರ ಕೃಪೆ: ಅಂತರ್ಜಾಲ ತಾಣ