ಪರ್ವ ಕಾಲದ ಹೊಂಬಿಸಿಲು

ಪರ್ವ ಕಾಲದ ಹೊಂಬಿಸಿಲು

ಕವನ

ದಿನಕರ ದೇವನು ಪಥವ ಬದಲಿಸುವ

ದೀರ್ಘ ರಾತ್ರಿಯು ಸರಿಯುವ ಸಮಯವು

ಮಕರ ರಾಶಿಗೆ ಪ್ರವೇಶವಾಗಿರಲು

ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು//

 

ಹೆಂಗಳೆಯರ ಸಂತಸ ಮುಗಿಲು ಮುಟ್ಟುತ

ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/

ಒಳ್ಳೊಳ್ಳೆಯ ಮಾತನಾಡಿ ನಲಿಯುತ

ಹಳೆಯ ವೈಷಮ್ಯಸುಟ್ಟು ಬಿಡುತ//

 

ಅನ್ನದಾತರ ಬೆವರ ಹನಿಗಳ ಸುಗ್ಗಿ ಹಬ್ಬ

ದವಸ ಧಾನ್ಯ ಸೇರಿಸಿ ರಾಶಿ ಪೂಜೆಯ ಕಬ್ಬ/

ರಾಸುಗಳ ಶೃಂಗರಿಸಿ ಪೂಜಿಸಿ ನಲಿಯುತ

ಹಾಲು ಬೆಲ್ಲ ಪೊಂಗಲ್  ಅರ್ಪಿಸುತ//

 

ಕೆಂಡದ ರಾಶಿಯಲಿ ಹಾಯುವ  ಎತ್ತುಗಳು

ಭೋಗಿಯ ಅವಸರದಿ ಸುಡುವ ವಸ್ತುಗಳು/

ಸುಗ್ಗಿ-ಹುಗ್ಗಿ ಸಂಭ್ರಮ ಸಡಗರ

ಭೂಮಾತೆಯ ಹರಸೆಂದು ಬೇಡುವ ಅವಸರ//

 

ಪುಣ್ಯ ಪರ್ವ ಕಾಲದ ಹೊಂಬಿಸಿಲು

ಬದಲಾವಣೆಯ ನವಗಾಳಿ ಬೀಸಲು/

ರವಿತೇಜನ ಭರವಸೆಯ ಹೆಜ್ಜೆಗಳು

ಮನುಜ ಕುಲವ ಬೆಳಗುವ ಜ್ಯೋತಿಗಳು//

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್