ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮುದ್ರಣ: ಮಾರ್ಚ್ ೨೦೧೬

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ‘ಪಶ್ಚಿಮ ಘಟ್ಟ ಅಪರೂಪದ ಪ್ರಕೃತಿ ಸಂಪತ್ತು. ವಿಸ್ಮಯದ ಗೂಡು. ಅದನ್ನಷ್ಟು ಕಳೆದುಕೊಂಡರೆ ನಮಗೆ ಮತ್ತೇನೂ ಇಲ್ಲ. ಇಂದಿನ ತೆವಲಿಗೆ ನಾವು ಅದರ ಬೆಲೆಯೇ ತಿಳಿಯದೆ ಸೂರೆ ಮಾಡುತ್ತಿದ್ದೇವೆ. ಇಂಚಿಂಚಾಗಿ ಅರಣ್ಯ ನಾಶವಾಗುತ್ತಿದೆ. ಅದನ್ನು ಉಳಿಸಿ ಅದರ ಲಾಭ ಪಡೆಯಲು ತಿಳಿಯದ ನಮಗೆ ಅದರ ನಾಶದ ಬಗೆ ಮಾತ್ರ ಚೆನ್ನಾಗಿ ತಿಳಿದಿದೆ. ಆನೆಗಳಂತಹ ಕಾಡುಪ್ರಾಣಿಗಳು ನೆಲೆ ಇಲ್ಲದೆ ಊರಿಗೆ ದಾಳಿ ಮಾಡುತ್ತವೆ’. ಎಂದು ಪುಸ್ತಕದ ಮುನ್ನುಡಿಯಲ್ಲಿ ಲೇಖಕರು ತಮ್ಮ ಮನದಾಳವನ್ನು ಬಿಚ್ಚಿಡುತ್ತಾರೆ.

ಹಾಗೇ ಮುಂದುವರೆಯುತ್ತಾ ‘ ಪ್ರಾಮಾಣಿಕನಾದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರಾದೃಷ್ಟ ಸನ್ನಿವೇಶ ಯಾಕೆ ನಿರ್ಮಾಣವಾಗುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲಬಹುದು ಎನ್ನುವುದು ಹಳ್ಳಿಯ ಅದರಲ್ಲೂ ಮಲೆನಾಡಿನ ತಪ್ಪಲಿನಲ್ಲೇ ಮೂವತ್ತೈದು ವರ್ಷ ರೈತನಾಗಿ ಬದುಕು ಸಾಗಿಸಿದ ನನ್ನ ಅಭಿಪ್ರಾಯ. ಅಲ್ಲಿಯ ಕಷ್ಟ ನಷ್ಟಗಳೇನುಎನ್ನುವುದನ್ನೂ ರಸ್ತೆ, ವಿದ್ಯುತ್, ಆಸ್ಪತ್ರೆ ಇತ್ಯಾದಿ ಮೂಲ ಸೌಕರ್ಯಗಳೇ ಇಲ್ಲದ ಮಲೆನಾಡಿನ ಸಮಸ್ಯೆಗಳನ್ನೂ ಅನುಭವಿಸಿಯೇ ಅರಿತಿದ್ದೇನೆ.’ ಎಂದು ನೈಜ ಚಿತ್ರಣವನ್ನು ಓದುಗರಿಗೆ ಹೇಳುತ್ತಾ ಹೋಗುತ್ತಾರೆ.

ಗಿರಿಮನೆ ಶ್ಯಾಮರಾವ್ ಹೇಳುವಂತೆ ಇದು ವಾಸ್ತವದ ಹಿನ್ನಲೆಯ ಕಾಲ್ಪನಿಕ ಕಾದಂಬರಿ. ಸಂಯುಕ್ತ ಕರ್ನಾಟಕದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಮೊದಲು ವಸಂತ ಪ್ರಕಾಶದಲ್ಲಿ ಕೃತಿರೂಪ ಪಡೆದು ಈಗ ಪರಿಷ್ಕೃತವಾಗಿ ಅವರದ್ದೇ ಆದ ಗಿರಿಮನೆ ಪ್ರಕಾಶನದಲ್ಲಿ ಪ್ರಕಟಗೊಂಡಿದೆ. 

೧೬೦ ಪುಟಗಳ ಈ ಕಾದಂಬರಿಯನ್ನು ಗಿರಿಮನೆ ಶ್ಯಾಮರಾವ್ ಅವರು 'ಅನ್ನದಾತ ರೈತನಿಗೆ' ಅರ್ಪಿಸಿದ್ದಾರೆ. ಮಲೆನಾಡಿನ ದೃಶ್ಯವನ್ನು ಮುಖಪುಟದಲ್ಲೇ ಶಂಭುರಿತ್ತಿಯವರು ತಮ್ಮ ಸುಂದರ ವಿನ್ಯಾಸದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.