ಪಾದಚಾರಿಗಳಿಗೆ ಬೆಂಗಳೂರು ಕ್ಷೇಮವಲ್ಲ !
ಯಾವುದೇ ನಗರದ ಅಭಿವೃದ್ಧಿಯನ್ನು ಅಲ್ಲಿ ಹಾದು ಹೋಗುವ ಚೆಂದದ ರಸ್ತೆ, ಹೆದ್ದಾರಿಗಳನ್ನು ನೋಡಿ ಅಳೆಯುವುದು ಸಮಾಜದಲ್ಲಿ ರೂಢಿಗತವಾಗಿದೆ. ಆದರೆ, ಅಭಿವೃದ್ಧಿ ಮೀಮಾಂಸಕರ ವ್ಯಾಖ್ಯಾನವೇ ಬೇರೆ “ಮಹಾನಗರದ ಅಭಿವೃದ್ಧಿ ಎನ್ನುವುದು ಅಲ್ಲಿನ ರಸ್ತೆಗಳಲ್ಲಿ ಹಾದುಹೋಗುವ ವಾಹನಗಳ ಲೆಕ್ಕವನ್ನಷ್ಟೇ ಆಧರಿಸಿರುವುದಿಲ್ಲ. ಆ ಮಾಗ್ರದಲ್ಲಿ ಹಾದು ಹೋಗುವ ಪಾದಚಾರಿ ಎಷ್ಟು ಸುರಕ್ಷಿತ ಎನ್ನುವುದನ್ನು ಅದು ಪರಿಗಣಿಸಿರುತ್ತದೆ.” ಎಂದು ಹೇಳುತ್ತಾರೆ. ತಜ್ಞರ ಈ ಮಾತು ರಾಜಧಾನಿ ಬೆಂಗಳೂರಿನ ರಸ್ತೆಗಳ ಸ್ಥಿತಿಗೆ ಹಿಡಿದ ಕನ್ನಡಿ.
ಮಹಾನಗರದಲ್ಲಿ ಕೆಲವು ವಾಹನ ಸವಾರರ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಪರಿಣಾಮ ಒಂದೇ ತಿಂಗಳಲ್ಲಿ ೩೫ ಪಾದಚಾರಿಗಳು ಜೀವ ಕಳೆದುಕೊಂಡಿರುವುದು ದುಃಖದಾಯಕ ಬೆಳವಣಿಗೆ. ಜನವರಿ ಮಾಸದಲ್ಲಿ ದಾಖಲಾದ ೪೩೩ ಅಪಘಾತ ಪ್ರಕರಣಗಳನ್ನು ಅವಲೋಕಿಸಿದಾಗ ೨೫ ಪಾದಚಾರಿಗಳು ಮೃತಪಟ್ಟು. ೮೮ ಮಂದಿಗೆ ಗಂಭೀರ ಗಾಯವಾದ ಮಾಹಿತಿ ಬಹಿರಂಗವಾಗಿದೆ. ಒಟ್ಟಾರೆ ಈ ಅಂಕಿ ಅಂಶಗಳು ಪಾದಚಾರಿಗಳಿಗೆ ಬೆಂಗಳೂರಿನ ರಸ್ತೆಗಳು ಸುರಕ್ಷಿತವಲ್ಲ ಎಂಬ ಆತಂಕಕಾರಿ ಸಂದೇಶ ರವಾನಿಸಿದೆ.
ಬೆಂಗಳೂರು ಎಂದಾಕ್ಷಣ ಬಹುತೇಕರಿಗೆ ಇಲ್ಲಿನ ಟ್ರಾಫಿಕ್ ಕಣ್ಮುಂದೆ ಬರುತ್ತದೆ. ಅಂಥ ಟ್ರಾಫಿಕ್ ರಸ್ತೆ ದಾಟುವುದು ಹೇಗಪ್ಪಾ ಎನ್ನುವ ಚಿಂತೆಯೂ ಆ ಕಲ್ಪನೆಯ ಬೆನ್ನೇರಿರುತ್ತದೆ. ಇದು ವಾಸ್ತವ ಕೂಡ. ಬೈಕ್ ನಲ್ಲಿ ಅಥವಾ ಕಾರಿನಲ್ಲಿ ಕುಳಿತಾಗ, ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡುತ್ತಿರುವ ದೃಶ್ಯಗಳು ಪ್ರತಿ ಮಾರ್ಗಗಳಲ್ಲೂ ಸಾಮಾನ್ಯ ಎಂಬಂತಾಗಿದೆ. ಎಷ್ಟೋ ರಸ್ತೆಗಳಿಗೆ ಸರಿಯಾದ ಫುಟ್ ಪಾತ್ ಗಳಿಲ್ಲ, ಒಳರಸ್ತೆಗಳ ಸ್ಥಿತಿಯಂತೂ ಕೇಳುವುದೇ ಬೇಡ. ರಸ್ತೆಯಲ್ಲೇ ತುಸು ಜಾಗ ಮಾಡಿಕೊಂಡು ನಡೆಯುವ ದುಸ್ಥಿತಿ ಪಾದಚಾರಿಗಳಿಗಿದೆ.
ರಸ್ತೆ ನಿರ್ಮಿಸುವಾಗ ಪಾದಚಾರಿಗಳ ಸುರಕ್ಷ್ತೆಯನ್ನು ಗಮನದಲ್ಲಿಟ್ಟುಕೊಳ್ಳದೆ ಅವೈಜ್ಞಾನಿಕವಾಗಿ ಕಾಮಗಾರಿ ರೂಪಿಸಿದರೆ ಯಾವುದೇ ನಗರ ಇಂಥ ಅಧ್ವಾನಗಳಿಗೆ ಮುಖಾಮುಖಿ ಆಗಲೇ ಬೇಕಾಗುತ್ತದೆ. ಈ ವೇಳೆ ನಾವು ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಅಭಿವೃದ್ಧಿ ನೀತಿಗಳನ್ನು ಸ್ಮರಿಸಿಕೊಳ್ಳಲೇಬೇಕಿದೆ. ನೂರು ವರ್ಷಗಳ ಹಿಂದೆ, ಅಂದರೆ ೧೯೨೦ರ ವೇಳೆಯಲ್ಲೇ ಅವರು ೧೦೦ ಅಡಿ ರಸ್ತೆ ನಿರ್ಮಿಸುವಾಗ ಇಕ್ಕೆಲಗಳಲ್ಲಿ ೨೦ ಅಡಿಗಳನ್ನು ಫುಟ್ ಪಾತ್ ಗೆ ಮೀಸಲಿಡಲು ಸೂಚಿಸಿದ್ದರು. ಮಹಾರಾಜರ ಸಾರೋಟುಗಳು, ಕಾರುಗಳು ರಸ್ತೆಗಳಲ್ಲಿ ಸ್ವಚ್ಛಂದವಾಗಿ ಓಡಾಡುವಂತೆ, ಶ್ರೀಸಾಮಾನ್ಯ ಕೂಡ ಫುಟ್ ಪಾತ್ ನಲ್ಲಿ ನಿರ್ಭೀತನಾಗಿ ವಿಹರಿಸಬೇಕು ಎನ್ನುವುದು ದೊರೆಯ ಕಲ್ಪನೆ. ಆಧುನಿಕ ಅಭಿವೃದ್ಧಿ ಹರಿಕಾರರಿಗೆ ಇದು ಮಾದರಿ ಪಾಠವೂ ಹೌದು.
ಈ ಅರಿವು ಇಲ್ಲದೆ ಹೋದರೆ ಶಂಕರ್ ನಾಗ್ ಅವರ ‘ಆಕ್ಸಿಡೆಂಟ್’ ನಂಥ ಸಿನೆಮಾದ ದೃಶ್ಯಗಳು ಅಕ್ಕಪಕ್ಕದಲ್ಲೇ ವಾಸ್ತವಗೊಳ್ಳುವ ಪ್ರಸಂಗಗಳು ಹೆಚ್ಚಾಗಲೂ ಬಹುದು. ರಸ್ತೆ ಎನ್ನುವುದು ಈ ವ್ಯವಸ್ಥೆ ನಮಗೆ ನೀಡಿರುವ ಸೌಲಭ್ಯ. ವಾಹನ ಏರಿದವರಿಗೆ ಅದನ್ನು ಬಳಸಿಕೊಳ್ಳಲು ಎಷ್ಟು ಹಕ್ಕಿದೆಯೋ, ಪಾದಚಾರಿಗೂ ಅಷ್ಟೇ ಹಕ್ಕಿರುತ್ತದೆ. ಇಲ್ಲಿ ಎಲ್ಲರ ಜೀವಗಳಿಗೂ ಬೆಲೆ ಇದೆ ಎನ್ನುವುದೇ ಅಂತಿಮ ಸತ್ಯ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೫-೦೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ