ಪಾರಂಪರಿಕ ಜ್ನಾನದ ಉಳಿವಿಗೆ ಮನೆಮದ್ದು ಶಿಬಿರ

ಪಾರಂಪರಿಕ ಜ್ನಾನದ ಉಳಿವಿಗೆ ಮನೆಮದ್ದು ಶಿಬಿರ

ಮಕ್ಕಳ ಆರೋಗ್ಯ ಸ್ವಲ್ಪ ಹೆಚ್ಚುಕಡಿಮೆಯಾದರೂ, ಈಗ ತಂದೆತಾಯಿ ಧಾವಿಸುವುದು ಆಲೋಪಥಿ ವೈದ್ಯರ ದವಾಖಾನೆಗೆ. ಮನೆಯ ವಯಸ್ಕರಿಗೆ ಮತ್ತು ವೃದ್ಧರಿಗೆ ಅನಾರೋಗ್ಯ ಆದಾಗಲೂ ಇದೇ ಅಭ್ಯಾಸ. ಆಲೋಪಥಿ ಡಾಕ್ಟರು ಅನಾರೋಗ್ಯ ನಿವಾರಣೆಗೆ ಕೊಡುವುದು ರಾಸಾಯನಿಕ ಔಷಧಿಗಳನ್ನು. ಅವುಗಳ ಬಳಕೆಯಿಂದ ಹಲವಾರು ಅಡ್ಡಪರಿಣಾಮಗಳು. ಇವುಗಳ ಶಮನಕ್ಕೆ ಇನ್ನಷ್ಟು ರಾಸಾಯನಿಕ ಔಷಧಿಗಳ ಬಳಕೆ. ಅಂತೂ ಈ ವಿಷವರ್ತುಲದ ಸುಳಿಯಲ್ಲಿ ಹೆಚ್ಚೆಚ್ಚು ಜನರು ಸಿಕ್ಕಿ ಬೀಳುತ್ತಿದ್ದಾರೆ. ಶತಮಾನದ ಮುಂಚೆ ನಮ್ಮ ದೇಶದಲ್ಲಿ ರಾಸಾಯನಿಕ ಔಷಧಿಗಳು ಬಳಕೆಯಲ್ಲಿ ಇರಲಿಲ್ಲ. ಆಗ ಮನೆಮನೆಯಲ್ಲಿ ಅನಾರೋಗ್ಯ ನಿವಾರಣೆಗೆ "ಮನೆಮದ್ದು" ಬಳಕೆ. ಉಪ್ಪು, ಜೇನುತುಪ್ಪ, ಬೆಲ್ಲ, ಬೆಳ್ಳುಳ್ಳಿ, ನೀರುಳ್ಳಿ, ಏಲಕ್ಕಿ, ಲವಂಗ, ಅರಿಶಿನ, ಇಂಗು, ಮೆಣಸು, ಕರಿಮೆಣಸು, ಶುಂಠಿ, ಕೊತ್ತಂಬರಿ, ಜೀರಿಗೆ, ಓಮ ಇತ್ಯಾದಿ ಸಾಂಬಾರ ಪದಾರ್ಥಗಳು ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ತುಳಸಿ, ಪುದಿನ, ದೊಡ್ಡಪತ್ರೆ (ಸಾಂಬಾರ ಬಳ್ಳಿ), ಆಡುಸೋಗೆ, ನೆಲ್ಲಿ, ನೆಲನೆಲ್ಲಿ, ಎಕ್ಕ, ಲೋಳೆಸರ, ಬೇವು ಇತ್ಯಾದಿ ಸೊಪ್ಪು, ನಾರುಬೇರುಗಳು - ಇವು ಮನೆಮಂದಿಯ ಆರೋಗ್ಯ ರಕ್ಷಣೆಗೆ ಔಷಧಿಯಾಗಿ ಉಪಯೋಗ. ಇವುಗಳ ಸೂಕ್ತ ಬಳಕೆಯಿಂದ ಕೆಮ್ಮು, ಜ್ವರ, ವಾಂತಿ, ಭೇದಿ, ಅಜೀರ್ಣ, ತಲೆನೋವು, ಹೊಟ್ಟೆನೋವು, ಮೈಕೈ ನೋವು ಇಂತಹ ಅನಾರೋಗ್ಯ ಲಕ್ಷಣಗಳನ್ನು ಅಜ್ಜ-ಅಜ್ಜಿಯರು ತಮ್ಮ ಅನುಭವ ಆಧಾರಿತ ಮನೆಮದ್ದು ನೀಡಿ ಗುಣಪಡಿಸುತ್ತಿದ್ದರು. ಅಳಿದು ಹೋಗುತ್ತಿರುವ ಈ ಪಾರಂಪರಿಕ ಜ್ನಾನವನ್ನು ನಮ್ಮ ಮುಂದಿನ ತಲೆಮಾರುಗಳಿಗಾಗಿ ಉಳಿಸಬೇಕಾಗಿದೆ. ಅದಕ್ಕಾಗಿಯೇ, ಮಂಗಳೂರಿನ ಪ್ರಕೃತಿ ಫುಡ್ಸ್ ಮತ್ತು ಶ್ರೀ ಭಾರತೀ ಸಮೂಹ ಸಂಸ್ಥೆಗಳು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದಲ್ಲಿ ೨೨ ಫೆಬ್ರವರಿ ೨೦೧೭ರಿಂದ ನಾಲ್ಕು ದಿನಗಳ "ಮನೆಮದ್ದು ಶಿಬಿರ”ವನ್ನು ಏರ್ಪಡಿಸಿದ್ದವು. ಮಂಗಳೂರಿನ ನಂತೂರಿನ ಶ್ರೀ ಭಾರತೀ ವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ಈ ಶಿಬಿರವನ್ನು ನಡೆಸಿ ಕೊಟ್ಟವರು ಮೈಸೂರಿನ ಆಯುರ್ವೇದ ವೈದ್ಯ ಡಾ. ಟಿ. ಎನ್. ಮಂಜುನಾಥ್. ಮನೆಮದ್ದಿನ ಪರಿಭಾಷೆಯಿಂದ ಶುರು ಮಾಡಿ ಆರೋಗ್ಯವಂತನ ಲಕ್ಷಣಗಳ ವರೆಗೆ ಆರೋಗ್ಯ ಹಾಗೂ ಅದರ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಸರಳವಾಗಿ ವಿವರಿಸಿದರು. ಶಿಬಿರದಲ್ಲಿ ಇತರ ಸಂಪನ್ಮೂಲ ವ್ಯಕ್ತಿಗಳೂ ಉಪಯುಕ್ತ ಮಾಹಿತಿ ನೀಡಿದರು: ಸರ್ಪಸುತ್ತಿನ ಔಷಧಿ ಬಗ್ಗೆ ಲಕ್ಷ್ಮಣ್ ಅಡ್ಡೂರು, ಕೊಡಿ ಮರ್ದ್ ಬಗ್ಗೆ ದಯಾನಂದ್ ಕತ್ತಲ್ ಸಾರ್, ನಾವು ಸೇವಿಸುವ ಆಹಾರ ಹೇಗಿರಬೇಕು ಎಂಬ ಬಗ್ಗೆ ಡಾ. ಸಚಿನ್ ನಡ್ಕ, ದಿನನಿತ್ಯ ನಾವು ಸೇವಿಸುವ ವಿಷಗಳ ಬಗ್ಗೆ ಮಾಧವ ಕಲ್ಯಾಣಿ, ಆಹಾರ - ಶರೀರ - ಮನಸ್ಸು ಬಗ್ಗೆ ಹರೀಶ್ ಶೆಟ್ಟಿ. ಈ ಶಿಬಿರದ ಮೂರನೇ ದಿನ ಮನೆಮದ್ದು ತಯಾರಿ ಬಗ್ಗೆ ಎಲ್ಲ ೪೨ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ್ದು ವಿಶೇಷ. ಅವರನ್ನು ತಂಡಗಳಾಗಿ ವಿಭಾಗಿಸಿ, ಪ್ರತಿಯೊಂದು ತಂಡದಿಂದಲೂ ಒಂದು ಮನೆಮದ್ದು ತಯಾರಿಯ ವ್ಯವಸ್ಥೆ ಮಾಡಲಾಗಿತ್ತು: ಶೀತ ನೆಗಡಿ ಚಿಕಿತ್ಸೆಗೆ ಸಿತೊಫಲಾದಿ ಚೂರ್ಣ, ಅಜೀರ್ಣದ ಸಮಸ್ಯೆಗಳ ಚಿಕಿತ್ಸೆಗೆ ಹಿಂಗ್ವಾಷ್ಟಕ ಚೂರ್ಣ, ಶೀತ ನೆಗಡಿ ಎಲರ್ಜಿ ಚಿಕಿತ್ಸೆಗೆ ಹರಿದ್ರಾ ಖಂಡ, ನೋವು ಶಮನಕ್ಕೆ ವೇದನಾಹರ ತೈಲ, ಬೇವಿನಿಂದ ತಯಾರಿಸಿದ ಚರ್ಮರೋಗ ಚಿಕಿತ್ಸಾ ತೈಲ. ಇವನ್ನು ತಯಾರಿಸಿದ ಶಿಬಿರಾರ್ಥಿಗಳು ಇವುಗಳ ಚಿಕಿತ್ಸಾ ವಿಧಾನಗಳನ್ನೂ ತಿಳಿದುಕೊಂಡರು. ಮನೆಮದ್ದು ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳನ್ನು ಮೂಲಿಕಾ ವನಗಳಿಗೆ ಕರೆದೊಯ್ಯಲಾಯಿತು: ಮಂಗಳೂರಿನಿಂದ ೧೨ ಕಿಮೀ ದೂರದ ಪಿಲಿಕುಳ ನಿಸರ್ಗಧಾಮದ ಮೂಲಿಕಾ ವನಕ್ಕೆ ಮತ್ತು ೪೫ ಕಿಮೀ ದೂರದ  ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಕಾಲೇಜಿನ ಮೂಲಿಕಾ ವನಕ್ಕೆ. ಅಲ್ಲಿ ಅನೇಕ ಔಷದೀಯ ಸಸ್ಯಗಳನ್ನು ತೋರಿಸಿ ಅವುಗಳ ವಿವಿಧ ಔಷಧೀಯ ಗುಣಗಳ ಬಗ್ಗೆ ವಿವರಣೆ ನೀಡಲಾಯಿತು. ಮನೆಮದ್ದು ಶಿಬಿರದ ಉದ್ದೇಶ ಆಲೋಪಥಿ ಔಷಧಿ ಪದ್ಧತಿಯನ್ನು ವಿರೋಧಿಸುವುದು ಅಲ್ಲ. ಆದರೆ, ಆಲೋಪಥಿ ಆಸ್ಪತ್ರೆಗೆ ಹೋದ ತಕ್ಷಣ 'ನಿಮಗೆ ಮೆಡಿಕಲ್ ಇನ್ಸೂರೆನ್ಸ್ ಇದೆಯೇ?” ಎಂದು ಕೇಳಿ, ಇನ್ಸೂರೆನ್ಸ್ ಇದ್ದವರಿಗೆ ಇಲ್ಲಸಲ್ಲದ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿ ಹಣ ಕೀಳುವುದು, ಆಪರೇಷನ್ ಅಗತ್ಯವಿಲ್ಲದಿದ್ದರೂ ಆಪರೇಷನ್ ಮಾಡುವುದು, ದುಷ್ಪರಿಣಾಮ ಬೀರುವ ರಾಸಾಯನಿಕ ಔಷಧಿಗಳನ್ನು ಮತ್ತೆಮತ್ತೆ ನೀಡುವುದು, ಸಣ್ಣಪುಟ್ಟ ಕಾರಣಗಳಿಗಾಗಿ ರೋಗಿಗಳನ್ನು ಐಸಿಯುನಲ್ಲಿಟ್ಟು ಹಲವು ಪಟ್ಟು ಜಾಸ್ತಿ ಬಿಲ್ ಮಾಡಿ ಹಣ ಸುಲಿಯುವುದು - ಇಂತಹ ಅಪ್ರಾಮಾಣಿಕ ಕ್ರಮಗಳಿಂದ ಪಾರಾಗಲಿಕ್ಕಾಗಿ ನಮ್ಮ ಪಾರಂಪರಿಕ ಜ್ನಾನಾಧಾರಿತ ದಾರಿಯೊಂದನ್ನು ತೋರಿಸುವುದು. ಈ ಶಿಬಿರದಿಂದಾಗಿ ಆರೋಗ್ಯ ರಕ್ಷಣೆಯಲ್ಲಿ ಮನೆಮದ್ದು ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವ ಅರಿತು ಜಾಗೃತರಾಗಲು ಶಿಬಿರಾರ್ಥಿಗಳಿಗೆ ಸಾಧ್ಯವಾಯಿತು.