ಪಾರಿವಾಳಗಳು (ಲಲಿತ ಪ್ರಬಂಧಗಳು)

ಪಾರಿವಾಳಗಳು (ಲಲಿತ ಪ್ರಬಂಧಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಸ್ವ-ಪ್ರಕಾಶನ, ಮಲ್ಲೇಶಪಾಳ್ಯ, ಬೆಂಗಳೂರು- ೫೬೦ ೦೭೫
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೧೮

‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ. ಈಗಾಗಲೇ ಅವರು ಬಿಟ್ ಕಾಯಿನ್ ಬಗ್ಗೆ ಬರೆದ ‘ನಿಗೂಢ ನಾಣ್ಯ' ಮತ್ತು ‘ಹುಲಿವೇಷ’ ಎಂಬ ಕಥಾ ಸಂಕಲನವನ್ನು ಓದಿ, ಮಾಹಿತಿ ಹಂಚಿಕೊಂಡಿರುವುದರಿಂದ ಅವರ ಮೊದಲ ಪುಸ್ತಕ ಹೇಗಿರಬಹುದು? ಎಂಬುವುದರ ಬಗ್ಗೆ ಕೊಂಚ ಕುತೂಹಲವಿತ್ತು. ಆದರೆ ಪುಸ್ತಕದ ಪುಟಗಳನ್ನು ತೆರೆದು ಓದುತ್ತಾ ಹೋದಂತೆ ಇದು ನನ್ನದೂ ಕತೆಯಲ್ವಾ, ನನಗೂ ಹೀಗೇ ಆಗಿದೆಯಲ್ಲಾ, ವಿದೇಶಕ್ಕೆ ಹೋದರೆ ಹೀಗೂ ಪೀಕಲಾಟವಾಗುತ್ತಾ? ಎಂದೆಲ್ಲಾ ಅನಿಸಿ ಬಹಳ ಆಪ್ತವೆನಿಸಿತು. ಒಂದೆರಡು ಗಂಟೆಯ ಒಳಗೆ ಆ ಪುಸ್ತಕದ ಎಲ್ಲಾ ೧೨ ಲಲಿತ ಪ್ರಬಂಧಗಳನ್ನು ಓದಿ ಮುಗಿಸಿದೆ.

ವಿಠಲ್ ಶೆಣೈ ಅವರು ತಮ್ಮ ‘ನನ್ನುಡಿ'ಯಲ್ಲಿ ಬರೆದಂತೆ ‘ಕಥೆ ಮತ್ತು ಪ್ರಬಂಧಗಳನ್ನು ಬರೆಯುವ ಹವ್ಯಾಸ ನನಗೆ ಚಿಕ್ಕಂದಿನಿಂದಲೂ ಇತ್ತು. ಆದರೆ ಈ ಚಟವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸುಮಾರು ೭-೮ ವರ್ಷಗಳಿಂದ ಸಣ್ಣ-ಪುಟ್ಟ ಪ್ರಬಂಧಗಳನ್ನು ಹಾಸ್ಯಪ್ರಜ್ಞೆ ಇಟ್ಟುಕೊಂಡು ಗಂಭೀರವಾಗಿ ಬರೆಯಲಾರಂಭಿಸಿದೆ. ನಾನು ಬರೆದ ಪ್ರಬಂಧಗಳು ಪ್ರಶಸ್ತಿಗಳನ್ನು ಪಡೆಯುವಂತದ್ದು ಅಂತ ನಾನು ಹೇಳಿಲ್ಲ.’

ಎಲ್ಲಾ ಪ್ರಬಂಧಗಳು ನನ್ನ ನಿಜ ಜೀವನದಲ್ಲಾದ ಘಟನೆಗಳ ಮೇಲೆ ಬರೆದಿದ್ದೇನೆ. ಆದರೆ ಹಾಸ್ಯ ಮತ್ತು ಕಥಾರೂಪ ತರಲು ಸ್ವಲ್ಪ ಕಡೆ ಸರಿಹೊಂದಿಸಿದ್ದೇನೆ. ಪ್ರಬಂಧದಲ್ಲಿ ಬರುವ ಪಾತ್ರಗಳ ಹೆಸರು ಬದಲಿಸಿದ್ದೇನೆ.’ ಎಂದು ಬರೆದಿದ್ದಾರೆ. ಪುಸ್ತಕದಲ್ಲಿ ಇರುವ ಎಲ್ಲಾ ೧೨ ಪ್ರಬಂಧಗಳು ಸರಳ ಪದಗಳಲ್ಲಿ, ನೈಜ ಸನ್ನಿವೇಷದ ಹಿನ್ನಲೆಯಲ್ಲಿ ಬರೆದಿರುವುದರಿಂದ ಯಾಕೋ ತುಂಬಾನೇ ಆಪ್ತವೆನಿಸುತ್ತದೆ. ಕೆಲವು ಕಡೆ ಸಾಕಷ್ಟು ನಗೆಯೂ ಬರುತ್ತದೆ. 

ಮೊದಲ ಪ್ರಬಂಧವೇ ‘ಪಾರಿವಾಳಗಳು'. ಲೇಖಕರ ಮನೆಯ ಬಾಲ್ಕನಿಗೆ ಬರುವ ಪಾರಿವಾಳಗಳ ಬಗ್ಗೆ, ಅವು ಮಾಡುವ ಗಲೀಜು, ಅದರಿಂದ ಲಾಭ ಪಡೆದ ಕೆಲಸದಾಕೆ. ಮೊದಲಾದ ವಿವರಗಳು ಇವೆ. ಇಂತಹ ಘಟನೆಗಳು ಬಹಳ ಕಡೆ ನಡೆಯುವಂತದ್ದೇ. ಇದಕ್ಕೆ ಲೇಖಕರು ಹಾಸ್ಯವನ್ನು ಬೆರೆಸಿದ್ದಾರೆ. ಪಾರಿವಾಳದ ಕಾಟವನ್ನು ತಡೆಯಲು ಲೇಖಕರು ಅನುಸರಿಸಿದ ಹಲವಾರು ಉಪಾಯಗಳನ್ನು ನಾವೂ ಜೀವನದಲ್ಲಿ ಅನುಸರಿಸಿರುತ್ತೇವೆ. 

ಮುಂದಿನ ಪ್ರಬಂಧ ‘ ಶಾಲೆಗೆ ರೆಡಿ' ಇದು ಈಗಿನ ಪ್ರತಿಯೊಂದು ಮನೆಯ ಕತೆ. ಬೆಳಗಿನ ಸಮಯ ಮಗುವನ್ನು ಶಾಲೆಗೆ ಹೊರಡಿಸುವ ಆತುರವಿದೆಯಲ್ಲಾ ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆದರೂ ಲೇಖಕರು ತಮ್ಮ ಹಾಸ್ಯ ಮಾತುಗಳಲ್ಲಿ ಹೇಳಲು ಹೊರಟಿರುವುದು ಅವರ ಹೆಗ್ಗಳಿಕೆಯೇ ಸರಿ. ಅವರು ತಮ್ಮ ಮಗನನ್ನು ಆರು ಗಂಟೆಗೆ ಎಬ್ಬಿಸಿ, ಹಲ್ಲುಜ್ಜಿಸಿ ಸಾಫ್ಟ್ ವೇರ್ ಪ್ರಾಜೆಕ್ಟ್ ನಂತೆ (ಅವರೇ ಬರೆದಿರುವಂತೆ) ನಿರ್ದಿಷ್ಟ ಸಮಯಕ್ಕೆ ಹೊಂದಿಸಿಕೊಂಡು ತಯಾರು ಮಾಡಿಸಿ ಶಾಲಾ ವಾಹನಕ್ಕೆ ಬಿಟ್ಟು ಬರುವುದನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಹಾಗೆಯೇ ಮುಂದಿನ ‘ಪತ್ರ ಬರೆಯಲಾ’ ಹಾಗೂ 'ಭಾನುವಾರದ ಪಟ್ಟಿ' ಪ್ರಬಂಧಗಳೂ ಸೊಗಸಾಗಿದೆ.

ಆದರೆ ‘ಗ್ಯಾಸ್ ಪ್ರಾಬ್ಲಂ’ ಎಂಬ ಪ್ರಬಂಧವಂತೂ ಪ್ರತಿಯೊಬ್ಬ ಗ್ಯಾಸ್ ಬಳಕೆದಾರರು ಅವರ ಜೀವಮಾನದಲ್ಲಿ ಒಂದಲ್ಲಾ ಒಂದು ದಿನ ಅನುಭವಿಸಿದ ಕಥನವೇ. ಇದು ನಿಜಕ್ಕೂ ಗಂಭೀರ ಕಥೆಯಾಗುವ ವಸ್ತು. ಆದರೆ ಲೇಖಕರು ತಮ್ಮ ಹಾಸ್ಯ ಪ್ರಜ್ಞೆಯನ್ನು ಬಳಸಿ ಇದನ್ನು ಸೊಗಸಾಗಿ ರೂಪಿಸಿದ್ದಾರೆ. ಲೇಖಕರು ಮನೆ ಬದಲಾಯಿಸುವ ಸಮಯದಲ್ಲಿ ಗ್ಯಾಸ್ ಕನೆಕ್ಷನ್ ಬದಲಾಯಿಸಲು ಏಜೆನ್ಸಿಗೆ ಹೋದಾಗ ಅವರು ಅನುಭವಿಸಿದ ಕಿರಿಕಿರಿಯ ಒಂದು ಝಲಕ್ ಇಲ್ಲಿದೆ ನೋಡಿ. 

'ಹದಿನೈದು ನಿಮಿಷ ತಾಳ್ಮೆಯಿಂದ ಲೈನಿನಲ್ಲಿ ನಿಂತು ಕೊನೆಗೂ ನನ್ನ ಸರದಿ ಬಂತು. ಅಲ್ಲಿ ಬರುವವರೆಲ್ಲಾ ಆಧಾರ್ ಕಾರ್ಡ್ ಕೊಡಲು ಬಂದಿದ್ದರಿಂದ ಕೂತಿದ್ದ ಆಫೀಸರ್ ನನ್ನತ್ತ ನೋಡಿ, 

“ಕೊಡಿ ಆಧಾರ್ ಕಾರ್ಡ್" ಎಂದು ನನ್ನ ಕಡೆ ತಿರಸ್ಕೃತ ಮುಖದಿಂದ ನೋಡಿದ.

"ಅಡ್ರೆಸ್ ಚೇಂಚ್, ಆಧಾರ್ ಕಾರ್ಡ್ ಅಲ್ಲ." ಎಂದೆ ಬೆಳಿಗ್ಗೆಯಿಂದ ಒಂದೇ ಕೆಲಸ ಮಾಡಿ ಕೂತಿದ್ದ ಅವನಿಗೆ ಹೊಸ ಕೆಲಸ ಬಂದದ್ದು ಸ್ವಲ್ಪ ಖುಷಿ ಕೊಟ್ಟಿತ್ತೇನೋ? ನಾನು ಅವನಿಗೆ ಎಲ್ಲಾ ವಿವರಿಸಿದೆ.

“ಏನ್ ಸಾರ್, ಇಡೀ ಊರಿನ ಜನ ವೈಟ್ ಫೀಲ್ಡ್ ಗೆ ಬಂದರೆ ನೀವು ವೈಟ್ ಫೀಲ್ಡ್ ಬಿಟ್ಟು ಹೋಗುತ್ತೀರಾ?” ಅಂತ ಕೇಳಿದ.

“ನಿಮಗೆ ಅರ್ಥವಾಗಲ್ಲ ಬಿಡಿ.” ಅಂದೆ.

“ನಿಮ್ಮಿಷ್ಟ ಸರ್, ಇಂದಿರಾನಗರ ತಾನೇ? “ ಅಂತ ಮತ್ತೆ ಖಾತ್ರಿ ಪಡಿಸಿದ. ನಾನು ತಲೆ ಅಲ್ಲಾಡಿಸಿ ಹೂಂ ಅಂದೆ.

“ಅಡ್ರೆಸ್ ಪ್ರೂಫ್ ಇದೆಯಾ?” ಅಂತ ಕೇಳಿದ. ನಾನು ಮತ್ತೆ ಹೂಂ ಅಂತ ತಲೆ ಅಲ್ಲಾಡಿಸಿದೆ. 

"ರೆಗ್ಯೂಲೇಟರ್ ಕೊಡಿ.” ಅಂತ ಕೇಳಿದ. ನಾನು ಅದನ್ನು ತಂದಿರಲಿಲ್ಲ.

“ರೆಗ್ಯೂಲೇಟರ್ ಯಾಕೆ ಬೇಕು?” ಅಂತ ಮರು ಪ್ರಶ್ನೆ ಹಾಕಿದೆ.

“ಬೇಕು ಸರ್, ನಾವು ಅದನ್ನು ಚೆಕ್ ಮಾಡಿ ಕೊಡಬೇಕು"

“ರೆಗ್ಯೂಲೇಟರ್ ಸರಿಯಾಗಿಯೇ ಇದೆ “ ಅಂತ ಅವನಿಗೆ ಖಾತ್ರಿ ಪಡಿಸಿದೆ.

“ಸರಿ ಇರುವ ಪ್ರಶ್ನೆಯಲ್ಲ ಸರ್, ನಮ್ಮ ನಿಯಮಗಳನ್ನು ನಾವು ಪಾಲಿಸಬೇಕು. ದಯವಿಟ್ಟು ರೆಗ್ಯೂಲೇಟರ್ ತನ್ನಿ, ಅದಿಲ್ಲದೇ ಕೆಲಸವಾಗಲ್ಲ" ಅಂತ ನೆಟ್ಟಗೆ ಹೇಳಿಯೇ ಬಿಟ್ಟ. 

“ನೀವು ಮಿಕ್ಕಿದ ಡಾಕ್ಯುಮೆಂಟ್ ತಗೊಂಡು ಟ್ರಾನ್ಸ್ ಫರ್ ಶುರು ಮಾಡಿ, ನಾನು ನಾಳೆ ಬಂದು ರೆಗ್ಯುಲೇಟರ್ ಕೊಡುತ್ತೇನೆ" ಅಂತ ಹೇಳಿದೆ.

“ ಸರ್, ದಯವಿಟ್ಟು ಸಮಯ ವ್ಯರ್ಥ ಮಾಡಬೇಡಿ ! ಲೈನ್ ಎಷ್ಟು ದೊಡ್ಡದಿದೆ ನೋಡಿ?” ಅಂತ ತೋರಿಸಿದ. ನಾನು ತಿರುಗಿ ನೋಡಿದರೆ ಆಗಲೇ ತಾಳ್ಮೆ ಕೆಟ್ಟ ಒಂದಿಬ್ಬರು ನನ್ನನ್ನು ಆಚೆ ದಬ್ಬಲು ತಯಾರಿದ್ದಂತೆ ಕಾಣಿಸಿತು. ವಾಚ್ ನೋಡಿ ಸುಮ್ಮನೆ ಜಾಗ ಖಾಲಿ ಮಾಡಿದೆ.”

ಇದೊಂದು ಸಣ್ಣ ತುಣುಕು ಅಷ್ಟೇ. ಇದಕ್ಕಿಂತಲೂ ಮಜಾ ತರುವ ಹಲವಾರು ಸಂಗತಿಗಳು ಈ ಪುಸ್ತಕದಲ್ಲಿವೆ. ಲೇಖಕರ ವಿದೇಶಯಾನದ ಪ್ರಬಂಧಗಳಂತೂ ತುಂಬಾನೇ ಚೆನ್ನಾಗಿವೆ. ಡೆನ್ವರ್ ಎಂಬ ಊರಿಗೆ ಲೇಖಕರು ಕ್ಯಾಬ್ ಮಾಡಿಕೊಂಡು ತಮ್ಮ ಗೆಳೆಯರ ಜೊತೆಗೆ ಹೋಗುವ ಪ್ರಸಂಗ ಆಸಕ್ತಿದಾಯಕವಾಗಿದೆ. ಅಲ್ಲಿಯ ಪೋಲೀಸರ ವಿಧೇಯತೆ, ಕಾರ್ಯ ತತ್ಪರತೆ ಖುಷಿಕೊಡುತ್ತದೆ. ಲೇಖಕರು ಹಾಗೂ ಅವರ ಗೆಳೆಯರು ಅಮೇರಿಕಾದಲ್ಲಿ ಕಾರು ಡ್ರೈವಿಂಗ್ ಕಲಿತದ್ದು, ಅದರ ಅನುಭವಗಳು ಬಹಳವೇ ಸೊಗಸಾಗಿವೆ.

ಎಲ್ಲಕ್ಕಿಂತ ನನಗೆ ಖುಷಿಕೊಟ್ಟ ಪ್ರಬಂಧವೆಂದರೆ ‘ದಂತ ಕಥೆ'. ಇದನ್ನು ನೀವು ಎಲ್ಲರ ಕಥೆಯೂ ಹೌದು ಎನ್ನುವಷ್ಟು ಹಿತಕರವಾಗಿದೆ. ತೂತು ಬಿದ್ದ ಹಲ್ಲಿಗೆ ವ್ಯವಸ್ಥೆ ಮಾಡಿಸಲು ಹೋದ ಲೇಖಕರಿಗಾದ ಅನುಭವವು, ದಂತ ವೈದ್ಯರ ಬಳಿ ಹೋಗುವ ಎಲ್ಲರ ಅನುಭವಗಳೂ ಆಗಿರುತ್ತವೆ. ಹಲ್ಲಿನ ಅನುಭವದ ಕಥೆಗಳನ್ನು ಬರೆಯಲು ಹೋದರೆ ಕಾದಂಬರಿಯನ್ನೇ ಬರೆಯಬಹುದೇನೋ ಎಂದು ಕೊನೆಯಲ್ಲಿ ಲೇಖಕರು ಅನುಮಾನ ವ್ಯಕ್ತ ಪಡಿಸುತ್ತಾರೆ. ಕೆಲವು ದಂತ ವೈದ್ಯರ ಬಳಿ ಒಂದು ವಿಸಿಟ್ ಹೋದರೆ ಅವರು ನಮಗೆ ಪಂಚ ವಾರ್ಷಿಕ ಯೋಜನೆಯನ್ನೇ ಸಿದ್ಧ ಪಡಿಸುತ್ತಾರೆ ಎಂಬ ಮಾತು ಖಂಡಿತಕ್ಕೂ ನಿಜವೆನಿಸುತ್ತದೆ. 

ಉಳಿದಂತೆ ಕಾಣೆಯಾದ ಹುಡುಗ, ನೋ ಪಾರ್ಕಿಂಗ್, ಚಪ್ಪಲಿ ರಕ್ಷೆ ಮೊದಲಾದ ಪ್ರಬಂಧಗಳೂ ಸರಾಗವಾಗಿ, ಹಾಸ್ಯಮಯವಾಗಿ ಓದಿಸಿಕೊಂಡು ಹೋಗುತ್ತವೆ. ಯಾವುದಕ್ಕೂ ನೀವು ಮೊದಲು ಈ ಪುಸ್ತಕ ಓದುವ ಮನಸ್ಸು ಮಾಡಬೇಕಷ್ಟೇ. ಸರಳವಾದ ಮುಖಪುಟವನ್ನು ಹೊಂದಿರುವ ಸುಮಾರು ೧೦೦ ಪುಟಗಳ ಈ ಪುಟ್ಟ ಪುಸ್ತಕವನ್ನು ಓದಲು ಪ್ರಾರಂಭಿಸಿದರೆ ನೀವು ಮುಗಿಸಿಯೇ ಕೆಳಗಡೆ ಇಡುತ್ತೀರಿ. ಕೆಲವೊಂದು ಕಡೆ ಬಾಲಿಶ ಪದಗಳ ಬಳಕೆಯಿದೆ. ಆದರೆ ಲೇಖಕರು ಪ್ರಬಂಧಗಳನ್ನು ಬರೆಯುವ ಸಂದರ್ಭದಲ್ಲಿ ಈ ಪದಗಳು ಸೂಕ್ತವೆಂದು ಅವರ ಮನಸ್ಸು ಹೇಳಿರಬಹುದು ಅನಿಸುತ್ತೆ. ಏನೇ ಆದರೂ ಪುಸ್ತಕವನ್ನೊಮ್ಮೆ ಓದಿ ನೋಡಲು ಅಡ್ಡಿಯಿಲ್ಲ.