ಪಾಲಿಹೌಸ್ ಕೃಷಿಯತ್ತ ಯುವಕರ ಚಿತ್ತ...





ಇತ್ತೀಚೆಗೆ ಒಂದು ಆಂಗ್ಲ ದಿನ ಪತ್ರಿಕೆಯಲ್ಲಿ ಕೇರಳ ರಾಜ್ಯದ ಕೆಲವು ಯುವಕರ ಕೃಷಿಯ ಬಗೆಗಿನ ಆಸಕ್ತಿಯನ್ನು ಓದಿದೆ. ಪಾಲಿಹೌಸ್ ನಲ್ಲಿ ತರಕಾರಿ ಬೆಳೆದು, ಮಾರುಕಟ್ಟೆ ಕಂಡುಕೊಂಡ ಸಫಲತೆಯ ಕತೆಯಿದು. ಇವರ ಕತೆಯನ್ನು ತಿಳಿಸುವ ಮೊದಲು ನನ್ನ ಗೆಳೆಯನೊಬ್ಬ ನಾಲ್ಕು ವರ್ಷಗಳ ಹಿಂದೆ ಪಾಲಿಹೌಸ್ ನಲ್ಲಿ ಸೌತೇಕಾಯಿ ಬೆಳೆದು ಮಾರುಕಟ್ಟೆ ಹುಡುಕಲಾಗದೇ ನಷ್ಟ ಅನುಭವಿಸಿದ ಕಥೆ ನಿಮಗೆ ಹೇಳಲೇ ಬೇಕು. ಏಕೆಂದರೆ ವ್ಯಾಪಾರದಲ್ಲಿ ಒಂದು ಮಾತಿದೆ. ಯಾರು ತನ್ನ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಾನೋ ಅವನೇ ಸಫಲ ವ್ಯಾಪಾರಿ ಎಂದು.
೨೦೧೭ರಲ್ಲಿ ನನ್ನ ಗೆಳೆಯರಾದ ಶರತ್ ಕುಮಾರ್ ಕೃಷಿಯಲ್ಲಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ತರಕಾರಿ ಬೆಳೆಯಲು ನಿರ್ಧಾರ ಮಾಡಿಕೊಂಡರು. ಇವರು ಮೂಲತಃ ಕಾರ್ಕಳದವರಾದರೂ ಐಟಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ತನ್ನ ಸಮಾನ ಮನಸ್ಕ ಕೆಲವು ಗೆಳೆಯರ ಜೊತೆ ಅವರು ಮಡಿಕೇರಿಯ ಚೇರಂಬಾಣೆ ಬಳಿ ಒಂದು ಪಾಲಿಹೌಸ್ ನಿರ್ಮಾಣ ಮಾಡಿ ಸೌತೆಕಾಯಿ (ಯುರೋಪಿಯನ್ ಕುಕುಂಬರ್) ಬೆಳೆಯಲು ಮನಸ್ಸು ಮಾಡುತ್ತಾರೆ. ಇವರಿಗೆ ಕೃಷಿ ಒಂದು ಆಸಕ್ತಿದಾಯಕ ಹವ್ಯಾಸ, ಅದೇ ರೀತಿ ಸಾವಯವ ಕೃಷಿಯಲ್ಲಿ ಬೆಳೆಸುವ ಹುಮ್ಮಸ್ಸು. ಸುಮಾರು ೫ ಲಕ್ಷ ವೆಚ್ಚದಲ್ಲಿ ೫೦೦ ಚದರ ಮೀಟರ್ ಆಕಾರದ ಪಾಲಿಹೌಸ್ ನಿರ್ಮಾಣ ಮಾಡಿದರು. ಅದರಲ್ಲಿ ಜೈವಿಕ ಗೊಬ್ಬರವನ್ನು ಮಾತ್ರ ಬಳಸಿ ಸೌತೇಕಾಯಿ ಬೆಳೆಸಿದರು.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ (ಆಗಿನ್ನೂ ವರ್ಕ್ ಫ್ರಂ ಹೋಮ್ ಪ್ರಾರಂಭವಾಗಿರಲಿಲ್ಲ) ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಮಡಿಕೇರಿಗೆ ಭೇಟಿ ನೀಡುತ್ತಾ ತರಕಾರಿ ಕೃಷಿಯ ಬೆಳವಣಿಗೆಯನ್ನು ಗಮನಿಸುತ್ತಾ ಬರುತ್ತಿದ್ದರು. ಮಡಿಕೇರಿಯ ಪ್ರತಿಕೂಲ ವಾತಾವರಣ ಇವರಿಗೆ ಒಂದಿಷ್ಟು ತೊಂದರೆ ನೀಡಿದರೂ ಸುಮಾರು ೨ ಟನ್ ನಷ್ಟು ಇಳುವರಿಯನ್ನು ಗಳಿಸಲು ಸಾಧ್ಯವಾಯಿತು. ಆಗ ಅವರಿಗೆ ಎದುರಾದದ್ದು ಮಾರುಕಟ್ಟೆಯ ಸಮಸ್ಯೆ. ಇದನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅದೇ ಸಮಯಕ್ಕೆ ಇವರಿಗೆ ಕೈಕೊಟ್ಟ. ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಅರ್ಧಕ್ಕೂ ಹೆಚ್ಚು ಬೆಳೆ ಕೊಳೆತು ಹಾಳಾಗಿ ಹೋಯಿತು. ಇದು ಶರತ್ ಅವರಿಗೆ ತುಂಬಾ ನೋವು ತಂದು ಕೊಟ್ಟಿತು. ಈ ಅನುಭವದಿಂದ ಮರೆಯಲಾದ ಪಾಠವನ್ನೂ ಕಲಿತರು. ನಂತರದಲ್ಲಿ ಮಾರುಕಟ್ಟೆಯ ಬಗ್ಗೆ ಬಹಳಷ್ಟು ಅರಿತುಕೊಂಡರು.
ಆದರೆ ಮುಂದಿನ ವರ್ಷಗಳಲ್ಲಿ ಅವರ ಕೆಲಸದ ಒತ್ತಡ, ಕೋವಿಡ್ ಸಮಸ್ಯೆಗಳಿಂದಾಗಿ ಅವರು ತರಕಾರಿ ಕೃಷಿಯತ್ತ ಗಮನ ಹರಿಸಲಿಲ್ಲ. ಆದರೆ ಈಗ ಅವರು ಮತ್ತೆ ಕೃಷಿಯ ಹವ್ಯಾಸದತ್ತ ಮುಖ ಮಾಡುತ್ತಿದ್ದಾರೆ. ತಮ್ಮ ಊರಿನಲ್ಲಿ ಹಲಸು, ಅನನಾಸು, ಮಾವು ಬೆಳೆಯುವತ್ತ ಆಸಕ್ತಿ ವಹಿಸಿದ್ದಾರೆ. ಹಾಸನದ ಅರಸೀಕೆರೆ ಹತ್ತಿರ ಅವರ ಗೆಳೆಯರೊಬ್ಬರ ಫಾರಂ ನಲ್ಲಿ ಪಾಲಿಹೌಸ್ ಒಳಗಡೆ ಮತ್ತೆ ತರಕಾರಿಯನ್ನು ಬೆಳೆಯುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಬಹುಷಃ ಮುಂದಿನ ವರ್ಷದ ಹೊತ್ತಿಗೆ ಶರತ್ ಪಾಲಿಹೌಸ್ ನಲ್ಲಿ ತರಕಾರಿ ಬೆಳೆದು ಮಾರುಕಟ್ಟೆ ಕಂಡುಕೊಳ್ಳಲಿದ್ದಾರೆ ಎಂದು ನನ್ನ ಅಂದಾಜು. ಈಗಷ್ಟೇ ಈ ಬಗ್ಗೆ ಅವರ ಜೊತೆ ಮಾತನಾಡಿ, ಅವರ ಕಾರ್ಯಕ್ರಮಗಳಿಗೆ ಶುಭಹಾರೈಸಿರುವೆ.
ಈಗ ಕೇರಳದತ್ತ ಹೋಗುವ. ಕೇರಳದ ತಿರುವನಂತಪುರಂನ ಸಸ್ತಮಂಗಲಮ್ ಊರಿನ ಶ್ರೀಜಿತ್ ಕುಮಾರ್ ಎಂಬ ಯುವಕ ಪಾಲಿಹೌಸ್ ನಲ್ಲಿ ತರಕಾರಿ ಬೆಳೆಯುವತ್ತ ಆಸಕ್ತಿ ಹೊಂದಿ ನೂತನ ತಂತ್ರಜ್ಞಾನವನ್ನು ಬಳಸಿ ಉತ್ತಮ ಬೆಳೆ ತೆಗೆದಿದ್ದಾರೆ. ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಶ್ರೀಜಿತ್ ತಮ್ಮ ಊರಾದ ಕಟ್ಟಕಡದಲ್ಲಿದ್ದ ಒಂದು ಎಕರೆ ಜಾಗದಲ್ಲಿ ತರಕಾರಿ ಕೃಷಿ ಮಾಡಿ ಸೈ ಅನಿಸಿಕೊಂಡಿದ್ದಾರೆ.
ಶ್ರೀಜಿತ್ ಯಶೋಗಾಥೆಯನ್ನು ಅವರ ಮಾತಿನಲ್ಲೇ ಕೇಳುವುದಾದರೆ “ ನಾನು ಪಾಲಿಹೌಸ್ ಒಳಗೆ ನೂತನ ತಂತ್ರಜ್ಞಾನ ಬಳಸಿ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದೆ. ಅದರ ಜೊತೆಗೆ ಮೀನು ಸಾಕಣೆ ಮತ್ತು ಅಣಬೆಯನ್ನೂ ಬೆಳೆದೆ. ಕೋವಿಡ್ ಸಮಯದಲ್ಲಿ ನನಗೆ ನಾನು ಮಾಡುವ ಕಟ್ಟಡ ಕಾಮಗಾರಿಯ ಕೆಲಸದಿಂದ ಸ್ವಲ್ಪ ಬ್ರೇಕ್ (ಬಿಡುವು) ಸಿಕ್ಕಿತು. ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕೃಷಿಯತ್ತ ಗಮನ ಹರಿಸಿದೆ. ಕೇರಳ ಸರಕಾರದ ‘ರಾಜ್ಯ ಕೃಷಿ ಮತ್ತು ತೋಟಗಾರಿಕಾ ಅಭಿವೃದ್ಧಿ ಸಹಕಾರ ಸಂಘ ನಿಯಮಿತ’ (SAHS), ಒಂದು ಎನ್ ಜಿ ಒ ಪ್ರತಿಷ್ಟಾನ ಹಾಗೂ ಕೋರ್ ೩ ಇನೋವೇಷನ್ (Qore3 Innovations) ಇವರ ಜಂಟಿ ಸಹಯೋಗದಲ್ಲಿ ನಡೆಸಲಾಗುವ ‘ಕೃಷಿಕರ್ಣ' ಯೋಜನೆಯಲ್ಲಿ ಪಾಲ್ಗೊಂಡು ನಾನು ಸೂಕ್ತ ತರಭೇತಿಯನ್ನು ಪಡೆದುಕೊಂಡೆ. ಈ ತರಭೇತಿಯಲ್ಲಿ ಪಾಲಿಹೌಸ್ ಒಳಗೆ ತರಕಾರಿ ಬೆಳೆಯುವ ತಾಂತ್ರಿಕತೆಯನ್ನು ಹೇಳಿಕೊಡುತ್ತಾರೆ.
ನಾನು ಮಾತ್ರವಲ್ಲದೇ ನಮ್ಮ ಊರಿನಲ್ಲಿ ಹಲವಾರು ಮಂದಿ ಈ ಯೋಜನೆಯಲ್ಲಿ ಪಾಲ್ಗೊಂಡರು. ನನ್ನ ಪಾಲಿ ಹೌಸ್ ಒಳಗೆ ಸೌತೇ ಕಾಯಿ, ಟೊಮ್ಯಾಟೋ, ಅಲಸಂಡೆ, ಬೆಂಡೇಕಾಯಿ ಮತ್ತು ಹಸಿರು ಮೆಣಸಿನಕಾಯಿಯನ್ನು ಬೆಳೆಸಿದೆ. ಈ ಯೋಜನೆಯ ಒಟ್ಟು ಮೊತ್ತ ೨೦ ಲಕ್ಷ. ಶೇಕಡಾ ೨೫ರಷ್ಟು ಸರಕಾರದಿಂದ ಸಬ್ಸಿಡಿ ರೂಪದಲ್ಲಿ ಬರುವ ನಿರೀಕ್ಷೆಯಿದೆ. ಈಗಾಗಲೇ ಉತ್ತಮ ಬೆಳೆ ಬರುವ ಸೂಚನೆ ಲಭಿಸಿದೆ.” ಎನ್ನುತ್ತಾರೆ ಶ್ರೀಜಿತ್.
ಅದೇ ರೀತಿ ಪಳ್ಳಿಕಲ್ ಪಂಚಾಯತ್ ವ್ಯಾಪ್ತಿಯ ನೆಸ್ಲಿ ಎಸ್. ಇವರು ಮೂರು ತಿಂಗಳ ಹಿಂದೆ ತಮ್ಮ ೨ ಸೆಂಟ್ಸ್ ನ ಸಣ್ಣ ಸ್ಥಳದಲ್ಲಿ ಪಾಲಿಹೌಸ್ ನಿರ್ಮಿಸಿ ಅದರಲ್ಲಿ ನೂತನ ತಂತ್ರಜ್ಞಾನ ಪದ್ಧತಿಯನ್ನು ಅಳವಡಿಸಿದ್ದಾರೆ. ಕೇವಲ ೪೪ ದಿನಗಳಲ್ಲಿ ಉತ್ತಮ ತರಕಾರಿ ಬೆಳೆಯನ್ನು ಬೆಳೆದಿದ್ದಾರೆ. ಈಗಾಗಲೇ ಅವರು ಬೆಳೆಸಿದ ಬೀನ್ಸ್ ಉತ್ತಮ ಇಳುವರಿ ನೀಡಿದ್ದು ಕಟಾವಿಗೆ ಸಿದ್ಧವಾಗಿದೆ. ‘ಕರ್ಶಕ ಸಹಾಯಿ’ ಎಂಬ ವಾಟ್ಸಾಪ್ ಬಳಗದೊಂದಿಗೆ ಕೂಡಿಕೊಳ್ಳುವುದರ ಮೂಲಕ ಅವರು ತಮ್ಮ ಬೆಳೆಗೆ ಸೂಕ್ತ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಈ ಬಳಗದಲ್ಲಿರುವ ಸದಸ್ಯರು ತಾವು ಬೆಳೆದ ಬೆಳೆಗೆ ಉತ್ತಮ ದರವನ್ನು ಪಡೆದುಕೊಳ್ಳುತ್ತಿದ್ದಾರೆ. ನೆಸ್ಲಿ ಸಹಾ ‘ಕೃಷಿಕರ್ಣ’ ಯೋಜನೆಯ ಫಲಾನುಭವಿ. ಅವರೂ ಈ ಯೋಜನೆಯು ತುಂಬಾ ಪ್ರಯೋಜನಕಾರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ಈ ಕೃಷಿ ಕರ್ಣ ಯೋಜನೆಯ ಬಗ್ಗೆ ಎನ್ ಜಿ ಓ ಪ್ರತಿಷ್ಟಾನದ ಸ್ಥಾಪಕ ಹಾಗೂ ಕಾರ್ಯನಿರ್ವಾಹಕರಾದ ದಾನೆಶ್ ಎನ್ ರಾಜ್ ಅವರು ಹೇಳುವುದು ಹೀಗೆ “ಕೃಷಿ ಕರ್ಣ ಯೋಜನೆಯಡಿ ಸಣ್ಣ ಸಣ್ಣ ಕೃಷಿಕರು ಒಂದು ಲಕ್ಷ ವೆಚ್ಚದಲ್ಲಿ ತಮ್ಮದೇ ಆದ ಪುಟ್ಟ ಪಾಲಿಹೌಸ್ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಇಡುಕ್ಕಿ ಜಿಲ್ಲೆಯ ಬಹಳಷ್ಟು ಕೃಷಿಕರು ಈ ಯೋಜನೆಯಡಿ ಪಾಲಿಹೌಸ್ ನಿರ್ಮಾಣ ಮಾಡಿ ತರಕಾರಿ ಬೆಳೆಸಿ, ಉತ್ತಮ ಮಾರುಕಟ್ಟೆ ಮತ್ತು ದರವನ್ನು ಕಂಡುಕೊಂಡಿದ್ದಾರೆ. ಈಗ ನಾವು ಇಡುಕ್ಕಿ ಜಿಲ್ಲೆಯ ವಟ್ಟವಡ ಎಂಬಲ್ಲಿ ಆಸಕ್ತ ಕೃಷಿಕರಿಗಾಗಿ ‘ಬ್ರೊಕೋಲಿ' (ಸಲಾಡ್ ಮೊದಲಾದುವುಗಳಿಗೆ ಬಳಕೆಯಾಗುವ ಹೂಕೋಸು ತರಹದ ತರಕಾರಿ) ಎಂಬ ತರಕಾರಿಯನ್ನು ಬೆಳೆಸುವ ಮತ್ತು ಕೊಯ್ಲಿನ ಬಗ್ಗೆ ತರಭೇತಿ ನೀಡುತ್ತಿದ್ದೇವೆ. ಕೇರಳ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಗಳಲ್ಲಿ ತರಕಾರಿಯನ್ನು ಸಾಗಿಸುವ ಕುರಿತು ಒಪ್ಪಂದವೂ ಆಗಿದೆ. ರಾಜ್ಯಾದ್ಯಂತ ನಾವು ಈಗಾಗಲೇ ಸುಮಾರು ೬೦ಕ್ಕೂ ಅಧಿಕ ಪಾಲಿಹೌಸ್ ಗಳನ್ನು ನಿರ್ಮಿಸಿದ್ದೇವೆ. “
೨೦೧೭-೧೮ರ ಸಾಲಿನ ಕೇರಳದ ‘ಹೈ-ಟೆಕ್ ಕೃಷಿಕ' ಪ್ರಶಸ್ತಿಯನ್ನು ಪಡೆದ ಕೃಷಿ ವಿಜ್ಞಾನಿಯಾದ ಅನೀಶ್ ಎನ್ ರಾಜ್ ಅವರು ಕೋರ್೩ ಇನೋವೇಷನ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಕೀಟಭಾಧೆಯಿಂದ ಹಾಳಾಗುವ ಬೆಳೆಗಳನ್ನು ಪಾಲಿಹೌಸ್ ನಿರ್ಮಾಣದ ಮೂಲಕ ಬಹಳಷ್ಟು ನಿಯಂತ್ರಿಸಬಹುದು ಎನ್ನುತ್ತಾರೆ. ರಾಜ್ಯದಾದ್ಯಂತ ಕೃಷಿಕರೇ ನಿರ್ಮಾಣ ಮಾಡಿ, ನಷ್ಟವೆಂದು ಕೈಬಿಟ್ಟ ಸುಮಾರು ೪೦೦ ಪಾಲಿಹೌಸ್ ಗಳನ್ನು ಮತ್ತೆ ಮರು ನಿರ್ಮಾಣ ಮಾಡುವ ಉದ್ದೇಶವನ್ನು SAHSನ ಆಡಳಿತ ನಿರ್ದೇಶಕರಾದ ಬಿನು ಪೈಲೆಟ್ ಹೊಂದಿದ್ದಾರೆ.
ಹೀಗೆ ಕೃಷಿಯಲ್ಲಿ ಖುಷಿ ಕಾಣುವ ಮನಸ್ಸಿರುವ ಹಲವಾರು ಮಂದಿ ಯುವಕ, ಯುವತಿಯರು ಪಾಲಿಹೌಸ್ ಕೃಷಿಯತ್ತ ಮನಸ್ಸು ಮಾಡುತ್ತಿರುವುದು ಉತ್ತಮ ಸಂಗತಿ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಾವು ಮಾಡುತ್ತಿದ್ದ ಕೆಲಸ ಕಳೆದುಕೊಂಡಾಗ ಅಥವಾ ಬಿಡುವು ದೊರೆತಾಗ ಕೃಷಿಯತ್ತ ಮನಸ್ಸು ಮಾಡಿದವರು ಹಲವಾರು ಮಂದಿ. ತರಕಾರಿ ಬೆಳೆ ಅಲ್ಪಾವಧಿಯದ್ದೂ ಆಗಿದ್ದು, ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡರೆ ಖಂಡಿತಾ ಲಾಭ ಮಾಡಿಕೊಳ್ಳಬಹುದು. ನಮ್ಮ ರಾಜ್ಯದಲ್ಲೂ ಹಲವಾರು ಕೃಷಿಕರು ಪಾಲಿಹೌಸ್ ಕೃಷಿಯತ್ತ ಗಮನ ಹರಿಸಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಈ ಕೃಷಿ ಮಾಡಲು ಪ್ರಾರಂಭಿಸಲೂ ಬಹುದು.
(ಕೇರಳ ಮಾಹಿತಿ ಮತ್ತು ಚಿತ್ರ ಕೃಪೆ : ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಚಿತ್ರಗಳ ವಿವರ: ೧. ಶರತ್ ಕುಮಾರ್ ಅವರು ಮಡಿಕೇರಿಯಲ್ಲಿ ನಿರ್ಮಿಸಿದ ಪಾಲಿಹೌಸ್
೨. ಪಾಲಿಹೌಸ್ ಒಳಗೆ ಬೆಳೆಯುತ್ತಿರುವ ಸೌತೇಕಾಯಿ
೩. ಮಾರುಕಟ್ಟೆಗೆ ಹೋಗಲು ಸಿದ್ಧವಾದ ಸೌತೇಕಾಯಿ
೪. ಕೇರಳದ ಶ್ರೀಜಿತ್ ಬೆಳೆದ ತರಕಾರಿಗಳು
೫. ಕೇರಳದ ಪಾಲಿಹೌಸ್