ಪಿಂಕಿ ಭಾಗ 1

ಪಿಂಕಿ ಭಾಗ 1

*ಪಿಂಕಿ*
ಭಾಗ 1
-----
ಪಿಂಕಿಯ ಫೋನ್ ರಿಂಗುಣಿಸಿತು. 
ಅವಳು ಆಗ ಮಹಡಿ ಮೇಲೆ ಬೆಡ್ನಲ್ಲಿ ಮಲಗಿ ಅದ್ಯಾವುದೋ ಗೇಮ್ ಆಡುತ್ತಾ ವಿರಾಮದಲ್ಲಿದ್ದಳು.
ಫೋನ್ ಎತ್ತಿ ಹೆಸರು ನೋಡಿದಳು. 
ಅವನೇ, ವಿಕೇಶ
"ಹಲೋ"
"ಹಲೋ ಚಿನ್ನೂ...." 
ಪಿಂಕಿ ಒಮ್ಮೆಲೇ ಹುಸಿ ಕೋಪ ನಟಿಸುತ್ತಾ ಹೇಳಿದಳು.
"ಸಾರೀ, ರಾಂಗ್ ನಂಬರ್" ವಿಕೇಶ ಗಡಿಬಿಡಿಯಿಂದ ಬಡಬಡಿಸಿದ
"ಏ ಏ ಪಿಂಕೀ, ನಾನು ಕಣೇ ನಿನ್ನ ಉಡ್ಬಿ ವಿಕೇಶಾ" ಪಿಂಕಿ ಕೋಪದ ಧ್ವನಿಯಲ್ಲಿ ಹೇಳಿದಳು
"ಹೌದಾ? ಮತ್ತೆ ನೀನು ಚಿನ್ನೂ ಅಂದೆ, ನಾನೆಲ್ಲೋ ರಾಂಗ್ ನಂಬರ್ ಅಂದ್ಕೊಂಡೆ"
"ನಿನ್ನನ್ನು ಮಾತಿನಲ್ಲಿ ಗೆಲ್ಲೋರುಂಟೇ? ಅದಿರಲಿ ಯಾವಾಗ ಈ ಪಾಮರನಿಗೆ ಭಿಕ್ಷೆ?"
"ಅಂದ್ರೇ?"
"ಅಬ್ಬಬ್ಬಾ! ಏನಪ್ಪಾ ನೀವು ಹೆಣ್ಮಕ್ಕಳು! ನಾನು ಕೇಳ್ತಾನೆ ಇದೀನಿ. ನೀನು ನಿರಾಕರಿಸುತ್ತಲೇ ಇದೀಯಾ."
ಅವಳು ಏನೂ ಮಾತಾಡಲಿಲ್ಲ.
"ಮಾತಾಡು ಪುಟ್ಟಾ"
"ಏನು ಮಾತಾಡ್ಲೀ?" ಪಿಂಕಿ ಮೆತ್ತಗೆ ಆದರೆ ಮೃದುವಾಗಿ ಕೇಳಿದಳು
"ಅಯ್ಯೋ ಏನಾದರೂ ಮಾತಾಡು ಚಿನ್ನಾ, ನೀನು ಮಾತಾಡ್ತಿದ್ರೆ ಕೇಳ್ತಾನೇ ಇರಬೇಕು ಅನ್ಸುತ್ತೆ"
"ಇದು ಗಂಡಸರ ಟ್ರಿಕ್ಸೂ" ಮತ್ತೆ ಹುಸಿ ಮುನಿಸು ತೋರಿದಳು.
"ಹೌದಾ? ಸಿಗು ನೀನು. ಮಾಡ್ತಿನಿ ನಿಂಗೆ"
ಪಿಂಕಿ ಮತ್ತೆ ಮೌನ ತಾಳಲು ವಿಕೇಶನೆ ಮಾತು ಮುಂದುವರಿಸಿದ
"ಚಿನ್ನೂ, ನೀನು ಮದುವೆಗೆ ಮುಂಚೆ ಒಮ್ಮೆ ಸಿಗಬಾರದೇನೇ? ಕದ್ದು ತಿನ್ನೋ ರುಚಿನೇ ಬೇರೆ ಕಣೇ, ನಾನಿಲ್ಲಿ ಎಷ್ಟು ಕಷ್ಟಪಡ್ತಿದ್ದೇನೆ ಗೊತ್ತಾ? ಎಂಗೇಜ್ಮೆಂಟ್ ಆದ ಮೇಲೆ ನಿನ್ನ ನೆನಪಾದಾಗಲೆಲ್ಲಾ ಬಾತ್ರೂಮಿಗೆ ಓಡುತ್ತೇನೆ...(ಈ ಮೊದಲು ವಿಕೇಶ ಪಿಂಕಿಯೊಡನೆ ಅಸಹ್ಯವಾಗಿ ಮಾತಾಡುವುದನ್ನು ಬರೆಯಲಾಗಿತ್ತು. ಈಗ  ಆ ಸಂಭಾಷಣೆ ತೆಗೆಯಲಾಗಿದೆ) ...... " ವಿಕೇಶ ಯಾವಾಗ ಫೋನ್ ಮಾಡಿದರೂ ಕೊನೆ ಕೊನೆಗೆ ಖಾಸಗಿ ವಿಷಯಗಳನ್ನೇ ಚರ್ಚಿಸೋದು.ಅದೂ ಅತ್ಯಂತ ಕಳಪೆ ಭಾಷೆಯಲ್ಲಿ!ಯಾವುದೋ 'ರತಿದರ್ಪಣ'ದಲ್ಲಿ ಓದಿದ ನೆನಪು ಅವನಿಗೆ.
'ಹೆಣ್ಮಕ್ಕಳು ನಮಗೆ ಯಾವುದೇ ಉತ್ತರ ನೀಡದೆ ನಮ್ಮ ಮಾತು ಕೇಳಿಸಿಕೊಳ್ಳುತ್ತಾ ಸುಮ್ಮನೆ ಇದ್ದರೆಂದರೆ ನಮ್ಮ ಮಾತು ಅವರಿಗೆ ಹಿತವಾಗುತ್ತಿದೆ ಎಂದು ಅರ್ಥ. ಆಗ ಗಂಡಸರು ಅದೇ ಎಳೆಯಲ್ಲಿ ಹೆಣ್ಮಕ್ಕಳ ಮನಸ್ಸನ್ನು ಆಕ್ರಮಿಸಬಹುದಾಗಿದೆ' ಇದೇ ಲಾಜಿಕನ್ನು ಈಗ ವಿಕೇಶ ತನ್ನ ಭಾವೀ ಪತ್ನಿಯ ಮೇಲೆ ಪ್ರಯೋಗಿಸತೊಡಗಿದ್ದಾನೆ.ಪಿಂಕಿ ಅಂತೂ ಅವನು ಯಾವಾಗ ಸೆಕ್ಸ್ ಮಾತುಗಳನ್ನಾಡುವನೋ ಆವಾಗಲೆಲ್ಲಾ ಸೈಲೆಂಟಾಗಿಯೇ ಇರುತ್ತಿದ್ದಳು.
------
ಪಿಂಕಿ ಬಡವಳಲ್ಲ. ಅವಳಪ್ಪ ಮುತ್ತಣ್ಣ ನಟಕಾರಕ ರಾಜ್ಯದ ಚುನಾಯಿತ ಪ್ರತಿನಿಧಿ.
ನಟಕಾರಕದಲ್ಲೀಗ ಆಡಳಿತ ಪಕ್ಷವು ಪ್ರಜಾಗ್ರಹಕ್ಕೆ ಪಾತ್ರವಾಗಿದೆ. ಪ್ರಬಲ ವಿರೋಧಪಕ್ಷವು ಕಾದು ನೋಡುವ ತಂತ್ರವನ್ನು ಅಳವಡಿಸಿಕೊಂಡು ಬಾಯಿಗೆ ಬಿರಡೆ ಹಾಕಿಕೊಂಡು ಬಿಮ್ಮನೆ ಬೀಗಿದೆ. 
ಆಡಳಿತ ಪಕ್ಷದ ಒಂದೊಂದು ತಪ್ಪೂ ತನ್ನ ಮತ ಬೊಕ್ಕಸಕ್ಕೆ ಬೀಳಲಿರುವ ಕಪ್ಪವೆಂದೇ ಭಾವಿಸಿ ಹಾಯಿರಬ್ಬ ಹಾಯಿರಬ್ಬ ಅನ್ನುತ್ತಿದೆ ವಿರೋಧ ಪಕ್ಷ.
------
ಆಡಳಿತ ಪಕ್ಷ ವಿರೋಧ ಪಕ್ಷ ಎಂಬ ಯಾವ ಬೇಧವೂ ಇಲ್ಲದೆ ಒಬ್ಬರ ಮೇಲೊಬ್ಬರು ಪೈಪೋಟಿಗಿಳಿದವರಂತೆ ಜನರನ್ನು ವಂಚಿಸುವ ಕುತಂತ್ರದಲ್ಲಿ ತಲ್ಲೀನರಾಗಿದ್ದಾರೆ. ಓಟಿಗೆ ಒಂದು ವರ್ಷ ಇನ್ನೂ ಇದೆ. ಆದರೆ ಜನರಿಗೆ ಓಟಿನ ಸಮಯದಲ್ಲಿ ಕೊಡುವ ಗಿಫ್ಟ್ ಈಗೀಗ ವರ್ಕೌಟಾಗುತ್ತಿಲ್ಲ. ಚುನಾವಣಾ ಆಯೋಗದ ಬಿಗಿ ಕಟ್ಟಳೆ, ಪಕ್ಷದ ಕಾರ್ಯಕರ್ತರ ಹದ್ದಿನಕಣ್ಣು! ರಾತ್ರಿಯೂ ಕಾವಲು ಹಗಲಲ್ಲೂ ಕಾವಲು.
ಜನ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಅವರ ನಿರೀಕ್ಷೆ ಅವರ ಕೈಗೆ ತಲುಪುತ್ತಿಲ್ಲ.
ಹೀಗಾಗಿ ಏನಾದರೂ ಹೊಸ ಗಿಮಿಕ್ ಮೂಲಕವೇ ಚುನಾವಣೆ ಎದುರಿಸಬೇಕು.
ಆಗ ಕಂಡು ಬಂದವರೇ ಬಡವರು ಶೋಷಿತರು ಬಿಪಿಎಲ್ಗಳು..
ಮಂತ್ರಿ ಮಾದೇಶಣ್ಣ ತನ್ನ ಪ್ರಜಾಸಂಕುಲದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕಾನೇಕ ಕಲ್ಯಾಣ ಯೋಜನೆಗಳನ್ನು ಬೇಗ ಬೇಗನೇ ಘೋಷಿಸಿದರು. ಆದರೆ ಜನರಲ್ಲಿ ಸಂಚಲನವಿಲ್ಲಾ! ಎಂದಿನ ದಿವ್ಯ ನಿರ್ಲಕ್ಷ್ಯ ಪ್ರಜಾವರ್ಗದಿಂದ! ಆಗ ಅವರ ಆಪ್ತ ಕಾರ್ಯದರ್ಶಿ ಚಾಣಕ್ಯ ಒಂದು ಐಡಿಯಾ ಕೊಟ್ಟ.
"ಸರ್ ಸಂವಿಧಾನಾತ್ಮಕವಾಗಿ ವಿರೋಧವಾದ ಸೌಲಭ್ಯಗಳನ್ನು ಪ್ರಜೆಗಳಿಗೆ ಘೋಷಿಸಿರಿ. ಜನ ನಿಮ್ಮನ್ನು ಬೆಂಬಲಿಸುತ್ತಾರೆ"
"ಆದರೆ ಅದು ಜಾರಿ ಆಗದಿದ್ದಾಗ ಜನ ನಮ್ಮ ಮೇಲೆ ವಿಶ್ವಾಸ ಕಳ್ಕೋತಾರಪ್ಪಾ"
"ಒಂದು ಹತ್ತು ಕೋಟಿ ಇತ್ತ ತಳ್ಳಿ ಸರ್. ನಾವು ಕತ್ತೆಗಳಿಗೆ ಒಂದಷ್ಟು ಬೂಸಾ ಹಾಕೋಣ. ನಮ್ಮ ಪರವಾಗಿ ಅವರೇ ಜನರನ್ನು ಸಂಘಟಿಸುತ್ತಾರೆ. ಗೀಚುತ್ತಾರೆ, ಒದರುತ್ತಾರೆ, ಜನರನ್ನು ಕನ್ಫ್ಯೂಸ್ ಮಾಡ್ತಾರೆ. ಆಗ ನಿಮ್ಮ ಆಶ್ವಾಸನೆ ಊರ್ಜಿತಗೊಳ್ಳದಿದ್ದರೂಮೇಲಿನವರನ್ನು ದೋಷಿಗಳನ್ನಾಗಿಸಿ ಹೀಚುತ್ತಾರೆ ಈ ಕತ್ತೆಗಳು. ಜನ ನಿಮ್ಮನ್ನು ದೇವರಂತೆ ಪೂಜಿಸತೊಡಗುತ್ತಾರೆ. ಜನರಿಗೇನು ಗೊತ್ತು ಸರ್ ಕಾನೂನು ಕಾಯಿದೆ ಸಂವಿಧಾನ ಇದೆಲ್ಲಾ?"
------- 
ಆಡಳಿತ ಪಕ್ಷವು ಈ ರೀತಿ ಜನರ ಮಧ್ಯೆ ಬೆಂಕಿ ಹಚ್ಚಿ ಬೂಸಪ್ಪಗಳ ಸಹಕಾರ ಬಲದಿಂದ ಪ್ರಬಲವಾಗುತ್ತಾ ಬರುತ್ತಿರುವಾಗ ವಿರೋಧ ಪಕ್ಷವು ಕುಂತಲ್ಲೇ ಕುದಿಯತೊಡಗಿತು.
'ಹೇಗಾದರೂ ಗೆಲ್ಲಬೇಕು. ಗೆಲ್ಲುವ ಗಿಮಿಕ್ ಯಾವುದಿದ್ದರೂ ಸರಿ, ಎಷ್ಟು ಕಠಿಣದ್ದಾದರೂ..'
------
ವಿರೋಧ ಪಕ್ಷದವರು ಅಲ್ಲಿ ಉಂಡರಂತೆ ಇಲ್ಲಿ ಕುಡಿದರಂತೆ! ಬಡ ಜನರೊಂದಿಗೆ ಸೆಲ್ಫೀ ಪಡೆದರಂತೆ! ಇಂತಹಾ ನ್ಯೂಸೆಲ್ಲಾ ಕಿವಿಗೆ ಬಿದ್ದಾಗ ಆಸೆಬುರುಕ ಪಾರ್ಟಿಯ ಮುತ್ತಣ್ಣನವರು ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂರದೇ ವಿಲಿವಿಲಿ ಒದ್ದಾಡತೊಡಗಿದರು. ಅವರದು ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಪಕ್ಷ.
'ಆಡಳಿತ ಮತ್ತು ವಿರೋಧ ಪಾರ್ಟಿಗಳು ಈ ಸರ್ತಿ ಖಂಡಿತಾ ಗಿರಕಿ ಹೊಡೆಯುತ್ತವೆ. ಅದರ ಲಾಭಾಂಶ ನಮಗೆ. ಈ ಸಲ ಕನಿಷ್ಠ ಎಪ್ಪತ್ತು ಸೀಟು ಹೊಡೆದು ಪಟ್ಟಕ್ಕೇರಬೇಕು'  ಹೀಗೆ ಕನಸಿನ ಗೂಡು ಹೆಣೆದಿದ್ದ ಮುತ್ತಣ್ಣನಿಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಈ ಮಟ್ಟದ ಜನಪ್ರಿಯತೆ ನುಂಗಲಾಗದ ತುತ್ತಾಗಿತ್ತು. ಪಟ್ಟಕ್ಕೇರುವುದು ಬಿಡಿ, ತನ್ನನ್ನು ಬಹುವಾಗಿ ಆದರಿಸಿದ್ದ ಚಾಲಿಪೋಲಿ ಮತ್ತುಅಂಡೆಚರ್ಕಿ ಕ್ಷೇತ್ರಗಳೇ ಕೈತಪ್ಪುವ ಚಾನ್ಸಿದೆ! ಕುದಿಯದಿರುತ್ತಾರೆಯೇ ಮುತ್ತಣ್ಣ? ಆಘಾತದ ಮೇಲೆ ಆಘಾತವೆಂಬಂತೆ ಈ ಎರಡೂ ಕ್ಷೇತ್ರಗಳಿಗೆ ಮುತ್ತಣ್ಣನ ಜಾತಿ ಬಾಂಧವರನ್ನೇ ಅಧಿಕೃತ ಅಭ್ಯರ್ಥಿ ಎಂಬಂತೆ ಗುಟ್ಟಾಗಿ ಅಂತಿಮಗೊಳಿಸಿಬಿಟ್ಟಿದೆ ಆಡಳಿತ ಪಕ್ಷ!
------
ಮುತ್ತಣ್ಣನವರೀಗ ರಾಜ್ಯ ಆಳುವ ಕನಸನ್ನು ಬದಿಗಿರಿಸಿ ತನ್ನ ಪ್ರತಿಷ್ಠೆಯ ಕ್ಷೇತ್ರಗಳನ್ನು ಉಳಿಸಿಕೊಳ್ಳುವತ್ತ ಹೆಚ್ಚು ಉತ್ಸುಕರಾದರು.. ಏಕೆಂದರೆ ಅವರಿಗಿದು ಮರ್ಯಾದೆಯ ಪ್ರಶ್ನೆ. ಉಳಿವಿನ ಪ್ರಶ್ನೆ. ಗೆಲ್ಲಬೇಕು. ಹೇಗಾದರೂ ಗೆಲ್ಲಲೇಬೇಕು.
'ಏನಾದರೂ ಮಾಡಿ ಚಾಲಿಪೋಲಿ ಮತ್ತು ಅಂಡೆಚರ್ಕಿ ಕ್ಷೇತ್ರಗಳೆರಡನ್ನೂ ಗೆಲ್ಲಲೇಬೇಕು'
ಮುತ್ತಣ್ಣನ ರಾಜಕೀಯ ಬದುಕಿಗೇ ಇತಿಶ್ರೀ ಹಾಡುವಂತ ಘಟಾನುಘಟಿ ಸ್ವಜಾತಿ ಬಾಂಧವರೇ ಅಂತಿಮವೆಂದು ಆಡಳಿತ ಪಕ್ಷದಿಂದ ಗುಟ್ಟಾಗಿ ಘೋಷಿಸಲ್ಪಟ್ಟಿದ್ದರೂ ಮುತ್ತಣ್ಣನಿಗದು ಗೊತ್ತಾಗಿಯೇ ಬಿಟ್ಟಿತ್ತು. 
------------------------
ಮುತ್ತಣ್ಣನವರು ಕಾಲಿಗೆ ಚಕ್ರ ಕಟ್ಟಿಕೊಂಡು ಈ ಎರಡೂ ಕ್ಷೇತ್ರಗಳಲ್ಲಿ ಓಡಾಡತೊಡಗಿದರು. ಎಷ್ಟು ಬಡವರಿಗೆ ಸ್ವಂತ ಮನೆ ಇಲ್ಲ, ಎಷ್ಟು ಬಡವರಿಗೆ ರೇಷನ್ ಕಾರ್ಡು ಆಗಿಲ್ಲ, ಯಾರಿಗೆ ಮನೆ ತನಕ ರಸ್ತೆ ಆಗಬೇಕು. ಎಲ್ಲದರ ವರದಿ ತರಿಸಿಕೊಂಡರು. ಮನೆ ಮನೆಗಳ ಸಂದರ್ಶನ ಮಾಡಿದರು. ಪ್ರತೀ ಮನೆಯಲ್ಲು ಅಟ್ಲೀಸ್ಟ್ ಒಂದು ಲೋಟ ನೀರನ್ನಾದರೂ ಕುಡಿದರು!ಮುತ್ತಣ್ಣನ ಜನಪ್ರೇಮಕ್ಕೆ ಮತದಾರ ಮರುಳಾಗುತ್ತಿದ್ದಾನೆ. ಏಕೆಂದರೆ ಆಧಾರ್ ಇಲ್ಲದವರಿಗೆ ಆಧಾರ್, ರೇಷನ್ ಕಾರ್ಡ್ ಇಲ್ಲದವರಿಗೆ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್, ವಿಮಾ ಪಾಲಿಸಿ, ಜಾಗದ ದಾಖಲೆ.. ಎಲ್ಲಾ ಬಿಡಿ; ಕರೆಂಟ್ ಬಿಲ್ಲನ್ನೂಮುತ್ತಣ್ಣನೇ ಕಟ್ಟಿದರು! ಹೀಗೆ ಮನೆ ಮನೆ ಭೇಟಿ ಮಾಡುತ್ತಿರುವಾಗಲೇ ಮುತ್ತಣ್ಣನ ಗಮನ ಸೆಳೆದದ್ದು ಬಡವರ ಮನೆಯ ಅವಿವಾಹಿತ ಕನ್ಯೆಯರು. ಪ್ರತೀ ಮೂರು ಮನೆಗೊಬ್ಬಳಾದರೂ ಮದುವೆ ಆಗದ ಕನ್ಯೆ ಇದ್ದಾಳೆ,
'ಓಹ್! 
ಭಾವುಕ ಕ್ಷಣಗಳನ್ನು ಸೃಷ್ಟಿಸುವುದು. ಜನ ಕಣ್ಣೀರ್ಗರೆವಂತೆ ರೋಧಿಸುವುದು, ಒಂದೆರಡು ಜೋಡಿಗೆ ವರ ಹುಡುಕಿ ಸ್ವಂತ ಖರ್ಚಿನಲ್ಲಿ ಮದುವೆ ಮಾಡುವುದು.. ಬಾಕಿ ಎಲ್ಲಾ ಹುಡುಗಿಯರನ್ನು ದತ್ತು ಸ್ವೀಕರಿಸುವುದು.. '
"ಆಮೇಲೆ?" 
ಪಿಎ ಮುದಿಯಪ್ಪ ಪ್ರಶ್ನಿಸಿದ.
"ಆಮೇಲೇನು? ಗೆದ್ದಾದ ಮೇಲೆ ಅದಕ್ಕೆಂದೇ ಒಂದು ಟ್ರಸ್ಟ್ ಮಾಡೋದು.."
"ಆಗಲ್ಲ ಸರ್, ನೀವು ಸದ್ಯಕ್ಕೆ ಕನಿಷ್ಠ ಹತ್ತು ಜೋಡಿಗಾದರೂ ಮದುವೆ ಮಾಡಬೇಕು"
"ವರ ಹುಡುಕಬೇಡ್ವೇ? ಹತ್ತು ಜನ ಎಲ್ಲಿಂದ ತರಲಿ?...
ಹಾಂ,.! 
ಅಂತರ್ಜಾತಿಯ ವಿವಾಹಕ್ಕೆ ಒತ್ತು ಕೊಟ್ಟು ಈ ಕೆಲಸ ಮಾಡಿದರೆ ಹೇಗೆ? ಆಗ ಹತ್ತು ವರಗಳನ್ನು ತಲಾಷ್ ಮಾಡಿ ಹೊತ್ತು ತರೋದೇನೂ ಕಷ್ಟ ಆಗದು. ಏನಂತೀಯಾ?"
ಪಿಎ ಪಕಪಕ ನಕ್ಕ.
"ಜಾತ್ಯತೀತ ರಾಷ್ಟ್ರ, ಜಾತ್ಯತೀತ ನಿಲುವು. ಇವೆಲ್ಲಾ ಭಾಷಣಕ್ಕೆ ಮಾತ್ರ ಸರಿ ಸರ್. ನಮ್ಮ ಜನರ ಜಾತಿ ಮೋಹ ಎಷ್ಟು ಪ್ರಬಲವಾಗಿದೆ ಗೊತ್ತಾ? ಕುರುಡನಿರಲಿ ಕುಂಟನಿರಲಿ ಜಾತಿಯ ಹುಡುಗನೇ ಬೇಕು ಅಂತಿದ್ದಾರೆ ಜನ. ಅದಕ್ಕೇ ಬಡವರ ಮನೆಯ ಹೆಣ್ಮಕ್ಕಳು ಮನೆಯಲ್ಲೇ ಉಳಿದರು. ಶ್ರೀಮಂತರೆಲ್ಲಾ ಕೇಳಿದಷ್ಟು ವರದಕ್ಷಿಣೆ ಗುಟ್ಟಾಗಿ ಕೊಟ್ಟು ತಮ್ಮಹೆಣ್ಮಕ್ಕಳ ಮದುವೆ ಮಾಡಿಬಿಟ್ಟರು,,, ನೀವು ಅಪ್ಪಿತಪ್ಪಿಯೂ ವಿಜಾತಿ ವಿವಾಹದ ಬಗೆಗೆ ಮಾತಾಡ್ಬೇಡಿ. ಜಾತಿಗೇ ಒತ್ತು ಕೊಡಿ. ಖಂಡಿತಾ ವಿನ್ನಾಗುತ್ತೀರಿ"
"ವಿನ್ನಾಗೋದಿರಲಿ, ಹತ್ತು ಮುಂಡೆಯರಿಗೀಗ ಗಂಡು ಹುಡುಕಬೇಕಲ್ಲಪ್ಪಾ?" ಪೇಚಾಡಿಕೊಂಡರು ಮುತ್ತಣ್ಣ
------
'ಸಾಮೂಹಿಕ ವಿವಾಹ' ಒಟ್ಟು ಹತ್ತು ಬಡ ಹುಡುಗಿಯರನ್ನು ದತ್ತು ಪಡೆದು ಸ್ವಜಾತಿಯ ಹತ್ತು ವರಗಳನ್ನು ನಾನಾ ಆಮಿಷವೊಡ್ಡಿ ಒಲಿಸಿಕೊಂಡು ಮದುವೆಗೆ ದಿನ ನಿಶ್ಚೈಸಿಯೇ ಬಿಟ್ಟರು ಮುತ್ತಣ್ಣ. ಅಲ್ಲಲ್ಲಿ ಬ್ಯಾನರ್, 
'ಮುಂದಿನ ದಿನಗಳಲ್ಲಿ ಸಾವಿರಕ್ಕು ಅಧಿಕ ಕನ್ಯೆಯರ ವಿವಾಹ ಕಾರ್ಯ ಹಮ್ಮಿಕೊಳ್ಳುವ ಯೋಜನೆಯಿದ್ದು,  ದತ್ತು ಬರಲು ಇಚ್ಛಿಸುವ ಕನ್ಯೆಯರು ಮಾತಾಪಿತರೊಂದಿಗೆ 'ಸಾಮೂಹಿಕ ವಿವಾಹ' ದಿನದಂದು ಬಂದು ಹೆಸರು ನೋಂದಾಯಿಸಿಕೊಳ್ಳುವುದು' 
ಮುದ್ದು ಕನ್ನಡಕ್ಷರದಲ್ಲೊಂದು ವಿನೀತ ಕೋರಿಕೆ.
------
ಅದೊಂದು ಭಾವುಕ ಕ್ಷಣ. ಹತ್ತು ಜೋಡಿಗಳು ವೈವಾಹಿಕ ಜೀವನದ ಹೊಸ್ತಿಲಲ್ಲಿ ನಿಂತಿದ್ದಾರೆ! ಹತ್ತು ಸಾವಿರ ಜನ! ಹೆಚ್ಚಿನವರು ಕನ್ಯೆಯರ ಮಾತಾಪಿತರೇ, 
ಮುಂದಿನ ಸಲದ ವಿವಾಹ ಭಾಗ್ಯಕ್ಕಾಗಿ ನೋಂದಾಯಿಸಲು ಬಂದವರು. ಇಂದಿನ ವಿವಾಹ ವೈಭವವನ್ನು ವೀಕ್ಷಿಸಲು ಬಂದ ಊರ ಪರವೂರ ಮಹನೀಯರು.
ಇಂದ್ರಸಭೆಯನ್ನು ನಾಚಿಸುವಂತಾ ವೇದಿಕೆ, ಗಣ್ಯಾತಿಗಣ್ಯರ ಆಗಮನ. ಆಟ ನಾಟಕ ಇತ್ಯಾದಿ ಕಾರ್ಯಕ್ರಮಗಳು. ಗಣ್ಯ ಉದ್ಯಮಿಯೋರ್ವರಿಂದ ಕೊಡಿಸಲ್ಪಟ್ಟದ್ದೆಂದು ಘೋಷಿಸಲಾದ ಬಂಗಾರದ ತಾಳಿಯನ್ನು ಮುತ್ತಣ್ಣನ ಪತ್ನಿ ಎಲ್ಲಾ ವಧುಗಳ ಸಂಬಂಧಿಕರಿಗೂ ವೇದಿಕೆಯಲ್ಲೇ ಹಂಚಿದರು. ಬಟ್ಟೆಅಂಗಡಿ ಮಾಲೀಕರಿಂದ ಒದಗಿಸಲ್ಪಟ್ಟ ಜರಿ ಸೀರೆಗಳನ್ನು ಪಿಂಕಿ ಎಲ್ಲಾ ವಧುಗಳಿಗೂ ಹಂಚಿದಳು.ವಿವಾಹ
ಕಾರ್ಯಗಳೆಲ್ಲಾ ಸಾಂಗವಾಗಿ ನಿರ್ವಿಘ್ನವಾಗಿ ನೆರವೇರಿದವು. ಮುತ್ತಣ್ಣನವರು ವೇದಿಕೆಯಿಂದ ಭಾಷಣ ಆರಂಭಿಸಿಯೇಬಿಟ್ಟರು.‌
"ಜಾತ್ಯತೀತ ರಾಷ್ಟ್ರ ನಮ್ಮದು. ಆದರೆ ನಾವಿಲ್ಲಿ ಹಮ್ಮಿಕೊಂಡಿರುವ ಈ ವಿವಾಹವು ಸ್ವಜಾತಿ ವಧುವರರನ್ನೇ ಗುರಿಯಾಗಿರಿಸಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಹಮ್ಮಿಕೊಂಡಾಗ ಅನೇಕರು ನನ್ನನ್ನು ಪ್ರಶ್ನಿಸಿದರು. 
'ಜಾತ್ಯತೀತ ಪಕ್ಷದವರಾಗಿ ನೀವು ಸ್ವಜಾತಿ ವಿವಾಹಕ್ಕೆ ಒತ್ತು ಕೊಡುತ್ತಿದ್ದೀರಲ್ಲಾ? ಇದು ನೀವು ಕಾನೂನನ್ನು ಅತಿಕ್ರಮಿಸಿದಂತಲ್ಲವೇ? ಇದರಲ್ಲಿ ರಾಜಕೀಯ ಏನಾದರೂ ಇರಬಹುದೇ?'
ಏನು ಹೇಳಲಿ ನಾನಿವರಿಗೆ? ಜಾತ್ಯತೀತತೆ ಇರುವುದು ಸಾರ್ವಜನಿಕ ಕ್ಷೇತ್ರಗಳಲ್ಲಿ. ವಿವಾಹ ಎಂದರೇನು? ಅದು ಚುನಾವಣೆ ಅಲ್ಲ. ಜಾತ್ರೆ ಅಲ್ಲ. ನೇಮೋತ್ಸವವೂ ಅಲ್ಲ.
ವಿವಾಹವೆನ್ನುವುದು ಎರಡು ಕುಟುಂಬಗಳನ್ನು ಒಂದುಗೂಡಿಸುವ ಪುಣ್ಯಕಾರ್ಯ, ಎರಡು ಜೋಡಿಗಳನ್ನು ಒಂದುಗೂಡಿಸುವ ಮಹಾಯಜ್ಞ.
ಬಡವರ ಪರ ನಿಂತು ಹೋರಾಡುತ್ತಿರುವ ನಾನು ಆ ಬಡವರ ಕಣ್ಣಲ್ಲಿ ಕಣ್ಣೀರು ತರಿಸಬೇಕೋ ಅಥವಾ ಅವರ ಕಣ್ಣಲ್ಲಿ ಹೊಂಬೆಳಕು ಮೂಡಿಸಬೇಕೋ? ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ರಾಜಕೀಯಕ್ಕೆ ಇಳಿದವನು ನಾನು. ನನ್ನಮ್ಮ ನನ್ನ ಬಾಲ್ಯದಲ್ಲೇ ನನಗೊಂದು ಮಾತುಹೇಳಿದ್ದರು.
'ಮುತ್ತೂ, ಬಾಳಿದರೆ ಮುತ್ತಿನಂತೆ ಬಾಳು. ಪರರ ಬದುಕಿಗೆ ಬೆಳಕಾಗಿ ಬಾಳು.ಆದರೆ......" 
ಮುತ್ತಣ್ಣ ತಮ್ಮ ಶಲ್ಯದ ತುದಿಯಿಂದ ಕಣ್ಣೀರೊರಸಿಕೊಂಡು ಅರೆಕ್ಷಣ ಭಾವುಕರಾದರು..
"..ಆದರೆ ಒಬ್ಬನಿಗಾದರೂ ನಿನ್ನಿಂದ ಅನ್ಯಾಯ ಆಗುತ್ತಿದೆ ಅಂತನಿಸಿದರೆ ಹಿಂದೆ ಮುಂದೆ ನೋಡದೆ ಆತ್ಮಹತ್ಯೆ ಮಾಡಿಕೋ.." ಪ್ರಚಂಡ ಕರತಾಡನ! ಉದ್ಘೋಷಗಳು! ಇಡೀ ಸಭೆಯಲ್ಲಿ ಹರ್ಷಉದ್ಘಾರ..
"... ಜಾತಿ ಎಂಬುದು ಸುಳ್ಳಲ್ಲವೇ ಎಂದು ನೀವು ಕೇಳಬಹುದು. ಆದರೆ ಸುಳ್ಳೋ ಸತ್ಯವೋಎಂದು ಚರ್ಚಿಸುವ ಮೊದಲು ಒಮ್ಮೆ ಆಲೋಚಿಸಿರಿ. ಇಂದು ಇಲ್ಲಿರುವ ಹತ್ತು ಜೋಡಿಗಳಲ್ಲಿ
ಯಾರಲ್ಲಾದರೂ ಅಪರಾಧೀ ಪ್ರಜ್ಞೆ ಇದೆಯೇ? ಆ ಜೋಡಿಗಳ ಹೆತ್ತವರು, ಮಾವಂದಿರು,ಚಿಕ್ಕಪ್ಪ, ಚಿಕ್ಕಮ್ಮಂದಿರು, ಎಲ್ಲರೂ ಇಂದು ತಲೆ ಎತ್ತಿ ನಿಂತಿದ್ದಾರೆ. ಅವರ ಮನಸ್ಸು ಇಂದು ಧನ್ಯತೆಯನ್ನು ಅನುಭವಿಸುತ್ತಿದೆ..
 ಏಕೆ ಹೇಳಿ? ಅವರ ಮಕ್ಕಳು ಸ್ವಜಾತಿಯಲ್ಲೇ ವಿವಾಹವಾಗುತ್ತಿದ್ದಾರೆ. ಒಂದು ವೇಳೆ ನಾನಿಲ್ಲಿ ನನ್ನ ರಾಷ್ಟ್ರ ನೀತಿಯನ್ನು ತಂದುನಿಲ್ಲಿಸಿದ್ದರೆ?
ಇಷ್ಟೂ ವಧೂವರರ ಪೋಷಕರ ಕಣ್ಣಲ್ಲಿ ದಿನ ನಿತ್ಯ ಹರಿವ ಕಣ್ಣೀರಿಗೆ ನಾನು ಕಾರಣನಾಗುತ್ತಿದ್ದೆ. ಅದಕ್ಕಿಂತ ದೊಡ್ಡ ಪಾಪ ಅದಕ್ಕಿಂತ ದೊಡ್ಡ ಶಾಪ ಬೇರೆ ಯಾವುದು ಮಿತ್ರರೇ?" 
 ಅದ್ಭುತ ಪ್ರತಿಕ್ರಿಯೆ ಸಭಿಕರಿಂದ.. ಸಭಿಕರ ಕರತಾಡನದ ಸಮಯವನ್ನು ಕಣ್ಣೀರೊರಸುವ ಮೂಲಕ ಗ್ಯಾಪ್ ಫಿಲಪ್ ಮಾಡಿಕೊಂಡು ಮತ್ತೆ ಭಾಷಣ ಮುಂದುವರಿಸಿದರು ಮುತ್ತಣ್ಣ.
"... ಬಡವರಿಗೆ ಆಗುತ್ತಿದ್ದ ವಂಚನೆಯಿಂದ ಅವರನ್ನು ರಕ್ಷಿಸಲು ಅವರ ಮನೆ ಬಾಗಿಲಿಗೆ ಬಂದವನು ನಾನು. ಇಲ್ಲಿ ಯಾವುದೇ ರಾಜಕೀಯ ದುರುದ್ಧೇಶ ಇರಲಿಲ್ಲ. ಆದರೆ ಬಂದಾಗ ಗೊತ್ತಾಯಿತು. ಬಡತನ ನಿರ್ಮೂಲನೆ ಮಾಡೋ ದೊಡ್ಡ ಮಾತಾಡುವ ಜನರು ಬಡವರಿಗೆ ಒಂದು ಆಧಾರ್ಕಾರ್ಡ್ ಕೂಡಾ ಮಾಡಿಸಿಕೊಟ್ಟಿಲ್ಲ! ಎಷ್ಟೋ ಬಡವರಿಗೆ ಬ್ಯಾಂಕ್ ಅಕೌಂಟೇ ಇಲ್ಲ. ಕೆಲವು ಮನೆಗಳು ಇಂದೋ ನಾಳೆಯೋ ಬೀಳುವ ಸ್ಥಿತಿ..!
 ಬಿಡಿ; ಅದನ್ನೆಲ್ಲಾ ಸರಿ ಮಾಡಬಹುದು. ಮಾಡಿಯೇ ತೀರುತ್ತೇನೆ ಕೂಡಾ. 
ಆದರೆ ಮನೆ ಭೇಟಿಯಲ್ಲಿ ನಾನು ಗಮನಿಸಿದ ಒಂದು ಕರುಣಾಜನಕ ದೃಶ್ಯ!
ಪ್ರತಿ ಮೂರು ಮನೆಗೆ ಒಬ್ಬ ಕನ್ಯೆ. ಮದುವೆಯ ಕನಸೇ ಕಮರಿದ ಮುಖ! ಬಡವರಾದರೇನು? ಅವರಿಗೆ ಕನಸಿಲ್ಲವೇ? ಇಂದು ಯಾವ ಪಕ್ಷ ಅವರ ಪರ ನಿಂತಿದೆ? ಆಗ ನಾನು ಯೋಚಿಸಿದೆ
 'ಯಾರು' 
'ಯಾರು' 
ಅಂತ ಹುಡುಕುವ ಬದಲು ನಾನೇ ಈ ಕಾರ್ಯವನ್ನು ಏಕೆ ಮಾಡಬಾರದು?' 
ನನ್ನ ಸ್ನೇಹಿತರನ್ನು ಬೇಟಿ ಆಗಿ ಎಲ್ಲವನ್ನೂ ವಿವರಿಸಿದೆ. ಒಬ್ಬೊಬ್ಬರು ಒಂದೊಂದು ಕೊಡುಗೆಯನ್ನಿತ್ತು ಸಹಕರಿಸಿದ್ದಾರೆ. ಎಲ್ಲಾ ದಯವಿಟ್ಟು ಕೇಳಿರಿ. ನಿಮಗೊಂದು ಸಂತೋಷದ ಸುದ್ಧಿ! ಈಗ ಸ್ವಲ್ಪ ಹೊತ್ತಿಗೆ ಮೊದಲು ಬೊಂಬಾಯಿಯ ಯುವ ಉದ್ಯಮಿ ಗೋಪಾಲನಾಥರು ಫೋನ್ ಮಾಡಿ ಹೇಳಿದರು
'ಮದುವೆ ಮಾಡಿಸ್ತಿದೀರಂತೆ. ಪುಣ್ಯದ ಕೆಲಸ ಅದು. ಪ್ರತಿ ಜೋಡಿಗೂ ಒಂದೊಂದು ಲಕ್ಷರುಪಾಯಿಗಳ ಕೊಡುಗೆ ನಮ್ಮ ಮುಂಬಯಿ ಟ್ರಸ್ಟಿನಿಂದ.. ಖಂಡಿತಾ ನಿರಾಕರಿಸಬಾರದು. ಹಾಗೆನೇ ಮುಂದಕ್ಕೆ ನೀವು ದತ್ತು ಸ್ವೀಕರಿಸುವ ಹುಡುಗಿಯರಿಗೂ ನಮ್ಮ ಟ್ರಸ್ಟಿನ ಕಾಣಿಕೆ ಅದೇ ಪ್ರಕಾರ ಮುಂದುವರಿಯಲಿದೆ. ದಯವಿಟ್ಟು ಸ್ವೀಕರಿಸಬೇಕು' 
ಬೇಡಾಂತ ಹೇಳುವೆನೇ ನಾನು?ಖಂಡಿತಾ ಕೊಡಿ. ಅವರ ಅಕೌಂಟ್ ನಂಬರ್ ಕೊಡ್ತೇನೆ ಅದಕ್ಕೇ ಕಲಿಸಿ ಅಂತಂದೆ.. 
"ಮತ್ತೊಮ್ಮೆ ಭೂಕಂಪವಾದಂತಾ ಕರತಾಡನ ವಧೂವರರ ಕಣ್ಣಲ್ಲಿ ಮಿಂಚು! ನೋಂದಾಯಿಸಲು ಬಂದ ಕನ್ಯೆಯರ ಕಣ್ಣಲ್ಲಿ ಹೊಳಪು..
"ಮುಂದಕ್ಕೂ ಅಷ್ಟೇ. ಎಷ್ಟೇ ಕನ್ಯೆಯರಾದರೂ ಸರಿ. 
ದತ್ತು ಬನ್ನಿರಿ. 
ಯಾವ ಜಾತಿಯವರಾದರೂ ಹಿಂದೆ ನಿಲ್ಲಬೇಡಿ. ನಿಮಗಾಗಿ ವರರನ್ನು ಹುಡುಕಿ ಇದೇ ರೀತಿ ಅಥವಾ ಇದಕ್ಕಿಂತ ವಿಜ್ರಂಭಣೆಯಲ್ಲಿ ಮದುವೆ ಮಾಡುತ್ತೇನೆ. ಅಥವಾ ನಿಮ್ಮ ಪರಿಚಯದಲ್ಲಿ ವರನಿದ್ದರೂ ಆದೀತು. ವರನೆಷ್ಟು ಬಡವನೇ ಇರಲಿ. ಆತ ಸದ್ಗುಣವಂತನಾಗಿದ್ದು ನಿಮ್ಮ ಜಾತಿಯವನಾದರೆ ಮುಗಿಯಿತು. ಆತನೊಡನೆ ನಿಮ್ಮ ವಿವಾಹ ನೆರವೇರಿಸಿ ನಿಮಗೊಂದು ನೆಮ್ಮದಿಯ ಬದುಕು ಕಟ್ಟಿಕೊಡುವುದು ನನ್ನ ಗುರಿ. ಒಬ್ಬ ಅಣ್ಣನಂತೆ ನಿಮ್ಮ ಸೇವೆ ಮಾಡುವ ಭಾಗ್ಯವನ್ನು ನನಗೆನೀಡಿರಿ. ನನ್ನ ತಾಯಿಯ ಆಸೆಯನ್ನು ಈಡೇರಿಸಲು ನನಗೊಂದು ಅವಕಾಶ ಕೊಡಿ..." ಪಿಎ ಮುದಿಯಪ್ಪ ಆಶ್ಚರ್ಯದಿಂದ ಮುತ್ತಣ್ಣನ ಮುಖವನ್ನೇ ನೋಡುತ್ತಿದ್ದ. 
'ಹತ್ತು ಮುಂಡೆಯರಿಗೆ ವರರನ್ನು ಎಲ್ಲಿಂದ ಹುಡುಕಿ ತರಲೋ?' ಎಂದು ಪೇಚಾಡಿಕೊಂಡಿದ್ದ ಈ ಮನುಷ್ಯ ಈಗ ಸಾವಿರ ಕನ್ಯೆಯರಿಗೆ ಸ್ವಜಾತಿ ವರರೊಡನೆ ಮದುವೆ ಮಾಡ್ತೇನೆ ಅಂತಿದ್ದಾರಲ್ಲಾ?!"