ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶ ಸಾಕಾರಗೊಳ್ಳಲಿ

ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶ ಸಾಕಾರಗೊಳ್ಳಲಿ

ಸಾಂಪ್ರದಾಯಿಕ ಕರಕುಶಲಕರ್ಮಿಗಳು ಮತ್ತು ವಿವಿಧ ಕುಶಲಕರ್ಮಿಗಳು ತಯಾರಿಸುವ ಗುಣಮಟ್ಟ ಮತ್ತು ಉತ್ಪಾದನ ಪ್ರಮಾಣ ಹೆಚ್ಚಳ, ಸೇವೆಗಳ ಲಭ್ಯತೆ ಹಾಗೂ ಮಾರುಕಟ್ಟೆಗೆ ಉತ್ತೇಜನ ನೀಡುವ ಮಹತ್ತರ ಗುರಿಯೊಂದಿಗೆ ಕೇಂದ್ರ ಸರಕಾರ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ'ಗೆ ಗುರುವಾರ ಅಧಿಕೃತ ಚಾಲನೆ ನೀಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಯೋಜನೆಗಾಗಿ ೧೩,೦೦೦ ಕೋಟಿ ರೂ. ವೆಚ್ಚ ಮಾಡಲು ಸರಕಾರ ತೀರ್ಮಾನಿಸಿದೆ. ಈ ಯೋಜನೆಯಡಿ ೧೮ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳಿಗೆ ಶೇ. ೫ ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುವ ಮೂಲಕ ಅವರಿಗೆ ಉತ್ತೇಜನ ನೀಡಲಾಗುತ್ತದೆ. ಇದರಂತೆ ಸುಮಾರು ೩೦ ಲಕ್ಷ ಕುಟುಂಬಗಳನ್ನು ತಲುಪುವ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಇದರ ಜತೆಯಲ್ಲಿ ಕರಕುಶಲಕರ್ಮಿಗಳಿಗೆ ಕೌಶಲ ಉನ್ನತೀಕರಣ ತರಭೇತಿ, ದಿನಕ್ಕೆ ೫೦೦ ರೂ,ಗಳಂತೆ ತರಭೇತಿ ಭತ್ತೆ, ಆಧುನಿಕ ಸಾಧನ, ಸಾಮಗ್ರಿಗಳ ಖರೀದಿಗಾಗಿ ೧೫,೦೦೦ ರೂ. ವರೆಗೆ ನೆರವನ್ನು ನೀಡುವುದೂ ಈ ಯೋಜನೆಯಲ್ಲಿ ಸೇರಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಗುಣಮಟ್ಟದ ಪ್ರಮಾಣಪತ್ರ, ಮಾರುಕಟ್ಟೆ ನೆರವನ್ನು ಈ ಯೋಜನೆ ಒಳಗೊಂಡಿದೆ.

ಕೇಂದ್ರದ ಈ ಬಲು ಮಹತ್ವಾಕಾಂಕ್ಷೆಯ ಯೋಜನೆಯ ಪ್ರಯೋಜನವನ್ನು ನೈಜ ಫಲಾನುಭವಿಗಳು ಪಡೆದದ್ದೇ ಆದಲ್ಲಿ ಇದು ದೇಶದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ಎಲ್ಲ ವರ್ಗ, ವಿವಿಧ ಕುಶಲಕರ್ಮಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದ್ದು, ಅರ್ಹರು ಸರಕಾರದ ಈ ಸಹಾಯ ಹಸ್ತದ ನೆರವನ್ನು ಪಡೆದುಕೊಂಡದ್ದೇ ಆದಲ್ಲಿ ಇವರು ಸದ್ಯ ಎದುರಿಸುತ್ತಿರುವ ಹಾಲಿ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯ. 

‘ಆತ್ಮನಿರ್ಭರ ಭಾರತ' ಸಂಕಲ್ಪದಡಿ ಕೈಗೆತ್ತಿಕೊಂಡಿರುವ ಈ ಯೋಜನೆಯಡಿಯಲ್ಲಿ ಕರಕುಶಲ ಉತ್ಪನ್ನಗಳ ತಯಾರಿಕೆಯಲ್ಲಿ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುವುದರ ಜತೆಯಲ್ಲಿ ಅದಕ್ಕೆ ನಾವೀನ್ಯದ ಸ್ಪರ್ಶವನ್ನು ನೀಡುವುದು ಮತ್ತು ಈ ಮೂಲಕ ಇಂದಿನ ಯುವಪೀಳಿಗೆಯನ್ನು ಈ ವೃತ್ತಿಗಳಲ್ಲಿಯೇ ಮುಂದುವರಿಯುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಅಷ್ಟು ಮಾತ್ರವಲ್ಲದೆ ಇದರಿಂದ ದೇಶದ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಗೂ ಇದು ಭಾಗಶಃ ಪರಿಹಾರವನ್ನು ಒದಗಿಸಿಕೊಡಬಲ್ಲದು. ಪಿಎಂ ವಿಶ್ವಕರ್ಮ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯ ಬಳಿಕ ಕೇಂದ್ರ ಸರಕಾರ ಕೈಗೆತ್ತಿಕೊಂಡಿರುವ ಬೃಹತ್ ಯೋಜನೆಯಾಗಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯ ಘೋಷಣೆ ಮಾಡಿದ್ದರು. ದೇಶದಾದ್ಯಂತ ಎಲ್ಲ ಧರ್ಮ, ಜಾತಿ, ವರ್ಗ, ಸಮುದಾಯಗಳು ತಮ್ಮದೇ ಆದ ವಿವಿಧ ರೀತಿಯ ಕರಕುಶಲ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಇವರೆಲ್ಲರನ್ನು ಒಳಗೊಂಡಂತೆ ಈ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದೆ. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟದ ಪಾಲಿಗೆ ಬಲುದೊಡ್ದ ವರದಾನವಾಗಲಿದೆ. 

ಸರಕಾರದ ದೂರದೃಷ್ಟಿ, ಉದ್ದೇಶಗಳೆಲ್ಲವೂ ಔಚಿತ್ಯಪೂರ್ಣ ಮತ್ತು ಸಮರ್ಥನೀಯವಾದುದಾಗಿದ್ದು ಈ ಯೋಜನೆಯ ಅನುಷ್ಟಾನ ಸಮರ್ಪಕವಾಗಿ ನಡೆದು, ನೈಜ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಲ್ಲಿ ಸರಕಾರದ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೮-೦೯-೨೦೨೩

 ಚಿತ್ರ ಕೃಪೆ: ಅಂತರ್ಜಾಲ ತಾಣ